top of page

ನಿಶ್ಶಬ್ದ

Updated: Aug 14, 2020

ಇಲ್ಲಿ ಇರುವೆ ಕಟ್ಟುತ್ತಿಲ್ಲ ಸಾಲು

ಔಷಧಿಮಯ ! ಸಿಂಪಡಣೆ

ಇಲ್ಲ ಜಾಗರಣೆ, ಜಾತ್ರಿ

ಏಳರಿಂದಲೇ ರಾತ್ರಿ!

ದುಸ್ತರದ ಅಯೋಗ್ಯ ದಿನಗಳ

ನೂಕಿ ನುಗ್ಗು ಮಾಡುತ್ತಿವೆ

ಸಣ್ಣವಾಗುತಿಲ್ಲ

ಹರಿಯುತ್ತಿಲ್ಲ

ಸಾರು ಕಾರದ ಕಲ್ಲಿನಂತೆ..

ಸುತ್ತುತ್ತಲೇ ಇರುವ ಭೂಮಿ

ಅದೇ ಹಗಲು -ರಾತ್ರಿ

ನಿದ್ರೆ, ಸ್ನಾನ, ಸ್ಮಶಾನ

ಆಲಿಂಗನ ಚುಂಬನ ಎಲ್ಲ

ನಿರಂತರ ಆದರೆ ನಿಶ್ಶಬ್ದ

ನಡೆಯುತ್ತಲೇ ಇವೆ

ರೆಕ್ಕೆ ಪುಕ್ಕಬೀಸಿ ನೆಗೆದು

ಮೋಸ ,ಕೈ ಚುಟುಕುತನ

ಬಡವಗೆ ಬೆವರು ಹೊಸತೇನಲ್ಲ ಬಿಡಿ

ಶ್ರಮದ ಹರಿವು ಹಾಗೆ ಇದೆ

ಗೂಟದ ಕಾರು

ಹಲ್ಲಿಗೆ ಖಂಡ,ಹೊಟ್ಟೆಗೆ ಶರಾಬು

ಸದ್ದಿಲ್ಲದೆ ಸದ್ದು ಸೋಲಲ್ಲಿ

ಶೂನ್ಯ ಕಾಣದ ವಾಸ್ತವ

ಇನ್ನೂ ಆಶಯದೆಡೆಗೆ

ಮರ ಗಿಡ, ಹಳ್ಳ ಕೊಳ್ಳ

ಕೋರದಿದ್ದರೂ ಸುಖ

ಸ್ವರ್ಗ.. ಭುವಿಯ ಮೈ ಮನಕೆ

ವರುಣ, ಅರುಣ ,ವರ್ಷಿಣಿಯರೆಲ್ಲರ

ಆಗಮನ

ನಾಸಿಕ ರಂಧ್ರ ಮುಚ್ಚಲಾಗಿದೆ

ನಯನಗಳು ಎಂದಿನಂತೆ ತೆರೆಯಲಾಗಿದೆ

ಬಾಯಿ, ತುಟಿ, ಹಲ್ಲು ಗಳೆಂಬ ಬಡ ಬಗ್ಗರಿಗಂತೂ ಕಡಿವಾಣ

ಬಿಡಿ ಅವರ ಬದುಕು ಕಗ್ಗಂಟು

ಅಂತ್ಯವಿಲ್ಲದೆಡೆಗೆಲ್ಲ ಸುಖಾಂತ್ಯ ಕನವರಿಸುತ್ತಿದ್ದಾರೆ

ಸಂಘ ಜೀವನ ಪ್ರತ್ಯಕ್ಷವಾಗಿದೆ

ಕಾಣದ ಜೀವಿಯೊಂದು ಕೇಕೆ ಹಾಕಿ

ಈ ನಿಶ್ಶಬ್ದದ ನಡುವೆಯೂ

ಭರದಿ ಸಾಗುತ್ತಿದೆ




ಗ್ರಾಮೀಣ ಕೃಷಿ ಕುಟುಂಬದಿಂದ ಬಂದಿರುವ ಅರುಣ ಕೊಪ್ಪ ಇವರು ಕಲಾ ವಿಭಾಗದ ಪದವೀಧರರು. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಈಗಾಗಲೇ ‘ಭಾವಗಳು ಬಸುರಾದಾಗ’ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಸದ್ಯದಲ್ಲೆ ಇವರು ಬರೆದ ‘ಹನಿಗಳ ಹಂದರ’ ಎಂಬ ಹನಿಗವಿತೆಗಳ ಸಂಕಲನ ಬೆಳಕು ಕಾಣುತ್ತಿದೆ. ಆಕಾಶವಾಣಿ ಧಾರವಾಡದ ಕವಿ-ಮನ ಸಂದರ್ಶನ ಕಾರ್ಯಕ್ರಮದಲ್ಲಿ ಇವರು ಭಾಗಿಯಾಗಿದ್ದಾರೆ. ಇವರಿಗೆ ಕರುನಾಡ ಸಾಹಿತ್ಯ ರತ್ನ, ಶಿರಡಿ ಶ್ರೀ ಸಾಯಿಬಾಬಾ ರಾಷ್ಟ್ರೀಯ ಪ್ರಶಸ್ತಿ ಮುಂತಾದವು ಲಭಿಸಿವೆ. ಇವರ ಹಲವು ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಶಿರಸಿ ತಾಲ್ಲೂಕ ಕಬಡ್ಡಿ ಅಮೆಚೂರ್ ಅಧ್ಯಕ್ಷರಾಗಿಯೂ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ) ಬೆಂಗಳೂರು ಇದರ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.- ಸಂಪಾದಕ

 
 
 

Comments


©Alochane.com 

bottom of page