top of page

ನಾವು ಮತ್ತು ನಮ್ಮ ಮನಸ್ಸು

ಸಾಹಿತ್ಯವೆಂದರೆ ಅದೊಂದು ಸೃಜನಶೀಲತೆ. ಅಂದರೆ ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಅಲ್ಲಿ ಉದ್ಭವಿಸಿದ ವಿಚಾರಗಳು ಪ್ರಕಟಗೊಂಡಾಗ ಆ ವಿಚಾರಗಳು ಸಮಾಜಕ್ಕೆ ಪಥ್ಯವೋ, ಅಪಥ್ಯವೋ, ಅವರ ವಿಚಾರಗಳು ತಪ್ಪೋ ಸರಿಯೋ ಎನ್ನುವುದು ತಿಳಿಯುವುದು ಓದುಗನ ಪ್ರತಿಕ್ರಿಯೆ ಮೇಲೆಯೇ. ಮನಸ್ಸಿನಲ್ಲಿ ಹುಟ್ಟುವ ಎಲ್ಲ ವಿಚಾರಗಳನ್ನು ಲೋಕ ಮೆಚ್ಚಲೇಬೇಕೆಂದೇನಿಲ್ಲ. ಅಂತಹ ವಿಚಾರಗಳಿಂದ ಜನರ ಭಾವನೆಗಳಿಗೆ ಧಕ್ಕೆ ತರುವಂತಾಗಬಾರದು. ಆದರೆ ಇಂದು ತಮ್ಮ ಮನಸ್ಸಿಗೆ ಬಂದ ವಿಚಾರಗಳೇ ಸರಿ ಎನ್ನುವ ಜನರಿದ್ದಾರೆ. ಅನಾದಿಕಾಲದಿಂದ ಬಂದಂತಹ ಪರಂಪರೆಗಳು ಜನರ ಭಾವನೆಗಳನ್ನು ಅವಲಂಬಿಸಿರುತ್ತವೆ. ಅಲ್ಲಿ ಭಕ್ತಿ, ಶಕ್ತಿ ಎಲ್ಲವೂ ಇರುತ್ತದೆ. ಆ ಭಕ್ತಿಯನ್ನು ನಾವು ಮೂಢನಂಬಿಕೆ ಎಂದರೆ ಸಮಾಜ ಒಪ್ಪುವುದಿಲ್ಲ. ನಾವು ಪಂಚ ಭೂತಗಳನ್ನು ದೈವರೂಪದಲ್ಲಿ ಕಾಣುತ್ತೇವೆ. ಹಾಗಂತ ವಿಜ್ಞಾನಿಗಳು ಅದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾರೆಯೇ ಹೊರತು ಮಾನವನ ವಿಚಾರಗಳಿಗೆ ಧಕ್ಕೆ ತರುವುದಿಲ್ಲ. ಮೂರ್ತಿ ಪೂಜೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಂತಹ ಪದ್ಧತಿ. ಕಲ್ಲು ಮಣ್ಣು ಮರ ಹಾಗೂ ಲೋಹ ಹೀಗೆ ನಾನಾ ರೀತಿಯ ಮೂರ್ತಿಗಳನ್ನು ನಾವು ಪೂಜಿಸುತ್ತೇವೆ. ಆ ಮೂರ್ತಿಗಳಿಗೆ ಒಂದು ರೂಪವನ್ನು ಕೊಟ್ಟು ಅಲ್ಲಿ ದೈವತ್ವವನ್ನು ಕಾಣುತ್ತೇವೆ. ಆದರೆ ಮೂರ್ತಿಪೂಜೆಯನ್ನು ಮೌಢ್ಯದ ಲಕ್ಷಣ ಎನ್ನುವವರೂ ಇದ್ದಾರೆ. ನಂಬಿದರೆ ದೈವ ಇಲ್ಲದಿದ್ದರೆ ಕಲ್ಲು. ಇದು ಹಿರಿಯರು ಹೇಳಿದ ಮಾತು. ಪುರಾಣದಲ್ಲಿ ಬರುವ ಭಕ್ತಪ್ರಹ್ಲಾದನ ಕಥೆಯಲ್ಲಿ ದೇವರು ಎಲ್ಲ ಕಡೆ ಇದ್ದಾನೆ ಎನ್ನುವ ವಿಚಾರ ತಿಳಿದಿದ್ದೇವೆ. ದೇವರನ್ನು ನಾನಾ ರೂಪದಲ್ಲಿ ನಾವು ಕಾಣುವಾಗ ಪ್ರಗತಿಪರರು ಚಿಂತಕರು ಎಂದು ಕರೆಸಿಕೊಳ್ಳುವವರು ಇದನ್ನು ಮೌಢ್ಯ ಎನ್ನುವುದು ಎಷ್ಟು ಸಮಂಜಸ. ಚಿಂತನೆಗಳಿಂದ ಬದಲಾವಣೆಗಳು ಆಗಬೇಕು. ಆದರೆ ಆ ಚಿಂತನೆಗಳು ಜನರ ಭಾವನೆಗಳಿಗೆ ಧಕ್ಕೆ ತರುವಂತಿದ್ದರೆ ಆವಘಡಗಳಾಗುವುದು ಸಹಜ. ಕುವೆಂಪು ಅವರು ದೇವಸ್ಥಾನದಲ್ಲಿ ಪಡೆಯುವ ಹೂವನ್ನು ಪ್ರಸಾದವೆಂದು ಪೂಜಿಸುವವರು ಮೂಢರು ಎಂದಾಗ ಕುವೆಂಪು ಶಿಷ್ಯ ಪ್ರಭುಶಂಕರ ಆಶ್ರಮದಲ್ಲಿದ್ದ ವಿವೇಕಾನಂದ ಪರಮಹಂಸರ ಮೂರ್ತಿಗಳನ್ನು ದೇವರೆಂದು ಪೂಜಿಸುವುದು ಧ್ಯಾನ ಮಾಡುವುದು ಮೂಢತನವಲ್ಲವೇ ಎಂದಾಗ ಶಿಷ್ಯನ ಮಾತಿಗೆ ಕುವೆಂಪು ದಂಗಾಗುತ್ತಾರೆ. ನಂಬಿಕೆ ತರ್ಕಕ್ಕೆ ನಿಲುಕದ್ದು ಅದು ಅವರವರ ವಿಚಾರ.


ಜೈಪುರದ ರಾಜ ಮಾನಸಿಂಗ. ಈತನಿಗೆ ಮೂರ್ತಿ ಪೂಜೆಯ ಬಗ್ಗೆ ಅಸಡ್ಡೆ ಅದೊಂದು ಮೂಢನಂಬಿಕೆ ಎಂದು ಭಾವಿಸಿದವ. ಆಸ್ಥಾನದಲ್ಲಿದ್ದ ಎಲ್ಲ ಮಂತ್ರಿಗಳು ಮೂರ್ತಿ ಪೂಜೆ ಬಗೆಗಿರುವ ಉತ್ತಮ ವಿಚಾರಗಳನ್ನು ತಿಳಿಸಿದರೂ ರಾಜ ಮಾನಸಿಂಗನಲ್ಲಿ ಯಾವುದೇ ಬದಲಾವಣೆಗಳಾಗಲಿಲ್ಲ. ಆದರೂ ಜೈಪುರ ಅರಮನೆಯ ಸುತ್ತಮುತ್ತ ಹಲವಾರು ಕಡೆ ಅದು ನಡೆದೇ ಇತ್ತು. ಈ ಮೂರ್ತಿ ಪೂಜೆಯನ್ನು ಹೇಗಾದರೂ ಮಾಡಿ ಸ್ಥಗಿತಗೊಳಿಸಬೇಕೆಂದು ಹಲವಾರು ಬಾರಿ ಯೋಚಿಸಿದ. ಇದೇ ಸಂದರ್ಭದಲ್ಲಿ ಅರಮನೆಯ ಆಸ್ಥಾನಕ್ಕೆ ವಯೋವೃದ್ಧ ಜ್ಞಾನಿಗಳೊಬ್ಬರು ಬರುತ್ತಾರೆ. ಆಗ ರಾಜ ಈ ಮೂರ್ತಿ ಪೂಜೆಯ ವಿಚಾರ ಪ್ರಸ್ತಾಪಿಸಿ ನನಗೆ ಅದರಲ್ಲಿ ಯಾವುದೇ ಆಸಕ್ತಿಯಿಲ್ಲ ಎಂದು ಮೂರ್ತಿ ಪೂಜೆ ಖಂಡಿಸಿ ಮಾತನಾಡುತ್ತಾನೆ. ಆಗ ಜ್ಞಾನಿಗಳು ಅರಮನೆಯ ಎಲ್ಲಾ ಕಡೆ ದೃಷ್ಟಿ ಹಾಯಿಸಿದಾಗ ಗೋಡೆಗೆ ರಾಜ ಮಾನಸಿಂಗನ ತಂದೆಯ ಚಿತ್ರ ಪಟಗಳಿದ್ದವು. ಅದನ್ನು ಕಂಡ ಜ್ಞಾನಿಗಳು ರಾಜನ ಮಂತ್ರಿಯನ್ನು ಕರೆದು ಇದು ಯಾರ ಚಿತ್ರವೆಂದು ಕೇಳುತ್ತಾರೆ. ಆಗ ಮಂತ್ರಿ ಇದು ಮಹಾರಾಜರ ಸ್ವರ್ಗಸ್ಥ ತಂದೆಯ ಪೋಟೋ ಎಂದು ಹೇಳುತ್ತಾನೆ. ಇದನ್ನು ಕೇಳಿದ ಜ್ಞಾನಿಗಳು ನಿನ್ನ ಬಾಯಲ್ಲಿ ಎಷ್ಟು ಎಂಜಲವಿದೆಯೋ ಅದೆಲ್ಲವನ್ನೂ ಮಹಾರಾಜರ ತಂದೆಯ ಚಿತ್ರಪಟದ ಮೇಲೆ ಉಗುಳಲು ಹೇಳುತ್ತಾರೆ ಗಾಬರಿಗೊಂಡ ಮಂತ್ರಿ ಮಹಾರಾಜರ ತಂದೆಯ ಭಾವಚಿತ್ರ ಅದರ ಮೇಲೆ ಉಗುಳಲು ಸಾಧ್ಯವಿಲ್ಲ. ಎನ್ನುತ್ಥಾನೆ ಆಗ ಜ್ಞಾನಿ ಅದು ಬರೀಯ ಕಾಗದದ ಚಿತ್ರ. ರಾಜ ಸತ್ತು ಎಷ್ಟೋ ವರ್ಷಗಳಾಗಿವೆ ಈ ಕಾಗದದ ತುಂಡನ್ನು ಪವಿತ್ರವಾಗಿ ಕಾಪಾಡಲು ಕಾರಣವೇನು? ಅದು ರಾಜನ ಭೌತಿಕ ಶರೀರವಾಗಲು ಸಾಧ್ಯವೇ? ಎಂದಾಗ ರಾಜ ಮಾನಸಿಂಗನಿಗೆ ಮೂರ್ತಿಪೂಜೆಯ ವಿಚಾರದಲ್ಲಿ ಜ್ಞಾನೋದಯವಾಗುತ್ತದೆ. ನಾವು ಎಲ್ಲಿ ಪೂಜ್ಯ ಭಾವನೆ ಹೊಂದಿರುತ್ತೇವೇಯೋ ಅಲ್ಲಿ ದೈವತ್ವವಿರುತ್ತದೆ. ಆದರೆ ಇಂದು ಇಂತಹ ವಿಚಾರಗಳಿಗೆ ಸರಿಯಾಗಿ ವಿಚಾರ ತಿಳಿಸುವುದನ್ನು ಬಿಟ್ಟು ಅದನ್ನೆ ಮೂಢನಂಬಿಕೆ ಎಂದು ಪ್ರಚಾರ ಮಾಡಲಾಗುತ್ತಿದೆ. ದೇವನ ಅಸ್ತಿತ್ವದ ಕುರಿತು ಜಿಜ್ಞಾಸೆಗೆ ಹೊರಟರೆ ಅದು ತುದಿಮೊದಲಿಲ್ಲದ ಚರ್ಚೆಯಾದೀತು. ಬುದ್ದಿವಂತರು ಪ್ರಗತಿಪರರ ಹೇಳಿಕೆಗಳು ಜನಸಾಮಾನ್ಯರ ನಂಬಿಕೆಗಳನ್ನು ಬುಡಮೇಲು ಮಾಡಿ ಸಮಾಜಕಂಟಕವಾದರೆ ಅದು ಅವರ ವೈಚಾರಿಕತೆಯ ವಿಜೃಂಭಣೆಯಾಗದು. ಬದಲಿಗೆ ಸಮಾಜವಿಕೃತಿ ಮನೋಧರ್ಮವಾದೀತು.


ನಮ್ಮ ಧರ್ಮಗ್ರಂಥಗಳಲ್ಲಿ ಮೂವತ್ತು ಮೂರು ಕೋಟಿ ದೇವರುಗಳ ಬಗ್ಗೆ ಉಲ್ಲೇಖವಿದ್ದು ಬಹುಶಃ ಮಾನವ ಈ ಜಗತ್ತಿಗೆ ಬರುವ ಮುನ್ನ ದೇವತೆಗಳೇ ಈ ಜಗತ್ತಿನ ನಿವಾಸಿಗಳಾಗಿರಬಹುದು. ಮಾನವನ ಪ್ರವೇಶವಾಗುತ್ತಿದ್ದಂತೆ ದೇವರುಗಳೆಲ್ಲ ಕೈಲಾಸ ವಾಸಿಗಳಾಗಿರಬಹುದು. ಮೌಢ್ಯತೆ ಎನ್ನುವುದನ್ನು ನಾವು ದೈವತ್ವದ ವಿಚಾರ ದಲ್ಲಿತರುವುದು ಸಮಂಜಸವಲ್ಲ. ಪ್ರತಿನಿತ್ಯವೂ ಮೂರ್ತಿಯನ್ನು ಸ್ವಚ್ಛಗೊಳಿಸಿ ಹೂಗಳಿಂದ ಅಲಂಕರಿಸಿ ಧೂಪದೀಪಗಳಿಂದ ಪೂಜಿಸುತ್ತೇವೆ. ಎಷ್ಟೋ ಕಾಲದಿಂದ ಹೀಗೆ ನಾವು ಪೂಜಿಸುತ್ತಿದ್ದರೂ ಆ ದೇವರು ಯಾವುದೇ ರೀತಿಯ ವರವನ್ನೆ ನೀಡದೇ ಕಲ್ಲಾಗಿಯೇ ಇರುತ್ತಾನೆ. ಹಾಗೆಂದು ಪೂಜೆ ಪುರಸ್ಕಾರಗಳು ಕಡಿಮೆಯಾಗಿಲ್ಲ. ಇನ್ನು ಹೆಚ್ಚಿನ ವಿಜೃಂಭಣೆಯಿಂದಲೇ ಎಲ್ಲವೂ ನಡೆದು ಬರುತ್ತಿದೆ. ಇಂದು ಸುಶಿಕ್ಷಿತರು,ಪ್ರಗತಿಪರರು, ಚಿಂತಕರು ಎಂದು ಕರೆಸಿಕೊಳ್ಳುವವರ ಮನೆಯಲ್ಲಿಯೇ ದೊಡ್ಡ ದೊಡ್ಡ ದೇವರುಗಳ ಪೋಟೋಗಳು ರಾರಾಜಿಸುತ್ತಿರುತ್ತವೆ, ಹೊಸದಾಗಿ ಕಾರು ಕೊಂಡರೆ ಅದಕ್ಕೂ ಪೂಜೆ ಮಾಡುತ್ತಾರೆ. ಕಂಪ್ಯೂಟರ ತಂದರೂ ಅದಕ್ಕೆ ನಿಂಬೆ ಕಟ್ಟುತ್ತಾರೆ. ಅಂಗಡಿಯ ಉದ್ಘಾಟನೆಗೆ ಕುಂಬಳಕಾಯಿ ಒಡೆಯುತ್ತಾರೆ. ಬುದ್ಧಿವಂತರೆನಿಸಿಕೊಂಡವರು ಹೇಳಿಕೆಗಳನ್ನು ನೀಡುವಾಗ ಮಾತ್ರ ಜನಪ್ರಿಯತೆಗಾಗಿ ವಿರೋಧಿ ಹೇಳಿಕೆಕೊಟ್ಟು ವಿಜೃಂಭಿಸುವ ಚಟ ಬೆಳೆಸಿಕೊಳ್ಳುತ್ತಿದ್ದಾರೆ. ಪರಂಪರಾಗತವಾಗಿ ಬಂದಂತಹ ಧಾರ್ಮಿಕ ಪದ್ಧತಿಗಳನ್ನು ಬಿಡಲು ಸಾಧ್ಯವಿಲ್ಲ. ಮನೆ ಕಟ್ಟುವಾಗ ಗುದ್ದಲಿ ಪೂಜೆ ಮಾಡುವುದು ನವರಾತ್ರಿ ಸಂದರ್ಭದಲ್ಲಿ ಆಯುಧ ಪೂಜೆ ಮಾಡುವುದು ಜಾತ್ರೆಯಲ್ಲಿ ಪ್ರಾಣಿಬಲಿ ಕೊಡುವುದು ಇವೆಲ್ಲ ಪರಂಪರಾಗತವಾಗಿ ಬಂದಂತಹುಗಳು.ಎಲ್ಲಾ ಧರ್ಮಗಳಲ್ಲೂ ಅವರವರದೇ ಆದ ನಂಬಿಕೆಗಳಿವೆ. ಅವು ಈಗ ಹುಟ್ಟಿಕೊಂಡವುಗಳಲ್ಲ. ಹೀಗಿರುವಾಗ ಅವೆಲ್ಲಗಳನ್ನು ನಾವು ಆಚರಿಸುತ್ತಾ ಬಂದಿದ್ದು ಅವುಗಳ ವಿರುದ್ಧ ಸಮಾಜ ವಿರೋಧಿ ಹೇಳಿಕೆಗಳನ್ನು ನೀಡುವುದು ತಪ್ಪು. ಮನುಷ್ಯನ ವಿಚಾರಗಳು ಯಾವಾಗಲೂ ಊಧ್ರ್ವಮುಖಿಯಾಗಿರಬೇಕು. ತಿಂದಿದ್ದನ್ನು ಜಿರ್ಣಿಸಿಕೊಳ್ಳುವಂತಿರಬೇಕೆ ಹೊರತು ತಿಂದ ಸ್ಥಳದಿಂದಲೇ ಉಗುಳುವಂತಾಗಬಾರದು. ತಿಂದುದರ ಅಂಶ ಮೆದುಳಿಗೂ ಶಕ್ತಿ ನೀಡುವಂತಿರಬೇಕು. ಮರಗಳು ಬುಡದಿಂದ ತಿಂದು ಮೇಲೆ ಫಲವನ್ನು ಕೊಡುತ್ತವೆ. ಎಲ್ಲರೂ ಆ ಫಲ ತಿನ್ನಲು ತಲೆ ಎತ್ತಿ ನೋಡುತ್ತಾರೆ. ಬಯಸುತ್ತಾರೆ. ಮಾನವನ ವಿಚಾರಗಳು ಕೂಡ ಉನ್ನತವಾಗಿದ್ದಾಗ ಜನ ಗೌರವಿಸುತ್ತಾರೆ. ಅಗ್ಗದ ಪ್ರಚಾರಕ್ಕಾಗಿ ಮತಿಭ್ರಮಣೆಯಾದವರ ಹಾಗೆ ಎನ್ನನ್ನಾದರೂ ಸಾಹಿತ್ಯ ರೂಪಕ್ಕಿಳಿಸಿ ಸಮಾಜ ದ್ರೋಹಿ ಎನಿಸಿಕೊಳ್ಳುತ್ತಾರೆ. ಹಿಂದೂ ಸಂಸ್ಕøತಿಯಲ್ಲಿ ಗಿಡಮರಗಳಲ್ಲಿ,ಪ್ರಾಣಿ ಪಕ್ಷಿಗಳಲ್ಲಿ ಹಾಗೂ ಜೀವಜಂತುಗಳಲ್ಲಿ ನಾವು ದೈವತ್ವವನ್ನು ಕಾಣುತ್ತೇವೆ. ಹಾಗೇಯೇ ಮಾನವನಲ್ಲೂ ದೈವತ್ವ ಕಾಣುತ್ತೇವೆ. ಒಂದೊಂದು ಸ್ವರೂಪದಲ್ಲಿ ಒಂದೊಂದು ನಂಬಿಕೆಯನ್ನು ನಾವು ಇಟ್ಟಿದ್ದೇವೆ. ಆ ರೂಪದಲ್ಲಿ ನಾವು ಪೂಜ್ಯಭಾವನೆಯನ್ನು ಕಾಣುತ್ತೇವೆ. ಹೂವು ದೇವರಿಗೆ ನೈವೇದ್ಯವಾದ ನಂತರ ಅದು ಪ್ರಸಾದ ರೂಪ ತಾಳುತ್ತದೆ. ಹಾಗೆ ಅಂಗಡಿಯಿಂದ ತಂದ ಕುಂಕುಮವು ಅರ್ಚನೆ ಮಾಡಿದ ನಂತರ ಅದು ಪ್ರಸಾದವಾಗುತ್ತದೆ. ಇವೆಲ್ಲವೂ ದೇವರು ಎಂಬ ಅದೃಶ್ಯರೂಪವನ್ನು ಕಲ್ಲಿಗೋ ಇನ್ನಾವುದೋ ಲೋಹದ ಮೂರ್ತಿಗೋ ಕೊಟ್ಟಿದ್ದರಿಂದಲೇ ಸಾಧ್ಯವಾದದ್ದು. ಆದರೆ ಇವುಗಳನ್ನು ಮೌಢ್ಯವೆಂದು ಹೇಳುವವರ ವಿಚಾರಕ್ಕೆ ಅವರೇ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಅವರಿಗೆ ಇಂತಹ ವಿಚಾರದಲ್ಲಿ ಪರಿಹಾರ ಹುಡುಕಲಾಗದೇ ಏಕಾಂಗಿಯಾಗಿ ಬಿಡುತ್ತಾರೆ. ಪರಂಪರಾಗತವಾಗಿ ಬಂದಿರುವ ವಿಚಾರಗಳಲ್ಲಿ ನಾವು ಉತ್ತರ ಹುಡುಕುವಾಗ ಅದರೊಳಗಿರುವ ಸತ್ಯದ ಕುರಿತು ಕೂಲಂಕುಷವಾಗಿ ನಮ್ಮನ್ನೆ ನಾವು ಪರಾಮರ್ಶಿಸಿಕೊಳ್ಳಬೇಕಾಗುತ್ತದೆ. ಬಹಳಷ್ಟು ಮಹನೀಯರು ದೇವರು ಮೂರ್ತಿಪೂಜೆಯ ಬಗ್ಗೆ ತಮ್ಮದೇ ಆಧ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಗತಿಸಿದ ಹಿರಿಯರ ಭಾವಚಿತ್ರಗಳಿಗೆ ನಾವು ಹೇಗೆ ಪೂಜ್ಯಭಾವನೆಯಿಂದ ಕಾಣುತ್ತೇವೆಯೋ ಹಾಗೇಯೇ ನಮ್ಮ ನಂಬಿಕೆಗೆ ಒಂದು ರೂಪವನ್ನು ಕೊಟ್ಟು ಪೂಜಿಸುವುದೇ ನಮ್ಮ ಪರಂಪರಾಗತ ಪದ್ಧತಿಯಾಗಿದೆ. ಶಿವನನ್ನು ಕೈಲಾಸವಾಸಿಯನ್ನಾಗಿ ಮಾಡಿ ಆಕಾರ ನೀಡಿರುವುದು ಮಾನವನೇ. ಭೂಲೋಕದಲ್ಲಿ ಲಿಂಗರೂಪದಲ್ಲಿಯೋ ಮೂರ್ತಿರೂಪದಲ್ಲಿಯೋ ನಾವು ಪೂಜಿಸುತ್ತೇವೆ.ಪೂಜೆ ಎನ್ನುವುದು ಕುಟುಂಬದ ಅಥವಾ ಸಮಾಜದ ಒಳಿತಿಗಾಗಿ ಆಚರಿಸಲ್ಪಡುತ್ತದೆಯೇ ಹೊರತು ಅದನ್ನು ಮೂಢನಂಬಿಕೆ ಎನ್ನಲು ಸಾಧ್ಯವಿಲ್ಲ. ನಾನಾ ರೀತಿಯ ದೋಷಗಳ ನಿವಾರಣೆಗಾಗಿ ಹೋಮ ಹವನಗಳನ್ನು ನಡೆಸಿ ಉತ್ತಮ ಫಲ ಪಡೆದಿದ್ದನ್ನು ನಾವು ಪುರಾಣಗಳಿಂದಲೂ ತಿಳಿದಿದ್ದೇವೆ. ಆದರೆ ಇಂದು ಈ ಪೂಜೆ ಹೋಮ ಹವನಗಳ ವಿಚಾರದ ಕುರಿತು ಹಾಗೂ ಹಿಂದಿನಿಂದ ಬಂದ ಪರಂಪರೆಗಳ ಕುರಿತು ನಿಷೇಧಾತ್ಮಕ, ನಕಾರಾತ್ಮಕ ಅಭಿಪ್ರಾಯಗಳು ವಿಜೃಂಬಿಸುತ್ತಿವೆ. ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಅದ್ವಿತೀಯವಾಗಿದ್ದು ಅವುಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕಾದಲ್ಲಿ ಪಾರಂಪರಿಕ ಪೂಜೆ ಪುರಸ್ಕಾರ ಹೋಮ ಹವನ ದೇವರು ದಿಂಡರು, ದಾನ ಧರ್ಮಗಳ ಅನುಷ್ಟಾನ ನಿಜಕ್ಕೂ ಅತ್ಯಗತ್ಯ. ಅವುಗಳ ಪರಿಪಾಲನೆಯಲ್ಲಿ ಆಚರಣೆಯಲ್ಲಿ ಮಾತ್ರ ಯಾವ ಶೋಷಣೆಗಳು ಜಾತಿ ಧರ್ಮದ ವೈರುಧ್ಯಗಳು ಮೂತಿ ತೂರದೆ ಮಾನವತಾವಾದಿ ಧೋರಣೆಯನ್ನು ಅನುಸರಿಸಬೇಕಾದ ಅನಿವಾರ್ಯತೆಯೂ ಇಂದಿನ ಜರೂರಾಗಿದೆ..


- ಪ್ರವೀಣ ನಾಯಕ ಹಿಚಕಡ


ಪ್ರವೀಣ ನಾಯಕ ಇವರು ಮೂಲತಃ ಅಂಕೋಲಾ ತಾಲೂಕಿನ ಹಿಚಕಡದವರುರು. ಅಂಕೋಲೆಯ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ತಮ್ಮ ಪದವಿ ಮುಗಿಸಿದ ಇವರು ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತದಲ್ಲಿ ಪದವಿ ಪೂರ್ವ ಕಾಲೇಜು ಜೋಯಿಡಾದಲ್ಲಿÀ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಈಗಾಗಲೇ ‘ಕತ್ತಲೆಯ ಗೌರವಿಸಿ’ ಮತ್ತು ‘ಈ ಸಮಯ ಕಳೆದು ಹೋಗುತ್ತದೆ’ ಎಂಬ ಎರಡು ವೈಚಾರಿಕ ಕೃತಿಗಳನ್ನಲ್ಲದೆ ‘ಅವ್ವನೆಂಬ ಹೊಂಗೆಯ ನೆರಳು’ ಎಂಬ ಸಂಪಾದಿತ ಕೃತಿ ಯನ್ನು ಹೊರತಂದಿದ್ದಾರೆ. ಹಲವು ಸಾಹಿತ್ಯ ಗೋಷ್ಠಿಗಳಲ್ಲಿ, ಆಕಾಶವಾಣಿ ಚಿಂತನ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಕವಿಯಿತ್ರಿ ಶ್ರೀಮತಿ ನಾಗರೇಖಾ ಗಾಂವ್ಕರ ಇವರು ಪ್ರವೀಣರ ಧರ್ಮಪತ್ನಿಯಾಗಿದ್ದು ಇಬ್ಬರದು ಸಾಹಿತ್ಯ ದಾಂಪತ್ಯ. -ಸಂಪಾದಕ

79 views1 comment

1 Comment


shreepadns
shreepadns
Jul 12, 2020

ಪ್ರವೀಣ ನಾಯಕ ಅವರು ಮೂಢ ನಂಬಿಕೆಗಳ ಕುರಿತು ಬರೆದ ಚಿಂತನ ಶೀಲ ಬರಹ ಎಲ್ಲರ ಅರಿವನ್ನು ವಿಸ್ತರಿಸುವ ಕೆಲಸ ಮಾಡಿದೆ.ಅವರು ನೀಡಿದ ದೃಷ್ಟಾಂತಗಳು ನಾವು ನಮ್ಮ ಮನಸ್ಸನ್ನು ಹೇಗೆ ತರಬೇತಿಗೊಳಿಸ ಬೇಕು ಎಂಬ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.ಇಂತಹ ಚಿಂತನೆಗಳು ನಮ್ಮ ಆಲೋಚನೆ.ಕಾಂ ಪತ್ರಿಕೆಯ ಆಶಯಕ್ಕೆ ಪೂರಕ.ಅಭಿನಂದನೆಗಳು ಪ್ರವೀಣ. ಡಾ.ಶ್ರೀಪಾದ ಶೆಟ್ಟಿ.

Like
bottom of page