top of page

ನೀಲಿಮದೊಡಲು [ಕವನ ]


ಓ ಶ್ಯಾಮ ಅದೊ ಕರೆಯುತಿಹಳು ಬಾಮಾ

ಕಣ್ಣ ಸೆಳೆವ ನೀಲಮೇಘ ಶ್ಯಾಮ ನೀನು

ಕೊಳಲ ನಿನಾದಕೆ ಕಿವಿಗೊಟ್ಟವರು ನಿನ್ನ

ಬಣ್ಣ ಬೆಡಗು ಮೋಹಕ ನಗೆಯ ಬಗೆಗೆ

ಕಾಲಂದುಗೆಯ ಗಿಲಿ ಗಿಲಿ ನಾದಕೆ ಸೋತು

ಶರಣಾಗಿಹರೊ ಆ ನೀಲಿಯ ಅದಮ್ಯ ಸೆಳವಿಗೆ

ಕೊಳಲು ಉಲಿಯಿತು ಅಧರದೊಳು

ನೀಲಿಯೆ ಲೀಲೆಯಾದ ತೆರದಲಿ

ಬಹುದೂರದ ವ್ಯೋಮ ನೌಕೆಯಲ್ಲಿ ಎಳೆ ಎಳೆಯಾಗಿ

ಇಳೆಗೆ ಇಳಿದು ಬಂದ ನೀಲಿಮದೊಡಲು


ಕಂಸನನ್ನು ಮಧುರೆಯೊಳು ಎಡವಿ

ಪೂತನಿಯ ಮೊಲೆವಾಲ ಕುಡಿವ ನೆಪದಿ ಮಡುಹಿ

ನೀಲಿ ನಗೆಯ ಬೀರಿದವನ ತಂದು ತೋರೊ

ಕಪಟ ನಾಟಕ ರಂಗ ಕರುಣಿಗಳೊಡೆಯ

ಖುಲ್ಲ ತನವ ಕಳೆದು ಒಳ್ಳೆತನವ ಮೆರೆವ ಗೊಲ್ಲ

ಉದ್ಯಮದಲಿ ಕಾರ್ಯ ಸಿದ್ಧಿಯ ಮೆರೆವಂತವನೆ

ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ ಯಾದವಗೆ

ಒಳ ಹೊರಗನು ಏಕ ಕಾಲದಲಿ ಬೆಳಗುತಿಹ ನಿನಗೆ

ಇದೆ ಕೊ ಬಾಳ್ತನದ ನೀಲಿಯ ವಂದನೆ

ಲೀಲಾ ಮಾನುಷ ಮೂರ್ತಿಗೆ ಅಭಿವಂದನೆ.




ಡಾ. ಶ್ರೀಪಾದ ಶೆಟ್ಟಿ.





59 views0 comments

Comentarios


©Alochane.com 

bottom of page