top of page

ನೀರು ನೆಲಗಳ ಸೆಳೆತ

Updated: Nov 6, 2020


ಎಂದೊ ಮೂಡಿದ ಹಸಿವು ನಾಲಿಗೆಯ ಚಾಚುತಿದೆ

ಎಂದೊ ಕಾಡಿದ ದಾಹ ಸೆಳೆಯುತ್ತಿದೆ

ಒಳಗೊಳಗೆ ಸುಳಿಯಾಗಿ ಒಂದಕೊಂದರ ಮೋಹ

ಇಂದು ಹೊಸ ತುರುಸಿನಲಿ ಎಳೆಯುತ್ತಿದೆ


ಕೊತಕೊತನೆ ಕುದಿವ ಭೂಮಿಯಾಳದ ಬೇಗೆ

ಬೆದೆಯಾಗಿ ಹತಹತನೆ ಹಂಬಲಿಸಿದೆ

ಮೈಗಾವು ತಣಿಸಲು ಕೂಗುತಿದೆ ಕರೆಯುತಿದೆ

ಬಿಟ್ಟ ಬಿರುಕೆ ಬಾಯಾಗಿ ಬೆಂಬಲಿಸಿದೆ


ತಳಮಳಿಸಿ ಸಳಮಳಿಸಿ ಮಣ್ಣ ಮೈಯೊಳಗಾಡಿ

ಉಗಿಯಾದ ನೀರು ಮೋಡವಾಗಿ

ವಿರಹದುರಿಯೇ ಹಾಗೆ ಕಿಚ್ಚಿರದ ಬೇಗೆ

ಹಬ್ಬಿಹುದು ಬಾನೊಳಗೆ ಕಡುಗಪ್ಪು ಹೊಗೆಯಾಗಿ


ಕಾಯುತಿದೆ ನೆಲಕಪ್ಪಳಿಸಿ ಧಬಧಬಿಸಿ ಧಾರೆಗಟ್ಟಿ

ಜಡಿಮಳೆಯಾಗಿ ಹಿಡಿ ಹಿಡಿದು ಜಡಿಯಲು

ಗುಡುಗು ಸಿಡಿಲಿನಬ್ಬರದಿ ಮದವೇರಿ ಧುಮುಕಿ

ಕಂಡಕಡೆ ಕಚಗುಳಿಯಿಕ್ಕಿ ಮೀಟಿ ಮಿಡಿಯಲು


ಮಿಂಚುಗಳ ರೋಮಾಂಚನದಿ ತೋಳು ಚಾಚಿ

ಸಿಕ್ಕ ಸಿಕ್ಕಲ್ಲಿ ಕಚ್ಚಿ ಕಡಿದು ಉಕ್ಕಿ ಮುಕ್ಕಿ

ಬೆಟ್ಟ ಕಣಿವೆಗಳ ಉಬ್ಬು ತಗ್ಗುಗಳಲಿ ನುಗ್ಗಿ

ಸಂದು ಗೊಂದಿಗಳ ಹಿಗ್ಗಿಸಿ ಹಿಗ್ಗಿ ತೀಡಿ ತಿಕ್ಕಿ


ನೆಲದ ತೊಗಲ ಹರಿ ಹರಿದು ಕಿತ್ತು ಈಡಾಡಿ

ಹೊಳೆ ಹಳ್ಳ ತೊರೆಯಾಗಿ ಹರಿದು ಓಡಾಡಿ

ಕಡಲಾಗಿ ಭೋರ್ಗರೆದು ತಳಸೇರಿ ತೊಡೆಕೊರೆದು

ಒಳಹೊರಗೆ ತೂಗಾಡಿ ಜೀವಸೆಲೆಯಾಡಿ


ಮುತ್ತುಗಳ ಭಂಡಾರದ ಬೀಗಮುದ್ರೆಯನೊಡೆದು

ಚಲ್ಲೊರೆದು ಸುರಿಸುರಿದು ಸೂರೆಗೊಂಡು

ಒಂದಗೊಳಗೊಂದು ಸೇರಿ ಹೊಸ ಜೀವ ಹೊಡೆಹಿರಿದು

ಮರ ಮರಳುವ ಮರು ಹುಟ್ಟಿಗೆ ಫಲಗೊಂಡು


ನೆಲದ ಕಣಕಣದಲ್ಲು ನೆನಪಿನ ಕಣಜ

ಉಸಿರುಸಿರಿನಲ್ಲು ಪರಿಮಳವು ತುಂಬಿ

ನೀರ ಹನಿ ಹನಿಯಲ್ಲು ನೆಲದ ಕನಸಿನ ತೇಜ

ಕಣ್ಣೊಳಗೆ ಆಡುವವು ನಿತ್ಯ ಬೆಳಕಿನ ಗೊಂಬಿ


ಯಾವುದು ಹತ್ತಿರ ಯಾವುದು ದೂರ

ಹೇಳುವುದು ಅಷ್ಟೊಂದು ಸುಲಭವೇ ಗೆಳತಿ

ಜೀವಗಳ ಬೆರೆತಾಗ ಎಲ್ಲಿಹುದು ಅಂತರ

ಎರಡು ಒಂದಾದಾಗ ಎಂಥ ಅಳತಿ


ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ

ಕರ್ನಾಟಕ ವಿಶ್ವವಿದ್ಯಾಲಯ

ಧಾರವಾಡ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

댓글


©Alochane.com 

bottom of page