top of page

ನಿಮ್ಮ ಅನುದಿನದ ಸಂಗಾತಿ

ನಾನು ನಿಮ್ಮ ಜೀವ ರಕ್ಷಿಸುವ ಸಂಗಾತಿ

ನಿಮ್ಮ ಭಾರವನ್ನೆಲ್ಲ ಹೊತ್ತು

ಓಡಾಡುವ ಅನುದಿನದ ಜೊತೆಗಾತಿ

ಅಪಾಯಕಾರಿ ತಿರುವಿನಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ

ಯಮ ಸ್ವರೂಪದಲ್ಲಿ ಬರುವ ಟ್ರಕ್ಕು

ಅಡ್ಡಾದಿಡ್ಡಿ ಓಲಾಡಿ ಬರುವ ಕಾರು

ಇತ್ತಿತ್ತಲಾಗಿ ಮೈಮೇಲೆ ಖದರ್ " ನಿಮ್ಮ

ಇಲ್ಲದೆ ಬರುವ ಸರ್ಕಾರಿ ಬಸ್ಸು

ಅಪಾಯದ ಅರಿವಿರದೆ ಅಡ್ಡ

ಬರುವ ಮೂಕ ಪ್ರಾಣಿಗಳು

ಎಲ್ಲದರಿಂದ ಎಲ್ಲರಿಂದ ನಿಮ್ಮನ್ನು ರಕ್ಷಿಸಬೇಕಾದವ

ನಿಮ್ಮ ಅನುದಿನದ ಸಂಗಾತಿ

ಆದರೆ ನನ್ನಿಂದ ನಿಮ್ಮ ಜೀವಕ್ಕೆ

ಅಪಾಯ ಸಾವು ಎಂಬ ಅಪರಾಧಿ ಭಾವ

ನಿಮಗೊ ನನ್ನ ಮೇಲೆ ಮಮಕಾರ

ಕಾಳಜಿ ಇದ್ದಂತಿಲ್ಲ ಬೇಕು

ನಾನು ನಿಮ್ಮ ಚಾಕರಿಗಷ್ಟೆ

ಕ್ವಿಂಟಾಲ್ ಮಣಭಾರ ಹೊರುವ

ನನ್ನ ಮೇಲೆ ಅಕ್ಕಿ ಚೀಲ‌ ಸಿಲಿಂಡರ್

ಒಮ್ಮೊಮ್ಮೆ ಟ್ರಿಬಲ್ ಮಲ್ಟಿಪಲ್ ರೈಡಿಂಗ್ !

ಸವಾರಿ ಮಾಡುವಾಗ ಕೈಯಲ್ಲಿ

ಮೊಬೈಲ್

ಕಿವಿಗೆ ತೂಗಾಡುವ ಎಂಥದೋ ಬತ್ತಿ

ಗಾಢವಾದ ಮಾತುಕತೆ ಚರ್ಚೆ

ಶೋಕಿ ಏನು ಕಮ್ಮಿ ಇಲ್ಲ!

ನಿಮ್ಮ ಅಥವಾ ಬರುವವರ ಎಡವಟ್ಟಿನಿಂದ

ನಾನು ಅಪರಾಧಿ ನಾನು ಅನಾಥ

ಮೇಲಾಗಿ ನನ್ನ ಮೇಲೆಯೇ ಗೂಬೆ

ನಾನು ಪರ್ಮನೆಂಟ್ ಅಪಶಕುನ

ಮನೆಗೆ ಕಾರು ಬಂದರಂತೂ

ಮುಗಿಯಿತು ನನ್ನ ಕತೆ

ನಾನೆಂದರೆ ಎಲ್ಲಿಲ್ಲದ ತಾತ್ಸಾರ

ಮರೆತೇ ಬಿಡುವಿರಿ ನಾನು

ನಿಮ್ಮ ಅನುದಿನದ ಸಂಗಾತಿ

ಮದುವೆ ಸಮಾರಂಭಗಳಿಗೆಲ್ಲ

ನನ್ನ ಅವಶ್ಯಕತೆ ಇರುವುದಿಲ್ಲ

ನಾನೇನಿದ್ದರೂ ಗುಂಡಿ ಬಿದ್ದ

ಕಚ್ಚಾ ರಸ್ತೆಗಷ್ಟೇ ಮೀಸಲು

ನೆನಪಿರಲಿ ನಾನು ನಿಮ್ಮ

ಅನುದಿನದ ಸಂಗಾತಿ

ನಿಮ್ಮಂತೆ ನನಗೂ ರೋಗ ಆಯಸ್ಸು

ಆಗಾಗ ಅಂಗಾಂಗ ಸವಕಳೀ

ಸೋಂಕಿಸಿ ಎಣ್ಣೆ ನೀರು ಸ್ನಾನ

ತೋರಿಸಿ ನಮಗೆ ನಮ್ಮದೇ ಸ್ಥಾನ

ನಾನು ನಿಮ್ಮ ಜೀವ ರಕ್ಷಕ

ಅನುಗಾಲದ ಅನುದಿನದ ಸಂಗಾತಿ


ಸುಧಾ ಹಡಿನಬಾಳ


ನಮ್ಮ ಪತ್ರಿಕೆಯ ಹಿತೈಷಿ ಕವಯತ್ರಿ ಸುಧಾ ಹಡಿನಬಾಳ ಅವರ" ನಿಮ್ಮ ಅನುದಿನದ‌ ಸಂಗಾತಿ" ಕವಿತೆ ನಿಮ್ಮ ಓದಿಗಾಗಿ. ಸಂಪಾದಕ ಆಲೋಚನೆ.ಕಾಂ



153 views0 comments

Comments


bottom of page