top of page

ನೀ ಮಾದರಿ [ಕವನ]


[ಚಿತ್ರಾಲೋಚನೆ ಅಂಕಣದಲ್ಲಿ ಪ್ರಕಟವಾಗುತ್ತಿರುವ ಎರಡನೇ ಕವನ ಕವಿಯಿತ್ರಿ ಹೊನ್ನಮ್ಮ ನಾಯಕ ಅವರ ಸುಂದರ ಪ್ರಸ್ತುತಿ ತಮ್ಮ ಓದಿಗಾಗಿ - ಸಂಪಾದಕ]

ಹಿಕ್ಕೆಯೊಳಗಡಗಿದ್ದ

ಚಿಕ್ಕ ಬೀಜವು ನೀನು

ಕಲ್ಲು ಗಾರೆಯ ಗೋಡೆ

ಬಿರುಕಿನಲಿ ಚಿಗುರಿ

ಹಸಿರ ಪಸರಿಸಿ ಮುದದಿ

ಅರಳಿದ ನಿನ್ನ ಹೆಸರೇ 'ಅರಳಿ'.


ಮಣ್ಣಿಲ್ಲ ನೀರಿಲ್ಲ

ಮೇಲು ಗೊಬ್ಬರವಿಲ್ಲ

ಗಾರೆಯುರಿ ಕಾವಿನಲಿ

ನಳ ನಳಿಸಿ ನಗುತಿರುವೆ

ಪೆರ್ಮರವಾಗುವಾಸೆಯಲ್ಲಿ.

ನೋಡು ನನ್ನನು ಮನುಜ

ಅನುಸರಿಸು ನನ್ನ ನಡೆ

ಎಂದೆಂಬ ಸಂದೇಶ

ಸಾರುತಿಹೆಯಾ?


ಏನಿಲ್ಲದೇ ಬೆಳೆದು

ಪ್ರತಿಕೂಲವ ತುಳಿದು

ಉತ್ಸಾಹ ಉಕ್ಕಿಸುತ

ಚೆಲ್ಲವರಿದಿಹ ನೀನೆಲ್ಲಿ?

ಎಲ್ಲ ಇದ್ದೂ ಏನೂ

ಅಲ್ಲದ ನಾವೆಲ್ಲಿ ?

ಛಲವಿದ್ದರೆ ಸಾಧನೆಗೆ

ನೂರು ದಾರಿ,

ಮನಸಿದ್ದರೆ ಮಾರ್ಗ

ನೀ ಮಾದರಿ.








✍ಹೊನ್ನಮ್ಮ ನಾಯಕ, ಅಂಕೋಲಾ





19 views0 comments
bottom of page