ರಿಜಲ್ಟು ಮುಗೀತಂತೇ
ದೂರದ ದಾರಿಗೆ ನೆಟ್ಟ
ಅಮ್ಮನ ಕಣ್ಣುಗಳ್ಯಾಕೋ
ಮಂಗನಿಗೆ ಹೊಡೆವ
ಕಲ್ಲುಗಳತ್ತ ಇದ್ದಂಗಿಲ್ಲ
ಸೊಂಟದ ಮೇಲೆ ಮಗನಿದ್ದರೂ
ಹಗುರವಾಗುತ್ತಿರುವ
ನನ್ನ ಹೆಜ್ಜೆ
ಬಿರಿದಷ್ಟೂ ಬಿಚ್ಚಿಕೊಳ್ಳುವ
ಹಲಸಿನ ಹಣ್ಣಿಗೆ ಬೆಣೆ
ಹೊಡೆದಿಟ್ಟಿರಬೇಕು ಅಪ್ಪ …
ಕೆಂಪಿ ತನ್ನ ಕರುವಿನೊಟ್ಟಿಗೆ
ಕೊಟ್ಟಿಗೆಯ ದಾಬಕ್ಕೆ
ಮುಖ ತಿಕ್ಕುತ್ತಿದೆ..
ಅಯ್ಯೋ ತಿಂದಾದ ಮೇಲೆ
ಬೀಜ ಒಣಗಿಸಿಡಬೇಕು
ಕೆಂಡದೊಲೆಯಲ್ಲಿ
ಸುಟ್ಟ ಗೇರು
ಬೀಜ ಸಿಡಿಯದೇ
ಕತ್ತೋದ ವಾಸನೆ
ಪಾಗಾರಹಿತ್ತಲಿನ ದಣಪೆಗೆ
ಹತ್ತಿದ್ದೇ ಹೌದು…
ನಾ ಬರುವ ಸುದ್ಧಿ ಅದಕ್ಕೆ
ಹೇಳಿದ್ದು ಯಾರು
ನಿಗಿನಿಗಿ ಕುದಿವ
ಅಡಕಲಲ್ಲಿ ಎಷ್ಟು
ಮಿಂದರೂ ಮುಗಿಯದ
ಕಾದ ನೀರು
ಬ್ಯಾಡವೇ ಅಮ್ಮ ಸಾಕು ಸಾಕು
ಅಲ್ನೋಡು ಎಂಕಟ್ರಮಣನ
ಸೊಂಟಕ್ಕೆ ಗೊನೆಗಟ್ಟಲೆ
ಇಳಿದವು ಸಿಯಾಳ
ಬುಟ್ಟಿಯಲ್ಲಿ ತುಂಬಿಟ್ಟ
ಗುಲಾಬೀ ಜಂಬೆಹೂವು
ಅವನ ಹಿತ್ತಿಲದ್ದೇ…
ಅತ್ತಿಗೆ ಸಿಗಿದು ಸಿಗಿದು
ಸಾಲು ಕಟ್ಟಿ ಒಣಗಿಸಿದ
ಬಂಗಡೆಗೆ ಡಬ್ಬಿ
ತುಂಬುವ ಸಂಭ್ರಮ…
ಮಳೆ ಹತ್ತಿದ ಕೂಡಲೇ
ಸುಟ್ಟು ಚಟ್ನಿ ಮಾಡಬೇಕು
ಅಣ್ಣ ಕೊಟ್ಟೆ ತುಂಬ
ತಂದಿದ್ದು ನೊಗಲವೋ
ನಗುವೋ..
ಗೊಂದಲವಾಗದ ಕೆಂಪು
ಖಾರ ಹುಳಿಯ ಪರಿಮಳ…
ಸಣ್ಣ ಮಾಡಿನ ಒಳಗೆ
ಅಮ್ಮನ ಹಾಡು..
ಕಾಲ ಬದಲಾಯಿತಂತೆ
ಎಂತ ಮಣ್ಣೂ ಇಲ್ಲ…
ಅದೋ
ನಾನೇ ಆಡಿದ ಕಾಲುಮುರಿದ
ಗೊಂಬೆಯೊಟ್ಟಿಗೆ ನನ್ನ
ಮಗನೂ ಆಡುತ್ತಿದ್ದಾನೆ
ಸಂಧ್ಯಾ ವಿ. ನಾಯ್ಕ ಅಘನಾಶಿನಿ
Comments