ಗೋವಿನ ಕುರಿತು ಈ ಒಂದು ಅದ್ಭುತ ಕವನ ಬರೆದ ಕವಿ ಎಸ್. ಜಿ. ನರಸಿಂಹಾಚಾರ್ಯರು. ಕೃತಘ್ನ ಮನುಷ್ಯರಿಗೂ ಈ ಕವನ ಸಂಬಂಧಿಸುತ್ತದೆ. ಆ ಹಳೆಯ ಕವನದ ಮರು ನೆನಪು
ನೀನಾರಿಗಾದೆಯೋ ಎಲೆ ಮಾನವಾ
**********
ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ..
ಹರಿ ಹರೀ ಗೋವು ನಾನು|| ೧||
ಹಾಲಾದೆ ಕರೆದರೆ, ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ||೨||
ಉಳುವೆ ನಾ ಭೂಮಿಯನು, ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ನಾ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ||೩||
ಹಾಯೆ ಹರಿಗೋಲಾದೆ, ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ||೪||
ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯೋ ಎಲೆ ಮಾನವಾ||೫||
- ಎಸ್. ಜಿ. ನರಸಿಂಹಾಚಾರ್
( ನರಸಿಂಹಾಚಾರ್ ಅವರು ಶ್ರೀರಂಗಪಟ್ಟಣದವರು. ಕೇವಲ ೪೫ ವರ್ಷ ಬದುಕಿದ ಅವರು ಘನ ವಿದ್ವಾಂಸರೂ ಹೌದು. ಅವರ ಬಗ್ಗೆ ಪ್ರತ್ಯೇಕ ಬರೆದಿರುವೆ)
Comments