top of page

ನಾನೇನೂ ಹೇಳುವದಿಲ್ಲ

 ನಾನೇನೂ ಹೇಳುವದಿಲ್ಲ

ನಿಮಗೆಲ್ಲವೂ ಗೊತ್ತು

ಗೊತ್ತಿದ್ದರೂ ನೀವು ಮಾತನಾಡುವದಿಲ್ಲ

ನೀವು ಮಾತನಾಡದಿದ್ದರೂ 

ನನಗೆ ಗೊತ್ತು

ನಿಮಗೆಲ್ಲವೂ ಗೊತ್ತಿದೆಯೆಂದು

ಅದಕ್ಕೇ

ನಾನೇನೂ ಹೇಳುವದಿಲ್ಲ.

*

ಎಲ್ಲವೂ ಎಲ್ಲರಿಗೂ 

ಗೊತ್ತಿರಲೇಬೇಕೆಂದೇನಿಲ್ಲ,

ಗೊತ್ತಿದ್ದರೂ ಹೇಳಲೇಬೇಕೆಂದೇನಿಲ್ಲ

ಹೇಳಿದರೂ ಅದು ಎಲ್ಲರಿಗೂ 

ತಿಳಿಯಲೇಬೇಕೆಂದೇನಿಲ್ಲ

ತಿಳಿದವರು 

ತಿಳಿದಿದೆ ಎಂದು ಹೇಳುವದಿಲ್ಲ; 

ತಿಳಿಯದವರು ಹೇಳಿದರೆ 

ಅದು ನಮಗೆ ತಿಳಿಯುವದೂ ಇಲ್ಲ

ಅದಕ್ಕೇ ನಾನೇನೂ ಹೇಳುವದಿಲ್ಲ

ಏಕೆಂದರೆ 

ಹಿಂದೆ ಹೇಳಿದ್ದೇ 

ಇನ್ನೂ ಜೀರ್ಣವಾಗಿಲ್ಲ

*

ಇಲ್ಲಿ ಅಕ್ರಮಗಳು 

ಸಕ್ರಮವಾಗುತ್ತವೆ,

ಇಲ್ಲಿ ಅಯೋಗ್ಯರು

 ಯೋಗ್ಯರೆನಿಸುತ್ತಾರೆ

ಇಲ್ಲಿ ಭ್ರಷ್ಟತೆ ವರವಾಗುತ್ತದೆ, 

ಇಲ್ಲಿ ಪ್ರಾಮಾಣಿಕತೆ 

ಶಾಪವಾಗುತ್ತದೆ, 

ಇಲ್ಲಿ

 ಸುಳ್ಳು ಹೇಳಿದವರು

ಅರಮನೆಯೊಳಗಿರುತ್ತಾರೆ

ಸತ್ಯ ಹೇಳಿದವರು

ಸೆರೆಮನೆಯೊಳಗಿರುತ್ತಾರೆ

ಇಲ್ಲಿ 

ಸತ್ಯ ನ್ಯಾಯ ಕಾನೂನುಗಳ 

ಮಾರಾಟ ಮಾಡುವವರೂ‌ ಇದ್ದಾರೆ

ಕೊಳ್ಳುವವರೂ ಇದ್ದಾರೆ;

ಇಲ್ಲಿ

ಭಗವದ್ಗೀತೆ, ಕುರಾನು,

 ಬೈಬಲ್ಲುಗಳ ಮುಟ್ಟಿಯೇ

 ಸುಳ್ಳು ಹೇಳುವವರಿದ್ದಾರೆ, 

ಮತ್ತೆ

 ನಾನು ಹೇಳುವದೆಲ್ಲ ಸತ್ಯ ಎನ್ನುತ್ತಾರೆ,

ಸತ್ಯ ಸುಳ್ಳಾಗುವದಕ್ಕೆ

ಸುಳ್ಳು ಸತ್ಯವಾಗುವದಕ್ಕೆ

ಹೆಚ್ಚು ಹೊತ್ತು ಬೇಕಿಲ್ಲ,

ಸ್ವಲ್ಪ ಹಣ ಬೇಕು, ಅಷ್ಟೇ

*

ಗಾಂಧೀಜಿ ಹೇಳಿದ್ದಾರೆ-

" ಕಿವಿ, ಕಣ್ಣು , ಬಾಯಿ 

ಎಲ್ಲ‌ಮುಚ್ಚಿಕೊಳ್ಳಿ"

ಅದಕ್ಕೇ ನಾವು ಪ್ರತಿಜ್ಞೆ ಮಾಡಿದ್ದೇವೆ

" ಒಳ್ಳೆಯದನ್ನು ನೋಡುವದಿಲ್ಲ

ಒಳ್ಳೆಯದನ್ನು ಮಾಡುವದಿಲ್ಲ

ಒಳ್ಳೆಯದನ್ನು ಕೇಳುವದಿಲ್ಲ"

ಆದ್ದರಿಂದ

ನನ್ನನ್ನೇನೂ ಕೇಳಬೇಡಿ

ನಾನೇನೂ ಹೇಳುವದಿಲ್ಲ; 

ಹೇಳಿದರೆ ನೀವೂ 

ಕೇಳುವದಿಲ್ಲ. 


-  ಎಲ್. ಎಸ್. ಶಾಸ್ತ್ರಿ


ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ ( ಎಲ್. ಎಸ್. ಶಾಸ್ತ್ರಿ) ಬರವಣಿಗೆಯ ಕಾಯಕದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೆತ್ತುಕೊಂಡಿರುವ ಶ್ರೀಯುತರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.ಪತ್ರಿಕೋದ್ಯಮದಲ್ಲಿ ೫೬ ವರ್ಷಗಳ ಅಖಂಡ ಸೇವೆ. ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ , ಲೋಕದರ್ಶನ, ಶೃಂಗಾರ, ನವಕಲ್ಯಾಣ, ದೀನವಾಣಿ, ಜನತಾ, ನವನಾಡು, ಕರ್ನಾಟಕ ಮಲ್ಲ ಮೊದಲಾದ ದಿನಪತ್ರಿಕೆ, ಸಾಪ್ತಾಹಿಕಗಳಲ್ಲಿ ಸಂಪಾದಕ, ಉಪಸಂಪಾದಕ, ವರದಿಗಾರನಾಗಿ ಕಾರ್ಯ ನಿರ್ವಹಣೆ. ಹತ್ತು ಸಾವಿರ ಸಂಪಾದಕೀಯಗಳು, ಎರಡು ಸಾವಿರ ಮುನ್ನುಡಿಗಳು. ಹೀಗೆ ಪಾದರಸದಂತೆ ಚಲನಶೀಲರಾಗಿರುವ ಎಲ್ಎಸ್ಎಸ್ ಅವರಿಗೆ ೭೬ ಅಂದರೆ ನಂಬುವುದು ಕಷ್ಟ.ಅವರು ನಿತ್ಯ ಯುವಕರು.- ಸಂಪಾದಕ.

26 views0 comments

Comments


©Alochane.com 

bottom of page