ನಿನ್ನ ಪ್ರೀತಿ ಭೋರ್ಗರೆದು ಹರಿವ
ನದಿಯಲ್ಲ ಗೆಳತಿ
ನೆಲದಾಳದ ಶುದ್ಧ ನೀರು
ನಿನ್ನ ಪ್ರೀತಿ ಭೋರೆಂದು ಬೀಸುವ
ಬಿರುಗಾಳಿಯಲ್ಲ ಗೆಳತಿ
ಎದೆಯೆದೆಗೆ ತಾಗುವ ತಂಗಾಳಿ
ನಿನ್ನ ಪ್ರೀತಿ ಕಾಡಿನಲ್ಲಿ ಹುಟ್ಟಿದ
ಕಾಳ್ಗಿಚ್ಚಲ್ಲ ಗೆಳತಿ
ಎದೆಯಲ್ಲಿ ಹಚ್ಚಿಟ್ಟ ಹಣತೆ
ನಿನ್ನ ಪ್ರೀತಿ ಸುಡುಸುಡುವ
ಬರಡು ಭೂಮಿಯಲ್ಲ ಗೆಳತಿ
ನಿತ್ಯ ಜೀವ ನೀಡುವ ತಾಯೊಡಲು
ನಿನ್ನ ಪ್ರೀತಿ ನಿಲುಕಲಾರದ
ಆಕಾಶವಲ್ಲ ಗೆಳತಿ
ಈ ನೆಲದ ಚೆಲುವು ನಕ್ಷೆತ್ರ
ನಿನ್ನ ಪ್ರೀತಿ ಬಳ್ಳಿಯಲ್ಲಿ ಬೆಳ್ಳಗರಳಿದ
ಹೂವಲ್ಲ ಗೆಳತಿ
ನೆಲದಾಳದ ತಾಯಿಬೇರು
ನಿನ್ನ ಪ್ರೀತಿ ತೂರಿಬರುವ
ಗಂಧವಲ್ಲ ಗೆಳತಿ
ಹೂವಿನೋಡಲ ಮಕರಂದ
ನಿನ್ನ ಪ್ರೀತಿ ಬಿರುಬಿಸಿಲ
ಸೂರ್ಯಕಿರಣವಲ್ಲ ಗೆಳತಿ
ಹುಣ್ಣಿಮೆಯ ಹಾಲ್ಬೆಳದಿ0ಗಳು
ನಿನ್ನ ಪ್ರೀತಿ ಮಾರುಕಟ್ಟೆಯಲ್ಲಿಟ್ಟ
ಬೆಲ್ಲದಚ್ಚಲ್ಲ ಗೆಳತಿ
ಹಾಲ್ದು0ಬಿದ ರಸಗಬ್ಬು.
ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಕವಿಯಾಗಿ,ವಿಮರ್ಶಕರಾಗಿ,ವಾಗ್ಮಿಯಾಗಿ ಸಾಹಿತ್ಯ ಪ್ರಪಂಚದಲ್ಲಿ ಪ್ರಜ್ಞಾವಂತರ ಗಮನಸೆಳೆದಿರುವ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಅವರದು ಸದಾ ಪಾದರಸದಂತೆ ಹರಿದಾಡುವ ಕ್ರಿಯಾಶೀಲ ವ್ಯಕ್ತಿತ್ವ.ಅದಕ್ಕೆ ಅವರ ನವೀನ ಆಲೋಚನೆಗಳ ಸೃಜನಶೀಲ ತುಡಿತವೇ ಕಾರಣ.ಈ ಎರಡು ಶಕ್ತಿಗಳು ಅವರ ಕ್ರಿಯೆ ಹಾಗೂ ಅಭಿವ್ಯಕ್ತಿಗಳಿಗೆ ವಿಶೇಷ ತೇಜಸ್ಸನ್ನು ಒದಗಿಸಿವೆ.ಅವರ ವ್ಯಕ್ತಿತ್ವದ ಕೇಂದ್ರ ನೆಲೆ ಕವಿತ್ವವೇ ಆಗಿರುವುದರಿಂದ ಅವರೆಲ್ಲ ಚಟುವಟಿಕೆಗಳಲ್ಲಿ ಮಾನವೀಯ ಭಾವನೆಗಳ ಸ್ಪಂದನೆ ಇದೆ.ಜಾನಪದ-ಶಿಷ್ಟ,ಪ್ರಾಚೀನ-ಆಧುನಿಕ,ಸೃಜನ-ಸೃಜನೆತರ ಇವೇ ಮೊದಲಾದ ನೆಲೆಗಳಲ್ಲಿ ಸಮಾನ ಶ್ರದ್ಧೆಯಿಂದ ತಮ್ಮನ್ನು ತೊಡಗಿಸಿಕೊಂಡ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಅವರು ಒಂದೊಂದರಲ್ಲೂ ಮಹತ್ವದ ಕೃತಿಗಳನ್ನು ನೀಡಿರುವುದು ಅಪರೂಪದ ಸಾಧನೆ. ಅವರು ಈವರೆಗೂ ಹದಿನೈದಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಅಪಾರ ಶಿಷ್ಯ ಬಳಗದ ಪ್ರೀತಿ- ಗೌರವಾದರಗಳಿಗೆ ಪಾತ್ರರಾಗಿರುವ ಪ್ರೊ.ಮಟ್ಟಿಹಾಳ ಅವರು ದಕ್ಷ ಆಡಳಿತಗಾರರಾಗಿಯೂ ಮೌಲ್ಯಮಾಪನ ಕುಲಸಚಿವ ಸ್ಥಾನದ ಘನತೆಯನ್ನು ಹೆಚ್ಚಿಸಿದ್ದಾರೆ.ಸ್ನೇಹ ಅವರ ವ್ಯಕ್ತಿತ್ವದ ಪ್ರಧಾನ ಗುಣವಾಗಿದ್ದು ಹತ್ತಿರಕ್ಕೆ ಬಂದವರನ್ನೆಲ್ಲ ಅಕ್ಕರತೆಯಿಂದ ಸೆಳೆಯುವ ಚುಂಬಕಶಕ್ತಿ ಅವರಿಗಿದೆ.ಇವರ ಬರಹದ ಸ್ಥಾಯಿಪ್ರಜ್ಞೆ ಸಮಾಜ.ಮೀಮಾಂಸೆಯ ಪರಿಭಾಷೆಯ ಹಂಗಿಲ್ಲದೇ ಅಕ್ಷರದ ಅರಿವಿಗೆ ಮಾನವೀಯತೆಯ ಸ್ಪರ್ಶವನ್ನು ನೀಡುವ,ಕಟ್ಟಕಡೆಯ ಮನುಷ್ಯನನ್ನು ಮುಟ್ಟಿ ಎಚ್ಚರಿಸುವ ಮಟ್ಟಿಹಾಳ ಅವರ ಬರವಣಿಗೆಯ ಸಾಮರ್ಥ್ಯ ಮೆಚ್ಚುವಂತದ್ದು- ಸಂಪಾದಕರು
Comments