ನಾನು ನಾನಾಗಿರಲು ಬಿಡು

ನನ್ನ ಅಟ್ಟಕ್ಕೇರಿಸಿ ಕೂರಿಸಿ

ಹೀಗೆ ತಲೆಯೆತ್ತಿ ನೋಡಿದರೆ...

ನಿನ್ನ ಪ್ರೀತಿಯೇಣಿ ಯಾಕೋ

ಬೇಜಾರಿನ ನುಣುಪಲ್ಲಿ ಜಾರುತ್ತಿದೆ


ನಿನ್ನ ಹುಚ್ಚು ಮೋಹದಲಗು

ನನ್ನ ದೌರ್ಬಲ್ಯಗಳ

ಕೊರಕಲುಗಳ ತಿವಿಯುತ್ತಿದೆ


ನನ್ನಲ್ಲಿಲ್ಲದ ಗುಣಗಳ ಸೀಗೆ

ತಿಕ್ಕಿ ಎರೆದರೂ

ನಿನ್ನ ನಿರೀಕ್ಷೆಯ ಕೂದಲೆಲ್ಲ ಜಿಡ್ಡು- ಜಿಡ್ಡು


ಈ ಹೊನ್ನಶೂಲದ ಹೊಳಪು

ಮಾಸುವ ಮುನ್ನ

ನನ್ನ ಪ್ರತಿಬಿಂಬವ ನಿನ್ನ ಮಣ್ಣಿನ

ಕಣ್ಣಲಿಳಿಸು...

ಆದರ್ಶದೆತ್ತರದ

ಅಮೃತಶಿಲೆಯ ಸುಂದರಿ

ಮುಟ್ಟಿದರೆ ತಂಪುತಂಗಳು


ನಿನ್ನದೆಯ ಸಮಕ್ಕಿಟ್ಟರೆ

ನನ್ನ ಬೆಚ್ಚಗಿನ ಹೃದಯ

ನಿನ್ನ ಪ್ರತಿ ಬಡಿತಕ್ಕೂ

ಹೊಸ ತುಡಿತದ ಲಯ!

                          

- ಸುಚಿತ್ರಾ ಹೆಗಡೆ

25 views0 comments