top of page

ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ

ಹೀಗೆ ಹೇಳಿದ್ದು, ಯಾವ ವಿದೇಶಿ ವಿಚಾರವಂತನಲ್ಲ; ಮರಾಠಿ ಮೂಲ ಮಹಾನ್ ಸಾಹಿತಿ ಲೋಕಶಾಹಿರ ಅಣ್ಣಾಭಾವು ಸಾಠೆ. ದಮನಿತ, ಶೋಷಿತ, ಕಾರ್ಮಿಕ, ರೈತ ಈ ಎಲ್ಲ ವರ್ಗಗಳ ಧ್ವನಿಯಾಗಿ ಸಾಹಿತ್ಯ ರಚಿಸಿದ ಕ್ರಾಂತಿಪುತ್ರ. ಎರಡು ದಿನವು ಪೂರ್ಣ ಶಾಲೆಗೆ ಹೋಗದ ಇವರು ವಿಶ್ವಮಾನ್ಯ ಸಾಹಿತ್ಯವನ್ನು ಸ್ವ-ಅನುಭವದಿಂದಲೆ ರಚಿಸಿದರು. ಇವರ ಮಹಾನ್ ಸಾಹಿತ್ಯ ಇಂದು ಜಾಗತಿಕವಾಗಿ 27 ಭಾಷೆಗಳಲ್ಲಿ ಅನುವಾದಗೊಂಡಿದೆ. ಅಗಸ್ಟ 1 ಇವರ ಜಯಂತಿ. ಈ ವರ್ಷ ಜನ್ಮ ಶತಮಾನೋತ್ಸವ. ಈ ಸಂದರ್ಭದಲ್ಲಿ ಒಂದೆರಡು ಮಾತುಗಳು.


ಕರ್ನಾಟಕ ಸೀಮೆಗೆ ಅಂಟಿಕೊಂಡ ಸಾಂಗಲಿ ಜಿಲ್ಲೆಯ ವಾಳವಾ ತಾಲೂಕಿನ ವಾಟೆಗಾಂವ ಎಂಬ ಗ್ರಾಮದಲ್ಲಿ 1 ಅಗಸ್ಟ 1920 ರಂದು ಮಾಂಗ ಎಂಬ ಶೋಷಿತ ಜಾತಿಯಲ್ಲಿ ಜನಿಸಿದರು. ಬಾಲ್ಯದ ಹೆಸರು ತುಕಾರಾಮ. ತಂದೆ ಬಾವುರಾವ ಸಾಠೆ, ಕುಟುಂಬದ ಪರಿಸ್ಥಿತಿ ಅತ್ಯಂತ ನಾಜೂಕು. ಶಾಲೆ ಕಲಿತು ದೊಡ್ಡವನಾಗುವ ಆಸೆಯಲ್ಲಿ ಶಾಲೆಗೆ ಹೋದರೆ ಜಾತಿ ಎಂಬ ಕ್ರೂರ ರಾಕ್ಷಸ. ಒಂದು ದಿನ ಪೂರ್ಣ ಹೋದ ಬಳಿಕ ಮರುದಿನ ಮಧ್ಯಾಹ್ನ ಶಾಲೆಯಿಂದ ದೂರಾದರು. 


ಮುಂದೆ 1932 ರಲ್ಲಿ ಉದರ ನಿರ್ವಹಣೆಗಾಗಿ ತಂದೆ ಜೊತೆ ಮುಂಬಯಿ ಸೇರಿದರು. ಇದ್ದಲಿ ಆರಿಸುವುದು, ಕಸಗೂಡಿಸುವದು ಹಿಡಿದು ಸಿಕ್ಕ ಸಣ್ಣ-ಪುಟ್ಟ ಎಲ್ಲ ಕೆಲಸವನ್ನು ಮಾಡುತಿದ್ದರು. ಬಿಡುವಿನ ಸಮಯದಲ್ಲಿ ಸ್ವಪ್ರಯತ್ನದಿಂದ ಅಕ್ಷರ ಜ್ಞಾನವನ್ನು ಕಲಿತರು. ಆಗಲೇ ಅವರಿಗೆ ಕಾರ್ಮಿಕರ ಕಷ್ಟದ, ದುಃಖದ ಬದುಕು ಅರಿವಾಯಿತು. ಮನದಲ್ಲಿ ಹೊತ್ತ ಕಿಡಿಯು ಕಾರ್ಮಿಕರ ಆಂದೋಲನದಲ್ಲಿ ಧುಮುಕುವಂತೆ ಮಾಡಿತು. 1936 ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕರಾದ ಕಾ. ಶ್ರೀಪಾದ ಡಾಂಗೆಯವರ ಪ್ರಭಾವದಿಂದಾಗಿ ಕಮ್ಯುನಿಸ್ಟ್ ಪಕ್ಷದ ಕ್ರಿಯಾಶೀಲ ಕಾರ್ಯಕರ್ತರಾಗಿ ಕೆಲಸ ಮಾಡಿದರು.


ತಂದೆಯ ಅವಸಾನದ ನಂತರ ಮನೆಯ ಜವಾಬ್ದಾರಿ ಇವರ ಹೆಗಲಿಗೆ ಬಂತು. ಆಗ ಮತ್ತೆ ತಮ್ಮೂರಿಗೆ ಬರಬೇಕಾಯಿತು. ಅಲ್ಲಿ ಬಂದು ಸಹೋದರನ ತಮಾಷಾ ಕಂಪನಿಯಲ್ಲಿ ಸೇರಿಕೊಂಡರು. ಇಲ್ಲಿ ಅವಗತವಾದ ತಮಾಷಾ ಕಲೆಯು ಮುಂದೆ ಅದನ್ನು ಪ್ರಸಿದ್ಧ ಲೋಕ ನಾಟ್ಯವನ್ನಾಗಿ ಮಾಡುವಲ್ಲಿ ಬಹಳಷ್ಟು ಸಹಾಯಕಾರಿ ಆಯಿತೆಂದು ಹೇಳಬಹುದು. ನಂತರ ಮತ್ತೆ ಮುಂಬಯಿಯನ್ನು ಸೇರಿದರು.

ಈ ಸಲದ ಮುಂಬಯಿ ವಲಸೆ ಅವರಲ್ಲಿ ಬಹಳಷ್ಟು ಬದಲಾವಣೆ ತಂದಿತು. ಕಾರಣ ಮ್ಯಾಕ್ಸಿಮ್ ಗಾರ್ಕಿಯ ಸಾಹಿತ್ಯ ಓದಲು ದೊರೆಯಿತು. ಅವರ ವಿಶ್ವಮಾನ್ಯ ಬರಹಕ್ಕೆ ಸ್ಪೂರ್ತಿ ಸಿಕ್ಕಿದ್ದು ಇಲ್ಲಿಂದಲೆ. ಮುಂದೆ ಅವರ ಭೇಟಿ ಖ್ಯಾತ ಲೋಕಶಾಹೀರ ‘ಅಮರ ಶೇಖ’ರ ಜೊತೆ ಆಯಿತು. ಇವರಲ್ಲಿದ್ದ ಅಗಾಧ ಪ್ರತಿಭೆ ಕಂಡು ಇವರಿಗೂ ಸಹ ಲೋಕಶಾಹಿರ ಎಂದು ಕರೆಯತೊಡಗಿದರು. 

ಸಾಹಿತಿಗಿಂತ ಶಾಹಿರ ಎಂದು ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಸ್ಫೂರ್ತಿದಾಯಕ ಮಾತು, ನಟನೆ, ಗಾಯನ ಒಟ್ಟಿನಲ್ಲಿ ಇವರ ಬಹುಮುಖಿ ಪ್ರತಿಭೆಗೆ ಜನರ ಬಹಳಷ್ಟು ಮೆಚ್ಚುಗೆ ಇತ್ತು. ಮರಾಠಿಯ ಪೋವಾಡಾ ಕಲೆಯನ್ನು ಜಗತ್ತಿನಾದ್ಯಂತ ಪರಿಚಯಿಸಿದ ಮೊದಲಿಗರು. ಇದರಿಂದ ಕಮ್ಯುನಿಸ್ಟ್ ವಿಚಾರಗಳನ್ನು ಸಹ ಪ್ರಚಾರ ಮಾಡಿದವರಿವರು. ಈ ಕಾರಣದಿಂದಲೆ ಇವರನ್ನು ಕಮ್ಯುನಿಸ್ಟ್ ಶಾಹಿರ ಎಂದು ಕರೆಯುತ್ತಾರೆ. ಇವರು ರಚಿಸಿದ ಸ್ಟಾಲಿನ್‌ಗ್ರಾಡ್ ಪೋವಾಡಾ ಬಹಳ ಪ್ರಸಿದ್ಧವಾದದ್ದು. ರಶಿಯಾದಲ್ಲಿ ಸಹ ಪೋವಾಡಾ ಸಾದರ ಪಡಿಸಿ ರಶಿಯಾದ ಅಧ್ಯಕ್ಷರಿಂದ ಮೆಚ್ಚುಗೆ ಪಡೆದಿದ್ದರು. ವಿಶೇಷವೆಂದರೆ ಭಾರತದಲ್ಲಿ ಮಾರ್ಕ್ಸ್‌ವಾದಿ ವಿಚಾರಗಳ ಅವಿಸ್ಕಾರವನ್ನು ಈ ಪೋವಾಡಾ ಮತ್ತು ಲೋಕನಾಟ್ಯಗಳಿಂದ ಮಾಡಿದರು. ಜನಪದ ಶೈಲಿಯಲ್ಲಿ ತತ್ವಜ್ಞಾನ ಮತ್ತು ಸೌಮ್ಯವಾದ ವಿಚಾರಗಳನ್ನು ಜನರ ಮುಂದೆ ಇಟ್ಟರು.


1942 ರ ಸ್ವಾತಂತ್ರ ಚಳುವಳಿಯಲ್ಲಿ ಸಕ್ರಿಯ ಸಹಭಾಗದ ಕಾರಣ ಬ್ರಿಟಿಶ್ ಸರಕಾರವು ಇವರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿತು. ಹೇಗೋ ಮುಂಬಯಿ ಬಂದು ತಪ್ಪಿಸಿಕೊಂಡರು. ಆದರೂ ಚಳುವಳಿಯಲ್ಲಿ ಸಕ್ರಿಯತೆ ಇತ್ತು. ಮಹಾತ್ಮಾ ಫುಲೆ, ಶಾಹು ಮಹಾರಾಜ ಹಾಗು ಡಾ. ಬಾಬಾಸಾಹೇಬ ಅಂಬೇಡ್ಕರರ ದಮನಿತ ಮತ್ತು ಶೋಷಿತ ವರ್ಗದ ಏಳಿಗೆಯ ಚಳುವಳಿಯನ್ನು ಅತ್ಯಂತ ಸಮರ್ಥರಾಗಿ ಮುನ್ನಡಿಸಿಕೊಂಡು ಬಂದರು. ಇವರು ಪ್ರಖರ ಅಂಬೇಡ್ಕರವಾದಿ; ಅಷ್ಟೆ ಮಾರ್ಕ್ಸವಾದಿ ಕೂಡ. ಅಂಬೇಡ್ಕರವಾದ ಮತ್ತು ಮಾರ್ಕ್ಸವಾದವನ್ನು ಸಮನ್ವಯ ಸಾಧಿಸಿದ ಏಕೈಕರು.


ದೇಶಕ್ಕೆ ಸ್ವತಂತ್ರ ದೊರೆತ ತಕ್ಷಣ 1947 ಅಗಸ್ಟ 16 ರಂದು "ಈ ಸ್ವಾತಂತ್ರ ಸುಳ್ಳು, ಜನರು ಹಸಿವೆಯಿಂದ ಕಂಗಾಲಾಗಿದ್ದಾರೆ.." "ಮೊದಲು ಜನರ ಹೊಟ್ಟೆ ತುಂಬಿಸಿ" ಎಂಬ ಘೋಷಣೆ ಕೊಡುತ್ತಾ ಶಿವಾಜಿ ಪಾರ್ಕ್ ನಲ್ಲಿ ಧರಣಿ ಕುಳಿತರು. ಮಹಾಭಯಂಕರ ಮಳೆ ಸುರಿಯುತ್ತಿದ್ದರೂ ಹಿಂದೆ ಸರಿಯಲಿಲ್ಲ. ಅದಲ್ಲದೆ ಗೋವಾ ಮುಕ್ತಿ ಸಂಗ್ರಾಮ ಮತ್ತು ಸಂಯುಕ್ತ ಮಹಾರಾಷ್ಟ್ರ ಚಳುವಳಿಗಳಲ್ಲಿ ಮುಂಚೂಣಿಯರಾಗಿ ಕಾರ್ಯ ನಿರ್ವಹಿಸಿದರು.ಅಲ್ಪ ಶಿಕ್ಷಿತರಾದ ಇವರು ಸತತ ಚಿಂತನೆ ಮತ್ತು ವೈಶ್ವಿಕ ಕಾರ್ಯಗಳಿಂದ ಸಾಹಿತ್ಯಕ್ಕೆ ಬಹುದೊಡ್ಡ ಕಾಣಿಕೆ ನೀಡಿದರು. ಇವರು ಬರೆದ ಸಾಹಿತ್ಯ ಲೋಕನಾಟ್ಯ-13, ನಾಟಕ –3, ಕಥಾ ಸಂಗ್ರಹ –13, ಕಾದಂಬರಿ- 35, ಪೋವಾಡ-15, ಪ್ರವಾಸ ವರ್ಣನೆ-1, ಚಿತ್ರಪಟ ಕಥೆ-7 ಇದಲ್ಲದೆ 100 ಕ್ಕಿಂತ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವೊಂದು ಲಾವಣಿಗಳೆಂದು ಪ್ರಸಿದ್ಧವಾಗಿವೆ. ಇವರ ಸಾಹಿತ್ಯ ಜಾತಿ, ಧರ್ಮ ಬಿಟ್ಟು ಜಾಗತಿಕ ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತದ್ದು. ಹಾಗಂತಲೆ ಅದು ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಅನುವಾದಗೊಂಡಿದೆ. ಮೌಢ್ಯದ ಸಾಮಾಜಿಕ ಚಿಂತನೆಯಲ್ಲಿ ಸಾಠೆಯವರ ಸಾಹಿತ್ಯ ಹರಿತವಾದ ಖಡ್ಗದಂತೆ ಪ್ರಹಾರ ಮಾಡುತ್ತದೆ. 1959 ರಲ್ಲಿ ಪ್ರಕಟಣೆಯಾದ ಫಕೀರಾ ಕಾದಂಬರಿಯು ಬಹಳ ಪ್ರಸಿದ್ಧವಾಯಿತು. ಅವರ ಫಕೀರಾ ಕಾದಂಬರಿ ಜೊತೆ ಇನ್ನು ಹಲವು ಸಾಹಿತ್ಯ ಕನ್ನಡಕ್ಕೂ ಸಹ ಅನುವಾದಗೊಂಡಿದೆ.


ಸಾಠೆಯವರು ತಮ್ಮ ಸಾಹಿತ್ಯದಲ್ಲಿ ಸಮತೆ, ವ್ಯಾಸ್ತವ್ಯತೆ ಮತ್ತು ಮಾನವೀಯತೆಗೆ ಹೆಚ್ಚು ಒತ್ತು ಕೊಟ್ಟವರು. ತಮ್ಮ ಸಾಹಿತ್ಯದ ಬಗ್ಗೆ ಹೇಳುತ್ತಾರೆ, “ನಾನು ಹೇಗೆ ಬದಕುತ್ತೇನೆ, ಏನು ನೋಡುತ್ತೇನೆ, ಯಾವುದನ್ನು ಅನುಭವಿಸುತ್ತೇನೆ, ಅದನ್ನೆ ಬರೆಯುತ್ತೇನೆ. ನಾನು ಆಳ ನೀರಿನ ಕಪ್ಪೆ. ನನಗೆ ಕಲ್ಪನೆಯ ರೆಕ್ಕೆ ಹಚ್ಚಿ ಹಾರಲು ಬರುವದಿಲ್ಲ.” ಇದು ಅವರ ಲೇಖನದ ಹಿಂದಿನ ಸ್ಪಷ್ಟವಾದ ನಿಲುವು. “ನನಗೆ ಬದುಕಿನ ಮೇಲೆ ಬಹಳ ನಿಷ್ಠೆ. ನನಗೆ ಶ್ರಮಜೀವಿಗಳೆಂದರೆ ಬಹಳ ಇಷ್ಟ. ಅವರ ಶ್ರಮಶಕ್ತಿ ಅತ್ಯಂತ ಶ್ರೇಷ್ಠವಾದದ್ದು, ಅವರಿಂದಲೆ ಈ ಜಗತ್ತು ಮುನ್ನಡೆಯುತ್ತದೆ. ಅವರ ಪ್ರಯಾಸ ಮತ್ತು ಯಶಸ್ಸಿನ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ.” ಇದು ಅವರ ಶ್ರಮಿಕರ ಬಗೆಗಿನ ಗೌರವ ಕಂಡುಬರುತ್ತದೆ. ಅದಲ್ಲದೆ ಇವರ ಸಂಪೂರ್ಣ ಸಾಹಿತ್ಯದ ಕೇಂದ್ರ ಸ್ಥಾನ ಶ್ರಮಿಕರನ್ನೆ ಒಳಗೊಂಡಿದೆ.

ಸಾಠೆಯವರ ಸಮರ ಅಜ್ಞಾನದ ಅಂಧಕಾರದಲ್ಲಿ ಮಲಗಿದ ಸಮಾಜದ ವಿರುದ್ಧದಲ್ಲಿತ್ತು. ಮೇಲ್ವರ್ಗದ ದಬ್ಬಾಳಿಕೆಯ ರೂಢಿ-ಪರಂಪರೆಗಳ ವಿರುದ್ಧದಲ್ಲಿತ್ತು. ಧರ್ಮದಲ್ಲಿದ್ದ ಅನಿಷ್ಠತೆಯೇ ದಮನಿತ ಮತ್ತು ಶೋಷಿತರನ್ನು ಗುಲಾಮರನ್ನಾಗಿಸಿತು ಎಂಬುದು ಅವರ ಭಾವನೆಯಾಗಿತ್ತು. ಅದಕ್ಕಾಗಿ ಅವರು ಹೇಳುತಿದ್ದರು, “ಅನಿಷ್ಠ ಧರ್ಮದ ಆಚರಣೆಯಿಂದ ಜನರನ್ನು ಹೀನರನ್ನಾಗಿ ಕಾಣುವದು ಧರ್ಮವಲ್ಲ, ಅದೊಂದು ರೋಗವಾಗಿದೆ.” ಅದಕ್ಕೆ ಅವರು, “ಓ.. ಮನುಜನೆ ನೀನು ಗುಲಾಮನಲ್ಲ; ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ” ಎಂದು ಹೇಳುತಿದ್ದರು. ದೇಶದಲ್ಲಿಯ ಜಾತಿ ಉಚ್ಛಾಟನೆ ಮಾಡದ ಹೊರತು ದೇಶದ ಪ್ರಗತಿ ಅಸಾಧ್ಯ ಎಂಬುದು ಅವರಿಗೆ ಗೊತ್ತಿತ್ತು. ಅದಕ್ಕೆ “ಜಾತಿ ವಾಸ್ತವ್ಯವಿದ್ದರೆ ಬಡತನ ಕೃತ್ರಿಮ. ಬಡತನ ನಿರ್ಮೂಲನೆ ಮಾಡುವದು ಸಹಜ. ಆದರೆ ಜಾತಿ ನಷ್ಟ ಮಾಡುವದು ನಮ್ಮೆಲ್ಲರ ಕೆಲಸವಾಗಿದೆ...” ಎಂದು ಹೇಳಿ ಜಾತಿ ನಿರ್ಮೂಲನೆ ಮಾಡಲು ಕರೆ ಕೊಟ್ಟರು. 


ಆದರೆ ದುಃಖವೆಂದರೆ ಜಾತಿಭೇದವು ಇವರನ್ನು ಕೊನೆಯವರೆಗೆ ಕಾಡಿತು. ಅವರು ಸ್ವತಃ ಸಾಲ ಮಾಡಿ “ಫಕೀರಾ” ಚಲನಚಿತ್ರವನ್ನು ಅದ್ಭುತವಾಗಿ ನಿರ್ಮಿಸಿದರು. ಯಶವಂತರಾವ ಚವ್ಹಾಣರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಜಾತಿ ಅಡ್ಡಬಂದು ಚಲನಚಿತ್ರ ನಡೆಯಲಿಲ್ಲ. ಸಾಲ ತಿರಲಿಲ್ಲ. ಇದರಿಂದ ಕೌಟುಂಬಿಕ ಕಲಹಗಳು ಹೆಚ್ಚಾದವು. ಇದರ ನೈರಾಶ್ಯದಲ್ಲಿ ಆರೋಗ್ಯವು ಹದಗೆಟ್ಟಿತು. ಹೀಗಾಗಿ ಕೇವಲ 49ನೇ ವಯಸ್ಸಿನಲ್ಲಿ ಅಂದರೆ 1969 ರಲ್ಲಿ ತೀರಿಕೊಂಡರು. ವಿಪರ್ಯಾಸ ನೋಡಿ, ಜಾತಿ ನಿರ್ಮೂಲನೆಗೆ ಹೋರಾಟ ಮಾಡಿದ ಇವರನ್ನು ಮತ್ತೆ ನಾವು ಒಂದು ಜಾತಿಗೆ ಮಾತ್ರ ಮೀಸಲಿಟ್ಟಿದ್ದೇವೆ. ಇವರು ಅಲ್ಪ ಶಿಕ್ಷಿತರಾಗಿ ಮಾಡಿದ ಕ್ರಾಂತಿ ನಮ್ಮೆಲ್ಲರಿಗೆ ಪ್ರೇರಣೆ ಎಂದು ತಿಳಿದು ನಮ್ಮೆಲ್ಲರಿಗೆ ದೇಶದಲ್ಲಿ ಸೌಹಾರ್ದತೆ ತರಬೇಕಿದೆ. ಇಂದು ನಾವೆಲ್ಲಾ ಹೆಸರಾಂತ ವಿಶ್ವವಿದ್ಯಾಲಯದಲ್ಲಿ ಉನ್ನತದ ಮಟ್ಟದ ಹಾಯಟೆಕ್ ಶಿಕ್ಷಣ ಪಡೆಯುತ್ತಿದ್ದೇವೆ. ಆದರೆ ನಮ್ಮ ವಿಚಾರಗಳು ಮಾತ್ರ ಹಾಯಟೆಕ್ ಆಗುತ್ತಿಲ್ಲ. ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾದ ಇಂದು ನಾವು ಇಂತಹ ಮಹಾನ್ ವಿಚಾರವಂತರ ಆದರ್ಶಗಳನ್ನು ಅರಿತು ನಡೆಯೋಣ. ಶ್ರಮ ಜೀವಿಗಳ ಬೆನ್ನಿಗೆ ದೃಢವಾಗಿ ನಿಲ್ಲೋಣ. ವಿಶ್ವ ಮನುಕುಲದ ಏಳಿಗೆಗಾಗಿ ಐಕ್ಯರಾಗೋಣ. ಎಲ್ಲಕ್ಕಿಂತ ಮಹತ್ವದ್ದು ಭೇದಭಾವವನ್ನು ಮರೆಮಾಚದ ಹೊರತು ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಬಾಳೋಣ. 


ಸಾಠೆಯವರ ವಿಚಾರ ಮತ್ತು ಕಾರ್ಯಕ್ಕೆ ಸಾಟಿಯಿಲ್ಲ. ನಮನಗಳು..


- ಮಲಿಕಜಾನ ಶೇಖ, ಅಕ್ಕಲಕೋಟೆ, ಸೊಲ್ಲಾಪುರ

ಮಲಿಕಜಾನ ಶೇಖ ಅವರು ಗಡಿನಾಡಿನ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನವರು. ಇವರು ಮರಾಠಿ ನೆಲದಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕನ್ನಡ ಬಳಗ ಕಟ್ಟಿಕೊಂಡು ಗಡಿನಾಡಿನಲ್ಲಿ ಕನ್ನಡ ಬೆಳೆಸುವ ಕಾಯಕದ ಜೊತೆ ಸಾಹಿತ್ಯದಲ್ಲಿ ಅನುವಾದ, ಮಕ್ಕಳ ಸಾಹಿತ್ಯ ಮತ್ತು ವಿವಿಧ ಪತ್ರಿಕೆಗಳಿಗೆ ಲೇಖನ ಬರೆದಿದ್ದಾರೆ.ಕನ್ನಡದ ಕಟ್ಟಾಳು,ಕವಿ,ಸಂಘಟಕ,ಸಹೃದಯಿ ಮಲಿಕಜಾನ ಶೇಖ ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ.

69 views0 comments

Comments


bottom of page