ನಿಂದಕರು ಇರಲಿ ಮನೆ ಮುಂದೆ*
ನಿಂದನೆ ಮಾಡಿದವರ ಸಂದಿಗೆ ಹೋಗಿ ಬರಬೇಕಾಗಿದೆ..?
ಅವರಿಗೆ ವಂದನೆ ತಿಳಿಸಬೇಕಾಗಿದೆ....
ಜರಿದವರ ಮನೆ ದಾರಿ ಕಡೆ ತಿರುಗಾಡಬೇಕಾಗಿದೆ..?
ಅವರಿಗೆ ಭಾರಿ ಉಡುಗೊರೆ ಕೊಡಬೇಕಾಗಿದೆ....
ಅವಮಾನಿಸಿದವರ ಅಂಗಳದಲ್ಲಿ ಕುಳಿತು ಬರಬೇಕಾಗಿದೆ..?
ಅವರಿಗೆ ಸನ್ಮಾನಿಸಬೇಕಾಗಿದೆ....
ಚಾಡಿ ಹೇಳಿದವರ ಕೇರಿಯ ಕಡೆ ಹಾಯ್ದು ಬರಬೇಕಾಗಿದೆ..?
ಅವರಿಗೆ ಚಹಾ ಪಾಣಿ ಮಾಡಿಸಬೇಕಾಗಿದೆ...
ದೂಷಿಸಿದವರ ಊರಲ್ಲೊಂದು ದಿನ ವಸ್ತಿ ಮಾಡಬೇಕಾಗಿದೆ..?
ಅವರೊಂದಿಗೆ ದೋಸ್ತಿ ಮಾಡಬೇಕಾಗಿದೆ...
ಸುಳ್ಳು ಗುಲ್ಲಬ್ಬಿಸುವ ಗಲ್ಲಿಯ ಕಡೆ ಸುಳಿದಾಡಬೇಕಾಗಿದೆ..?
ಅವರಿಗೆ ಸಿಹಿಬೆಲ್ಲ ಕೊಡಬೇಕಾಗಿದೆ...
ಊರು ಬಿಡಿಸಿದವರ ಊರಿಗೆ ತಿರುಗಾ ಹೋಗಬೇಕಾಗಿದೆ..?
ಆ ಊರಿಗೆ ಊರುಗೋಲಾಗಿ ನಿಲ್ಲಬೇಕಾಗಿದೆ....
✍️ ಶಿವಲೀಲಾ .ಎಸ್ .ಧನ್ನಾ. ಜಿಲ್ಲಾ ಕಲ್ಬುರ್ಗಿ.
ಕವಯತ್ರಿ ಶಿವಲೀಲಾ ಎಸ್.ಧನ್ನಾ ಕಲ್ಬುರ್ಗಿ ಅವರ ಕವಿತೆಯನ್ನು ಕವಯತ್ರಿ ಸಾವಿತ್ರಿ ಮಾಸ್ಕೇರಿ ಕಳಿಸಿದ್ದಾರೆ.
ಅಪರೂಪದ ಕವನ ಇದು. ಕೊಲೆ ಮಾಡಿದವನ ಹೆಸರ ಮಗನಿಗೆ ಇಡ ಬೇಕು. ಎಂಬ ದಾಸರ ಹಾಡಿನ ಹಾದಿಯಲ್ಲಿಯೆ ಸಾಗುವ ಗಮನಾರ್ಹ ಕವನ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
ವರ್ತಮಾನದ ಜನರ ನಕಾರಾತ್ಮಕ ನಡೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಲು ಪ್ರೇರಣೆ ನೀಡುವ ಸಹಜ ಶೈಲಿಯ ಗಂಭೀರ ಕವಿತೆಯಿದು. ಕವಯತ್ರಿ ಶಿವಲೀಲಾ ಎಸ್.ಧನ್ನಾ ಅವರಿಗೆ ಅಭಿನಂದನೆಗಳು. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ