top of page

ನೆತ್ತರುಗುಳಿ ತಿಮ್ಮಣ್ಣ ಭಟ್ಟರು ಹಳೆಗನ್ನಡಕ್ಕೆ ಅನುವಾದಿಸಿದ ತುಳಸಿದಾಸರ ‘ರಾಮಚರಿತಮಾನಸ’

ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದ ಪ್ರಾಥಮಿಕ ಶಾಲೆಯಲ್ಲಿ ದೀರ್ಘ ಕಾಲ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೆತ್ತರುಗುಳಿ ತಿಮ್ಮಣ್ಣ ಭಟ್ಟರು ಹಿಂದಿಯಿಂದ ತುಳಸಿದಾಸರ ಬೃಹತ್ ಗ್ರಂಥ ‘ರಾಮಚರಿತಮಾನಸ’ವನ್ನು ಸಾಮಾನ್ಯ ಓದುಗರಿಗೆ ‘ನೀರಿಳಿಯದ ಗಂಟಲೊಳ್ ಕಡುಂಬಂ ತುರುಕಿದ’ ಅನುಭವ ನೀಡುವ ಹಳೆಗನ್ನಡಕ್ಕೆ ಅನುವಾದಿಸಿದ್ದಾರೆ. ಬೆಂಗಳೂರಿನ ತೇಜು ಪಬ್ಲಿಕೇಷನ್ಸ ಪ್ರಕಟಿಸಿರುವ ಈ ಕೃತಿಗೆ ಹೆಚ್ಚು ಪ್ರಚಾರ ಸಿಕ್ಕಿದಂತಿಲ್ಲ. ಸಾವಿರಾರು ಭಾಷೆಗಳು ಅಸ್ತಿತ್ವದಲ್ಲಿರುವ ನಮ್ಮ ದೇಶದಲ್ಲಿ ರಾಮಾಯಣದ ಮುನ್ನೂರಕ್ಕೂ ಹೆಚ್ಚು ವೈವಿಧ್ಯಗಳಿವೆ ಮತ್ತು ಅವುಗಳ ನಡುವೆ ಸಾಕಷ್ಟು ವ್ಯತ್ಯಾಸಗಳೂ ಇವೆ. ‘ರಾಮಚರಿತಮಾನಸ’ದಲ್ಲೂ ಈ ವ್ಯತ್ಯಾಸಗಳನ್ನು ಕಾಣಬಹುದು. ಆದರೆ ಪಂಪ ರಾಮಾಯಣದಲ್ಲಿರುವಂತೆ ನಿರೂಪಣೆಯ ಶೈಲಿಯನ್ನು ಬದಲಾಯಿಸಿ ಒಂದು ಪಾತ್ರದ ದೃಷ್ಟಿಯಿಂದ ಇಡೀ ಕಥೆಯನ್ನು ಅವಲೋಕಿಸುವಂಥ ಕೆಲಸವನ್ನು ತುಳಸೀದಾಸರು ಮಾಡುವುದಿಲ್ಲ. ಭಾರತದಾದ್ಯಂತ ಹರಡಿರುವ ಹಲವು ರಾಮಾಯಣಗಳನ್ನು ಪರಾಮರ್ಶಿಸಿ ಪುರಾಣಗಳಿಂದಲೂ ಕಥೆಗಳನ್ನು ಬಳಸಿಕೊಂಡು ಅವರು ತಮ್ಮ ರಾಮಾಯಣವನ್ನು ಕಟ್ಟುತ್ತಾರೆ. ಭಾರತದಲ್ಲಿ ಭಕ್ತಿ ಚಳುವಳಿ ನಡೆದ ಸಮಯದಲ್ಲೇ ರಚಿತವಾದ ರಾಮಚರಿತಮಾನಸವು ಶ್ರೀರಾಮಚಂದ್ರನ ಕುರಿತು ಪರಿಶುದ್ಧ ಭಕ್ತಿಭಾವವನ್ನು ಸ್ಫುರಿಸುತ್ತದೆ.

ತುಳಸಿದಾಸರು ಓರ್ವ ಉದ್ದಾಮ ಸಂಸ್ಕ್ರತ ಪಂಡಿತರಾಗಿದ್ದರು. ಆದರೆ ಅಂದಿನ ಕಾಲದಲ್ಲಿ ಸಾಮಾನ್ಯವಾಗಿ ಸಂಸ್ಕ್ರತ ಪಂಡಿತರಲ್ಲಿದ್ದ ಅಹಂಕಾರವು ಅವರಲ್ಲಿರಲಿಲ್ಲ. ಅತ್ಯಂತ ಸಾಮಾನ್ಯ ಮಂದಿಗೂ ಭಾರತದ ಪ್ರಾಚೀನ ಗ್ರಂಥಗಳಾದ ವೇದ-ಉಪನಿಷತ್ತು-ಪುರಾಣಗಳ ಜ್ಞಾನವು ಅವರದ್ದೇ ಸಾಮಾನ್ಯ ಭಾಷೆಯಲ್ಲಿ ದೊರಕುವಂತಾಗಬೇಕೆಂಬುದು ಅವರ ಇಂಗಿತವಾಗಿತ್ತು. ಆದ್ದರಿಂದ ಅವರು ತಮ್ಮ ಕೃತಿಗಾಗಿ ಅವಧಿ ಭಾಷೆಯನ್ನು ಆಯ್ದುಕೊಂಡರು. ‘ರಾಮಚರಿತಮಾನಸ’ವು ಅವಧಿ ಭಾಷೆಯ ಒಂದು ಮಹಾನ್ ಕೃತಿ. ಅದು ಭಾರತೀಯ ಸಂಸ್ಕ್ರತಿಯ ಜೀವಾಳ’ ಎಂಬ ಹೆಸರು ಪಡೆದಿದೆ. ಭಾರತದ ಮಧ್ಯಕಾಲೀನ ಕಾವ್ಯದ ಮಾಂತ್ರಿಕ ತೋಟದ ಅತ್ಯುನ್ನತ ವೃಕ್ಷ’ ‘ಭಕ್ತಿ ಸಾಹಿತ್ಯದ ಮೇರು ಕೃತಿ’ ಮೊದಲಾದ ಹೆಸರುಗಳನ್ನು ಇದು ಪಡೆದಿದೆ. ಮುಂದೆ ಜನಸಾಮಾನ್ಯರು ಹಾಡಿಕೊಂಡು ಕುಣಿಯುವ ‘ರಾಮಲೀಲಾ’ ಎಂಬ ನಾಟಕೀಯ ಅಭಿನಯಕ್ಕೆ ಮೂಲ ಪಠ್ಯವನ್ನೊದಗಿಸಿದ್ದು ಇದೇ ಕೃತಿ. ಹಿಂದಿ ಸಾಹಿತ್ಯದಲ್ಲಿ ಇದು ಭಕ್ತಿ ಸಾಹಿತ್ಯದ ಸಗುಣ ಪಂಥಕ್ಕೆ ಸೇರಿದ್ದಾಗಿದೆ.


ತುಳಸಿದಾಸರು ‘ರಾಮಚರಿತಮಾನಸ’ವನ್ನು ಅಯೋಧ್ಯಾ ವಿಕ್ರಮ ಸಂವತ್ಸರದ ( 1631) ಚೈತ್ರಮಾಸದ 9ನೆಯ ದಿನ, ಶ್ರೀರಾಮನ ಜನ್ಮದಿನದಂದು ಬರೆಯಲಾರಂಭಿಸಿದರು. ಆ ಕಾಲದಲ್ಲಿ ಭಾರತದಲ್ಲಿ ಅಕ್ಬರನ ಆಡಳಿತವಿತ್ತು. ರಾಮಚರಿತಮಾನಸವನ್ನು ವಾಲ್ಮೀಕಿಯ ಸಂಸ್ಕೃತ ಕೃತಿಯ ಪುನರಾಖ್ಯಾನ ಎಂದು ಹೇಳಲಾಗಿದೆ. ಆದರೆ ಇದು ವಾಲ್ಮೀಕಿ ರಾಮಾಯಣದ ಯಥಾಪ್ರತಿಯಲ್ಲ. ಸ್ವತಃ ತುಳಸಿದಾಸರೇ ಇದು ವಾಲ್ಮೀಕಿ ರಾಮಾಯಣದ ಪುನರಾಖ್ಯಾನ ಅಲ್ಲವೆಂದು ಹೇಳುತ್ತಾರೆ. ಇದು ರಾಮನ ಕಥೆ-ಶಿವನ ಮನಸ್ಸಿನಲ್ಲಿ ಅವನು ತನ್ನ ಪತ್ನಿ ಪಾರ್ವತಿಗೆ ಹೇಳುವುದಕ್ಕೆ ಮೊದಲೇ ರೂಪುಗೊಂಡಿದ್ದ ಕಥೆಯಾಗಿದೆ ಮತ್ತು ಅದನ್ನು ತಾವು ಚಿಕ್ಕವರಿದ್ದಾಗ ತಮ್ಮ ಗುರು ನರಹರಿದಾಸರಿಂದ ಕೇಳಿದೆ ಎಂದು ಹೇಳುತ್ತಾರೆ. ತಮಗೆ ಅರ್ಥವಾಗದ ವಿಷಯಗಳನ್ನು ಗುರುಗಳು ಬಿಡಿಸಿ ಸರಳವಾಗಿ ಪುನಃ ಪುನಃ ಹೇಳಿ ಅರ್ಥ ಮಾಡಿಸಿದ್ದರು. ಓರ್ವ ಮುಗ್ಧ ಬಾಲಕರಾಗಿದ್ದಾಗ ಅವರ ಮನಸ್ಸಿನೊಳಗೆ ಗಟ್ಟಿಯಾಗಿ ಕುಳಿತ ಈ ಕಥೆಯನ್ನು ಅವರು ಬರೆದಿಟ್ಟರು. ಶಿವನೇ ಹೆಸರಿಸಿದಂತೆ ಅದಕ್ಕೆ ರಾಮಚರಿತಮಾನಸ ಎಂದು ಹೆಸರು ಕೂಡಾ ಇಟ್ಟರು.


ರಾಮಚರಿತಮಾನಸದಲ್ಲಿ ಒಟ್ಟು ಏಳು ಕಾಂಡಗಳಿವೆ. ತುಳಸಿದಾಸರು ಈ ಏಳು ಕಾಂಡಗಳನ್ನು ಪವಿತ್ರ ಮಾನಸ ಸರೋವರಕ್ಕೆ ಶರೀರ ಮತ್ತು ಆತ್ಮಗಳನ್ನು ಶುದ್ಧೀಕರಿಸಲು ಹೋಗಲು ಬಳಸುವ ಏಳು ಸೋಪಾನಗಳು ಎಂದು ಕರೆದಿದ್ದಾರೆ. ಮೊದಲ ಎರಡು ಕಾಂಡಗಳು- ಬಾಲಕಾಂಡ ಮತ್ತು ಅಯೋಧ್ಯಾಕಾಂಡಗಳು ಒಟ್ಟು ಕೃತಿಯ ಅರ್ಧದಷ್ಟಿವೆ. ಉಳಿದವು ಕ್ರಮವಾಗಿ ಅರಣ್ಯ ಕಾಂಡ, ಕಿಷ್ಕಿಂಧಾ ಕಾಂಡ , ಸುಂದರ ಕಾಂಡ, ಲಂಕಾ ಕಾಂಡ ಮತ್ತು ಉತ್ತರ ಕಾಂಡಗಳು. ಬಾಲಕಾಂಡದಲ್ಲಿ 58 ಉಪವಿಭಾಗಗಳು, ಅಯೋಧ್ಯಾಕಾಂಡದಲ್ಲಿ 45 ಉಪವಿಭಾಗಗಳು, ಅರಣ್ಯ ಕಾಂಡದಲ್ಲಿ 24, ಕಿಷ್ಕಿಂಧಾ ಕಾಂಡದಲ್ಲಿ 8, ಸುಂದರ ಕಾಂಡದಲ್ಲಿ 15, ಯುದ್ಧ ಕಾಂಡದಲ್ಲಿ 37, ಮತ್ತು ಉತ್ತರ ಕಾಂಡದಲ್ಲಿ 32 ಉಪ ವಿಭಾಗಗಳಿವೆ. ಪದ್ಯಗಳಿಗೆ ತುಳಸಿದಾಸರು ನಡುನಡುವೆ ಪ್ರತ್ಯೇಕಿಸುವ ದ್ವಿಪದಿಗಳೊಂದಿಗೆ ಚತುಷ್ಪದಿಗಳನ್ನು ಬಳಸಿದ್ದಾರೆ. ಆದರೆ ಅನುವಾದದಲ್ಲಿ ಮೂಲದ ಛಂದಸ್ಸನ್ನು ಉಳಿಸಲಾಗಿಲ್ಲ. ಪ್ರತಿ ಸಂಧಿಯ ಆರಂಭದಲ್ಲೂ ಸ್ತುತಿ ಅಥವಾ ಮಂಗಲಾಚರಣವಿದೆ.

ಆರಂಭದಲ್ಲಿ ಭಾರತೀಯ ಕಾವ್ಯಪದ್ಧತಿಯಂತೆ ರಚನೆಯು ನಿರ್ವಿಘ್ನವಾಗಿ ನಡೆಯಲೆಂದು ಮಾಡುವ ದೈವಪ್ರಾರ್ಥನೆಯಿದೆ. ಪ್ರತಿ ಕಾಂಡದ ಮೂರು ಅಥವಾ ನಾಲ್ಕು ಪದ್ಯಗಳು ಪ್ರಾರ್ಥನೆಯಾಗಿವೆ. ಬಾಲಕಾಂಡವು ವಿದ್ಯೆ, ಜ್ಞಾನ, ಬುದ್ಧಿ, ವಾಣಿ ಮತ್ತು ಶುಭದ ದೇವತೆಗಳಾದ ಸರಸ್ವತಿ ಮತ್ತು ಗಣೇಶರ ಸ್ತುತಿಯೊಂದಿಗೆ ಆರಂಭವಾಗುತ್ತದೆ. ಅಯೋಧ್ಯಾಕಾಂಡವು ಶಿವನನ್ನು ಕುರಿತು ಪ್ರಾರ್ಥಿಸುತ್ತದೆ. ಅರಣ್ಯ ಕಾಂಡವು ಶಿವನ ವೈಭವವನ್ನು ವರ್ಣಿಸುತ್ತದೆ. ಕಿಷ್ಕಿಂಧಾ ಕಾಂಡವು ರಘುವಂಶದ ಇಬ್ಬರು ಕುಡಿಗಳಾದ ರಾಮ ಲಕ್ಷ್ಮಣರನ್ನು ಸ್ತುತಿಸುತ್ತದೆ. ಸುಂದರ ಕಾಂಡದಲ್ಲಿ ಪುನಃ ರಾಮನ ಸ್ತುತಿಯಿದೆ. ಲಂಕಾ ಕಾಂಡದಲ್ಲಿ ಶಿವನಿಂದಲೂ ಪೂಜಿಸಲ್ಪಡುವ ರಾಮನ ಸ್ತುತಿಯಿದೆ. ಉತ್ತರಕಾಂಡದಲ್ಲಿ ಜಾನಕೀರಮಣ ರಾಮನಿದ್ದಾನೆ. ಎಲ್ಲ ಕಾಂಡಗಳೂ ಒಂದೇ ರೀತಿಯ ಶ್ಲೋಕದಿಂದ ಕೊನೆಗೊಳ್ಳುತ್ತವೆ.


ಬಾಲಕಾಂಡದಲ್ಲಿ ಯಾಜ್ಞವಲ್ಕ್ಯರು ಭಾರದ್ವಾಜರಿಗೆ ಕಥೆಯನ್ನು ಹೇಳುತ್ತಾರೆ. ಅವರ ಕಥೆಯಲ್ಲಿ ಶಿವನು ಪಾರ್ವತಿಗೆ ರಾಮನ ಕಥೆಯನ್ನು ಹೇಳುತ್ತಾನೆ. ಇಲ್ಲಿ ರಾಮನ ಅವತಾರಕ್ಕೆ ಹಿನ್ನೆಲೆಯಾಗಿ ನಿಂತ ಐದು ಕಾರಣಗಳನ್ನು ಶಿವನು ಕೊಡುತ್ತಾನೆ. ಜಯ-ವಿಜಯರ ಕಥೆ, ನಾರದ ಮುನಿಯ ಶಾಪ, ಸತಿ ದಹನ, ಪಾರ್ವತಿಯ ಅವತಾರ, ದಕ್ಷ ಯಜ್ಞ, ಪಾರ್ವತಿ-ನಾರದರ ಭವಿಷ್ಯ ನುಡಿ, ಶಿವ ಪಾರ್ವತಿಯರ ಕಲ್ಯಾಣ ಮೊದಲಾದ ಕಥೆಗಳಿವೆ. ಇಲ್ಲಿ ತುಳಸಿದಾಸರು ಬೇರೆ ಬೇರೆ ದೇವತೆಗಳನ್ನೂ ಬಾಲ್ಯದಲ್ಲಿ ತಮಗೆ ಕಥೆ ಹೇಳಿದ ಗುರುಗಳನ್ನೂ, ಸಂತರನ್ನೂ, ಭವಿಷ್ಯದಲ್ಲಿ ಬರಬಹುದಾದವರನ್ನೂ ಕುರಿತು ಪ್ರಾರ್ಥಿಸುತ್ತಾರೆ. ರಾಮಾಯಣವನ್ನು ರಾಮ ಭಕ್ತರ ಬಳಿಗೆ ತಂದ ವಾಲ್ಮೀಕಿ ಮಹರ್ಷಿಗಳಿಗೂ ಗೌರವ ಸಲ್ಲಿಸುತ್ತಾರೆ. ಕಥೆಯು ಭಾರದ್ವಾಜ ಮತ್ತು ಯಾಜ್ಞವಲ್ಕ್ಯ ಮುನಿಗಳ ಭೇಟಿಯೊಂದಿಗೆ ಆರಂಭವಾಗುತ್ತದೆ. ಭಾರದ್ವಾಜರು ಯಾಜ್ಞವಲ್ಕ್ಯರನ್ನು ರಾಮಕಥೆಯನ್ನು ವಿವರವಾಗಿ ಹೇಳಬೇಕೆಂದು ಕೇಳಿಕೊಳ್ಳುತ್ತಾರೆ. ಕಥಾ ನಿರೂಪಣೆಯು ಶಿವನಿಂದ ಆರಂಭವಾಗುತ್ತದೆ. ಶಿವನು ರಾಮಾವತಾರದ ಹಿಂದಿನ ಕಾರಣವನ್ನು ಹೇಳುತ್ತಾನೆ. ಮುಂದೆ ರಾವಣ ಮತ್ತು ಆತನ ಸೋದರರ ಜನನದ ಕಥೆಯಿದೆ. ಇಲ್ಲಿಂದ ಮುಂದೆ ಕಥೆಯ ನಿರೂಪಣೆಯು ಆಗಾಗ ಶಿವ, ಯಾಜ್ಞವಲ್ಕ್ಯ, ಕಾಕಭುಷುಂಡಿ ಎಂಬ ರಾಮಭಕ್ತ ಮಹಾಜ್ಞಾನಿ ಕಾಗೆ ಮತ್ತು ತುಳಸಿದಾಸರ ನಡುವೆ ಬದಲಾಗುತ್ತ ಹೊಗುತ್ತದೆ. ಮುಂದೆ ದೇವತೆಗಳು ಬ್ರಹ್ಮನಲ್ಲಿಗೆ ಹೋಗಿ ರಾವಣನ ದೌರ್ಜನ್ಯ-ದುರಾಚಾರಗಳ ಕುರಿತು ದೂರಿಟ್ಟು ಕಾಪಾಡ ಬೇಕೆಂದು ಕೇಳಿಕೊಳ್ಳುತ್ತಾರೆ.


ಅಯೋಧ್ಯಾಕಾಂಡದಲ್ಲಿ ರಾಮ ಸೀತೆಯರು ಮಿಥಿಲೆಯಿಂದ ಮದುವೆಯಾಗಿ ಬಂದಾಗ ಅಯೋಧ್ಯೆ ಎಂಥ ಸ್ವರ್ಗವಾಗಿತ್ತೆಂಬ ವರ್ಣನೆಯಿದೆ. ದಶರಥನು ವೃದ್ಧನಾಗುವುದು, ಹಿರಿಯ ಪುತ್ರ ರಾಮನ ಪಟ್ಟಾಭಿಷೇಕದ ಚಿಂತನೆ ಮತ್ತು ತಯಾರಿ ನಡೆಯುತ್ತದೆ. ಆದರೆ ರಾಮನು ಅಯೋಧ್ಯೆಯಲ್ಲಿ ರಾಜನಾಗಿ ಆಡಳಿತ ನಡೆಸುತ್ತ ಕುಳಿತರೆ ರಾವಣನನ್ನು ವಧಿಸಿ ತಮ್ಮನ್ನು ಕಾಪಾಡುವವರು ಯಾರು ಎಂಬ ಚಿಂತೆ ದೇವತೆಗಳದ್ದು. ಆದ್ದರಿಂದ ರಾಮನಿಂದ ತಮ್ಮ ಕೆಲಸವಾಗ ಬೇಕಾದರೆ ಬೇರೆ ದಾರಿ ಹುಡುಕಬೇಕು. ಹಾಗೆ ದೇವತೆಗಳು ಸರಸ್ವತಿ ದೇವಿಯನ್ನು ಕುರಿತು ಧ್ಯಾನಿಸುತ್ತಾರೆ.ಸರಸ್ವತಿ ದೇವಿಯು ಮಂಥರೆಯ ಮೇಲೆ ಪ್ರಭಾವ ಬೀರಿ ಆಕೆಯು ಕೈಕೇಯಿಯ ಮನಸ್ಸನ್ನು ರಾಮನ ಪಟ್ಟಾಭಿಷೇಕದ ವಿರುದ್ಧ ಚಿಂತಿಸುವಂತೆ ಮಾಡಬೇಕೆಂದು ಬೇಡಿಕೊಳ್ಳುತ್ತಾರೆ.( ಈ ವಿಚಾರದಲ್ಲಿ ತುಲಸಿ ರಾಮಾಯಣವು ಇತರರದ್ದಕ್ಕಿಂತ ಭಿನ್ನವಾಗಿರುವುದನ್ನು ನಾವು ಗಮನಿಸ ಬೇಕು). ಇದು ರಾಮ-ಸೀತೆ-ಲಕ್ಷ್ಮಣರ ವನವಾಸಕ್ಕೆ ಕಾರಣವಾಗುತ್ತದೆ.


ಅರಣ್ಯ ಕಾಂಡದಲ್ಲಿ ವನವಾಸ ಮುಂದುವರೆಯುತ್ತದೆ. ಅವರು ಅತ್ರಿ ಮುನಿಗಳ ಆಶ್ರಮಕ್ಕೆ ಹೋಗುತ್ತಾರೆ. ಅತ್ರಿ ಪತ್ನಿ ಅನಸೂಯೆಯು ಸೀತೆಗೆ ಪತ್ನಿ ಧರ್ಮವನ್ನು ಬೋಧಿಸುತ್ತಾಳೆ. ಮುಂದೆ ಅವರು ಅಗಸ್ತ್ಯ ಮುನಿಗಳ ಆಶ್ರಮಕ್ಕೆ ಹೋಗುತ್ತಾರೆ. ಅಗಸ್ತ್ಯ ಮುನಿಗಳು ರಾಮನಿಗೆ ದಿವ್ಯಾಸ್ತ್ರಗಳನ್ನು ಕೊಡುತ್ತಾರೆ.. ಮುಂದೆ ಸೀತೆಯನ್ನು ಹಿಡಿಯಲು ಬಮದ ವಿರಾಧನನ್ನು ರಾಮನು ವಧಿಸುತ್ತಾನೆ. ಅನಂತರ ಅವರು ಶರಭಂಗ ಋಷಿಗಳ ಆಶ್ರಮಕ್ಕೆ ಹೋಗಿ ತಾವು ಅರಣ್ಯದ ಯಾವ ಭಾಗದಲ್ಲಿ ನೆಲೆಯೂರುವುದೆಂಬುದರ ಬಗ್ಗೆ ಕೇಳುತ್ತಾರೆ.. ಶರಭಂಗರು ಸುತೀಕ್ಷ್ಣ ಋಷಿಗಳನ್ನು ಭೇಟಿಯಾಗಲು ಹೇಳುತ್ತಾರೆ. ಸುತೀಕ್ಷ್ಣಋಷಿಗಳು ತಾವು ಹಲವಾರು ವರ್ಷಗಳಿಂದ ರಾಮನ ಆಗಮನಕ್ಕಾಗಿ ಸ್ವರ್ಗ ಪ್ರಾಪ್ತಿಯಾದರೂ ಹೋಗದೆ ಕಾಯುತ್ತಿದ್ದೇನೆಂದು ಹೇಳುತ್ತಾನೆ.

ಹೀಗೆ ಹದಿಮೂರು ವರ್ಷಗಳು ಕಳೆಯುತ್ತವೆ. ಅವರು ಪಂಚವಟಿಯಲ್ಲಿ ಒಂದು ಸುಂದರ ಆಶ್ರಮವನ್ನು ಕಟ್ಟುತ್ತಾರೆ. ಶೂರ್ಪನಖಿಯ ಪ್ರವೇಶದೊಂದಿಗೆ ಕಥೆಗೆ ಹೊಸ ತಿರುವು ಸಿಗುತ್ತದೆ. ಶೂರ್ಪನಖಿಯ ಬಯಕೆ, ರಾಮ ಲಕ್ಷ್ಮಣರಿಂದ ನಿರಾಕರಣೆ, ಅವಮಾನ, ಶೂರ್ಪನಖಿ ಸೇಡುತೀರಿಸಿಕೊಳ್ಳಲು ರಾವಣನ ಬಳಿ ದೂರು ಹೇಳುವುದು ಇತ್ಯಾದಿ ನಡೆಯುತ್ತದೆ. ರಾವಣ ಮಾರೀಚನನ್ನು ಮಾಯಾ ಜಿಂಕೆಯಾಗಿ ರಾಮನ ಆಶ್ರಮದ ಮುಮದೆ ತಿರುಗಾಡಲು ಹಾಳುತ್ತಾನೆ. ಚಿನ್ನದ ಜಿಂಕೆಗೆ ಮರುಳಾಗಿ ಸೀತೆ ತನಗೆ ಆ ಜಿಂಕೆ ಬೇಕೆಂದು ಹಠ ಮಾಡಿ ರಾಮನನ್ನು ಕಳಿಸುವಾಗ ರಾಮನು ಅಪಾಯವನ್ನು ಗ್ರಹಿಸಿ ಸೀತೆಗೆ ಛಾಯಾ ಸೀತೆಯಾಗಿ ತನ್ನ ನಿಜ ರೂಪವನ್ನು ಬೆಂಕಿಯೊಳಗೆ ಅಡಗಿಸಿಡಲು ಹೇಳುತ್ತಾನೆ. ಸೀತಾಪಹರಣ, ಅವಳನ್ನು ಹುಡುಕುತ್ತ ರಾಮ ಲಕ್ಷ್ಮಣರ ಅಲೆದಾಟ, ದಾರಿಯಲ್ಲಿ ಶಬರಿಯ ಭೇಟಿ ಇತ್ಯಾದಿ ಘಟನೆಗಳು ಅರಣ್ಯ ಕಾಂಡದಲ್ಲಿ ನಡೆಯುತ್ತವೆ.

ಕಿಷ್ಕಿಂಧಾ ಕಾಂಡದಲ್ಲಿ ರಾಮ ಲಕ್ಷ್ಮಣರು ಅಲೆದಾಡುತ್ತ ಋಷ್ಯಮೂಕ ಪರ್ವತದ ಬಳಿಗೆ ಬಂದಾಗ ಪರ್ವತದ ಬುಡದಲ್ಲಿ ಸುಗ್ರೀವ ಆತಂಕದಿಂದ ಕುಳಿತಿರುವುದನ್ನು ಕಾಣುತ್ತಾರೆ. ಅಣ್ಣ ವಾಲಿಯ ಕಾರಣದಿಂದ ಸುಗ್ರೀವನು ಕಷ್ಟದಲ್ಲಿದ್ದಾನೆ. ಪರಸ್ಪರ ಸಹಾಯ ಮಾಡುವ ಒಪ್ಪಂದದೊಂದಿಗೆ ರಾಮನು ವಾಲಿಯ ವಧೆ ಮಾಡುತ್ತಾನೆ. ಸುಗ್ರೀವ ಮತ್ತು ಅವನ ಗೆಳೆಯರಾದ ಹನುಮಂತ, ಜಾಂಬವಂತ ಅಂಗದ ಮೊದಲಾದವರು ಸೀತಾನ್ವೇಷಣೆ ಹಾಗೂ ರಾವಣನೊಂದಿಗೆ ಯುದ್ಧದಲ್ಲಿ ಸಹಾಯ ಮಾಡಲು ಉದ್ಯುಕ್ತರಾಗುತ್ತಾರೆ. ಸುಂದರ ಕಾಂಡದಲ್ಲಿ ಹನುಮನ ಸಾಹಸದ ವರ್ಣನೆ, ಸಾಗರೋಲ್ಲಂಘನ, ಸೀತಾಮಾತೆಯ ಭೇಟಿ, ಲಂಕಾದಹ£, ರಾಮನು ಹನುಮನಿಗೆ ತನ್ನ ನಿಜರೂಪವನ್ನು ಪ್ರಕಟಿಸಿದ ಪ್ರಕರಣಗಳಿವೆ. ಯುದ್ಧಕಾಂಡದಲ್ಲಿ ಜಾಂಬವ, ನಲ, ನೀಲ ಮೊದಲಾದವರಿಂದ ಲಂಕೆಗೆ ಸೇತುವೆಯ ನಿರ್ಮಾಣ, ಯುದ್ಧ ಮತ್ತು ರಾವಣ-ಕುಂಭಕರ್ಣರ ವಧೆಯ ಚಿತ್ರಣವಿದೆ.


ಉತ್ತರ ಕಾಂಡವು ರಾಮನು ಅಯೋಧ್ಯೆಗೆ ಹಿಂದಿರುಗುವ ಮೊದಲ ದಿನ ಆರಂಭವಾಗುತ್ತದೆ. ರಾಮನು ಸೀತೆಗೆ ತನ್ನ ನಿಜರೂಪವನ್ನು ಬೆಂಕಿಯೊಳಗಿಂದ ಹೊರತರಲು ಹೇಳುತ್ತಾನೆ. ಎಲ್ಲರೂ ಅಯೋಧ್ಯೆಗೆ ಹೊರಡುತ್ತಾರೆ. ಭರತನು ನಂದಿಗ್ರಾಮದಲ್ಲಿ ಅಣ್ಣನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾನೆ. ರಾಮನು ಪುಷ್ಪಕ ವಿಮಾನದಿಂದ ಇಳಿಯುತ್ತಲೇ ಪುರಜನರ ಜಯಘೋಷ ಕೇಳಿಸುತ್ತದೆ. ರಾಮ ಸೀತೆ ಲಕ್ಷ್ಮಣರು ಗುರು ವಸಿಷ್ಠರ ಚರಣ ಸ್ಪರ್ಶ ಮಾಡುತ್ತಾರೆ. ರಾಮನ ಪಟ್ಟಾಭಿಷೇಕ ನಡೆಯುತ್ತದೆ. ಶಿವನು ಬಂದು ಸಂಭ್ರಮದಲ್ಲಿ ಪಾಲುಗೊಳ್ಳುತ್ತಾನೆ. ಹಾಗೆಯೇ ರಾಮಭಕ್ತಿಯಅವಕಾಶಕ್ಕಾಗಿ ಬೇಡುತ್ತಾನೆ. ಕಥೆಯ ಕೊನೆಯ ಭಾಗದಲ್ಲಿ ರಾಮನಿಗೆ ಲವ-ಕುಶರೆಂಬ ಇಬ್ಬರು ಅವಳಿ ಮಕ್ಕಳಿರುತ್ತಾರೆ. ಲಕ್ಷ್ಮಣ-ಭರತ-ಶತ್ರುಘ್ನರಿಗೂ ಎರಡೆರಡು ಮಕ್ಕಳಿರುತ್ತಾರೆ. ನಾರದ ಸನಕಾದಿ ಮುನಿಗಳು ಅಯೋಧ್ಯೆಗೆ ಭೇಟಿ ಕೊಡುತ್ತಾರೆ. ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾಗಿ ತುಳಸಿದಾಸರು ಸೀತೆಯನ್ನು ಕಾಡಿಗಟ್ಟುವ ಮತ್ತು ಆಕೆಯನ್ನು ಭೂಮಿ ತನ್ನೊಳಗೆ ಸೆಳೆದುಕೊಳ್ಳುವ ವಿಚಾರಗಳನ್ನು ಇಲ್ಲಿ ಬರೆದಿಲ್ಲ. ಸೀತಾಮಾತೆಯ ಬಗ್ಗೆ ಅಪಾರ ಭಕ್ತಿ ಗೌರವಗಳನ್ನಿಟ್ಟುಕೊಂಡ ತುಳಸಿದಾಸರು ಸೀತೆ ಇದುವರೆಗೆ ಅನುಭವಿಸಿದ ಕಷ್ಟ ಪರಂಪರೆಗಳನ್ನು ಇಲ್ಲೇ ಕೊನೆಗೊಳಿಸಿ ಕಥೆಯು ಸುಖಾಂತವಾಗಿರಲೆಂದು ಬಯಸುತ್ತಾರೆ. ಉತ್ತರ ಕಾಂಡದ ಇಲ್ಲಿಗೆ ಶಿವನು ಪಾರ್ವತಿಗೆ ಹೇಳುವ ಕತೆ ಸಮಾಪ್ತವಾಗುತ್ತದೆ.


ಅದೇ ರೀತಿ ಗರುಡನಿಗೆ ಕಾಗೆ ಹೇಳುವ ಕಥೆಯೂ ಮುಗಿಯುತ್ತದೆ. ಕಾಗೆಯ ಪಾತ್ರ ಬರುವುದು ತುಳಸಿ ರಾಮಾಯಣದಲ್ಲಿ ಮಾತ್ರ. ಭುಷುಂಡಿಯೆಂಬ ಮಹಾಜ್ಞಾನಿಯೂ ರಾಮಭಕ್ತನೂ ಆದ ಋಷಿಯನ್ನು ಅವನ ಕೊನೆಯ ಜನ್ಮದಲ್ಲಿ ಲೋಮಸನೆಂಬ ಋಷಿಯು ಕಾಗೆಯಾಗಿ ರೂಪಾಂತರಿಸಿ ಕಲ್ಪಾಂತದ ತನಕ ಜೀವಿಸುವ ಚಿರಂಜೀವಿಯಾಗಿಸುತ್ತಾರೆ. ದಕ್ಷ ಯಜ್ಞದಲ್ಲಿ ತನ್ನನ್ನು ದಾಕ್ಞಾಯಿಣಿ ದಹಿಸಿಕೊಂಡ ನಂತರ ನೊಂದ ಶಿವನು ಗಿರಿಜೆಯಾಗಿ ಮರುಜನ್ಮ ತಾಳುವ ತನಕ ಅಲೆದಾಡುತ್ತ ಅಕ್ಕಪಕ್ಕದಲ್ಲಿ ನಾಲ್ಕು ಪರ್ವತಗಳಿರುವ ಜಾಗಕ್ಕೆ ಬರುತ್ತಾನೆ. ಅಲ್ಲಿ ಕಾಕಭುಷುಂಡಿ ಗರುಡನಿಗೆ ರಾಮಾಯಣದ ಕಥೆಯನ್ನು ಹೇಳುತ್ತಿದ್ದುದನ್ನು ನೋಡುತ್ತಾನೆ. ರಾಮಚರಿತಮಾನಸದ ಉತ್ತರಕಾಂಡದಲ್ಲಿ ಗರುಡನು ರಾಮಕಥೆಗಾಗಿ ಕಾಗೆಯ ಬಳಿಗೆ ಹೋದ ಕತೆ, ಕಾಗೆಯಿಂದ ಮಾಯ-ಮೋಹಾದಿಗಳ ವಿವರ, ಕಾಗೆಯೊಂದಿಗೆ ರಾಮನ ಬಾಲ ಲೀಲೆ, ಕಾಗೆಗೆ ರಾಮನಿತ್ತ ವರ, ಕಾಗೆಯಿಂದ ಶ್ರೀರಾಮನ ಸಿದ್ಧಾಂತ, ಕಾಗೆಯಿಂದ ಶ್ರೀರಾಮನ ಮಹಿಮೆಯ ವರ್ಣನೆ, ಗರುಡನ ಪ್ರಶ್ನೆ, ಕಾಗೆಯ ಜನ್ಮ ವೃತ್ತಾಂತಗಳಿವೆ. ಕೊನೆಯಲ್ಲಿ ಯುಗಧರ್ಮದ ವಿವರಣೆಯೊಂದಿಗೆ ಕಲಿಯುಗದಲ್ಲಿ ಏನೆಲ್ಲಾ ಆಗಬಹುದು ಎಂಬ ಚಿತ್ರಣವಿದೆ. ಯಾಜ್ಞವಲ್ಕ್ಯನು ಭಾರದ್ವಾಜನಿಗೆ ಹೇಳುವ ಕಥೆಯನ್ನು ಮುಗಿಸುವ ಬಗ್ಗೆ ಏನೂ ಹೇಳಿಲ್ಲ. ತುಲಸಿದಾಸರು ರಾಮಾಯಣದ ಪುನರಾಖ್ಯಾನವನ್ನು ಇಲ್ಲಿಗೆ ಮುಗಿಸುತ್ತಾರೆ. ಸಂಸ್ಕೃತದಲ್ಲಿರುವ ರುದ್ರಾಷ್ಟಕವು ಈ ಕಾಂಡದ ಒಂದು ಭಾಗವಾಗಿದೆ. ಕೊನೆಯಲ್ಲಿ ಫಲಶ್ರುತಿಯಿದೆ.


ಇಂಥ ಒಂದು ಮಹತ್ಕ್ರತಿಯನ್ನು ಶಿಷ್ಟ ಕನ್ನಡಕ್ಕೆ ಅನುವಾದ ಮಾಡುವುದೇ ಒಂದು ಹರ ಸಾಹಸ. ಭಾಷೆಗಳು ಒಂದೊಂದಾಗಿ ಸಾಯುತ್ತಿರುವ ಇಂದಿನ ದಿನಗಳಲ್ಲಿ ಹಳೆಗನ್ನಡದ ಬಗೆಗಿನ ಕಾಳಜಿಯಿಂದ ಎನ್. ತಿಮ್ಮಣ್ಣ ಭಟ್ಟರು ಬಹಳ ಆಸ್ಥೆಯಿಂದ ಸುಂದರವಾಗಿ ಹಳೆಗನ್ನಡಕ್ಕೆ ಅನುವಾದಿಸಿದ್ದಾರೆಂದರೆ ಇದರಲ್ಲಿ ಅವರ ಪ್ರತಿಭೆಯೇನು, ಪಟ್ಟ ಪರಿಶ್ರಮವೆಷ್ಟು ಅನ್ನುವುದನ್ನು ನಾವು ಊಹಿಸಬಹುದು.


ಅನುವಾದಿತ ಕೃತಿಯಿಂದ ಒಂದೆರಡು ಚರಣಗಳನ್ನು ಇಲ್ಲಿ ಉಲ್ಲೇಖಿಸಿ ಈ ಲೇಖನವನ್ನು ಕೊನೆಗೊಳಿಸುತ್ತೇನೆ:

ಬಾಲಕಾಂಡದ ಆರಂಭದಲ್ಲಿ ‘ಜಗವೆಲ್ಲ ಸೀತಾರಾಮಮಯ’ ಎಂಬ ಭಾಗ ಹೀಗಿದೆ ನೋಡಿ :


ಜಗದೊಳಾವೆಲ್ಲ ಜಡ ಚೇತನ ಜೀವಿಗಳಿಹವೋ / ಅವುಗಳೆಲ್ಲಮುಂ ರಾಮಮಯಮೆಂದರಿಯುತಾ/ನವುಗಳೆಲ್ಲದರ ಪದಕಮಲಕಿರ್ಕೈಗಳಂ ಜೋಡಿಸುತ / ಸದಾ ವಂದಿಪೆನನಿಮಿಷರ್ಸಸುರರ್ಗೆನರರಿಂಗೆ ನಾಗರ್ಗೆ/ ಖಗ ಪ್ರೇತ ಪಿತರಿಂಗೆ ಗಂಧರ್ವರಿಂಗೆ/ ಕಿನ್ನರರಿಂಗೆ ಮೇಣ್ ನಿಶಾಚರರಿಂಗೆ/


ಈಗಳವು ಸರ್ವವೂ ಎನ್ನಲ್ಲಿಟ್ಟಿರಲಿ ಕರುಣೆಯಂ/ ಜಲದಲ್ಲಿ ನೆಲದಲ್ಲಿ ನಭದಲ್ಲಿ ಎಂಬತ್ತುನಾಲ್ಕು/ ಲಕ್ಷದೆಣಿಕೆಯ ಯೋನಿಯೊಳ್ ಜನಿಸಿರುವ/ ನಾಲ್ವಗೆಯ ಜೀವಿಗಳ್ ನೆಲಸಿದೀ ಬ್ರಹ್ಮಾಂಡ/ ಮೆಲ್ಲಮಂ ಮನದಲ್ಲಿ ಬಗೆದು ಸೀತಾರಾಮ/ ಮಯಮೆಂದು ಕರವೆರಡನುಂ ಸೇರಿಸುತ/ ವಂದಿಪೆಂ ತಮ್ಮ ದಾಸನಿವನೆಂದರಿತು / ತಾವೆಲ್ಲ ಕೂಡಿದ್ದು ಕಪಟಮಂ ತೊರೆದು/ ಕೃಪೆಯೆಂಬ ಗನಿಯನ್ನು ಕರುಣಿಪುದು.


ಮಂಡೋದರಿಯು ರಾವಣನಿಗೆ ನೀತಿ ಬೋಧೆ ಮಾಡುತ್ತಿರುವ ಸಾಲುಗಳು :


ಎಲ್ಲರೂ ತಲೆಬಾಗಿ ಮನೆಗಳಿಗೆ ಸಾಗಿದರ್. ಕರ್ಣಪೂರಂ ನೆಲದಿ ಬಿದ್ದಾಗಿನಿಂ ನೆಸಿದುದು ಚಿಂತೆ ಮಂಡೋದರಿಯ ಹೃದಯದೊಳ್. ಕಣ್ಗಳೊಳ್ ವಾರಿಯಂ ತುಂಬಿ ಕರವೆರಡನುಂ ಜೋಡಿಸುತ ನಲ್ಲನೊಳ್ ಪೇಳ್ದಳ್ :’ ಪ್ರಾಣವಲ್ಲಭನೆ, ಕೇಳೆನ್ನ ಬಿನ್ನಪವ. ರಾಮನೊಳ್ ವೈರಮಂ ತೊರೆದು ಬಿಡು. ನರನೆಂದು ತಿಳಿದು ಹಠಮಂ ಮನದೊಳಿಡಬೇಡ. ಮಮ ವಚನದೊಳ್ ನಂಬುಗೆಯನಿರಿಸು. ರಘುವಂಶಮಣಿಯಾತ ವಿಶ್ವರೂಪಂ. ವೇದಗಳವನಂಗಾಂಗದೊಳ್ ಲೋಕಗಳ ಕಲ್ಪನೆಯ ಮಾಡುವವು. ಪಾತಾಳಮೇ ಪಾದ, ವಿಧಿಧಾಮಮೇ ತಲೆಯು. ಅಪರಲೋಕಂಗಳೇ ಅಂಗಾಂಗ ವಿಶ್ರಾಂತಿಯ ನೆಲೆಗಳ್. ಭಯಂಕರ ಕಾಲನೇ ಭೃಕುಟೀವಿಲಾಸ. ರವಿಯೇ ನಯನ, ಮೇಘಮಾಲೆಯೇ ಕೇಶ, ಅಶ್ವಿನೀಪುತ್ರರೇ ನಾಸಿಕಂ ದಶದಿಕ್ಕುಗಳೇ ಕಿವಿಗಳೆನ್ನುವವು ವೇದಗಳ್’


ನನ್ನ ಪ್ರಾಥಮಿಕ ಶಾಲಾ ಗುರುಗಳೂ ನನ್ನ ಸಾಹಿತ್ಯಾಸಕ್ತಿಗೆ ಕಾರಣರಾದವರಲ್ಲಿ ಪ್ರಮುಖರೂ ಆದ ಅವರಿಗೆ ಗೌರವದಿಂದ ನಮಸ್ಕರಿಸುತ್ತ ಈ ಕೃತಿಯು ಕನ್ನಡದ ಓದುಗರ ಗಮನ ಸೆಳೆಯುವಂತಾಗಲೆಂದು ಹಾರೈಸುತ್ತೇನೆ.


ಡಾ. ಪಾರ್ವತಿ ಜಿ.ಐತಾಳ್
520 views2 comments
bottom of page