ಕಾಸಿ ತಂದಿಟ್ಟ ಕತ್ತಿಯ
ಮಸೆಯದೇ ಬಾಯಿ
ಹರಿತ ಆಗದು,
ಮಾತಿನಂತೆ!
ಕೇಳಿದ ನೋಡಿದ ಓದಿದ
ವಿಷಯಗಳ ಮಿದು ಕಲ್ಲ
ಮೈಯ ನುಣುಪಿಗೆ,
ಬಲ್ಲ ಅರಿವಿನ ಅಸಿಯ
ಹದವಾಗಿ ಹಿತವಾಗಿ
ಎಲ್ಲೂ ಕೊಯ್ಯದ ಹಾಗೆ ಮೈಯ
ಉಜ್ಜಬೇಕು,ಚಕಚಕಾ ಹೊಳೆಯುವಂತೆ-
ಕಜ್ಜಕ್ಕೆ ನೆರವಿಷ್ಟು ಬರುವ ಹಾಗೆ,
ನುಡಿಯನಂತೇ.
ಕಾದಲಾಗದು ರಣವ
ಬೆನ್ನ ಬತ್ತಳಿಕೆಯಲಿ
ಬಾಣ ಇರದೆ,
ಗೆಲ್ಲಲಾಗದು ಬಾಳು:
ಅರಿವಿನ ಮಿರುಗುವ
ಅಸಿ ಇಲ್ಲದೆ!
*ಗಣಪತಿ ಗೌಡ,ಹೊನ್ನಳ್ಳಿ*
ನಮ್ಮ ನಡುವಿನ ಸಶಕ್ತ ಕವಿ ಗಣಪತಿ ಗೌಡ ಹೊನ್ನಳ್ಳಿ ಅವರು ಬರೆದ " ನುಡಿ ಕತ್ತಿ" ಎಂಬ ಕವನ ನಿಮ್ಮ ಓದು ಮತ್ತು ಪ್ರತಿಕ್ರಿಯೆಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ
Commentaires