ನೋಡಬನ್ನಿರಿ.. ನಾಡಹಬ್ಬ
ಗಜನಡಿಗೆಯ ಸೌಂದರ್ಯ
ಸ್ವರ್ಣದಂಬಾರಿಯು ತರುವ ಸ್ವಪ್ನ ಸೌಧ
ಅನುರಣಸಿದೆ.. ಹಂಪೆಯರಸರಶ್ವಗಳ
ಖುರಪುಟದ ನಾದ..
ವೈವಿಧ್ಯವ ಮೆರೆದ "ಮಹಾನವಮಿ ದಿಬ್ಬ"
ಕವಾಯತಿಯ ಸಂವೇದ
ಗಂಭೀರ ಧೀರ ನಡಿಗೆಯ ಮೋದ
ಕಾಲಚಕ್ರದಿ ಒಡೆಯರ ಕಾರ್ಯ ಬಾಹುಳ್ಯ
ಅರಿಯ ಉದರವ ಬಗೆದರಸರುಗಳ ಶೌರ್ಯ
ತಾಯಿ ಚಾಮುಂಡಿಗೆ ಪಾದ ನೈವೇದ್ಯ
ಸ್ವರ್ಣದಂಬಾರಿಯಲಿ ಗಜವನೇರಿಹ ಠೀವಿ
ರಾಜಪಥದಲಿ ನಡೆದ ಅದ್ದೂರಿ
ಕನವರಿಕೆಯಲಿ ನೆನಪು ಜಾರಿ...ಜಾರಿ..
*********************
ಇಂದು ನವೀನ ದಸರೆಯ ಮಾಟ
ತಾಯಿಯಂಬಾರಿಯನೇರ್ದ ನೋಟ
ಮನೆಮನದಿ ಝಗಮಗಿಸುವ ವಿದ್ಯುಲ್ಲತೆಗಳ ಆಟ
ಕವಿಗೋಷ್ಠಿಗಳು, ಸಂಗೀತ, ವಾದ್ಯ, ನೃತ್ಯ
ಕಲಾ ವಿದುಷಿಗಳು, ಕುಸ್ತಿ ಪಟುಗಳ ಘೋಷ
ಮೆರೆವ ಜನವೃಂದಕಿದು ಭಕುತಿ ರಸದೂಟ
ತಾಯೇ, ಬೆಳಗು ನೀ ಮನೆಮನದ ದೀಪ
ತೊಲಗಲಿ ಎಲ್ಲ ಅಜ್ಞಾನದ ತಾಪ
ಮಾಡು ನೀ ದುಷ್ಟ ಶಕ್ತಿಯ ಹರಣ
ಕಳೆಯಲಿ... ಎಲ್ಲ ಭವ ಬಂಧನ
- ವಿಷ್ಣು ಆರ್. ನಾಯ್ಕ
Comments