ನಾಟಕ ಎಂದರೆ ಸಾಮಾನ್ಯ ಅಭಿಪ್ರಾಯ ಹೀಗಿದೆ - ಕೆಲವು ಜನ ಸೇರಿ, ಸರಿಯಾದ ವೇಷಭೂಷಣಗಳೊಂದಿಗೆ; ಒಂದಿಷ್ಟು ಪರಿಕರ ಮತ್ತು ಸಂಗೀತದೊಂದಿಗೆ; ಮಾತುಗಳನ್ನು ಸರಿಯಾಗಿ ಕಂಠಪಾಟ ಮಾಡಿ; ಸ್ವರಗಳ ಏರಿಳಿತ ಮತ್ತು ಸೂಕ್ತ ಹಾವಭಾವಗಳೊಂದಿಗೆ, ... ಪ್ರೇಕ್ಷಕರನ್ನು ರಂಜಿಸುವ ಒಂದು ಪ್ರದರ್ಶನ. ... ಉತ್ತಮ ನೀತಿ, ಸಂದೇಶಗಳು ಅದರಲ್ಲಿ ಇದ್ದರೆ ಆಯ್ತು ಅಂತ. ............. ಇವೆಲ್ಲಾ ತಪ್ಪೇನೂ ಅಲ್ಲ........ ಆದರೆ ಅಷ್ಟೇ ಹೌದೇ...? ಬಹಳಷ್ಟು ಜನ ಹೀಗೆ ಹೇಳುವುದೂ ಇದೆ ...... ಏನೆಂದರೆ... ..ಈ ನಾಟಕ ಬಿಡಿ ...!! ಅದು ಅಷ್ಟೆ ....!! ಅದಕ್ಕೆ ಸಂಪ್ರದಾಯ ಅಂತ ಇಲ್ಲ. ಶಾಸ್ತ್ರೀಯ ಕಲಿಕೆ ಇಲ್ಲ, ಯಾರೂ ನಾಟಕ ಮಾಡಬಹುದು, ದೊಡ್ಡ ಪ್ರತಿಭೆಯೇ ಬೇಡಾ, - ಆದ್ದರಿಂದ ಅದು ಮೊದಲನೇ ದರ್ಜೆಯ ಕಲೆ ಅಲ್ಲ. .... ಇತ್ಯಾದಿ........ ಕೇವಲ ವಾರ್ಷಿಕೋತ್ಸವದ ಮಟ್ಟದ ನಾಟಕ ಪ್ರದರ್ಶನಗಳನ್ನು ಮಾತ್ರ ನೋಡಿ ಹೆಚ್ಚಿನವರಿಗೆ, ನಾಟಕ ಎಂದರೆ ಹೀಗೇ.. !! ಇಷ್ಟೆ ....!! ಎಂದನ್ನಿಸಿರಬಹುದೋ ಏನೋ! ........ ಆದರೆ .... ಅದು ಹಾಗೆ ಇರುವುದು ಹೌದೇ....? ನಾಟಕವೆಂದರೆ ಒಂದು ಕಲೆ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ವೇದಿಕೆಯ ಮೇಲೆ ಪ್ರದರ್ಶಿಸಲ್ಪಡುವುದರಿಂದ ’ಅದೊಂದು ಕಲೆ’ ಅಂತ ಅಷ್ಟೆ. ನಮ್ಮ ದಿನನಿತ್ಯದ ಜಂಜಾಟಗಳಿಂದ ಸ್ವಲ್ಪ ’ರಿಲ್ಯಾಕ್ಸ್’ಪಡೆಯಲು ನಾಟಕ, ಸಂಗೀತ ಇತ್ಯಾದಿ ಬೇಕು....! ಅಂದರೆ ಕಲೆ ಬೇಕು. ಅಷ್ಟೇ ಹೊರತು .... ಅದಕ್ಕಿಂತ ಹೆಚ್ಚು ಅದು ನಮ್ಮನ್ನು ಆವರಿಸಿಕೊಳ್ಳಬಾರದು. ಮಕ್ಕಳಿಗಂತೂ ಅದು ಒಂದು “ಪಠ್ಯೇತರ ಚಟುವಟಿಕೆ” ಮಾತ್ರ ... ಬಹಳಷ್ಟು ಜನರ ಯೋಚನೆ ಹೀಗೆ...... ಇದನ್ನು ಮೀರಿ ಮನಸ್ಸು ಯೋಚಿಸುವುದೇ ಇಲ್ಲ. ಆದರೆ..... ಸ್ವಲ್ಪ ಗಂಭೀರವಾಗಿ ಯೋಚನೆ ಮಾಡಿದರೆ ಅರಿವಾಗುತ್ತದೆ....... ಆಟ ಮತ್ತು ಕಲೆ ಎನ್ನುವುದು ಪಠ್ಯೇತರ ಅಲ್ಲ, ಅದು ಸಹಪಠ್ಯ ಅಂತ.
ಮಿದುಳಿನ ಒಂದು ಭಾಗ ಗಣಿತ, ವಿಜ್ಞಾನ, ತಂತ್ರಜ್ಞಾನ ಇತ್ಯಾದಿ ಭೌದ್ದಿಕ ಅಂಶಗಳನ್ನು ಸ್ವೀಕರಿಸಿ ಬೆಳೆಯುವಂತೆ ... ಇನ್ನೊಂದು ಭಾಗ ಆಟ,ನಾಟಕ, ಸಂಗೀತ ಮುಂತಾದ ಕಲೆಗಳನ್ನೂ, ಭಾವನಾತ್ಮಕ ಸಂಗತಿಗಳನ್ನೂ ಸ್ವೀಕರಿಸಿ ಬೆಳೆಯುತ್ತದೆ...... ಇವೆರಡೂ ಒಂದು ಬ್ಯಾಲೆನ್ಸ್ ನಲ್ಲಿದ್ದರೆ ಮಾತ್ರ ಮನುಷ್ಯನ ಮಾನಸಿಕ ಸ್ಥಿತಿ ಚೆನ್ನಾಗಿರುತ್ತದೆ ಎನ್ನುವುದು ಮನಶಾಸ್ತ್ರಜ್ಞರ ಮಾತು. ಆದುದರಿಂದ ಪಾಠೇತರ ಎಂಬುದಿಲ್ಲ , ಎಲ್ಲವೂ ಸಹಪಠ್ಯ.
ನಾಟಕ ಎಂದರೆ ಒಂದು ಕಲೆ ಹೌದು ... ಅಷ್ಟು ಮಾತ್ರ ಅಲ್ಲ, ಜೊತೆಗೆ ..... ನಾಟಕ ಎಂದರೆ ಒಂದು ಭಾಷೆ, ಶಿಕ್ಷಣ, ಮನಶಾಸ್ತ್ರ, ವ್ಯಕ್ತಿತ್ವ ವಿಕಸನ, ನಮ್ಮ ಬದುಕು, ಅದ್ಯಾತ್ಮ ..... ಹೀಗೆ ಏನು ಹೇಳಿದರೂ, ಪೂರ್ತಿ ಹೇಳಿದ ಹಾಗೆ ಅಲ್ಲ. ನಾಟಕವೆಂದರೆ ಶಿಕ್ಷಣ ಹೇಗೆ ಎಂದು ನೋಡಿದಾಗ, ಹೊಳೆಯತಕ್ಕ ಅಂಶ ಯಾವುದೆಂದರೆ ..... ನಾಟಕ ಎನ್ನುವುದು ಮನುಷ್ಯನ ಮೂಲಭೂತ ಪ್ರವೃತ್ತಿ.... ಅಂತ. ಹಸಿವು,ನಿದ್ರೆ,ಮೈಥುನಗಳಂತೆ.... ಆಟ ಮತ್ತು ನಾಟಕ ಮನುಷ್ಯನ ಹುಟ್ಟಿನೊಂದಿಗೇ ಇರುವಂತಾದ್ದು. ..... ಅದನ್ನು ಯಾರೂ ಕಲಿಸ ಬೇಕಾಗಿಲ್ಲ ಅಂತ. ನಾವು ನಮ್ಮ ಮಕ್ಕಳ ಶಾಲಾ ಪೂರ್ವ ಚಟುವಟಿಕೆಗಳನ್ನು ಗಮನಿಸಿದರೆ..... ಅಂದರೆ, ನಾವು ಹಿರಿಯರ ಹಸ್ತಕ್ಷೇಪ ಇಲ್ಲದೇ ಮಕ್ಕಳು ಅವರಷ್ಟಕ್ಕೇ ಅವರಿದ್ದಾಗಿನ ಚಟುವಟಿಕೆಗಳನ್ನು ಅಥವಾ ಅವರ ಆಟಗಳನ್ನು ಗಮನಿಸಿದಾಗ ಗೊತ್ತಾಗ್ತದೆ ......... ನಾಟಕ ಅಂದರೆ ಏನು ಅಂತ. ....... ಅದು ಎಷ್ಟು ಆಳವಾದದ್ದು ಅಂತ. ಸ್ವಲ್ಪ ಕಹಿಯಾದರೂ ..... ನಿಜ ಸಂಗತಿ ಏನು ... ಅಂದರೆ ಯಾವಾಗ ಮಕ್ಕಳ ವಿದ್ಯಾಭ್ಯಾಸ ಅಂತ ಶಾಲೆಗೆ ಸೇರಿಸುತ್ತೇವೋ.. ಅಲ್ಲಿಂದ ನಮಗೆ ಹಿರಿಯರಿಗೆ ... ಮಕ್ಕಳನ್ನು ತಿದ್ದಬೇಕು, ಮಕ್ಕಳಿಗೆ ಕಲಿಸಬೇಕು ಎನ್ನುವ ಚಪಲ ಸುರುವಾಗ್ತದೆ. ಮಕ್ಕಳು ಸಹಜತೆಯನ್ನು ಬಿಟ್ಟು ಕೃತಕವಾಗುತ್ತಾ ಹೋಗುತ್ತಾರೆ. ಮಕ್ಕಳಿಗೆ ಆಟ ಬೇಕು. ಅವರಿಗೆ ನಾಟಕ ಬೇರೇನೂ ಅಲ್ಲ, ಅದೊಂದು ಆಟವೇ. (ಯಕ್ಷಗಾನವನ್ನು ಆಟ ಎಂದೇ ಕರೆಯುತ್ತಾರೆ. ಎಷ್ಟೋ ಕಡೆ ನಾಟಕವನ್ನೂ ಆಟ ಎನ್ನುವ ಕ್ರಮ ಇದೆ)
ನಾನು ಚಿಕ್ಕವನಿದ್ದಾಗ, ನನಗೆ ಕಾಣುತ್ತಿದ್ದ ಒಂದು ಸಂಗತಿ ಏನೆಂದರೆ, .... ಈ ಶಾಲೆ ಎನ್ನುವುದು ಇಲ್ಲದಿರುತ್ತಿದ್ದರೆ ಎಷ್ಟು ಒಳ್ಳೆಯದಿತ್ತಲ್ವಾ ...!! ಅಂತ. ಪ್ರಾಯಷಃ ನನ್ನ ಹಾಗೆ ... ಎಲ್ಲಾ ಮಕ್ಕಳೂ ಗುಟ್ಟಿನಲ್ಲಿ ಈ ವಿಷಯವನ್ನು ಹಂಚಿಕೊಂಡು ಖುಷಿ ಪಟ್ಟವರೇ.. ಇಂದಿಗೂ ಈ ಯೋಚನೆ ’ಬಹು ದೊಡ್ಡ ಅಪರಾಧ ’ ಎನ್ನುವ ಪಾಪ ಪ್ರಜ್ಞೆ ಏನೂ ನನ್ನನ್ನು ಕಾಡುತ್ತಾ ಇಲ್ಲ. ಯಾಕೆಂದರೆ .... ಶಾಲೆ ಎಂದರೆ .....ಅದು ಮಕ್ಕಳು .. ’ಕಲಿಯುವ ಜಾಗ ’ ಅಲ್ಲ ...... ಬದಲಾಗಿ ...ಅದು ಹಿರಿಯರು ಮಕ್ಕಳಿಗೆ ....’ ಕಲಿಸುವ ಜಾಗ ’.... ಎನ್ನುವ ಭ್ರಮೆ ಬಹಳಷ್ಟು ಜನರಲ್ಲಿ ಇಂದಿಗೂ ಇರುವುದರಿಂದ. “ಮಕ್ಕಳು ಬಹಳ ಬೇಗನೆ ಪಿಕ್ ಅಪ್ ಮಾಡ್ತಾರೆ ಆದರಿಂದ ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಸಬಹುದು...” ಎನ್ನುವ ಮಾತು ... ’ಒಳ್ಳೆಯ ಶಿಕ್ಷಕ’ ಎಂದು ಪರಿಗಣಿಸಲ್ಪಟ್ಟವರಿಂದಲೇ ಬಂದಿದೆ. ಮಕ್ಕಳು ಬೇಗ ಕಲಿಯುತ್ತಾರೆ ಎಂಬುದು ನಿಜವಾದದ್ದೇ..... ಆದರೆ ಅದು ’ಕಲಿಸಿದಾಗ’ ಅಲ್ಲ ಎನ್ನುವುದೂ ಅಷ್ಟೇ ನಿಜ. ಇಂತಾದ್ದನ್ನು ಕಲಿಯಬೇಕು ಎಂದು ನಿಗದಿಪಡಿಸಿದಾಗ, ಅದು ಮಕ್ಕಳಿಗೆ ಒತ್ತಡವನ್ನಷ್ಟೇ ಉಂಟುಮಾಡುತ್ತದೆ. ಕಲಿಕೆ ತಮ್ಮರಿವಿಗೆ ಬಾರದಂತೆ ನಡೆದರೆ ಮಕ್ಕಳು ಯಾವುದನ್ನಾದರೂ ಬಹಳ ಬೇಗನೆ ಕಲಿತುಬಿಡುತ್ತಾರೆ. ಕಲಿಕೆ ಅರಿವಿಗೆ ಬಾರದಂತೆ ನಡೆಯಬೇಕಾದರೆ ...... ಅದು ಮಕ್ಕಳನ್ನು ಆಕರ್ಶಿಸಬೇಕು. ಅಂದರೆ .... ಅದು ಆಟವಾಗಬೇಕು. ಮಕ್ಕಳಿಗೆ ನಾಟಕ ಎಂದರೆ ಒಂದು ಆಟವೇ..... ಬೇರೇನೂ ಅಲ್ಲ. ಮಕ್ಕಳು ತಾವು ಕಂಡದ್ದು, ಕೇಳಿದ್ದು, ಮುಟ್ಟಿದ್ದು, ಮೂಸಿದ್ದು, ಸವಿದದ್ದು ಎಲ್ಲ ವೂ....ಅವರಿಗೆ ಮತ್ತೊಮ್ಮೆ ಪ್ರಕಟ ಆಗಲೇಬೇಕು...... ಅಂದರೆ ನಾಟಕ ಆಗಲೇಬೇಕು.
ಅವರಾಗಿ ಕಲಿತದ್ದು, ಕಲಿತು ನಾಟಕವಾಗಿ ಪ್ರಕಟವಾದದ್ದು. ........ ಮರೆತು ಹೋಗುವ ಕ್ರಮವೇ ಇಲ್ಲ. ಶಿಕ್ಷಣ ಎಂದರೆ .... “ ಮಗುವಿನ ತಲೆಯೊಳಗೆ ಎಷ್ಟು ಸಾದ್ಯವೋ ಅಷ್ಟು ತುಂಬಿಸುವುದು...” ಎನ್ನುವ ಯೋಚನೆ ಸರಿಯೇ..? .... ಅದರ ಬದಲು ... “ಮಗುವಿನಲ್ಲಿರುವ ಸಾಮರ್ಥ್ಯವನ್ನು ಹೊರಗೆಳೆಯುವಂತಾದ್ದು, ಮಗುವಿನ ಸಾಮರ್ಥ್ಯವನ್ನು ಬೆಳೆಸುವಂತಾದ್ದು.....” ಎನ್ನುವ ಭಾವನೆ ಹಿರಿಯರಲ್ಲಿ ಮೂಡಿದರೆ ಒಳ್ಳೆಯದಲ್ಲವೇ ...? ... ತಾನು ಮಗುವಿಗೆ ಕಲಿಸುತ್ತಿದ್ದೇನೆ ಎನ್ನುವ ಶಿಕ್ಷಕ, ತನಗರಿವಿಲ್ಲದೇ ತಾನೂ ಮಗುವಿನಿಂದ ಕಲಿಯುತ್ತಿರುತ್ತಾನಲ್ಲ...!! ಮನಶಾಸ್ತ್ರಜ್ಞರ ಪ್ರಕಾರ, ಕಲಿಕೆ ಎನ್ನುವುದು ಬಾಲ್ಯದ ಮೊದಲ ವರ್ಷಗಳಲ್ಲೇ ಮುಗಿದಿರುತ್ತದಂತೆ ....... ನಂತರ ಏನಿದ್ದರೂ ಅದರ ವಿಸ್ತರಣೆ ಅಷ್ಟೆ. ತಮ್ಮ ಸುತ್ತಮುತ್ತಲಿನ ಪ್ರಕೃತಿ, ಪರಿಸರ, ಪ್ರಾಣಿ -ಪಕ್ಷಿಗಳು, ಹಿರಿಯರು, ಓರಗೆಯವರು ಎಲ್ಲವನ್ನೂ ನೋಡುತ್ತಾ, ಕೇಳುತ್ತಾ, ಗಮನಿಸುತ್ತಾ ಮಕ್ಕಳು ಕಲಿಯುತ್ತಾರೆ. ....... ಆದರೆ .... ಆ ಕಲಿಯುವುದು ಉಂಟಲ್ಲ ಅದು ಉದ್ದೇಶಪೂರ್ವಕವಾಗಿ ಅಲ್ಲ, .... ಅದು ಅದಕ್ಕೆ ಅರಿವಿಲ್ಲದೇ ನಡೆಯುವಂತಾದ್ದು.ಮಗುವಿಗೆ ವಾಸ್ತವ ಮತ್ತು ಕಲ್ಪನೆಗಳ ನಡುವೆ ಬಹಳ ಅಂತರವೇನೂ ಇಲ್ಲ. ಎಲ್ಲವೂ ಅದಕ್ಕೆ ಆಟ. ಮಗುವಿಗೆ ಅದರ ಆಟಕ್ಕೆ, ಒಡನಾಟಕ್ಕೆ ಸ್ಪಂದನ ಬೇಕು. ಆಟಕ್ಕೆ ಜೊತೆ ಇದ್ದರೆ ಮಗುವಿಗೆ ಅಪ್ಪನೂ ಬೇಡ, ಅಮ್ಮನೂ ಬೇಡ.
ಆಟ ಮಗುವಿಗೆ ಆನಂದ ದಾಯಕವಾದದ್ದು. ಆಟದಿಂದ ಮಗುವಿನ ಮನಸ್ಸು ಉಲ್ಲಸಿತವಾಗುತ್ತದೆ. ಉಲ್ಲಸಿತ ಅಂದರೆ ಜಡಸ್ಥಿತಿಯಿಂದ ಹೊರಬರುವುದು ಅಂದರೆ ಸೃಷ್ಟಿಶೀಲ ಸ್ಥಿತಿಯೇ. ಮಾಡುವ ಕೆಲಸದಲ್ಲಿ ಆಸಕ್ತಿ ಇದ್ದಾಗ ..... ಏಕಾಗ್ರತೆ ಅದಾಗಿ ಉಂಟಾಗುತ್ತದೆ, ಪ್ರಯತ್ನವೇ ಬೇಡ. ಮಕ್ಕಳಿಗೆ ಇಷ್ಟವಾದದ್ದು ಮರೆತೂ ಹೋಗುವುದಿಲ್ಲ. ಶಾಲೆಗೆ ಸೇರುವ ಮೊದಲು, ಮಕ್ಕಳು ಅವರ ಪಾಡಿಗೆ ಅವರಿದ್ದಾಗ, ..... ಅವರನ್ನು ಗಮನಿಸಿದರೆ .... ಅವರ ಏಕಾಗ್ರತೆ ನಮಗೆ ಅರಿವಾಗುತ್ತದೆ. ...... ಶಾಲಾ ಸಂದರ್ಭದಲ್ಲೂ ....ಮಕ್ಕಳು .... ಹಿರಿಯರ ಹಸ್ತಕ್ಷೇಪವಿಲ್ಲದೇ ..... ಅವರಷ್ಟಕ್ಕೇ ಅವರಿದ್ದಾಗ ಈ ಏಕಾಗ್ರತೆ ಇದ್ದೇ ಇದೆ. ಮಕ್ಕಳ ಈ ಚಟುವಟಿಕೆಯನ್ನು ಬದಿಗೊತ್ತದೇ ... ಅದನ್ನು ಮುಂದುವರಿಸುವಂತೆ ಪ್ರೋತ್ಸಾಹಿಸುತ್ತಾ, ಮಕ್ಕಳು ತಮ್ಮ ಪಾಡಿಗೆ ತಾವು ಇರುವಾಗ ಎಷ್ಟು ಸಹಜವಾಗಿರುತ್ತಾರೋ .... ಅಷ್ಟು ಸಹಜವಾಗಿ ಎಲ್ಲಾ ಸಂದರ್ಭದಲ್ಲೂ ಇರುವಂತೆ ವಾತಾವರಣವನ್ನು ಸೃಷ್ಟಿಸಬೇಕಾದದ್ದು ಶಿಕ್ಷಕರ ಹಾಗೂ ಹೆತ್ತವರ ಹೊಣೆ. ಅಂದರೆ ...... ಮಕ್ಕಳಿಗೆ ಹಿರಿಯರೆಂದರೆ ಹೆದರಿಕೆ ಆಗದೇ ಪ್ರೀತಿ ಹುಟ್ಟಬೇಕು. ಶಾಲೆಯಲ್ಲಿ ಮಕ್ಕಳು ಕಲಿಯಬೇಕು ಎಂದಿರುವ ವಿಷಯದ ಬಗ್ಗೆ ..... ಮಕ್ಕಳಿಗೆ ಪ್ರೀತಿ ಹುಟ್ಟುವಂತೆ ವಾತಾವರಣವನ್ನು ಸೃಷ್ಟಿಸಬೇಕು. ಶಾಲೆಗೆ ಸೇರುವ ಮೊದಲಿನ ದಿನಗಳಿಗೂ ಶಾಲಾ ದಿನಗಳಿಗೂ ವ್ಯತ್ಯಾಸವೇ ಗೊತ್ತಾಗಬಾರದು. ಚಿತ್ರ ಬರೆಯುವುದು ಮತ್ತು ನಾಟಕ ಮಾಡುವುದು ಎರಡೂ .... ಮಕ್ಕಳ ಕಲ್ಪಾನಾ ಶಕ್ತಿಯನ್ನು ಹೆಚ್ಚಿಸುತ್ತದೆ. ..... ಗಮನಿಸುವ ಶಕ್ತಿ ಹೆಚ್ಚಾಗುತ್ತದೆ. ಅದನ್ನು ಪ್ರೀತಿಯಿಂದ ಮಾಡುವುದರಿಂದ ಏಕಾಗ್ರತೆಯೂ ಹೆಚ್ಚುತ್ತದೆ. ....... ಏಕಾಗ್ರತೆಯಿಂದಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ. ಆದುದರಿಂದ ಶಾಲೆಯಲ್ಲಿ ಮಕ್ಕಳ ನಾಟಕ ಅಥವಾ ಮಕ್ಕಳ ರಂಗಭೂಮಿ ಚಟುವಟಿಕೆ ಅಂದರೆ ಅದೂ ಒಂದು ಆಟವೇ.. ಅಲ್ಲಿ ಆಟ ಇದೆ, ಓಟ ಇದೆ, ನಾಟಕ ಇದೆ, ಹಾಡು-ಕುಣಿತಗಳಿವೆ, ಚಿತ್ರ ಇದೆ... ಏನೆಲ್ಲ ಇರುತ್ತವೆ.
ಇದೊಂದು ಹೊಸಾ ಪರಿಕಲ್ಪನೆ ಎಂದೇನೂ ಅಲ್ಲ. ಹಿಂದಿನಿಂದಲೂ ... ಮಕ್ಕಳ ಇಷ್ಟದ ಶಿಕ್ಷಕನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಈ ಚಿಂತನೆ ಇತ್ತು. ಚಿತ್ರ ಬರೆಯುವುದು ಎಂದರೆ ರೆಡಿಮೇಡ್ ಚಿತ್ರಗಳಿಗೆ ಬಣ್ಣ ತುಂಬಿಸುವುದಲ್ಲ. ಮತ್ತೊಂದು ಚಿತ್ರವನ್ನು ನೋಡಿ ಅದರ ಕಾರ್ಬನ್ ಪ್ರತಿ ತೆಗೆಯುವುದಲ್ಲ. ಮಕ್ಕಳು ತಮಗೆ ಇಷ್ಟ ಬಂದಂತೆ ... ’ಗೀಚುವುದು ..... ಬಣ್ಣ ’ಎರಚುವುದು’.
ಮಕ್ಕಳ ಕಲ್ಪನೆ ಹೇಗಿರುತ್ತದೆ ಎನ್ನುವುದನ್ನು ನಿರ್ಧರಿಸುವುದು ಕಷ್ಟ. ....... ಪ್ರಸಿದ್ದ ರಂಗನಿರ್ದೇಶಕ ಗೆಳೆಯ ಇಕ್ಬಾಲ್ ಅಹ್ಮದ್ ಹೇಳ್ತಿದ್ರು ... “ನಮ್ಮ ರಂಗ ಶಿಬಿರದಲ್ಲಿ ಒಂದು ಮಗು ಚಿತ್ರ ಬರಿತಿತ್ತು .. ಅದೇನು ಮರಿ ಅಂತ ಕೇಳಿದರೆ ’ಆನೆ ’ಅಂತ ಹೇಳಿತು. ಆನೆಯ ಯಾವ ಲಕ್ಷಣಗಳೂ ಆ ಚಿತ್ರದಲ್ಲಿರಲಿಲ್ಲ. ನನ್ನ ’ಕಲಿಸುವ’ ಬುದ್ದಿ ಜಾಗೃತವಾಗಿ , ಸರಳ ರೇಖೆಗಳಲ್ಲಿ ಆನೆಯೊಂದನ್ನು ಬರೆದು ..... ನೋಡು ಮರಿ.... ಆನೆ ಇರೋದು ಹೀಗಲ್ವಾ...? ಸೊಂಡಿಲು, ದಪ್ಪಕಾಲು, ದೊಡ್ಡಹೊಟ್ಟೆ, ಚಿಕ್ಕಬಾಲ, ದೊಡ್ಡಕಿವಿ, ಚಿಕ್ಕಕಣ್ಣು ... ಹೀಗೆಲ್ಲಾ ಇರ್ಬೇಕಲ್ವಾ...? ಅಂದೆ. ಅಲ್ಲಿ ನಾನು ಏನೋ ಹೇಳಿಕೊಡುವಾತ ಅಂತ ತಿಳ್ಕೊಂಡದ್ದರಿಂದಲೋ ಏನೋ .. !! ಮಗು ಸ್ವಲ್ಪಹೊತ್ತು ಯೋಚನೆ ಮಾಡಿತು, ನಂತರ ನನ್ನ ಚಿತ್ರವನ್ನೇ ನೋಡಿ, ಖಚಿತವಾದ ದ್ವನಿಯಲ್ಲಿ ಹೇಳಿತು. ’ಮಾಮಾ ಅದು ನಿಮ್ಮ ಆನೆ ..... ಇದು ನನ್ನ ಆನೆ .......’ ..... ಅಂತ.”
ಇಂತಹ ಎಷ್ಟೋ ಮಾತುಗಳನ್ನು ನಾವೆಲ್ಲಾ ಮಕ್ಕಳ ಬಾಯಿಯಿಂದ ಕೇಳುತ್ತಿರುತ್ತೇವೆ. ಆದರೆ ನಮ್ಮ ದೃಷ್ಟಿಯಲ್ಲಿ ಅದು ಅಜ್ಞಾನ. ಆ ಅಜ್ಞಾನವನ್ನು ಪರಿಹರಿಸುವುದೇ ನಮ್ಮ ಪರಮ ಕರ್ತವ್ಯ ಎನ್ನುವುದು ಹಿರಿಯರ ಮನಸ್ಥಿತಿ. ತನ್ನ ಮನಸ್ಸಿನಲ್ಲಿ ಮೂಡಿದ ಯಾವುದೇ ಕಲ್ಪನೆಯನ್ನು ಮಗು, ಎಲ್ಲಿ ಜಾಗ ಸಿಗುತ್ತದೋ ಅಲ್ಲಿ ಬರೆಯುತ್ತದೆ. ಅದು ಚಿತ್ರ. ..... ಕಾಗದ, ಪೆನ್ಸಿಲ್ ಯಾವುದೂ ಮಗುವಿಗೆ ಬೇಕೆಂದೇನೂ ಇಲ್ಲ. ಮಕ್ಕಳ ಸೃಷ್ಟಿಶೀಲತೆಗೆ ಎಲ್ಲೆಯೇ ಇಲ್ಲ. (ಶಿವರಾಮ ಕಾರಂತರು, ಕಳೆದ ಶತಮಾನದ ಮೂವತ್ತರ ದಶಕದಲ್ಲಿ ನಡೆಸುತ್ತಿದ್ದ ಸನಿವಾಸ ರಂಗಶಿಬಿರಗಳಲ್ಲಿ ಕಂಡುಕೊಂಡ ಮಕ್ಕಳ ಸೃಷ್ಟಿಶೀಲತೆಯನ್ನು ತನ್ನ ’ಶಿಕ್ಷಣ ಮತ್ತು ನಾನು’ ಗ್ರಂಥದಲ್ಲಿ ಉಲ್ಲೇಕಿಸಿದ್ದಾರೆ.... ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ) ಮನಸ್ಸಿನಲ್ಲಿ ಮೂಡಿದ ಯಾವುದೇ ಕಲ್ಪನೆಯನ್ನು ಮಗು ಚಿತ್ರವಾಗಿ ಬರೆದರೆ .... ಅದು ಸೃಷ್ಟಿ ಶೀಲತೆ. ನಾಟಕ ಎಂದರೆ ಮನಸ್ಸಿನಲ್ಲಿ ಮೂಡುವ ಚಿತ್ರ. ...... ಮನಸ್ಸಲ್ಲಿ ಒಂದು ಚಿತ್ರ ಮೂಡದೇ ನಾಟಕ ಆಗಲಾರದು. ಶಾಲೆಯಲ್ಲಿ, ಮನೆಯಲ್ಲಿ ನಾಟಕ ಆಡಲು ಮಕ್ಕಳನ್ನು ಪ್ರೊತ್ಸಾಹಿಸಬೇಕು. ......
ಮೊದಲ ಹಂತದಲ್ಲಿ ಅವರದೇ ಕಲ್ಪನೆಯ ನಾಟಕ. ಆ ನಂತರ ಕತೆಯನ್ನೋ, ಒಂದು ಘಟನೆಯನ್ನೋ ಮಕ್ಕಳ ಅನುಭವಗಳಿಗೆ ಹೊಂದಿಕೆಯಾಗುವಂತೆ ಹೇಳಿ.... ಅದನ್ನು ನಾಟಕವಾಡುವಂತೆ ಹುರಿದುಂಬಿಸಬೇಕು......ಮಾತುಗಳನ್ನು ಮಕ್ಕಳೇ ಹೊಂದಿಸಿಕೊಳ್ಳುತ್ತಾರೆ. ಮಾತುಗಳು ಹಿರಿಯರ ದೃಷ್ಟಿಯಿಂದ ಸರಿ ಇಲ್ಲ ಎನಿಸಿದರೂ ....... ತಿದ್ದಲು ಹೋಗದೇ ..... ಅವರವರೊಳಗೆ ಸರಿ ತಪ್ಪುಗಳ ಚರ್ಚೆ ನಡೆಯುವಂತೆ ಮಾಡಿ .... ನಿಧಾನವಾಗಿ ಅದು ಅವರ ಅರಿವಿಗೆ ಬರುವಂತೆ ಮಾಡಿದರಾಯ್ತು. ಪಾಠವನ್ನು ಕೂಡಾ ನಾಟಕ ಆಡುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ರೆಡಿಮೇಡ್ ಮಾತುಗಳನ್ನು ಕಂಠಪಾಠ ಮಾಡಿಸಿದರೆ ಅದು ಮಕ್ಕಳ ನಾಟಕವೇ ಅಲ್ಲ. ಅವರ ಮಾತು, ಹಾವಭಾವ, ಚಲನೆ ಇವೆಲ್ಲಾ ತೀರಾ ಸಹಜವಾಗಿರುವಂತೆ .... ಅಂದರೆ ... ಮಕ್ಕಳು ತಮ್ಮಷ್ಟಕ್ಕೆ ತಾವಿದ್ದಾಗ ಇರುವಂತೆ ನೋಡಿಕೊಳ್ಳಬೇಕು. ಹಿರಿಯರು ಮಕ್ಕಳಿಗೆ ’ಕಲಿಸಿಕೊಡುವುದು’ ಸರಿಯಲ್ಲ. ... ಆದರೂ... ಕೆಲವೊಮ್ಮೆ ಕಲಿಸಿಕೊಡಬೇಕಾಗುತ್ತದೆ. ..... ಅದು ಯಾವಾಗ ಎಂದರೆ ....... ಮಕ್ಕಳು ಎಲ್ಲವನ್ನೂ ಅನುಕರಿಸುವವರು. ಆದರೆ ಅವರ ಅನುಕರಣೆಗೆ ಇವತ್ತು ಮಾದರಿಗಳಿರುವುದು ಯಾವುದು...? ಟಿ.ವಿ.ಯಲ್ಲಿನ ಕೆಟ್ಟ ಧಾರಾವಾಹಿಗಳು, ರಿಯಾಲಿಟಿ ಶೋಗಳು, ಕೆಟ್ಟ ನಿರೂಪಕರು, ಕೆಟ್ಟ ಸಿನಿಮಾಗಳು, ಹಿರಿಯರ ಕೆಟ್ಟ ನಾಟಕಗಳು ಇತ್ಯಾದಿ ಅಭಿನಯದ ಹೆಸರಿನ ವಿಕಾರಗಳು- ಇವೆಲ್ಲಾ ಮಕ್ಕಳ ಮಾದರಿಗಳು. ...... ಮಕ್ಕಳಿಗೆ ಮಾತ್ರವಲ್ಲ ಯುವಜನಾಂಗಕ್ಕೂ ಇವೇ ಮಾದರಿಗಳು. ಎಷ್ಟೋ ಜನ ಶಿಕ್ಷಕ ಶಿಕ್ಷಕಿಯರಿಗೂ ಇದೇ ಮಾದರಿಗಳು....... ಇಂತಾ ಮಾದರಿಗಳೇ ಮಕ್ಕಳ ಮುಂದಿದ್ದಾಗ ಆ ಮಾದರಿಯನ ಬದಲಾಯಿಸುವುದಕ್ಕಾದರೂ ಕಲಿಸಿಕೊಡಲೇ ಬೇಕಾಗುತ್ತದೆ. ಹಾಗೆ ಹಿರಿಯರು ಕಲಿಸಿಕೊಟ್ಟದ್ದೂ ಮಾದರಿ ಆಗದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ .... ಅಭಿನಯ ಎಂಬುದು ರೆಡಿಮೇಡ್ ಅಲ್ಲ, ಅನೇಕ ವಿಧಗಳಿವೆ, ಪ್ರತಿಯೊಬ್ಬ ವ್ಯಕ್ತಿಯದ್ದೂ ಬೇರೆ ಬೇರೆ .... ಎನ್ನುವುದನ್ನು ಮಕ್ಕಳಿಗೆ ಮನದಟ್ಟು ಮಾಡುತ್ತಾ ಬರಬೇಕು. ಸಿದ್ದವಾದ ಯೋಚನೆಗಳನ್ನು ಬಿಟ್ಟು ಇನ್ನೊಂದು ರೀತಿಯಲ್ಲಿ ಮಕ್ಕಳು ಯೋಚಿಸುವಂತೆ ಮಾಡಬೇಕು. ಮಕ್ಕಳ ಇನ್ನೊಂದು ರೀತಿಯ ಯೋಚನೆ, ಶಿಕ್ಷಕನಲ್ಲೂ ಮತ್ತೇನೋ ಹೊಸತನ್ನು ಪ್ರೇರೇಪಿಸಬಹುದು. ಈ ಪ್ರಕ್ರಿಯೆಯೇ .... ಮಕ್ಕಳಿಗೆ ಸಿಗುವ ಅದ್ಭುತ ಶಿಕ್ಷಣ. ಮಕ್ಕಳೊಂದಿಗೆ ಶಿಕ್ಷಕರಿಗೂ. ಈ ”ಪ್ರಕ್ರಿಯ”ಯು ನಿರಂತರ..... “ಪ್ರದರ್ಶನ” ಎಂಬುದು ಮುಖ್ಯವೇ ಅಲ್ಲ .... ಎನ್ನುವುದನ್ನು ಮಕ್ಕಳಿಗೆ ಮನದಟ್ಟು ಮಾಡಿಸಬೇಕು. ಈ ಪ್ರಕ್ರಿಯೆ ಮಕ್ಕಳನ್ನು ಒಳ್ಳೆಯ ಪ್ರೇಕ್ಷಕನನ್ನಾಗಿಯೂ ಬೆಳೆಸುತ್ತದೆ. ಅಲ್ಲದೇ ಚಿಕ್ಕಮಕ್ಕಳಿಗೆ ಪ್ರದರ್ಶನದ ಚಿಂತೆಯೇ ಇರುವುದಿಲ್ಲ. ಅವರಿಗೆ ಈ ಪ್ರಕ್ರಿಯೆಯೇ ಪ್ರದರ್ಶನ. .... ದೊಡ್ಡವರಾಗ್ತಾ ಆಗ್ತಾ ಪ್ರದರ್ಶನದ ಹುಚ್ಚು ಬೆಳೆಯುತ್ತಾ ಹೋಗುತ್ತದೆ. ಶಾಲೆಯ ಪ್ರಾರಂಭದ ದಿನಗಳಿಂದಲೂ ಈ ರೀತಿ ಮಕ್ಕಳನ್ನು ಬೆಳಸಿದಲ್ಲಿ ..... ಮಕ್ಕಳಿಗೆ ಶಾಲೆಯ ಭಯ ಹೋಗಿ, ಶಾಲೆಯ ಬಗ್ಗೆ ಪ್ರೀತಿ ಹುಟ್ಟುತ್ತದೆ. ಮಕ್ಕಳು ಸದಾ ಉಲ್ಲಸಿತರಾಗಿ, ಉತ್ಸಾಹಿಗಳಾಗಿ ಇರುತ್ತಾರೆ. ಮಕ್ಕಳ ಕಲ್ಪನೆಗಳು ಗರಿಗೆದರತೊಡಗುತ್ತವೆ.....ಪ್ರತಿಕ್ಷಣ ಹೊಸ ವಿಷಯಗಳ ಬಗ್ಗೆ .... ಕುತೂಹಲ, ಬೆರಗು ಮೂಡುತ್ತದೆ. ...... ನಾಟಕವೆಂಬ ಈ ಆಟದ ಮೂಲಕವೇ ಮಗುವಿನ ಸೃಷ್ಟಿಶೀಲತೆ ನಾನಾ ರೂಪದಲ್ಲಿ ಬೆಳೆಯುತ್ತಾ ಹೋಗುತ್ತದೆ. ಶಿಕ್ಷಣದಲ್ಲಿ ರಂಗಭೂಮಿ ಎನ್ನುವ ಪರಿಕಲ್ಪನೆ ಹುಟ್ಟಿಕೊಂಡದ್ದೇ ಮಕ್ಕಳ ಚಿಂತನೆಯನ್ನು ಸೃಷ್ಟಿಶೀಲವಾಗಿಸುವುದಕ್ಕೆ..... ಆದರೆ, ಈ ಪರಿಕಲ್ಪನೆಯನ್ನು ತಪ್ಪಾಗಿ ಭಾವಿಸಿ ... ಮಕ್ಕಳಿಗೆ ನಾಟಕದ ಶಾಸ್ತ್ರ,ಸಿದ್ದಾಂತಗಳನ್ನು ಕಲಿಸುವುದು...... ಎಂದು ತಿಳಿದವರೂ ಇದ್ದಾರೆ. ಮಕ್ಕಳಿಗೆ ನಾಟಕ ಯಾಕೆ..? ಎಂದು ಕೇಳುವವರೂ ಇದ್ದಾರೆ. ಮಕ್ಕಳು ... “ಸಂಭಾಷಣೆಯನ್ನು ಕಂಠಪಾಟ ಮಾಡಿ, ಸ್ವಲ್ಪವೂ ತಪ್ಪಿಲ್ಲದೇ ಒಪ್ಪಿಸುವುದೇ ಮಕ್ಕಳನಾಟಕ...”ಎಂದು ತಪ್ಪಾಗಿ ಅರ್ಥೈಸಿಕೊಂಡದ್ದೇ ಇದಕ್ಕೆ ಕಾರಣ ಅಷ್ಟೆ. ಇವತ್ತು ನಮ್ಮ ಯೋಚನೆಯೆಲ್ಲ ಏಕಮುಖವಾಗಿಯೇ ಸಾಗುತ್ತಾ ಇದೆ. ..... ನಮ್ಮ ಆಲೋಚನೆಗೆ ಭಿನ್ನವಾದದ್ದನ್ನು ಒಪ್ಪಿಕೊಳ್ಳುವ ..... ಕನಿಷ್ಟ, ಆ ಕುರಿತು ಯೋಚಿಸುವುದೇ .... ಅಪರಾಧ ಎನ್ನುವ ರೀತಿಯ ಮನಸ್ಥಿತಿ ಇದೆ.
ಸಿದ್ದ ಉತ್ತರಗಳನ್ನು ಮಕ್ಕಳು ಕಲಿಯುವುದೇ ಶಿಕ್ಷಣ ಎನ್ನುವ ಭ್ರಮೆ ಇದೆ. ಮಕ್ಕಳಲ್ಲಿ ಸಹಜವಾಗಿರುವ ಕುತೂಹಲವನ್ನು ಹತ್ತಿಕ್ಕಿ .... ಅವರು ಕೇಳುವ, ಒಂದು ವೇಳೆ ಕೇಳದಿದ್ದರೂ ಅವರ ಮನಸ್ಸಲ್ಲಿ ಮೂಡುವ ಪ್ರಶ್ನೆಗಳು ಮಹತ್ವದ್ದಲ್ಲ ಎಂದು ನಂಬಿಸಿ, ಮಕ್ಕಳ ಬಾಯಿ ಮುಚ್ಚಿಸಿ ..... ನಮ್ಮ ತಲೆಯಲ್ಲಿರುವುದನ್ನು ಮಕ್ಕಳ ತಲೆಗೆ ದಾಟಿಸಿಬಿಡುವುದೇ ಶಿಕ್ಷಣ ಎಂದೇ ತಿಳಿದಿದ್ದೇವೆ.
ಇದೊಂದು ಭ್ರಮೆ ಎನ್ನುವುದೇ ನಮಗೆ ಅರಿವಾಗುತ್ತಿಲ್ಲವೇನೊ ! ನಮ್ಮ ಬಾಲ್ಯದ ಮನಸ್ಥಿತಿಯನ್ನು ನಾವೇ ಮತ್ತೊಮ್ಮೆ ನೆನಪು ಮಾಡಿಕೊಂಡರೆ ... ನಮ್ಮ ಮಕ್ಕಳನ್ನು ಅರ್ಥಮಾಡಿಕೊಳ್ಳುವುದು ಸುಲಭ. ಶಿಕ್ಷಣದ ಉದ್ದೇಶ ಏನೆಂದರೆ .... ಚಿಕ್ಕಂದಿನಿಂದಲೇ ... ಮಕ್ಕಳು ಇನ್ನೊಂದು ರೀತಿಯಲ್ಲಿ ಯೋಚಿಸುವಂತೆ ನೋಡಿಕೊಳ್ಳಬೇಕಾದದ್ದು. ಮಕ್ಕಳು ಪ್ರಶ್ನೆ ಮಾಡಬೇಕು, ಅದಕ್ಕೆ ಸಮಾಧಾನಕರವಾದ ಉತ್ತರವನ್ನು ಪಡಕೊಳ್ಳಬೇಕು. ಅವರೊಳಗೂ ಸಂವಾದ ನಡೆಸಬೇಕು. ಸಂವಾದ ಮಂಥನದಲ್ಲಿ ದೊರೆಯುವ ಬೆಣ್ಣೆಯನ್ನು ಮಕ್ಕಳೇ ಆರಿಸಿಕೊಳ್ಳುತ್ತಾರೆ. ಮಕ್ಕಳು ಅವರವರ ಕೆಲಸ ಅವರೇ ಮಾಡಿಕೊಳ್ಳುವಂತೆ ಹಿರಿಯರು ನೋಡಿಕೊಳ್ಳಬೇಕು. ಮಕ್ಕಳ ಹೋಮ್ ವರ್ಕ್‌ಗಳನ್ನು ತಾವು ಮಾಡುವುದಾಗಲೀ .... ಅವರ ಪುಸ್ತಕಗಳನ್ನು ತಾವು ಜೋಡಿಸಿಡುವುದಾಗಲೀ ....ಹೆತ್ತವರು ಮಾಡುವುದು ತಮ್ಮ ಮಕ್ಕಳನ್ನು ಹಾಳುಮಾಡಿದಂತೆ. ಕಠಿಣ ಪದಗಳ ಅರ್ಥವನ್ನು ಮಕ್ಕಳು ಶಬ್ಧಕೋಶ ನೋಡಿ ತಿಳಿದುಕೊಳ್ಳುವಂತೆ.... ಅಥವಾ ಅವರವರಲ್ಲೇ ಚರ್ಚಿಸಿ ತಿಳಿದುಕೊಳ್ಳುವಂತೆ ಮಾಡಬೇಕೇ ಹೊರತು .... ಮಕ್ಕಳಿಗೆ ಕಷ್ಟವಾಗುತ್ತದೆ ಎನ್ನುವ ಮೋಹಕ್ಕೆ ಬಿದ್ದರೆ ...... ಮಕ್ಕಳ ಭವಿಷ್ಯ ಶೋಚನೀಯವಾದೀತು. ........ ಮಕ್ಕಳು ಚಿಕ್ಕಂದಿನಿಂದಲೇ ನೋವನ್ನು ಅನುಭವಿಸಲು ಕಲಿಯದೇ ಹೋದಲ್ಲಿ.... ದೊಡ್ಡವರಾದಾಗ ನೋವನ್ನು ತಡಕೊಳ್ಳುವುದು ಹೇಗೆಂದು ತಿಳಿಯದೇ ಮಕ್ಕಳು ಕಂಗೆಡಬಹುದು. ಗೆಲ್ಲುವುದು ಹೇಗೆ..? ಯಶಸ್ವಿಯಾಗುವುದು ಹೇಗೇ...? ಎಂಬುದನ್ನು ಮಾತ್ರ ಕಲಿಸಿದರೆ .... ಮಗು ಗೆಲ್ಲಲಾರದು ಎಂದಲ್ಲ..... ಮಗು ಗೆಲ್ಲುತ್ತಾ ಹೋಗಲೂ ಬಹುದು...... ಆದರೆ ...ಅದರ ಜೊತೆಗೆ ....“ತಾನು ಶ್ರೇಷ್ಟ” ಎನ್ನುವ ಮೇಲರಿಮೆಯ ಭ್ರಮೆಯೂ ಬೆಳೆಯುತ್ತದೆ. ಮುಂದೆಂದಾದರೂ ಸೋಲು ಸಂಭವಿಸಿದರೆ ದಿಕ್ಕೆಡುವ ಸಂದರ್ಭವೇ ಹೆಚ್ಚು. ಮಕ್ಕಳ ಬೆಳವಣಿಗೆಗೆ, ಪ್ರತಿಭಾ ವಿಕಾಸಕ್ಕೆ ...
ಈ “ ಸ್ಪರ್ಧೆ” ಎನ್ನುವುದು ತೀರಾ ಅಗತ್ಯ ಎನ್ನುವುದು ಒಂದು ಭ್ರಮೆ ಅನಿಸುವುದಿಲ್ಲವೇ..!! ಆಟೋಟಗಳಲ್ಲಿ ಆದರೆ ಸ್ಪರ್ದೆ ಎನ್ನುವುದು ಸರಿಯಾದದ್ದು, ಅಲ್ಲಿ ವೈಜ್ಞಾನಿಕ ನಿಖರತೆ ಇರುವುದರಿಂದ.... ಸೋತ ಮಗುವಿಗೆ ತನ್ನ ಅಸಾಮರ್ಥ್ಯದ ಅರಿವು ಆಗಿ, ಬೆಳೆಯುವ ಛಲ ಮೂಡುತ್ತದೆ. ಶಿಕ್ಷಣದಲ್ಲಿ ಮತ್ತು ಕಲೆಯಲ್ಲಿ ಸ್ಪರ್ಧೆ ಎನ್ನುವುದು ತೀರಾ ತೀರಾ ಅವೈಜ್ಞಾನಿಕವಾದದ್ದು.....
ಅದಕ್ಕೆ ನಿರ್ದಿಷ್ಟ ಮಾನದಂಡಗಳೇ ಇಲ್ಲ. ತಮ್ಮ ಮಗುವಿಗೇ ... ಪ್ರಥಮ ಸ್ಥಾನ ಸಿಗಬೇಕಿತ್ತು ಎನ್ನುವುದು ಪ್ರತಿಯೊಬ್ಬ ಹೆತ್ತವರ ಮತ್ತು ಶಾಲೆಯವರ ಅನಿಸಿಕೆ. ಸ್ಪರ್ಧೆಯಲ್ಲಿ ಗೆದ್ದ ಮಗುವಿಗೆ.... ’ತಾನು ಶ್ರೇಷ್ಠ’ ಎನ್ನುವ ಮೇಲರಿಮೆ ...... ಸೋತ ಮಗುವಿಗೆ ....’ತಾನು ಕನಿಷ್ಟ’ ಎನ್ನುವ ಕೀಳರಿಮೆ ಉಂಟಾಗುವ ಸಾದ್ಯತೆಯೇ ಹೆಚ್ಚು.
ಮಕ್ಕಳ ವೈಯುಕ್ತಿಕ ಪ್ರತಿಭೆಯನ್ನು ಯಾವತ್ತೂ ವೈಭವೀಕರಿಸದೇ..... ಸಮೂಹ ಚಟುವಟಿಕೆಗೆ ಪ್ರಾಧಾನ್ಯ ನೀಡಬೇಕು. “ತನ್ನ ಕೋಳಿ ಕೂಗಿದರೇ ಬೆಳಗಾಗುವುದು” ಎನ್ನುವ ಸರ್ವಸಾಧಾರಣ ಭಾವ ... ಮಕ್ಕಳಲ್ಲಿ ಮೂಡದಂತೆ ನೋಡಿಕೊಳ್ಳಬೇಕಾದ್ದು ಹೆತ್ತವರ, ಶಿಕ್ಷಕರ ಹೊಣೆ. ಮಕ್ಕಳನ್ನು “ನಾಟಕವೆಂಬ ಆಟ” ಆಡಲು ಬಿಟ್ಟು, ..... ಅವರಿಗರಿವಿಲ್ಲದಂತೆ .... ನಾವು ಸುಮ್ಮನೆ ಗಮನಿಸುತ್ತಿದ್ದರೆ ಇದನ್ನೆಲ್ಲಾ ನಾಟಕವೇ ಮಕ್ಕಳಿಗೆ ಕಲಿಸುವುದು ನಮ್ಮ ಅರಿವಿಗೂ ಬರುತ್ತದೆ. ಕೃಷಿಸಂತ ಪುಕುವಾಕೋ ಕೇವಲ ಕೃಷಿಯ ಬಗ್ಗೆ ಹೇಳಿದ್ದಲ್ಲ. ಅದೊಂದು ಫಿಲಾಸೊಫಿ. ಮಕ್ಕಳ ವಿಷಯಕ್ಕೂ ಸರಿಯಾಗಿಯೇ ಇದೆ.
ನಾಟಕವೆಂಬುದು ಒಂದು ಸಮೂಹ ಮಾದ್ಯಮವಾದುದರಿಂದ...... ಒಬ್ಬರು ಇನ್ನೊಬ್ಬರಿಗೆ ಪೂರಕವಾಗಿಯೂ, ಸಹಕಾರಿಯಾಗಿಯೂ ಇರಲೇಬೇಕಾಗುತ್ತದೆ. ದ್ವೇಶ ಅಸೂಯೆಗಳು ಕಡಿಮೆಯಾಗಿ ... ಪರಸ್ಪರ ಪ್ರೀತಿ,ವಿಶ್ವಾಸಗಳು ಹೆಚ್ಚುತ್ತಾ ಬರುತ್ತವೆ. ಅಲ್ಲಿ ಮಕ್ಕಳ ಸೃಷ್ಟಿಶೀಲತೆ ನಾನಾ ರೂಪದಲ್ಲಿ ಪ್ರಕಟವಾಗುತ್ತದೆ..... ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತಾ ಬರುತ್ತದೆ. ..... ಮಕ್ಕಳು ಚಿಂತಿಸಲು ತೊಡಗುತ್ತಾರೆ..... ಸ್ವಯಂ ನಿರ್ಧಾರ ತೆಗೆದುಕೊಳ್ಳಲು ಕಲಿಯುತ್ತಾರೆ.....
ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಲು ಸಿದ್ದರಾಗುತ್ತಾರೆ. ಇದೇ ಶಿಕ್ಷಣದ ಕೆಲಸ ಎನ್ನುವ ಅನಿಸಿಕೆ ...... ಅನೇಕರಂತೆ ನನ್ನದೂ ಕೂಡಾ.
- ವಿಟ್ಲದಿಂದ ಮೂರ್ತಿದೇರಾಜೆ
ಹಿರಿಯ ರಂಗ ರಂಗಕರ್ಮಿ, ನಾಟಕ ನಿರ್ದೇಶಕ, ಮಕ್ಕಳ ನಾಟಕ ವಿನ್ಯಾಸಕಾರ, ರಂಗಸಾಹಿತಿ ಹೀಗೆ ಬಹುಮುಖ ಪ್ರತಿಭೆಯ ಶ್ರೀ ಮೂರ್ತಿ ದೇರಾಜೆ ಯವರು ಮೂಲತಃ ದಕ್ಷಿಣ ಕ್ನನಡದ ವಿಟ್ಲದವರು.ಕಳೆದ ಮೂವತ್ತೈದು ವರ್ಷಗಳಿಗೂ ಮೀರಿ ಮಕ್ಕಳ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಪ್ರದರ್ಶನಕ್ಕಿಂತ ಪ್ರಕ್ರಿಯೆ ಮುಖ್ಯ ಎಂದು ನಂಬಿ ನಡೆಯುತ್ತ ಬಂದವರು. ಇವರ ಸಮಸಾಂಪ್ರತಿ ರಂಗತಂಡ ವಿಶಿಷ್ಟವಾದ ರಂಗ ಗೀತೆಗಳ ಮೂಲಕ ಜನಮಾನಸವನ್ನು ಆಕರ್ಷಿದೆ. ಸುಮಾರು ಅರವತ್ತಕ್ಕೂ ಮೀರಿದ ಮಕ್ಕಳ ನಾಟಕಗಳ ಜೊತೆಗೆ ಹಲವಾರು ಹಿರಿಯರ ನಾಟಕಗಳಿಗೆ ವಿನ್ಯಾಸ ಮತ್ತು ನಿರ್ದೇಶನ ನೀಡಿದ್ದಾರೆ. ಇದಲ್ಲದೆ ಜಗತ್ ಪ್ರಸಿದ್ದ ಗಿಲಿ ಗಿಲಿ ಮ್ಯಾಜಿಕ್ ನ ಸಂಗೀತ ವಿನ್ಯಾಸ ಇವರ ಹೆಗ್ಗಳಿಕೆ. ಕೇವಲ ನಾಟಕ ನಿರ್ದೇಶನವಲ್ಲದೆ ಹಲವಾರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕಪ್ಪು ಕಾಡಗೆಯ ಹಾಡು, ಗುಡು ಗುಡು ಗುಮ್ಮಟ ದೇವರು, ಮೌನದ ಮಾತು , 6 ಹವಿಗನ್ನಡ ಮಕ್ಕಳ ನಾಟಕಗಳು ಇವರ ಪ್ರಕಟಿತ ರಂಗ ಕೃತಿಗಳು. ಶ್ರೀ ಮೂರ್ತಿ ದೇರಾಜೆಯವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಕರ್ಣಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗಭೂಮಿ ಪ್ರಶಸ್ತಿ (2011), ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ (2017), ಮೈಸೂರು ರಂಗಾಯಣ ನವರಂಗೋತ್ಸವ ಗೌರವ (2018), ಆಳ್ವಾಸ್ ವಿದ್ಯಾರ್ಥಿ ಸಿರಿ ಪ್ರಶಸ್ತಿ (2018), ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ, ಗೌರವ ಸಂಮಾನ (2004 ಮತ್ತು 2012), ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಕುಕ್ಕೆ ಸುಬ್ರಹ್ಮಣ್ಯ ಗೌರವ ಸಮ್ಮಾನ (2018), ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಳಿಕೆ ಗೌರವ ಸಮ್ಮಾನ (2011), ಕನ್ನಡ ಸಾಹಿತ್ಯ ಪರಿಷತ್ತಿನ ಏಕೀಕರಣ ಸಾಹಿತ್ಯ ಸಮ್ಮೇಳನ ಸಮ್ಮಾನ (2017), ಶ್ರೀದುರ್ಗಾಮಿತ್ರವೃಂದ ಗೌರವ ಸಮ್ಮಾನ, ಕೇಪು, ವಿಟ್ಲ (2018) ಇತ್ಯಾದಿ -ಸಂಪಾದಕ
Comments