top of page

ನಿಜದ ಸತ್ಯವ ನೆನೆದು....! [ಕತೆ]


ಅವನ ಮುಂದಿನ ಟೀಪಾಯ್ ಮೇಲೆ ತಲಾ 250 ಮಿ.ಲೀ.ಯ ಎರಡು ಫುಲ್ ಸ್ಯಾನಿಟೈಸರ್ ಬಾಟಲುಗಳಿವೆ. ಅವುಗಳ ಮೇಲೆಯೇ ಎರಡು ತಾಸುಗಳಿಂದ ದೃಷ್ಟಿನೆಟ್ಟು ಕೂತಿರುವ ಪರಾಶರ, ‘ಛೇ, ಹತ್ತಡಿ ಚದರದ ರೂಮು... ಒಂದು ತಿಂಗಳಿನಿಂದ ಈ ಕಿಷ್ಕಿಂಧೆಯಂತಹ ರೂಮಿನಲ್ಲಿ ಒಬ್ಬನೇ ಇದ್ದೂ ಇದ್ದೂ ಹುಚ್ಚೇ ಹಿಡಿದ ಹಾಗಾಗಿದೆ. ಲಾಕ್‍ಡೌನ್‍ನಿಂದಾಗಿ ಕಾಲೇಜು ಬಂದಾಗಿರುವುದರಿಂದ ಅತ್ತ ಕಡೆ ಸುಳಿಯುವ ಹಾಗಿಲ್ಲ. ಗೆಣೆಕಾರರನ್ನು ಭೇಟಿಮಾಡದೆ ಪರಸ್ಪರ ಅಪರಿಚಿತರಾಗಿದ್ದೇವೆ ಅನ್ನಿಸುತ್ತಿದೆ. ಒಬ್ಬನೇ ಒಬ್ಬ ನರಮನುಷ್ಯನ ಮುಖ ಕಾಣುವುದಿಲ್ಲ... ಹೊಟೇಲ್, ಪಿಜ್ಜಾ ಕಾರ್ನರ್‍ಗಳು ಕನಸಲ್ಲಿ ಕಂಡಂತಿವೆ... ಹೆಚ್ಚೆಂದರೆ ಫೋನಿನಲ್ಲಿ ಮಾತು, ವಾಟ್ಸಪ್ ಚಾಟಿಂಗು...! ಮನುಷ್ಯರನ್ನು ಪ್ರತ್ಯಕ್ಷವಾಗಿ ಕಾಣದೆ, ಕೈಕುಲುಕದೆ, ಹರಟೆ ಕೊಚ್ಚದೆ ಬದುಕುವುದಾದರೂ ಹೇಗೆ? ಇಷ್ಟು ದಿನ ಹೇಗೋ ಸಹಿಸಿಕೊಂಡದ್ದಾಯಿತು. ಇನ್ನು ಮುಂದೆ ನನ್ನಿಂದ ಸಹಿಸಲು ಸಾಧ್ಯವೇ ಇಲ್ಲ. ಎರಡೂ ಸ್ಯಾನಿಟೈಸರ್ ಬಾಟಲುಗಳನ್ನು ಎರಡೇ ಗುಟುಕಿಗೆ ಕುಡಿದು... ಜೀವನವನ್ನು ಕೊನೆಗಾಣಿಸಿಕೊಳ್ಳುವುದೇ ನನಗಿರುವ ಏಕೈಕ ಮಾರ್ಗ...’ ಎಂದು ಒಬ್ಬಂಟಿಯಾಗಿ ಯೋಚಿಸುತ್ತಿದ್ದ.


ಕೋವಿಡ್-19 ಸೋಂಕು ಹರಡಬಾರದು, ಅದರಿಂದ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ಬರಬಾರದೆಂಬ ಮುಂಜಾಗರೂಕತೆಯಿಂದ ಸರಕಾರವು ಲಾಕ್‍ಡೌನ್ ಘೋಷಿಸಿ ಶಾಲೆ-ಕಾಲೇಜುಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿತ್ತಷ್ಟೇ. ಪರಾಶರನ ತರಗತಿಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಬಹುತೇಕ ಎಲ್ಲ ವಿದ್ಯಾರ್ಥಿಗಳೂ ಲಾಕ್‍ಡೌನ್ ಘೋಷಣೆಯಾದೊಡನೆ ಗಂಟುಮೂಟೆ ಕಟ್ಟಿಕೊಂಡು ತಮ್ಮತಮ್ಮ ಊರು ಸೇರಿಕೊಂಡಿದ್ದರು. ಇವನಿಗೆ ಮಾತ್ರ ಸಕಾಲಕ್ಕೆ ಬಸ್ಸು ಸಿಗದೆ ಬೆಂಗಳೂರಿನ ಸಂಪಂಗಿನಗರದ ತನ್ನ ರೂಮಿನಲ್ಲಿ ಬಂಧಿಯಾಗಿದ್ದನು.


ಎಲ್ಲೋ ಒಂದು ವಾರ, ಹೆಚ್ಚೆಂದರೆ ಹದಿನೈದು ದಿನ ಈ ಅವಸ್ಥೆಯನ್ನು ಸಹಿಸಬೇಕಾಗಬಹುದೆಂದು ಆರಂಭದಲ್ಲಿ ನಿರುಮ್ಮಳವಾಗಿದ್ದ. ವ್ಯಾಸಂಗದಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಅವನು ಸಿ.ಇ.ಟಿ.ಯಲ್ಲಿ ನೂರರೊಳಗೇ ಸ್ಥಾನ ಪಡೆದು ತಾನು ಇಷ್ಟಪಟ್ಟ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿಯೇ ಸೀಟು ಪಡೆದುಕೊಂಡಿದ್ದ. ಲಾಕ್‍ಡೌನ್ ಶುರುವಿನಲ್ಲಿ ಅಸೈನ್‍ಮೆಂಟ್ ಬರೆಯುವುದು, ನೋಟ್ಸ್ ಮಾಡಿಕೊಳ್ಳುವುದು, ಮುಂದಿನ ಸೆಮಿಷ್ಟರ್ ಪರೀಕ್ಷೆಗೆ ಓದಿಕೊಳ್ಳುವುದರಲ್ಲಿ ತನ್ಮಯನಾಗಿದ್ದ. ಆದರೆ ಲಾಕ್‍ಡೌನ್ ಅವಧಿ ವಿಸ್ತರಣೆಯಾಗುತ್ತಿದ್ದಂತೆ ಅಸಹನೆ ಆರಂಭವಾಯಿತು. ಮಾಡಿದ ಕೆಲಸವನ್ನೇ ಎಷ್ಟು ಬಾರಿ ಮಾಡುವುದು? ಓದಿದ ಟಿಪ್ಪಣಿಗಳನ್ನೇ ಎಷ್ಟು ಬಾರಿ ಓದುವುದು? ಬರೆದ ಅಸೈನ್‍ಮೆಂಟನ್ನೇ ಅದೆಷ್ಟು ಬಾರಿ ಬರೆಯುವುದು? ‘ಹೇಗಾದರೂ ಮಾಡಿ ಆಗಲೇ ಊರಿಗೆ ಹೋಗಿಬಿಡಬೇಕಿತ್ತು. ನನ್ನ ಪ್ರೀತಿಯ ಆವಾಸವಾಗಿದ್ದ ಈ ಕೋಣೆಯೇ ನನಗಿಂದು ಬಂಧೀಖಾನೆಯ ಅನುಭವ ನೀಡುತ್ತಿದೆ. ಸದಾ ನೀರವ ನಿಶ್ಚಲವಾಗಿರುವ ಈ ಕೋಣೆಯೊಂದಿಗೆ ನಾನೂ ಒಂದು ದ್ವೀಪವಾಗುತ್ತಿದ್ದೇನೆ. ಊರಿನಲ್ಲಾದರೆ ಅಪ್ಪ-ಅಮ್ಮ ಮತ್ತು ತಂಗಿಯ ಸಾಂಗತ್ಯದಲ್ಲಿ ನೆಮ್ಮದಿಯಿಂದ ಇರಬಹುದಿತ್ತು...’ ಎಂದು ಮೊದಲ ಬಾರಿಗೆ ಅನಿಸಿತ್ತು.


ದಿನಗಳುರುಳಿದಂತೆ ಕಾಲೇಜು ಸದ್ಯಕ್ಕೆ ಆರಂಭವಾಗಲಾರದೆಂಬ ಸತ್ಯ ಮನದಟ್ಟಾಗುತ್ತ ಹೋಯಿತು; ಪರಾಶರನ ಅಧೀರತೆ ಅಧಿಕವಾಗತೊಡಗಿತು. ತಾನೆಲ್ಲಿ ಖಿನ್ನತೆಗೆ ಒಳಗಾಗುವೆನೋ ಎಂಬ ಶಂಕೆ ಕಾಡುವ ವೇಳೆಗಾಗಲೇ ಅವನು ವಾಸ್ತವವಾಗಿ ಖಿನ್ನತೆಯ ದಾರಿಯಲ್ಲಿ ಬಹಳ ದೂರ ನಡೆದುಬಿಟ್ಟಿದ್ದ; ಎಲ್ಲಿಯವರೆಗೆಂದರೆ ಎರಡೆರಡು ಸ್ಯಾನಿಟೈಸರ್ ಬಾಟಲುಗಳನ್ನು ಒಂದೇ ಬಾರಿಗೆ ಖರೀದಿಸುವಲ್ಲಿಗೆ! ಆವರಿಸಿದ್ದ ಖಿನ್ನತೆಯಿಂದ ಹೊರಬರಲಾರದ ವಿವಶತೆಯಲ್ಲಿ ಪರಾಶರ ಸ್ಯಾನಿಟೈಸರ್ ಬಾಟಲಿಗೆ ಕೈಯಿಕ್ಕುವಷ್ಟರಲ್ಲಿ ಮೊಬೈಲು ಸದ್ದು ಮಾಡತೊಡಗಿತು. ನೋಡಿದರೆ, ಮಿತ್ರ ಶಮಂತ! ‘ಮಗಾ, ಅವತ್ತೊಂದಿನ, ನಿನ್ ಅಪ್ಪ-ಅಮ್ಮನ ಮಾತುಕತೆ ವೀಡಿಯೋ ಕಳ್ಸದೆ ತಂಗಿ ಅಂದಿದ್ಯಲ. ಅದನ್ ಚೂರು ನನ್ ವಾಟ್ಸಪ್ಪಿಗೆ ಬಿಡು. ಹಳ್ಳಿ ಜನ್ರ ಮಾತುಕತೆ ಮಜಾ ಇರ್ತದ್ಯೋ...!’ ಎಂದು ಕರೆಯನ್ನು ನಿಲ್ಲಿಸಿದ.


ತಂಗಿ ಕಳಿಸಿದ್ದರೂ ತಾನಿದುವರೆಗೂ ನೋಡದಿದ್ದ ವೀಡಿಯೋವನ್ನು ಶಮಂತನಿಗೆ ಬಿಟ್ಟವನು ಕೊನೆಯ ಬಾರಿಗೆ ತಾನೂ ಒಮ್ಮೆ ಅಪ್ಪ-ಅಮ್ಮನ ಮುಖ ನೋಡಿಬಿಡೋಣವೆಂದು ವೀಡಿಯೋ ಪ್ಲೇ ಮಾಡಿದ. ಅಪ್ಪ ಅಮ್ಮನಿಗೆ ಹೇಳುತ್ತಿದ್ದರು, ‘ನಾವು ಕನ್ನಡ ಶಾಲೆಗೆ ಹೋಗುವಾಗ ಘೋರ ಬಡತನ. ನಾನಂತೂ ಏಳನೇ ಎತ್ತೆಯವರೆಗೆ ಹೊಸ ಅಂಗಿ-ಚಡ್ಡಿ ಕಂಡಂವ್ವಲ್ಲ. ದೊಡ್ ಅಣ್ ಬಿಟ್ಟಿದ್ದು ಸಣ್ ಅಣ್ಣಂಗೆ, ಅಂವ ಬಿಟ್ಟಿದ್ದು ನಂಗೆ! ಆ ಚಡ್ಡೀಗಂತೂ ಹಿಂದೆ ಮುಂದೆ ಎಂಬ ಭೇದವಿಲ್ಲದೆ ಅದೆಷ್ಟು ಪ್ಯಾಚ್ ಇರುತ್ತಿತ್ತೋ ಭಗವಂತನೇ ಬಲ್ಲ. ತನಗಾಗಿ ವರ್ಷಕ್ಕೊಂದೂ ಅಂಗಿ ಹೊಲ್ಸಕೊಳ್ಳದ ಅಪ್ಪನ ಹತ್ರ ಹೊಸಾದ್ ಹೊಲ್ಸಗುಡು ಅಂತ ಯಾವ ಬಾಯಲ್ಲಿ ಕೇಳೂದು? ಆಯಿ ಜಂಪರಿನ ಮೇಲಿನ ತೇಪೆ ನೆನಪಾದ್ರೆ ನಂಗೆ ಈಗ್ಲೂ ಕಣ್ಣೀರ ಬರ್ತದೆ... ಶಾಲೆ, ಓದು ಇದ್ಕೆಲ್ಲ ಕಿಮ್ಮತ್ ಕೊಟ್ಟಂವನೇ ಅಲ್ಲ ಅಪ್ಪ- ಬರೀ ತಾನೂ ಗೆಯ್ಯೂದು, ಮಕ್ಳನ್ನೂ ಗೆಯ್ಸೂದು... ಮನೆಲ್ಲಿ ಕೆಲ್ಸ ಇಲ್ದಿದ್ರೆ ಶಾಲೆಗೆ ಹೋಗೂದು... ಹತ್ತು ಪೈಸೆ ಪೆಪ್ಪರಮೆಂಟ್ ತಿಂದವ್ರಲ್ಲ ನಾವು. ಎಂಟಾಣೆ ಪಟ್ಟಿ ತಕಳ್ಬೇಕೂ ಅಂದ್ರೆ ವಾರಗಟ್ಲೆ ಅಪ್ಪನ ಮರ್ಜಿ ಕಾದು ತೆಗೆಸಿಕೊಳ್ಳೂವರೆಗೆ ಹರ್ಮಾಗಾಲ ಆಗತಿತ್ತು. ಪಾಪ, ನಮ್ಮಪ್ಪಂದು ತಪ್ಪು ಅಂತ ನನ್ ಬಾಯಲ್ಲಿ ಬರ್ವಾಂಗಿಲ್ಲ... ತನ್ ಮಕ್ಳು ಮುಂದೆ ಮರ್ಯಾದಿಂದ ಬದಕ್ಲೀ ಅಂಬೂದಕ್ಕಾಗಿ ಹಗಲು-ರಾತ್ರಿ ಅನ್ನದೆ ಗೆಯ್ದ್ ಗೆಯ್ದೇ ಸತ್ತ್ಹೋದ! ನಾವ್ ಸಣ್ಣಕ್ಕಿದ್ದಾಗ ಪಟ್ಟ ಕಷ್ಟ ನಮ್ ಪರಾಶರಂಗೆ ಬರಬಾರ್ದು ಅಂತಾನೇ ಹೊಟ್ಟೆಬಟ್ಟೆ ಕಟ್ಟಿ ಅವ್ನ ಬೇಕು-ಬೇಡ ಎಲ್ಲ ಪೂರೈಸೂದು. ದೇವರ ದಯದಿಂದ ಇಲ್ಲೀವರೆಗೆ ಅವ್ನೂ ನಮ್ ಆಸೆ ಸುಳ್ ಮಾಡ್ಲಿಲ್ಲ. ಒಂದನೇ ಎತ್ತೆಯಿಂದ್ಲೂ ಫಸ್ಟ್ ನಂಬರ್ರೇ! ಗುಣದಲ್ಲೂ ಬಂಗಾರ ನಮ್ ಪರಾಶರ! ಅವನಲ್ಲಿ ಒಳ್ಳೆ ಸಂಸ್ಕಾರ ತುಂಬಿರೂ ನಿನ್ನ ಎಷ್ಟ್ ಹೊಗಳದ್ರೂ ಕಡ್ಮೇನೇ ನೋಡು. ನಂಗೆ ಮತ್ತೆಂತಾ ಆಶೀನೂ ಇಲ್ವೆ, ಅಂವ ಚೊಲೋತ್ನಾಗಿ ಓದಿ, ಒಳ್ಳೆ ನೌಕರೀಗ್ ತಾಗಿ ಅವ್ನ ಜೀವನ ಅಂವ ಚಂದಾಗಿ ನಡಸಕಂಡು ಹೋದ್ರೆ ಸಾಕು... ನಮ್ಗೆ ನಯಾಪೈಸೆ ಕೊಡೂದೂ ಬ್ಯಾಡಾ... ಚಂದಾಗಿರ್ಲಿ ಅಂವ... ಏನಂತೆ...?’


ಅಪ್ಪನ ಮಾತುಗಳನ್ನು ಕೇಳುತ್ತಿದ್ದವನ ಕಂಗಳಿಂದ ಅವನಿಗರಿವಿಲ್ಲದೆಯೇ ನೀರು ಹನಿಸತೊಡಗಿತ್ತು. ಅಮ್ಮನೂ ಅಪ್ಪನಿಗೆ ಗದ್ಗದಳಾಗಿಯೇ ಹೇಳುತ್ತಿದ್ದಳು, ‘ನಿಮ್ದಾರೂ ಬೇಕು, ಗೆಯ್ದರೆ ಹೊಟ್ಟೆ-ಬಟ್ಟೆಗಾದ್ರೂ ತತ್ವಾರ ಇರ್ಲಿಲ್ಲ. ನಾವ್ ಸಣ್ಣಕ್ಕಿದ್ದಾಗ ಮೂರಲ್ಲ, ಒಂದ್ ಹೊತ್ತಿನ ಕೂಳಿಗಾಗಿ ಬಾಯಿ ತೆಕ್ಕಂಡು ಕಾಯ್ತಾ ಇದ್ವಿ. ಕೊಟ್ಟೆಕೊನೆ ಮಾಡೂ ಅಪ್ಪ ಸಾಯಂಕಾಲದ ಹೊತ್ತಿಗೆ ತನ್ನ ಪಂಜಿ ತುದೀಲಿ ಕಟ್ಕಂಬರೂ ನುಚ್ಚಕ್ಕಿಗಾಗಿ, ಅವ್ವ ಮಾಡ್ತಿದ್ದ ಗಂಜಿಗಾಗಿ ಕುತ್ಗೆ ಉದ್ದ ಮಾಡ್ಕಂಡಿ ಕಾಯ್ತಾ ಇದ್ದ ಆ ಕಷ್ಟ ನಮ್ ವೈರಿಗೂ ಬ್ಯಾಡಾ ದೇವ್ರೇ! ಒಂದೊಂದ್ ದಿನ ಅದ್ಕೂ ಗತಿ ಇಲ್ದೇ ತಣ್ಣೀರು ಕುಡ್ಕಂಡು ಜೀವ ಹಿಡ್ಕಂಡು ಬದ್ಕಿದ ನಮ್ ಕಷ್ಟ ನಮ್ಮ ಮಕ್ಳೀಗೆ ಬರದೇ ಇರ್ಲಿ ದೇವ್ರೆ ಅಂದ್ಕಂಡಿ ಈಗ್ಲೂ ದಿನಾ ಬೇಡ್ಕಂತೆ. ನಮ್ ಪರಾಶರ ಚಲೋ ಹುಡ್ಗ... ಚಲೋ ಓದಿಯೇ ಓದ್ತ... ನೋಡ್ತಾ ಇರಿ, ನಾವ್ ಬ್ಯಾಡಾ ಅಂದ್ರೂ ನೌಕರಿಗೆ ತಾಗಿದ ಮೇಲೆ ನಮ್ ಸಾಲ ತೀರ್ಸೇ ತೀರಸ್ತ... ನನ್ ಮಗ ಅಂವ... ನಾನವಂಗೆ ಹಾಲಿನ ಸಂಗಡ ಪ್ರೀತೀನೂ ಉಣಸಿ ಬೆಳ್ಸಿದ್ದೇನ್ರೀ... ಅಂವಲ್ದೆ ನಮಗೆ ಮತ್ಯಾರಿದ್ದಾರ್ರೀ...!’ ನೋಡುತ್ತಿದ್ದವನ ಕಣ್ಣುಗಳು ಕೊಳಗಳಾಗಿದ್ದವು!


‘ಅಯ್ಯೋ ದೇವ್ರೇ, ಕೇವಲ ನನ್ನ ಪ್ರಪಂಚದಲ್ಲಿಯೇ ಇದ್ದು, ನಿಜದ ಸತ್ಯವನ್ನರಿಯದೇ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ನಾನೆಂಥ ಹುಚ್ಚ! ಇಂಥ ಅಪ್ಪ-ಅಮ್ಮನ ಮುದ್ದಿನ ಮಗನಾಗಿಯೂ ಅವರನ್ನು ಅರ್ಥ ಮಾಡಿಕೊಳ್ಳಲಾಗಲಿಲ್ಲ. ಒಂದು ದಿನವೂ ಬಾಯಿಬಿಟ್ಟು ಹೇಳದಿದ್ದರೂ ತಮ್ಮ ಸುಖದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೆ ಕೇವಲ ನಾನು ಸುಖವಾಗಿರಲೆಂದು ಬಯಸುವ ಇಂಥ ಉದಾರ ಮನಸ್ಕರಾದ ಹೆತ್ತವರಿಗೆ ಮೋಸ ಮಾಡುತ್ತಿದ್ದೆನಲ್ಲ... ಥ್ಯಾಂಕ್ಯೂ ಶಮಂತ್...!’ ಎಂದುಕೊಳ್ಳುತ್ತಲೇ ಕಣ್ಣೀರೊರೆಸಿಕೊಂಡು ಲಾಕ್‍ಡೌನ್ ಮುಗಿದ ಕೂಡಲೇ ಊರಿಗೆ ಹೋಗುವ ನಿಶ್ಚಯದಿಂದ ಎರಡೂ ಸ್ಯಾನಿಟೈಸರ್ ಬಾಟಲಿಗಳನ್ನು ಕಸದಬುಟ್ಟಿಗೆಸೆದು ಪುಸ್ತಕವನ್ನು ಕೈಗೆತ್ತಿಕೊಂಡ!

=OOO=













ಹುಳಗೋಳ ನಾಗಪತಿ ಹೆಗಡೆ

18 views1 comment

1 Comment


ಧನಾತ್ಮಕ ಧೋರಣೆ ಸಾರುವ ಈ ಕತೆ ಇಂದಿನ ಬದುಕಿಗೆ ಪ್ರೇರಣಾದಾಯಕವಾಗಿದೆ . ಉತ್ತಮ ಕತೆ. ಅಭಿನಂದನೆಗಳು

Like
bottom of page