top of page

"ನಮ್ಮ ಭೈರಪ್ಪನವರು"

ಡಾ. ಎಸ್. ಎಲ್. ಭೈರಪ್ಪನವರ ಕುರಿತ

ಒಂದು ಅಪೂರ್ವ ಗ್ರಂಥ

ಲೇ. - ಶಾ. ಮಂ. ಕೃಷ್ಣರಾಯ


ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಡಾ. ಎಸ್. ಎಲ್. ಭೈರಪ್ಪನವರಿಗೆ ಈಗ ತೊಂಬತ್ತು ವರ್ಷಗಳು. ಈ ಸಂತೋಷವನ್ನು ಎಲ್ಲರೊಡನೆ ಹಂಚಿಕೊಳ್ಳಲು ಡಾ. ಎಂ. ಎಸ್. ವಿಜಯಾ ಹರನ್ ಅವರು " ನಮ್ಮ ಭೈರಪ್ಪನವರು" ಎಂಬ ಗ್ರಂಥ ಸಂಪಾದಿಸಿದ್ದಾರೆ. ಅದನ್ನು ಮೈಸೂರಿನ ಸಂಸ್ಕೃತಿ ಬುಕ್ ಪ್ಯಾರಡೈಸಿನ ಸಂಸ್ಕೃತಿ ಸುಬ್ರಹ್ಮಣ್ಯ ಅವರು ಪ್ರಕಟಿಸಿದ್ದಾರೆ. ಸುಮಾರು ೪೮೦ ಪುಟಗಳಲ್ಲಿ ವ್ಯಾಪಿಸಿದ ಈ ಗ್ರಂಥದಲ್ಲಿ ೧೦೯ ಲೇಖಕರು ಬರೆದಿದ್ದಾರೆ. ಕನ್ನಡದ ಖ್ಯಾತ ಲೇಖಕರೂ, ಅನುವಾದಕರೂ ಆಗಿರುವ ಪ್ರೊ. ಪ್ರಧಾನ ಗುರುದತ್ " ಓದಿದ ಬಳಿಕ" ಎಂಬ ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ.

ಡಾ. ವಿಜಯಾ ಹರನ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದು ಡಾ. ಹಾ. ಮಾ. ನಾಯಕರ ಮಾರ್ಗದರ್ಶನದಲ್ಲಿ " ಆನಂದರ ಬದುಕು ಬರೆಹ" ಸಂಪ್ರಬಂಧ ಬರೆದು ಮೈಸೂರು ವಿ. ವಿ. ದಿಂದ ಡಾಕ್ಟರೇಟ್ ಪಡೆದು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತ ನಿರ್ದೇಶಕರಾಗಿ ನಿವೃತ್ತರಾದವರು. ಭೈರಪ್ಪನವರ ಸಾಹಿತ್ಯ ಓದಿ‌ಪ್ರಭಾವಿತರಾದವರು. ಅವರೊಂದಿಗೆ ನಿಕಟ ಸಂಪರ್ಕದಲ್ಲಿರುವವರು.

ಈ ಗ್ರಂಥದ ವೈಶಿಷ್ಟ್ಯವೆಂದರೆ ಇಲ್ಲಿ ಬರೆದವರೆಲ್ಲ ಬರೆಹಗಾರರಲ್ಲ. ಬೇರೆ ಬೇರೆ ವೃತ್ತಿಯಲ್ಲಿ ಕೆಲಸ ಮಾಡುವವರು. ಇಲ್ಲಿ ಪ್ರಧಾನ ಗುರುದತ್ತರು ಈ ಗ್ರಂಥದ ಲೇಖಕರಲ್ಲಿ " ಕಡಲೆ ಪುರಿ ಅಂಗಡಿಯ ವ್ಯಾಪಾರಿ‌ ಪ್ರಭಾಕರನಿಂದ ಹಿಡಿದು ಆಟೋ ಚಾಲಕರು, ರೈಲು ಇಂಜಿನ್ ಚಾಲಕರು, ಕೃಷಿಕರು, ಶಿಕ್ಷಕರು, ಸಂಗೀತಗಾರರು , ವಕೀಲರು, ಬ್ಯಾಂಕ್ ಅಧಿಕಾರಿಗಳು, ಸಮೂಹ ಮಾಧ್ಯಮದವರು, ಪರಮಾಣು ವಿಜ್ಞಾನಿಗಳು, ವೈದ್ಯರು, ಪ್ರಸೂತಿ ತಜ್ಞರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ವಾಣಿಜ್ಯೋದ್ಯಮಿಗಳು, ಗೃಹಿಣಿಯರು, ಸಹಪಾಠಿಗಳು, ಕನ್ನಡೇತರ ಭಾಷೆಗಳಲ್ಲಿನ ಭೈರಪ್ಪನವರ ಅಭಿಮಾನಿಗಳು, ವಿದೇಶದಲ್ಲಿರುವ ಕನ್ನಡಿಗರು, ಹೀಗೆ ಸಮಾಜದ ವಿವಿಧ ವರ್ಗಗಳ ಜನರು ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ " ಎಂದು ಹೇಳಿದ್ದಾರೆ.

೨೦೧೯ ರಲ್ಲಿ ಸ್ಥಾಪಿತವಾದ " ಎಸ್. ಎಲ್‌ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ " ವು ಜನೆವರಿ , ೧೯, ೨೦೧೯ ರಂದು ಮೈಸೂರಿನ ಕಲಾ ಭವನದಲ್ಲಿ ಭೈರಪ್ಪ ಸಾಹಿತ್ಯೋತ್ಸವ ನಡೆಸಿತು. ಅಲ್ಲಿ ಸೇರಿದ ಜನರ ಅಭಿಪ್ರಾಯಗಳನ್ನು ಗಮನಿಸಿದ ವಿಜಯಾ ಹರನ್ ಓದುಗರ ಮನದಾಳದ ಮಾತುಗಳನ್ನು ದಾಖಲಿಸಿ ಪುಸ್ತಕ ಹೊರತರುವ ಯೋಜನೆ ರೂಪಿಸಿದರು. ಅದಕ್ಕಾಗಿ ಅವರೇನು ಪ್ರಚಾರ ಮಾಡಲಿಲ್ಲ. ಪತ್ರ ಬರೆಯಲಿಲ್ಲ. ತಮ್ಮ ಪರಿಚಿತರಿಗೆ ಮಾತ್ರ ತಿಳಿಸಿದರು. ಆ ಸುದ್ದಿ ಕಿವಿಯಿಂದ ಕಿವಿಗೆ ಹಬ್ಬಿ ಲೇಖನಗಳ ರಾಶಿ ಬಂದು ಬಿದ್ದಿತು. ಕನ್ನಡೇತರರ ಅಭಿಪ್ರಾಯಗಳನ್ನು ವಿಜಯಾರ ಸ್ನೇಹಿತರು ಸಂಗ್ರಹಿಸಿ ಕಳಿಸಿದರು. ಈ ಬಗೆಯ ಪ್ರಯತ್ನ ಕನ್ನಡದಲ್ಲಿ ಇದೇ ಮೊದಲು. ಬರುತ್ತಿರುವ ಲೇಖನಗಳಿಗೆ ತಡೆ ಹಾಕದಿದ್ದರೆ ಮತ್ತಷ್ಟು ಬರುತ್ತಿದ್ದವೇನೊ.

‌ ‌ಇಲ್ಲಿ ನಮ್ಮ ಪ್ರಸಿದ್ಧ ಕಾದಂಬರಿಕಾರ ಚದುರಂಗರ ಸುಪುತ್ರ ಪ್ರೊ. ವಿಕ್ರಂ ಅರಸ್, ಸೊಸೆ ವಿಜಯಲಕ್ಷ್ಮಿ ಅರಸ್ ಅವರು ತಮ್ಮ ನಿಡುಗಾಲದೊಡನಾಟದ ಕುರಿತು ಬರೆದಿದ್ದಾರೆ. ಅದೇ ರೀತಿ ಕನ್ನಡಕ್ಕೆ ಭಾಮಿನಿ ಷಟ್ಪದಿಯಲ್ಲಿ " ಇಳಾಭಾರತ" ನೀಡಿದ ಡಾ. ಧರಿಣಿದೇವಿ ಮಾಲಗತ್ತಿಯವರೂ ಬರೆದಿದ್ದಾರೆ. ಗ್ರಂಥದ ಸಂಪಾದಕಿಯಾದ ವಿಜಯಾ ಹರನ್ " ವಂಶವೃಕ್ಷ " ಚಲನಚಿತ್ರ ನೋಡಿದಾಗಿನಿಂದ ಭೈರಪ್ಪ ಹೇಗೆ ಆಪ್ತರಾಗುತ್ತ ಹೋದರು ಎಂದು ವಿವರಿಸಿ ಕೊನೆಯಲ್ಲಿ " ಬದುಕು ಬರೆಹಗಳ ಪ್ರಭಾವಲಯದಲ್ಲಿ ಸಿಲುಕಿರುವ ನನ್ನ ಅಂತರಂಗವೆ ನಿಜ ನುಡಿಯುತ್ತೆ. ಈ ಮಹಾನ್ ಕಾದಂಬರಿ ಸಾರ್ವಭಮನೆ ನನ್ನ ಮಾನಸಗುರು, ಮಾರ್ಗದರ್ಶಿ. ಈ ಗುರು ಕಲಿಸಿದ ಜೀವನ ದರ್ಶನ ಪಾಠವೇ ನನ್ನ ಬದುಕಿನ ಕೈಪಿಡಿ " ಎಂದಿದ್ದಾರೆ.

‌‌ ಹಿಂದುಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜರಾದ ಹಾಸಣಗಿ ಗಣಪತಿ ಭಟ್ಟರು ಮತ್ತು ನಾಗರಾಜ ಹವಾಲ್ದಾರರು ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಭೈರಪ್ಪನವರ ಸಂಗೀತಾಭಿರುಚಿಯನ್ನು ವಿಶ್ಲೇಷಿಸುತ್ತ ಹವಾಲ್ದಾರರು " ಮಂದ್ರ" ಆಧಾರಿತ ನಾಟಕಕ್ಕೆ ತಾನು ಸಂಗಿತ ಸಂಯೋಜನೆ ಮಾಡಿದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಹಾಸಣಗಿ ಗಣಪತಿ ಭಟ್ಟರು ಭೈರಪ್ಪನವರು ಮಂದ್ರ ಬರೆಯುವ ಮುನ್ನ ತಮ್ಮ ಮನೆಗೆ ಬಂದು ತಮಗಿರುವ ಸಂದೇಹಗಳ ಬಗ್ಗೆ ಚರ್ಚಿಸಿದ್ದನ್ನು, ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಹೇಗೆ ಸಂಗ್ರಹಿಸಿದರು ಎಂಬುದನ್ನು ಬರೆದಿದ್ದಾರೆ. ಅದೇ ರೀತಿ ಸುಬ್ರಾಯ ಹೆಗಡೆ ಮತ್ತೀಹಳ್ಳಿ ಅವರು ತಾನು " ಸಾರ್ಥ" ಕಾದಂಬರಿಯನ್ನು ಹವ್ಯಕ ಭಾಷೆಗೆ ತರುವಾಗ ಭೈರಪ್ಪನವರ ಮನೆಗೆ ಹೋದ ಸಂದರ್ಬದ ಅನುಭವ ಹಂಚಿಕೊಂಡಿದ್ದಾರೆ.

‌‌‌‌‌ ‌ ರಾಕೇಶ್ ವಾಗ್ಮೊರೆಯವರು ಹುಟ್ಟಿನಿಂದಲೇ ದೃಷ್ಟಿ ಸವಾಲಿಗರು. ಅವರು ಕಲಬುರ್ಗಿಯ ಅಂಧ ಬಾಲಕರ ಶಾಲೆಯಲ್ಲಿ, ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ, ಕಲಬುರ್ಗಿಯ ಕೇಂದ್ರೀಯ ಬಿ. ವಿ. ದಲ್ಲಿ ಓದಿ ೨೦೦೭ ರಲ್ಲಿ ಸ್ನಾತಕೋತ್ತರ ಪದವಿ ಪಡೆದು ಈಗ ವಿಜಯಪುರದ ಅಕ್ಕಮಹಾದೇವಿ ವಿ. ವಿ. ದಲ್ಲಿ ಸ್ನಾತಕೋತ್ತರ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಶಿಕ್ಷಣ ಕಾಲದ ಅನುಭವ ಹೇಳುತ್ತ ಅವರು ತಮ್ಮ ಅಧ್ಯಾಪಕರು ಭೈರಪ್ಪನವರ ಕಾದಂಬರಿ ಓದಬೇಡಿ, ಅವರು ಬಲಪಂಥೀಯ ಇತ್ಯಾದಿ ಹೇಳಿ ವಂಚಿಸುತ್ತಿದ್ದರು. ತಾವು ಭೈರಪ್ಪನವರ ಸಾಹಿತ್ಯ ಓದಿಕೊಂಡಿದ್ದರಿಂದ ಅಧ್ಯಾಪಕರನ್ನು ಎದುರಿಸುವ ಸಾಮರ್ಥ್ಯವನ್ನು ಹೇಗೆ ಪಡೆದುಕೊಂಡೆ ಎಂಬುದನ್ನು ವಿವರಿಸಿದ್ದಾರೆ.

‌ ವಿಜಯಶ್ರೀ ಅವರು ಭೈರಪ್ಪ ದೊಡ್ಡ ಲೇಖಕರಾದರೂ ಜನಸಾಮಾನ್ಯರೊಂದಿಗೆ ಹೇಗೆ ಬೆರೆಯುತ್ತಾರೆ ಎಂಬುದನ್ನು ಒಂದು ಘಟನೆ ಮೂಲಕ ಹೇಳುತ್ತಾರೆ. ಉಡುಪಿ- ಶಿವಮೊಗ್ಗ ರಸ್ತೆಯಲ್ಲಿ ಆಗುಂಬೆಗೂ ಮುನ್ನ ಸಿಗುವ ಟೋಲಗೇಟ್ ಬಳಿ ಒಂದು ಟಾರ್ಪೆಲ್ ಹೊದಿಸಿದ ಗೂಡಂಗಡಿ ಇದೆ. ಆ ಅಂಗಡಿಯ ಮಾಲಕ ಭೈರಪ್ಪನವರ ಕಾದಂಬರಿಗಳನ್ನು ಓದಿ ಪ್ರಭಾವಿತನಾಗಿ ಅವರನ್ನೊಮ್ಮೆ ಕಂಡು ಧನ್ಯನಾಗಬೇಕೆಂದು ಆಶಿಸುತ್ತಿದ್ದಾಗ ವಿಜಯಶ್ರೀಯವರು ಈ ವಿಷಯ ಭೈರಪ್ಪನವರಿಗೆ ತಿಳಿಸಿದಾಗ ಅದನ್ನು ಸರಿಯಾಗಿ ನೆನಪಿಟ್ಟುಕೊಂಡು ಒಮ್ಮೆ ಆ ದಾರಿಯಲ್ಲಿ ಹೋಗುವಾಗ ಕಾರು ನಿಲ್ಲಿಸಿ, ಆ ಗೂಡಂಗಡಿಯ ಮಾಲಿಕನನ್ನು ಕಂಡು ಮಾತಾಡಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

‌‌‌ ಸಿ. ಜಿ. ರವೀಶ್ ಎಂಬವರು " ಭೈರಪ್ಪನವರ ಕೃತಿಗಳು ಸಂಶೋಧನೆ ಯ ಫಲ". ಧರ್ಮಶ್ರೀ ಕಾದಂಬರಿ ಓದಿದ್ದರಿಂದ ಹಿಂದೂ ಧರ್ಮದ ಬಗ್ಗೆ ಹೆಚ್ಚು ತಿಳಿಯುವಂತಾಯಿತು ಎನ್ನುತ್ತಾರೆ. ಭೈರಪ್ಪನವರ ಕಾದಂಬರಿಗಳ ಓದು ಸಂಘಟನೆ ಮಗೆ ದಾರಿ ಮಾಡಿಕೊಟ್ಟಿತು ಎನ್ನುತ್ತಾರೆ ಸುಧಾ ಎಂ. ಸಿದ್ದಾಪುರ.

‌ ದೃಷ್ಟಿ ಸವಾಲಿಗರಾದ ಟಿ. ಎಸ್. ಕವಿತಾ ಕಾದಂಬರಿ ಸಂಪಾದಿಸಲು ೮ ವರ್ಷ ಪ್ರಯತ್ನಿಸಿದ್ದನ್ನು , ಗೃಹಭಂಗ ಓದಿ ಪ್ರೇರಣೆಗೊಂಡು ಇತರ ಕಾದಂಬರಿ ಓದಿದ್ದು, ಕರೋನಾ ಎದುರಿಸುವ ಬಗ್ಗೆ ಕವಿತೆ ಬರೆದು ಫೇಸಬುಕ್ ನಲ್ಲಿ ಹಾಕಿ ಜನಪ್ರಶಂಸೆ ಪಡೆದದ್ದು ವಿವರಿಸುತ್ತಾರೆ. ಡಾ. ಲಕ್ಷ್ಮಿ ಉಣ್ಣಿಯವರು " ಆವರಣ" ದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಂತೆಶಿವರ ಗ್ರಾಮದ ಪುರೋಹಿತ ಮನೆತನದ ಜಯರಾಮ ಎಸ್. ಅವರು ಭೈರಪ್ಪನವರು ಸಂತೆಶಿವರ ಗ್ರಾಮದ ಅಭಿವೃದ್ಧಿ ಗೆ ಮಾಡಿದ ಕೆಲಸ ನೆನೆಸಿಕೊಂಡಿದ್ದಾರೆ. ಅದು ಭೈರಪ್ಪನವರ ಊರು.

‌ಪ್ರಶಾಂತ ಖೇಡೇಕರ ಎಂಬವರು ಮರಾಠಿಗರು. ಭೈರಪ್ಪನವರ ಪರ್ವ, ತಬ್ಬಲಿಯು ನೀನಾದೆ ಮಗನೆ, ಕಾದಂಬರಿಗಳು ತಮ್ಮ ಮೇಲೆ ಬೀರಿದ ಪ್ರಭಾವವನ್ನು ತಿಳಿಸಿದ್ದಾರೆ. ಹರ್ಷ ಡಿ. ಎನ್. ಅವರು ಕೃಷಿಕರು, ಇಂಜಿನಿಯರ್ ಲೇಖಕರು. ಭೈರಪ್ಪನವರ ಕಾದಂಬರಿಗಳು ಹೇಗೆ ತನ್ನನ್ನು ಲೇಖಕನನ್ನಾಗಿ ರೂಪಿಸಿದವು ಎಂದು, ತನ್ನ ಒಬ್ಬ ಗೆಳೆಯ ಸಾಲಸೋಲದಲ್ಲಿ ಒದ್ದಾಡುತ್ತಿದ್ದಾಗ ಭೈರಪ್ಪನವರ ಭಿತ್ತಿ‌ ಓದಿ ಸ್ಫೂರ್ತಿ ಗೊಂಡು ಶಿಕ್ಷಣ ಮುಂದುವರಿಸಿ ಉನ್ನತ ಶಿಕ್ಷಣ ಪಡೆದು ಈಗ ಕೇಂದ್ರ ಸರ್ಕಾರದ ನೌಕರಿಯಲ್ಲಿರೋದನ್ನು ಹೇಳಿದ್ದಾರೆ.

ಸವಿತಾ ರಾವುತ ಅವರು ಓಡಿಸ್ಸಾದವರು. ಅವರು ಪುಣೆಯಲ್ಲಿದ್ದಾಗ ಮರಾಠಿ ಓದುವುದನ್ನು ಕಲಿತು ಭೈರಪ್ಪನವರ ಕಾದಂಬರಿಗಳಿಂದ ಪ್ರಭಾವಿತರಾಗಿ ಮಂದ್ರ, ವಂಶವೃಕ್ಷ ಕಾದಂಬರಿಗಳನ್ನು ಓಡಿಸ್ಸಿ ಭಾಷೆಗೆ ಅನುವಾದಿಸಿದ್ದನ್ನು ಹೇಳಿಕೊಂಡಿದ್ದಾರೆ. ದಿಶಿತ ಶಾಹು ಮತ್ತು ಮಾರ್ಮಿಕ ಶಾಹು ಎಂಬ ಅಣ್ಣತಮ್ಮಂದಿರು ಭಾರತೀಯ ಸಂಸ್ಕೃತಿಯನ್ನು ಕಟುವಾಗಿ ಟೀಕಿಸುತ್ತಿದ್ದವರು ಆವರಣ ಓದಿ ಪೂರ್ಣ ಬದಲಾವಣೆಗೊಂಡ ಸನ್ನಿವೇಶ ವಿವರಿಸಿ" ಆವರಣವು ಸಮಾಜದ ಮತೀಯ ಪಿಡುಗುಗಳ ವಿರುದ್ಧ ಒಂದು ವ್ಯಾಕ್ಸಿನ್ ಇದ್ದಂತೆ. ಸಮಾಜದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಎನ್ನುತ್ತಾರೆ.

‌‌ ಜಯಮಾಲಾ ಆರ್. ಎಂಬವರು ಭೈರಪ್ಪನವರು ಚಿತ್ರಿಸಿದ ಸ್ತ್ರೀ ಪಾತ್ರಗಳು ಹೆಣ್ಣಿನ ಗೌರವವನ್ನು ಹೆಚ್ಚಿಸುತ್ತವೆ, ಹೆಂಗಸರು ದುಷ್ಟ ಪ್ರಭಾವದಿಂದ ಪಾರಾಗಬೇಕಾದರೆ ಭೈರಪ್ಪನವರ ಸಾಹಿತ್ಯ ಓದಬೇಕೆನ್ನುತ್ತಾರೆ.

ಹಿಗೆ ಅನೇಕರು ಅನೇಕ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪುಸ್ತಕದಲ್ಲಿ ೧೦೯ ಲೇಖನಗಳಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ. ಸಮಾಜದ ಕೊನೆಯ ಸ್ತರದಿಂದ ಮೇಲ್ ಸ್ತರದವರೆಗೆ ಎಲ್ಲರೂ ಬರೆದಿದ್ದಾರೆ. ಭೈರಪ್ಪನವರ ಸಮಗ್ರ ಚಿತ್ರ ಇಲ್ಲಿ ಮೂಡಿನಿಂತಿದೆ.

‌ ಭೈರಪ್ಪ ಲೇಖಕರಾಗಿಯೂ ಅಷ್ಟೇ ದೊಡ್ಡವರು. ಅವರ ವೈಯಕ್ತಿಕ ಪರಿಚಯ , ಒಡನಾಟ, ನನಗಿರುವದರಿಂದ ಅವರು ಒಬ್ಬ ವ್ಯಕ್ತಿಯಾಗಿಯೂ ಅಷ್ಟೇ ದೊಡ್ಡವರು ಎಂಬುದನ್ನು ಕಂಡುಕೊಂಡಿದ್ದೇನೆ.

ಡಾ. ವಿಜಯಾ ಹರನ್ ಈ ಗ್ರಂಥ ಸಂಪಾದಿಸಿ ಓದುಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಭೈರಪ್ಪನವರ ಸಾಹಿತ್ಯದ ಬಗ್ಗೆ ಈಗಾಗಲೇ ಇಪ್ಪತ್ನಾಲ್ಕು ವಿಮರ್ಶಾ ಗ್ರಂಥಗಳು ಪ್ರಕಟವಾಗಿವೆ. ಆದರೆ ಇದು ಅವುಗಳಿಗಿಂತ ಭಿನ್ನ. ಇಲ್ಲಿ ಭೈರಪ್ಪನವರನ್ನು ಶ್ರೀಸಾಮಾನ್ಯರು ಹೇಗೆ ಅರ್ಥೈಸಿಕೊಂಡಿದ್ದಾರೆಂದು ಅರಿಯಲು ಈ ಗ್ರಂಥ ಓದಬೇಕು.

ಮೈಸೂರಿನ ಸಂಸ್ಕೃತಿ ಬುಕ್ ಪ್ಯಾರಡೈಸ್ ನವರು ಬಹಳ ಅಚ್ಚುಕಟ್ಟಾಗಿ ಇದನ್ನು ಹೊರತಂದಿದ್ದಾರೆ.‌ ಒಟ್ಟು ೪೮೦ ಪುಟಗಳ ಈ ಗ್ರಂಥದ ಬೆಲೆ ೪೮೦ ರೂಪಾಯಿಗಳು. ಆಸಕ್ತರು ಮೊ. ನಂ. ೯೯೪೫೯೬೬೯೭೯ ಇದಕ್ಕೆ ಸಂಪರ್ಕಿಸಬಹುದು.

- ಶಾ. ಮಂ. ಕೃಷ್ಣರಾಯ, ಬೆಂಗಳೂರು





38 views0 comments

Comments


bottom of page