ನಮ್ಮದೇ ಕಥೆ

ಪದಗಳಿಗೀಗ ನಮ್ಮ ನಡುವೆ ಯಾವ ಕೆಲಸವೂ ಇಲ್ಲ ನಾನು ಹೇಳುವುದು ನಿನಗೆ ನೀನು ಹೇಳುವುದು ನನಗೆ ಈ ಮೊದಲೇ ಯಾರೊ ಬರೆದುಕೊಟ್ಟಂತೆ ನಮ್ಮದೇ ಕಥೆ ಟೀವಿಯಲ್ಲಿ ಪ್ರಸಾರವಾದಂತೆ ಇತ್ತೀಚೆಗೆ ಹೀಗೆಲ್ಲ ನಿನ್ನ ಬಗ್ಗೆ ಬರೆಯುವ ಸಾಲುಗಳಿಗೆ ಯಾಕೊ ಖಾಲಿ ಹಾಳೆಯ ಸ್ವಚ್ಛ ಕಾಪಾಡುವ ಹುಚ್ಚು ಹೇಳುವುದು ಕೇಳುವುದು ಎರಡೂ ಭಾರವಾದಂತೆ ಹವಮಾನ ಇಲಾಖೆಯ ಮಾತನ್ನು ಮಳೆ ಸುತಾರಾಂ ಧಿಕ್ಕರಿಸಿದಂತೆ ಎಲ್ಲೊ ಇರುವ ನೀನು ಇಲ್ಲೆ ಇರುವ ನಾನು ನಮ್ಮ ನಮ್ಮ ಯೋಗಕ್ಷೇಮ ಕುಶಲೋಪರಿಗಳ ಹಂಗು ಬಿಟ್ಟಿದ್ದೇವೆ ವಿದಾಯಕ್ಕೂ ಮುನ್ನದ ಕೊನೆಯ ಆಟದಂತೆ ಕುಯಿಲಿಗೆ ಹಿಂದಿನ ದಿನ ಗದ್ದೆ ಬದುವಲ್ಲಿ ಇಲಿಯೊಂದು ಹತ್ತು ಮಕ್ಕಳ ಹೆತ್ತಂತೆ ನಾವೇ ನಿಂತು ಕಟಕಟೆಯಲ್ಲಿ ಮಾಡಿದ ಸಾಲು ಸಾಲು ಪ್ರಮಾಣಗಳು ನಮ್ಮ ಎದೆಗೆ ಮುಖ ಆನಿಸಿ ಮಲಗಿರುವ ನಮ್ಮದೇ ಶವದಂತೆ ಮಗು ಬಾಯಿ ತೆರೆವ ಸಮಯಕ್ಕೆ ಚಂದಿರ ಅವಿತು ಕೂತಂತೆ ನಾಳೆ ನನ್ನ ಎದುರು ನೀನು ನಿನ್ನ ಎದುರು ನಾನು ಅಚಾನಕ್ಕಾಗಿ ಸಿಕ್ಕಾಗ ಏನು ಮಾತನಾಡುತ್ತೇವೆಂದು ನಮಗೀಗಲೇ ಗೊತ್ತು ಪರೀಕ್ಷೆಯಾದ ಮೇಲೆ ಹೊಳೆದ ಉತ್ತರದಂತೆ ಎಚ್ಚರವಾದ ಮೇಲೆ ಕೂಗ ತೊಡಗಿದ ಅಲಾರಾಮಿನಂತೆ ಕಾಡಿ ಬೇಡಿ ರಸ್ತೆ ತಿರುವುಗಳನ್ನು ಶಪಿಸುತ್ತಾ ಒಲವು ಹುಟ್ಟಿತ್ತು ದೂರವಾಗುವುದನ್ನು ಸ್ವಾಗತಿಸಿದ ನಮ್ಮ ಪ್ರೇಮಕ್ಕೆ ಇಬ್ಬರೂ ಕೃತಜ್ಞರಾಗಬೇಕಿದೆ ಆದಷ್ಟು ಬೇಗ ಹರಿದ ನನ್ನ ಅತೀ ಇಷ್ಟದ ಅಂಗಿಯಂತೆ - ಚಂದ್ರು ಎಂ ಹುಣಸೂರು

14 views0 comments