ನಾನೇ ನನಗಾಗಿ,ಕಟ್ಟಿಕೊಂಡ
ಸಣ್ಣ,ಸುಂದರ,ಸುಭದ್ರ
ಕೋಟೆಯಲ್ಲಿ,ನಾನೇರಾಜ
ನನ್ನದೇ ರಾಜ್ಯಭಾರ.
ಕೋಟೆಯಲ್ಲಿ ಎಲ್ಲವೂ
ಕೇವಲ ನನಗಾಗಿಯೇ ಇವೆ
ಚಿಕ್ಕದಾದರೂ,ಚೊಕ್ಕವಾಗಿ.
ನಿರಂತರ ನಡೆದಿಹುದು
ನನ್ನದೇ ಸರ್ವಾಧಿಕಾರ.
ಅಲ್ಲಿಯ ಚಿಕ್ಕ,ಆಗಸದಲ್ಲಿ,
ಚಿಕ್ಕ,ಚಿಕ್ಕ ಚುಕ್ಕಿಗಳ ಮಧ್ಯೆ,
ಅವಕಾಶ ವಂಚಿತ,ಚಿಕ್ಕಚಿಕ್ಕ
ಸೂರ್ಯ ಚಂದ್ರಮರು
ಕಾಯುತ್ತಿದ್ದಾರೆ,ದೊಡ್ಡ
ಬೆಳಕ ಸುರಿಯಲು.
ಚಿಕ್ಕ ಹೂಗಿಡಗಳಲ್ಲಿ,ನಿತ್ಯ
ದೊಡ್ಡ ಹೂ ಅರಳುತ್ತವೆ
ನನ್ನ ಖುಷಿಗಾಗಿ ಮಾತ್ರ.
ಸಂಜೆ ಸಾಯಲು.
ಪ್ರತಿಚಿಕ್ಕರಾತ್ರಿಯ,ಚಿಕ್ಕ
ನಿದ್ದೆಗಳಲ್ಲೂ, ಚಿಕ್ಕ,ಚಿಕ್ಕ
ಕನಸುಗಳು ಬಿದ್ದು,
ನನ್ನೊಳಗವಿತು ಕಾಯುತ್ತವೆ,
ದೊಡ್ಡ ನನಸಾಗಲು.
ನನ್ನಕೋಟೆಯಲ್ಲಿಯ ಚಿಕ್ಕ
ಸುಳ್ಳುಗಳು ಕೂಡ,ಒಮ್ಮೊಮ್ಮೆ
ದೊಡ್ಡ ಸತ್ಯವಾಗಲು
ಹಾತೊರೆಯುತ್ತವೆ ಕೇವಲ
ನನ್ನಸುಖಕ್ಕಾಗಿ.
ಇಲ್ಲಿ,ಒಮ್ಮೊಮ್ಮೆ ಚಿಕ್ಕನೋವೂ
ಕೂಡ,ದೊಡ್ಡ ನಲಿವಾಗಿ,
ಸಂಬ್ರಮಿಸುತ್ತಲೇ ಇರುತ್ತದೆ
ನನ್ನೊಬ್ಬನಿಗಾಗಿ.
ಇಲ್ಲಿ,ಚಿಕ್ಕ ಮನಸ್ಸುಗಳು
ಯಾವಾಗಲೂ ದೊಡ್ಡ
ಸಾಧನೆಯತ್ತ ಮುಖಮಾಡಿ,
ಕುಳಿತಿರುತ್ತವೆ.
ನನ್ನೊಬ್ಬನಭ್ಯುದಯಕಾಗಿ
ಕೋಟೆಯೊಳಗಿನ ಚಿಕ್ಕ-
ಬದುಕಿನ ಚಿಕ್ಕ ಘಟನೆಗಳು
ನಿತ್ಯದೊಡ್ಡದಾದ ಅಕ಼ರ-
ರೂಪ ಪಡೆಯುತ್ತವೆ.
ಈ ಎಲ್ಲಗಳ ನಡುವೆ;
ನನ್ನ ಅಭೇದ್ಯ ಕೋಟೆಯಲ್ಲಿ,
ಎಲ್ಲೋ ಒಂದು ಚಿಕ್ಕ-
ರಂದ್ರವಿದ್ದು,ನನ್ನರಿವಿಗೆ
ಬಾರದೇ ಅದು ದೊಡ್ಡದಾಗಿ,
ಅದರೊಳಗಿಂದ ಶಸ್ತ್ರು-
ಗಳಾಗಮಿಸಿ,ಕೋಟೆಯೊಳಗೇ
ನನ್ನ ನಿರ್ಗತಿಕ ನಾಗಿಸುವ
ಆತಂಕ,ನಿರಂತರ ಮನದ
ಮೂಲೆಯಲ್ಲಿ,ಅವಿತು
ಕುಳಿತು,ತುಂಟ ಹುಡುಗ
ನಂತೇ' ಮುಸಿ,ಮುಸಿ'
ನಗುತ್ತಿರುತ್ತಿರುವದು
ಮಾತ್ರ ನಿತ್ಯ ಸತ್ಯ.
----ಅಬ್ಳಿ ಹೆಗಡೆ**
Comentários