ನನಗೆ ನಾನೇ ಒಂದು ಪ್ರಶ್ನೆ?
ಇನ್ನೂ ಅರ್ಥ ಮಾಡಿಕೊಳ್ಳಲಾಗಿಲ್ಲ
ನನ್ನನ್ನು ನಾನು,
ನೀನು ಹಾಗೆ, ನೀನು ಹೀಗೆ
ನೀನು ಅವನಂತೆ, ನೀನು ಇವನಂತೆ
ನೀನು ಇನ್ನೂ
ಏನೇನೋ ಎಂದು
ಯಾರು ಯಾರೆಲ್ಲ
ಬಣ್ಣಿಸಿಯೇ ಬಣ್ಣಿಸಿದರು
ಆದರೆ ಅವರು ಹೇಳಿದ್ದೊಂದೂ
"ನಾನು" ಎಂದು ನನಗೆ
ಅನಿಸಲೇ ಇಲ್ಲ.
ಹುಡುಕುತ್ತ ಹೋದ ಹಾಗೆ
ಅನಿಸಿತು
ನಾನಿನ್ನೂ ಏನೂ ಆಗಿಯೇಇಲ್ಲ
ನಾನು ಓದಿದ್ದು/ ಬರೆದದ್ದು
ನಾನು ಕೇಳಿದ್ದು / ತಿಳಿದದ್ದು
ನಾನು ನೋಡಿದ್ದು/ ಆಡಿದ್ದು
ಎಲ್ಲವೂ ನನ್ನೊಳಗೆ
ಇಳಿದಿರಲೇ ಇಲ್ಲ
ನಾನು ನಾನಲ್ಲವೆನಿಸತೊಡಗಿದಾಗ
ನನ್ನ ನಾ ಹುಡುಕತೊಡಗಿದೆ
ಹಲವು ಪ್ರಶ್ನೆಗಳು
ಕಾಡತೊಡಗಿದವು
ನಾನೊಬ್ಬ
"ಅಪೂರ್ಣ ಮನುಷ್ಯ"ನೇ?
ನಾನು ಮನುಷ್ಯ
ಹೌದೋ ಅಲ್ಲವೋ?
ನಾನು ಏನಾಗಬೇಕಿತ್ತು?
ನಾನು ಏನಾಗಿದ್ದೇನೆ?
ಯಾರ ಉತ್ತರವೂ
ನನಗೆ ಸರಿಯೆನಿಸುತ್ತಿಲ್ಲ
ಬಹುಶಃ
ನನಗೇ ನಾನು
ಅರ್ಥವಾಗಬೇಕಾಗಿದೆ
ಅಲ್ಲಿಯತನಕ
ಉಳಿದುಬಿಡಬಹುದು
ನನಗೆ ನಾನೇ ಒಂದು
ಪ್ರಶ್ನಾರ್ಥಕ ಚಿಹ್ನೆಯಾಗಿ
?????????????????
- ಎಲ್.ಎಸ್. ಶಾಸ್ತ್ರಿ
Comments