top of page

ನಗರ ಜಾನಪದ ಮಾಲ್ ಎಂಬ ಸಂತೆ

ಡಾ. ಪೆರ್ಲರ ವಾರಾಂಕಣ ವಸಂತೋಕ್ತಿ-16


ನಗರ ಜಾನಪದ – ಮಾಲ್ ಎಂಬ ನಗರಸಂತೆಗಳು


ನಗರ ಜಾನಪದದ ಬಗ್ಗೆ ಮಾತಾಡುವಾಗ, ಇತ್ತೀಚೆಗೆ, ಅಂದರೆ 2000 ನೇ ಇಸವಿಯಿಂದ ಈಚೆಗೆ, ಹೊಸ ಸಹಸ್ರಮಾನದಲ್ಲಿ ನಮ್ಮ ಗಮನ ಸೆಳೆಯುತ್ತಿರುವುದು ನಗರಗಳಲ್ಲಿ ಕಂಡುಬರುತ್ತಿರುವ ಮಾಲ್ ಗಳು. ಮಾಲ್ ಎಂದರೆ ಎಲ್ಲ ಉಪಭೋಗಿ ವಸ್ತುಗಳು ಒಂದೇ ಕಡೆ ಸಿಗುವ ಬಹುದೊಡ್ಡ ಅಂಗಡಿ ಸಮುಚ್ಚಯ.

ಹಳ್ಳಿಗಳಲ್ಲಿ ಕಂಡುಬರುವ ಹಿಂದಿನ ಕಾಲದ ಸಂತೆಗಳೇ ಮಾಲ್ ಗಳಾಗಿ ರೂಪಾಂತರಗೊಂಡು ಮೈದಾಳಿರುವ ಈ ಆಧುನಿಕ ಮೈರಾವಣರು ಕೊಳ್ಳುಬಾಕ ಸಂಸ್ಕೃತಿಯ ಪ್ರತಿರೂಪದಂತೆ ಕಾಣುತ್ತವೆ.

ಮಾಲ್ ಗಳು ಕೆಲವೊಮ್ಮೆ ಎಕರೆಗಟ್ಟಲೆ ಜಾಗಗಳಲ್ಲಿ ಹರಡಿಕೊಂಡಿರುತ್ತವೆ. ಬಹುಕೋಟಿ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ ಒಂದೇ ಕಂಪೆನಿಯು ಹಲವು ನಗರಗಳಲ್ಲಿ ಶಾಖೆಗಳನ್ನು ಹೊಂದಿರುತ್ತದೆ. ಒಂದು ಸೂರಿನಡಿಯಲ್ಲಿ ಉಪಭೋಗಿ ಸರಕುಗಳೆಲ್ಲವೂ ಲಭ್ಯ. ಅವುಗಳಲ್ಲಿ ಕೆಲವು ಸಾವಿರ ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಸಾಮಾನುಗಳನ್ನು ಕೊಳ್ಳುವ ವಿಭಾಗ, ಸಾಗಾಟದ ವಿಭಾಗ, ಆಯುವ (cleaning and bifurcating) ವಿಭಾಗ, ವ್ಯವಸ್ಥಿತವಾಗಿ ಜೋಡಿಸುವ ವಿಭಾಗ, ಮಾರಾಟದ ವಿಭಾಗ, ಲೆಕ್ಕಪತ್ರ ವಿಭಾಗ ಎಂದು ಮಾಲ್ ಗಳಲ್ಲಿ ಹಲವಾರು ವಿಭಾಗಗಳಿರುತ್ತವೆ. ಗ್ರಾಹಕ ಕೊಳ್ಳುವಾಗ ಅರ್ಧ ಕಿಲೋ, ಒಂದು ಕಿಲೋ, ಐದು ಕಿಲೋ ಎಂದೆಲ್ಲ ಕೊಳ್ಳಬೇಕಾದ ಅಗತ್ಯವೂ ಇಲ್ಲ. ಕೊಂಡುದು ಮೂರು ಕಿಲೋ 473 ಗ್ರಾಂ ಭಾರ ತೂಗಿದರೆ ಕಂಪ್ಯೂಟರ್ ನಿಖರವಾಗಿ ಅದರ ಮೊತ್ತವನ್ನು ತೋರಿಸುತ್ತದೆ. ಹಣ (cash) ತೆಗೆದುಕೊಂಡು ಹೋಗಬೇಕಾಗಿಲ್ಲ. ಗೂಗಲ್ ಪೇ, ಪೇಟಿಯಂ, ಕ್ಯೂ ಆರ್ ಕೋಡ್ ಇತ್ಯಾದಿ ವ್ಯವಸ್ಥೆಗಳ ಮೂಲಕ ಆನ್ ಲೈನ್ ಪೇಮೆಂಟ್ ಮಾಡಿದರಾಯಿತು.

ಜಗತ್ತಿನ ಎಲ್ಲ ಉಪಭೋಗಿ ವಸ್ತುಗಳೂ ಇಂತಹ ಮಾಲ್ ಗಳಲ್ಲಿ ಲಭ್ಯ. ಚಪ್ಪಲಿಯಿಂದ ಹಿಡಿದು ತರಕಾರಿ ವರೆಗೆ, ಅಕ್ಕಿಯಿಂದ ಹಿಡಿದು ಆಟಿಕೆಯ ವರೆಗೆ. ಮನೋರಂಜನಾ ತಾಣಗಳು, ಕ್ರೀಡೆಯ ಅಂಕಣಗಳು, ಪುಟಾಣಿ ಮಕ್ಕಳಿಗಾಗಿ ಆಟದ ಜಾಗಗಳೂ ಇರುತ್ತವೆ. ನಾಲ್ಕಾರು ಮಹಡಿಯ ಆಕರ್ಷಕ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗಳೊಂದಿಗೆ ವಿದ್ಯುದ್ದೀಪಾಲಂಕೃತವಾಗಿ ಎಲ್ಲ ಆಧುನಿಕ ಸೌಕರ್ಯಗಳನ್ನು ಹೊಂದಿ ಸುಸಜ್ಜಿತವಾಗಿ ಕಂಗೊಳಿಸುತ್ತಿರುತ್ತವೆ.

ಮಧ್ಯಮ ವರ್ಗ, ಮೇಲ್ ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗವನ್ನು ತಮ್ಮ ಗ್ರಾಹಕರಾಗಿ ಬುಟ್ಟಿಗೆ ಹಾಕಿಕೊಂಡಿರುವ ಮಾಲ್ ಗಳಿಂದಾಗಿ ನಮ್ಮ ಪಾರಂಪರಿಕ ಶೈಲಿಯ ಅಂಗಡಿಗಳು ಬಡವಾಗಿ – ಕೃಶವಾಗಿ ಹೋಗಿವೆ. ಪೇಟೆಪಟ್ಟಣಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿದ್ದ ಬಹು ಜನಪ್ರಿಯ ಸೆಟ್ಟರ ಅಂಗಡಿಗಳು ವ್ಯಾಪಾರ ಕಡಿಮೆಯಾಗಿ ಆರಕ್ಕೇರದ ಮೂರಕ್ಕಿಳಿಯದ ಪರಿಸ್ಥಿತಿಗೆ ತಲಪಿವೆ. ಬಡ ಕೂಲಿ ಕಾರ್ಮಿಕರು ಮಾತ್ರ ಇವರ ಗ್ರಾಹಕರಾಗಿ ಉಳಿದಿದ್ದಾರೆ.

ನಮ್ಮ ಹಳ್ಳಿಗಳಲ್ಲಿ ನಡೆಯುತ್ತಿದ್ದ ವಾರದ ಸಂತೆಗಳನ್ನೊಮ್ಮೆ ಕಲ್ಪಿಸಿಕೊಳ್ಳಿ. ಹಳ್ಳಿಯ ಕೃಷಿ ಉತ್ಪಾದನೆಗಳೊಂದಿಗೆ ಬೆಂಡು ಬತ್ತಾಸು ಪುರಿ ಕಡ್ಳೆ ಅಕ್ಕಿ ಬೇಳೆ ಬಟ್ಟೆಬರೆ ತರಕಾರಿ ಆಟಿಕೆಗಳು ಪುಸ್ತಕಗಳು ಕುಪ್ಪಿಯೊಳಗೆ ಕುಡಿಯಲು ತುಂಬಿಸಿಟ್ಟ ಬಣ್ಣದ ದ್ರಾವಣ ಎಂದು ಏನುಂಟು ಏನಿಲ್ಲ ಎಂದು ಪಟ್ಟಿ ಮಾಡುವುದು ತ್ರಾಸದ ಕೆಲಸವೇ ಸರಿ. ಇಂದ್ರಜಾಲದ ಅಂಗಡಿ, ರಾಟೆತೊಟ್ಟಿಲು, ತಿರುಗುವ ಚಕ್ರಕ್ಕೆ ಕೋಲು ಹಾಕಿ ಹಣ ಎಸೆದು ಬಹುಮಾನ ಪಡೆಯುವ ಲಾಟರಿ ಅಂಗಡಿ, ಕಪ್ಪು ಗೂಡೊಳಗೆ ಹೋಗಿ ನೋಡುವ ಮಾಯಾಲೋಕ, ಬದಿಯಲ್ಲೆಲ್ಲೊ ಕಳ್ಳು-ಸಾರಾಯಿ ಅಂಗಡಿ ಹೀಗೆ ಎಲ್ಲವೂ ದೊರೆಯುವ ಹಿಂದಿನ ಕಾಲದ ಹಳ್ಳಿಸಂತೆಗಳು ಈಗ ಮಾಲ್ ರೂಪದಲ್ಲಿ ಆಧುನಿಕರ ನಗರಸಂತೆಗಳಾಗಿ ರೂಪಾಂತರಗೊಂಡಿವೆ.

ಮಾಲ್ ಗಳಿಗೆ ಹೋಗುವ ಗ್ರಾಹಕರ ಉಡುಗೆ ತೊಡುಗೆ ಮತ್ತು ಭಾಷೆ ಕೂಡ ಬದಲಾಗಿದೆ! ಮಾಲ್ ಗಳ ವಿವಿಧ ಆಕರ್ಷಕ ಕೊಡುಗೆಗಳು ಮತ್ತು ಸ್ಪರ್ಧಾ ದರಗಳು ಸಣ್ಣಪುಟ್ಟ ಅಂಗಡಿಗಳನ್ನು ಸಾಯಿಸಿಬಿಟ್ಟಿವೆ.

ಅಂಗಡಿ ಮುಂಗಟ್ಟುಗಳಲ್ಲಿ ವಿವಿಧ ಸ್ತರ/ಸಾಲುಗಳಲ್ಲಿ ಅರ್ಧ ಮಡಚಿಟ್ಟ ಗೋಣಿಚೀಲಗಳಲ್ಲಿ ಆಕರ್ಷಕವಾಗಿ ತುಂಬಿಸಿಟ್ಟಿರುತ್ತಿದ್ದ ಅಕ್ಕಿ ಜೋಳ ರಾಗಿ ಬೆಲ್ಲ ಮೆಣಸಿನಕಾಯಿ ಕೊತ್ತಂಬರಿ ಹಿಂಡಿ ಮೊದಲಾದ ಪದಾರ್ಥಗಳನ್ನು ಮತ್ತು ತೂಕಪಡಿಯ ನಡುವೆ ಬಿಳಿಮೆತ್ತೆಯ ಮೇಲೆ ಗಲ್ಲಾದಲ್ಲಿ ಕೂತಿರುತ್ತಿದ್ದ ಸೆಟ್ಟರನ್ನು ನಾವು ಈಗ ಕಾಣಲಾರೆವು. ಅಂತಹ ಅಂಗಡಿಗಳು ಕಣ್ಣುಮುಚ್ಚುವ ಸ್ಥಿತಿಗೆ ಬಂದಿವೆ. ಹಳ್ಳಿಯವರು ಕೂಡ ನಗರಗಳ ಮಾಲ್ ಗಳನ್ನು ಹುಡುಕಿಕೊಂಡು ಹೋಗುವ ಕಾಲ ಬಂದಿದೆ.

ನಗರಗಳ ಉದ್ಯೋಗಸ್ಥ ಜನಸಮುದಾಯ ವಾರಕ್ಕೊಮ್ಮೆ ಇಂತಹ ಮಾಲ್ ಗಳಿಗೆ ತೆರಳಿ ಬೇಕಾದುದನ್ನು ಕೊಳ್ಳುವ ವ್ಯವಸ್ಥಿತ ಜಾಲವೊಂದನ್ನು ಉಚಿತ ಕೊಡುಗೆ ಮತ್ತು ಬಹುಮಾನ ಕೂಪನ್ ಗಳ ಮೂಲಕ ಮಾಲ್ ಗಳು ನಗದೀಕರಿಸಿಕೊಳ್ಳುತ್ತವೆ. ಮಾಲ್ ಗಳು ನಗರೀಕರಣದ ಉತ್ಪನ್ನಗಳು. ವಾರದ ಒಂದು ನಿರ್ದಿಷ್ಟ ದಿನ ಜಾಹಿರಾತಿನೊಂದಿಗೆ ಸ್ಪರ್ಧಾ ದರದಲ್ಲಿ ಸಾಮಾನುಗಳನ್ನು ವಿಕ್ರಯಿಸಿ ಸ್ಟಾಕ್ ಮುಗಿಸುವುದು ಮತ್ತು ಮುಗಿಬೀಳುವ ಜನರಿಂದಾಗುವ ಹೆಚ್ಚುವರಿ ವ್ಯಾಪಾರದಿಂದ ಲಾಭವನ್ನೂ ಗಳಿಸುವುದು ಮಾರ್ಕೆಟಿಂಗ್ ವ್ಯವಹಾರದ ಶುದ್ಧಾಂಗ ಜಾಣ್ಮೆಯಾಗಿದೆ. ಈಸ್ಟ್ ಇಂಡಿಯಾ ಕಂಪೆನಿಗಳ ರೀತಿಯಲ್ಲಿ ಈ ಆಧುನಿಕ ಲಾಭಕೋರ ಕಂಪೆನಿಗಳು ಏನು ಮಾಡಹೊರಟಿದ್ದಾವೆ ಎಂಬುದನ್ನು ಈಗಲೇ ಹೇಳಲಾಗದು!

ತಲೆಮಾರಿನಿಂದ ತಲೆಮಾರಿಗೆ ಜನಪದದ (ಸಮಾಜದ) ಬದುಕಿನ ಕ್ರಮ ಬದಲಾಗುತ್ತಿದ್ದಂತೆ ವ್ಯವಹಾರದ ಸ್ವರೂಪಗಳು ಬದಲಾಗುತ್ತಿರುವುದಕ್ಕೆ ಮಾಲ್ ಸಂಸ್ಕೃತಿ ಒಂದು ಜ್ವಲಂತ ಉದಾಹರಣೆ. ಇವು ಸರಕು ಬದುಕಿನ ನಗರಸಂತೆಗಳಾಗಿ – ನಗರ ಜಾನಪದವಾಗಿ – ಮೂಡಿ ಬರುತ್ತಿರುವುದು ಚೋದ್ಯದ ಸಂಗತಿಯಾಗಿದೆ.


ಡಾ.ವಸಂತಕುಮಾರ ಪೆರ್ಲ


ನಮ್ಮ ನಡುವಿನ ಕ್ರಿಯಾಶೀಲ ಬರಹಗಾರ,ಚಿಂತಕ, ಸಂಶೋಧಕ,ವಿಮರ್ಶಕ,ಕವಿ ಡಾ. ವಸಂತ ಕುಮಾರ ಪೆರ್ಲ ಅವರ " ನಗರ ಜಾನಪದ ಮಾಲ್ ಎಂಬ ನಗರ ಸಂತೆಗಳು" ಎಂಬ ಅಂಕಣ ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ115 views0 comments

Comentarios


bottom of page