ಅಲಂಕಾರಗಳ ಕಿತ್ತೆಸೆದು
ಶಬ್ದಾರ್ಥಗಳ ನಗ್ನ
ಮುಕುರದೆದುರು
ನಕ್ಕಳೆ ಕವಿತೆ?
ಪ್ರತಿಮೆ ಪ್ರತೀಕಗಳ
ವಸನ ಹರಿದೊಗೆದ
ನಿರಾಡಂಬರ ವನಿತೆ
ಹೌದೇ ಈ ವನಿತೆ ?
ತಲೆಗೊಟ್ಟು ತೊಟ್ಟು
ತುರುಬು ನುಡಿಗಟ್ಟು
ಪದ ವೈಯ್ಯಾರದಲಿ
ತೂಗಿದಳೆ ಕವಿತೆ !
ಪೂರ್ಣವಿರಾಮ ಅಲ್ಪ
ಚಿನ್ಹೆಯಲಿ ವಿಸರ್ಗ ದು
ಸಿರು ಅನುನಾಸಿಕಕ್ಕೆ
ಡೆಯೇ ಈ ಕವಿತೆ
ಚಂಪೂ ರಗಳೆಗಳ ಸಾಂಗತ್ಯ
ತ್ರಿಪದಿ ನಡೆ
ಸಪ್ತಪದಿಗೊಂದು ಹೆಜ್ಜೆ
ಹಿಂದಿಟ್ಟಳೆ ಕವಿತೆ
ಕಂದಪದ್ಯವ ನುಡಿದು
ವಚನಪಾಲಿಸುತ
ಮುಕ್ತಛಂದಕ್ಕೆಳಸಿ ಮೈ
ತುಂಬಿದಳೆ ಕವಿತೆ
ಎಲ್ಲವೂ ಮುಕ್ತ ಮುಕ್ತ
ಸ್ತ್ರೀಲಿಂಗ ಪುಲ್ಲಿಂಗ ವೈ
ನೋದಿಕಕ್ಕೆ ನಪುಂಸಕ
ಚಾಟು ಚುಟುಕೇ ಕವಿತೆ
ಕ್ರೌಂಚ ಪಕ್ಷಿಯ ಸಾವು
ಹುತ್ತಗಟ್ಟುವ ವರೆಗೆ ಮರುಕ
ಮತ್ತೆ ಕಾಯುವಳೆ
ಸೀತೆ ಈ ಕವಿತೆ
ಗೆರೆ ದಾಟಿ ನಭಕ್ಕೆ
ಜಿಗಿವ ತವಕ ಆಗಾಗ
ಎಲ್ಲವನು ಬಿಟ್ಟು ನಡೆವ
ಜಾಯಮಾನ ಇದಕ್ಕೆ
----ಅಶೋಕ ಹಾಸ್ಯಗಾರ
. ಶಿರಸಿ
Comments