top of page

" ಧರ್ಮಯುದ್ಧ"

ನಾಡಿನ ಹಿರಿಯ ಕವಿ- ಕಾದಂಬರಿಕಾರರಾದ ಡಾ.ನಾ.ಮೊಗಸಾಲೆಯವರ ಹೊಸ ಕಾದಂಬರಿ

" ಧರ್ಮಯುದ್ಧ"ದ ಬಗೆಗೆ-


ಸ್ವಧರ್ಮ, ಮನಃಸಾಕ್ಷಿ ಮತ್ತು " ಧರ್ಮಯುದ್ಧ" ವೆಂಬ ಕಾದಂಬರಿ.


ಶೀರ್ಷಿಕೆ ಪ್ರಸಿದ್ಧವೂ ' ಚಾಲ್ತಿ'ಯಲ್ಲಿರುವುದು ಎಂದು ಯೋಚಿಸಿ ಅದಕ್ಕಿರುವ ಜನಪ್ರಿಯ ಅರ್ಥವಾದ ಎರಡು ಮತಗಳ ನಡುವಿನ ಕಲಹವೆಂದು ಕಾದಂಬರಿಯನ್ನು ಓದಲು ತೊಡಗಿದರೆ ಆಗ ನಮ್ಮ ಪೂರ್ವಗ್ರಹಿಕೆ ಇಲ್ಲಿರದು. ಕಾದಂಬರಿಯಲ್ಲಿ ಹೇಳಿದ "ಧರ್ಮಯುದ್ಧ" ನಮ್ಮ ಮನೆಗಳಲ್ಲಿ, ಊರುಗಳಲ್ಲಿ ಹೆಚ್ಚೇಕೆ ಮನಸ್ಸಿನಲ್ಲೇ ಆಗುವ ಭಾವಗಳ ತಾಕಲಾಟವಾಗಿ ಓದಿದ ಮೇಲೆ ಉಳಿಯುತ್ತದೆ. ' ಸೀತಾಪುರ' ವೆಂಬ ಊರು ಇಂಥ ತಲ್ಲಣಗಳಿಗೆ ದೇಶ-ಕಾಲದ ಚೌಕಟ್ಟನ್ನು ಒದಗಿಸಿದೆ ಎನ್ನಬಹುದು. " ಸೀತಾಪುರ" ಎನ್ನುವುದು "ಸಿಲೋನೂ "ಆಗಬಹುದು, "ಸಾಯನ್" ಆಗಬಹುದು ಅಥವಾ ಪ್ರಪಂಚದ ಯಾವ ಮೂಲೆಯ ಊರಾಗಿಯೂ ಪರಿವರ್ತಿತವಾಗಬಹುದಾದ ಸಾಧ್ಯತೆಯ ದ್ರವ್ಯವೇ ಕಾದಂಬರಿಯ ಮೂಲ ಧಾತು. ಶಾಸ್ತ್ರವನ್ನು ಕಲೆಯಾಗಿ ಕಾಣಬೇಕಾದರೆ ಡಿವಿಜಿ ರಾಜ್ಯಶಾಸ್ತ್ರವನ್ನು ವಿವೇಚಿಸುತ್ತಾ ಹೇಳಿದ ಮಾತಾದ " ಸಕಲ ಹೃದಯ ಸಹಾನುಭೂತಿ" ಬೇಕೇ ಬೇಕು. ಈ ಕಾದಂಬರಿಯಲ್ಲಿ ಕಾದಂಬರಿಕಾರನ ಸಕಲ ಹೃದಯ ಸಹಾನುಭೂತಿ ಕಾಣುತ್ತದೆ.


ಸೂರಪ್ಪನ ಮನೆಯ ಬಾವಿಗೆ ಬಿದ್ದು ಸತ್ತ ಕರಿಬೆಕ್ಕುಗಳೇ ಕಾರಣವಾಗಿ ಆರಂಭವಾಗುವ ಆತನ ಆತಂಕಗಳು ನಂಬಿಕೆ, ಧಾರ್ಮಿಕ ಚೌಕಟ್ಟು, ಜ್ಯೋತಿಷ್ಯ ಎಂಬ ನಮ್ಮೊಡನೆಯೇ ಇರುವ ಅಗೋಚರವಾದ ಜಾಲ ತನ್ನನ್ನು ತಾನು ಮನಃಸ್ಸಮಾಧಾನದ ಉದ್ದೇಶಕ್ಕಾಗಿ ಒಡ್ಡಿಕೊಂಡು, ಕೇಳು ಪಂಡಿತನೆಂಬ ಸೀತಾಪುರದ ಕೇರಳದ ಜ್ಯೋತಿಷಿಯ ಬಳಿ ' ಬಲಿಮೆ'ಗೆ ಅಂದರೆ ಫಲಜ್ಯೋತಿಷ್ಯ ಕೇಳಲು ಬಂದವನಿಗೆ ದೊರಕುವ ಪರಿಹಾರ "ಪಂಜುರ್ಲಿ" ದೈವಕ್ಕೆ ದೈವಸ್ಥಾನ ನಿರ್ಮಾಣವಾಗಬೇಕು ಎಂಬುದು. ಸ್ವಂತದ್ದಾದ ಕ್ಲೇಷ ಊರಿನದ್ದಾಗಿ ಬೆಳೆಯುತ್ತದೆ. ಆಚರಿಸುವ ಧರ್ಮ ರಾಜಕೀಯ ಮಹತ್ವಾಕಾಂಕ್ಷೆಗೆ ಊರುಗೋಲಾಗಿ ಪರಿವರ್ತಿತವಾಗುತ್ತದೆ. ಜಾನಪದ ನಂಬಿಕೆ ಆಚರಣೆಗಳು ವೈದಿಕ ಆಚರಣೆಗಳ ಜತೆಗೆ ಅನಿವಾರ್ಯವೋ ಅಥವಾ ವ್ಯಾವಹಾರಿಕವೋ ಎಂಬಂತೆ ಬೆರೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.


ಹೀಗೆ 'ಧರ್ಮಯುದ್ಧ' ಎಂಬುದು ಧರ್ಮದೊಳಗಿನ ಯುದ್ಧವಾಗಿಯೂ ( ಜಾನಪದ× ವೈದಿಕ - ಶ್ರೀಕಾಂತ ಭಟ್ಟರ ಮಾತುಗಳಲ್ಲಿ, ಕೇಳುಪಂಡಿತರ ಮಾತು ಮತ್ತು ಪೊದುವಾಳ್ ಮಾತು), ಸ್ವಧರ್ಮವಾಗಿ ಯಾವುದನ್ನು ಆಯಬೇಕೆಂಬ ಮನದ ಯುದ್ಧವಾಗಿಯೂ ( ನಿರಾಕಾರ ತತ್ತ್ವ× ಸಾಕಾರ ತತ್ತ್ವ- ಕೇಳುಪಂಡಿತ ಮತ್ತು ಸ್ವಾಮಿ ಮಾಸ್ಟ್ರು); ರಾಜಕಾರಣ ಹಾಗು ಧರ್ಮಕಾರಣ ಇವೆರಡೊಳಗಿನ ತಾಕಲಾಟಗಳಿಂದ ಅತ್ಯಂತ ಧ್ವನಿಪೂರ್ಣವಾಗಿ ಕಾದಂಬರಿಯನ್ನು ಚಿತ್ರಿಸಿದ್ದಾರೆ. ಇಲ್ಲಿ ಅದ್ವೈತ, ಬಸವ, ಆಗಮ, ಜಾನಪದ ತತ್ತ್ವಗಳ ವಿವೃತಿಗಳು ಪಾತ್ರಗಳ ಮೂಲಕ ಕಲೆಯ ಹದದೊಡನೆ ಚಿತ್ರಿಸಿದ್ದಾರೆ.


ಕಾದಂಬರಿಯ ವಸ್ತು ಅತ್ಯಂತ ಸೂಕ್ಷ್ಮವಾದದ್ದು ಮತ್ತು ಕಾದಂಬರಿಕಾರನ ಸಾಕ್ಷಿಪ್ರಜ್ಞೆಯಿಂದೊಡಗೂಡಿದ ಕಸುಬುಗಾರಿಕೆ ಇಲ್ಲಿ ಎದ್ದುತೋರುತ್ತದೆ. ಜನಪದವೋ , ವೈದಿಕವೋ, ನಾಸ್ತಿಕತೆಯೋ ಅಥವಾ ಆಸ್ತಿಕ್ಯವೋ ಇವೆಲ್ಲದರ ಜತೆಗೆ ನಮ್ಮ ಬದುಕಿರುವಾಗ ಆ ಶ್ರದ್ಧಾ ಪ್ರವಾಹದ ಜತೆಯಲ್ಲಿ ಸಾಗದಿರುವುದು ಅಸಾಧ್ಯವೆಂಬುದನ್ನು ವೆಂಕಪ್ಪ ಮಾಸ್ಟ್ರು ಮತ್ತು ಜಯರಾಮ ಹೆಗ್ಡೆಯವರನ್ನೇ ರೂಪಕವಾಗಿ ಕಾದಂಬರಿಕಾರರು ಕಟ್ಟಿಕೊಟ್ಟಿದ್ದಾರೆ- ಇದು ಮೊಗಸಾಲೆಯವರು ಸಾಕ್ಷಿಯಾಗಿ ಪಾತ್ರಗಳನ್ನು ಕಂಡ ಬಗೆಗೆ ನಿದರ್ಶನ. ತಾವೆಷ್ಟು ವೈಚಾರಿಕತೆಯಿಂದ ಕೂಡಿದ್ದರೂ ಸಮಷ್ಟಿಯಲ್ಲಿ ' ಸೀತಾಪುರ'ದ ಮಕ್ಕಳಾಗಿ ಹೆಗ್ಡೆಯವರನ್ನು, ವೆಂಕಪ್ಪ ಮಾಸ್ಟ್ರನ್ನು ಚಿತ್ರಿಸಿದ್ದು ಗಮನಿಸಬೇಕಾದದ್ದು.


ಸುಕ್ಕನ( ಸುಕುಮಾರನ್) ಕುಮ್ಮಕ್ಕಿನಿಂದ ಕರಿಬೆಕ್ಕುಗಳನ್ನು ಸೂರಪ್ಪನ ಮನೆಯ ಬಾವಿಗೆ ಹಾಕಿದ ರಾಗುವಿನ ಪಾತ್ರ ದೊಡ್ಡ ಮೌಲ್ಯವನ್ನು ತೋರುತ್ತದೆ. ಕಾದಂಬರಿಯ ಆರಂಭದಲ್ಲಿ ಸುಕ್ಕನನ್ನು ಸಂತೋಷಗೊಳಿಸುವ ಆತನ ಚೇಲನಂತೆ ಕಂಡರೂ ಕಾದಂಬರಿ ಬೆಳೆಯುತ್ತಾ ಹೋದಾಗ ಪಾತ್ರದ ಗಾಂಭೀರ್ಯ ಕಾದಂಬರಿಯ ಕೇಂದ್ರ ಪ್ರಜ್ಞೆಯ ಪ್ರತೀಕದಂತೆ ಪ್ರಕಾಶವಾಗುತ್ತದೆ.


ರಾಗುವಿಗೆ ಕನಸಲ್ಲಿ ಪಂಜುರ್ಲಿ ದೈವ ಬಂದು-

" ನೀನು ಮತ್ತೆ ಮೂರುಬೆಕ್ಕನ್ನು ಸೂರಪ್ಪನ ಬಾವಿಗೆ ಹಾಕಿ, ನಾನು ಎದ್ದು ನಿಂತು ಕಾರಣಿಕ ತೋರಲು ಕಾರಣನಾಗಿರುವೆ. ನಿನಗೆ ಇಂಥಾ ಬುದ್ಧಿಯನ್ನು ಕೊಟ್ಟದ್ದು ನಾನೇ, ಇದಕ್ಕಾಗಿ ನಾನು ನಿನ್ನ ಮತ್ತು ಸುಕ್ಕಣ್ಣನ ಮನಸ್ಸಿನಲ್ಲಿ ಬಂದೆ. ಅವನ ಮೂಲಕ ಹೀಗೆ ಮಾಡು ಎಂದು ಆಜ್ಞಾಪಿಸಿದೆ…" ಎಂದು ಹೇಳಿದರೂ ಮುಂದೆ ತನ್ನ ಅಂತಃಸ್ಸಾಕ್ಷಿಯ ಪ್ರೇರಣೆಯಂತೆ ತಾನು ಮಾಡಿದ್ದು ಅಪರಾಧವಾಯ್ತು ಎಂದೂ " ಪಂಜುರ್ಲಿ ಗುಡ್ಡೆ"ಯಲ್ಲಿ ಯಾವ ದೈವವೂ ಇಲ್ಲವೆಂದು ಕಾಯೇನ ವಾಚಾ ಮನಸಾ ನಂಬಿ ಊರವರ ದೃಷ್ಟಿಯಲ್ಲಿ ಹುಚ್ಚನಂತೆ ಕಾಣುವ ಈ ಪಾತ್ರದ ಕಟ್ಟಕಡೆಯ ಮೌಲ್ಯಮರ್ಯಾದೆ ಮನಮುಟ್ಟುವಂಥದ್ದು.

"ರಾಗಣ್ಣ ಬಡಕ್ಕನೆ ಎದ್ದು ' ಏನಾಗಿದೆ ನಿನಗೆ ? ನನ್ನನ್ನು ನನ್ನ ಸಂಸಾರವನ್ನು ಮುಟ್ಟುವ ಧೈರ್ಯ ಆ ಪಂಜುರ್ಲಿಗೆ ಖಂಡಿತ ಇಲ್ಲ!' ಎಂದು ಚೀರಿದ‌" ಎಂದು ತನ್ನ ಹೆಂಡತಿ ಕೊರೊಪ್ಪೊಳುವಿಗೆ ಹೇಳುವ ರಾಗುವಿನ ಧೃತಿ ಮುಖ್ಯವಾಗುತ್ತದೆ.


ಕಾದಂಬರಿಕಾರರು ದಕ್ಷಿಣಕನ್ನಡದ ಜಾನಪದ ನಂಬಿಕೆ, ಆಚರಣೆ ಮತ್ತು ನಡವಳಿಕೆಗಳನ್ನು ಕಾದಂಬರಿ ನಿರ್ಮಾಣದ ಸಮಯದಲ್ಲಿ ಬೇಕಾದ ಪಾಕಕ್ಕೆ ಸಮುಚಿತವಾಗಿ ಬಳಸಿಕೊಂಡಿದ್ದಾರೆ. ಕಟ್ಟದ ಕೋಳಿಗಳ ವಿವರ, ಅವುಗಳ ನಡವಳಿಕೆ, ಓಲೆಬೆಲ್ಲದ ತಯಾರಿಕೆ, ಕಳ್ಳ ಭಟ್ಟಿಯ ತಯಾರಿಕೆ ಹೀಗೆ ಅನೇಕ ಆಸಕ್ತಿದಾಯಕ ವಿವರಗಳು ಇಲ್ಲಿವೆ.


ಸಮಾಜಿಕವಾಗಿ ವ್ಯಕ್ತಿಯೊಬ್ಬ ಈಗಾಗಲೇ ಗಣ್ಯನಾಗಿದ್ದು ಆತನ ಮತ್ತು ಆತನ ಮನೆಯವರ ನಡವಳಿಕೆ ಹಾಗು ಧಿಡೀರನೆ ಗಣ್ಯನಾದವನ ಮನೆಯವರ ನಡವಳಿಕೆಯಲ್ಲಿರುವ ವ್ಯತ್ಯಾಸಗಳನ್ನೂ ಸೂಕ್ಷ್ಮ ದೃಷ್ಟಿಯಲ್ಲಿ ಅವಲೋಕಿಸಿರುವುದು ಕಾದಂಬರಿಯಲ್ಲಿ ಬಂದಿರುವುದು ಗಮನೀಯ. ಸೇಸಪ್ಪ ಸೀತಾಪುರ ಗ್ರಾಮ ಪಂಚಾಯತ್ ಅಧ್ಯಕ್ಷನಾದದ್ದು ಹೆಗ್ಡೆಯವರ ಬೆಂಬಲದಿಂದ. ಸೂರಪ್ಪ, ಕೇಳು ಪಂಡಿತ ಮತ್ತು ಇತರರ ಜತೆಗೂಡಿ ಸೇಸಪ್ಪನ ಮನೆಗೆ ಪಂಜುರ್ಲಿ ದೈವದ ಗುಡಿಯ ವಿಚಾರವಾಗಿ ಮಾತನಾಡಲು ಬರುವ ಸಮಯದಲ್ಲಿ ಅತಿಥಿ ಉಪಚಾರದ ಸಮಯದಲ್ಲಿ ಸೇಸಪ್ಪನ ಹೆಂಡತಿ " ಮನೆಯವರಿಗೆ ಬೇಕಾದಷ್ಟು ಹಾಲನ್ನು ತೆಗೆದಿಟ್ಟು ಉಳಿದದ್ದನ್ನು ಹೋಟೆಲಿಗೆ ಕೊಟ್ಟಾಗಿದೆ" ಎನ್ನುವುದರಲ್ಲೂ ಮತ್ತು " ಲಿಂಬೆ ಗಿಡದಲ್ಲಿದೆ, ಸೂರಪ್ಪ ತಂದು ಕೊಟ್ಟಾನು " ಎಂದು ಸೇಸಪ್ಪ ಹೇಳುವಲ್ಲೂ ; ಹೆಗ್ಡೆಯವರ ಮಡದಿ ಕೊಡುವ ಅತಿಥಿ ಉಪಚಾರ ಕ್ರಮವನ್ನೂ ಸೂಕ್ಷ್ಮವಾಗಿ ಅವಲೋಕನಮಾಡಿದ ಕ್ರಮ ಹೃದ್ಯವಾದದ್ದು. ಇದು ಸಾರ್ವತ್ರಿಕವೆಂದೇನೂ ಅಲ್ಲ. ಆದರೆ ಕಾದಂಬರಿಕಾರ ಒಂದು ಕಲಾಕೃತಿಯನ್ನು ನಿರ್ಮಾಣಮಾಡುವ ಸಂದರ್ಭ ಇದ್ದ ಸೂಕ್ಷ್ಮ ದೃಷ್ಟಿ ಮುಖ್ಯವಾದದ್ದು.


ಕಾದಂಬರಿಯುದ್ದಕ್ಕೂ ದಕ್ಷಿಣಕನ್ನಡದ್ದೇ ವಿಶಿಷ್ಟವಾದ ವಾಗ್ರೂಢಿಗಳು ತುಂಬಿದ್ದು ಓದುವಾಗ ಖುಷಿಕೊಡುತ್ತದೆ- " ತುಂಬಾ ಅಂದ್ರೆ ತುಂಬಾ ಒಳ್ಳೆಯ ಮನುಷ್ಯ" , " ಮತ್ತೇ.." ( ಮತ್ತೇನು ಸಮಾಚಾರ ಎಂದು); "ತಂಬಿಲ", "ತಮ್ಮನ", "ವರಾಡುವಂತಿಗೆ" ಮುಂತಾದವುಗಳು.

ಬಿ.ಜನಾರ್ದನ ಭಟ್ ಮತ್ತು ಮೊಗಸಾಲೆ ಇವರು ದ.ಕದ ವಾಗ್ರೂಢಿಗಳನ್ನು ಕಲಾತ್ಮಕವಾಗಿ ಬಳಸಿಕೊಂಡು ಸಾಹಿತ್ಯ ಕೃಷಿ ಮಾಡುತ್ತಾರೆಂಬುದು ಗಮನಿಸಬೇಕು.


ಒಂದೆ ಶಬ್ಧವನ್ನು ( ಕವಡೆ) ಅದರ ಬಳಕೆಯಲ್ಲಿ ಭಿನ್ನ ಅರ್ಥ ಬರುವಂತೆ ಬಳಸಿದುದು-

" ಮೊನ್ನೆಯೇ ನಾನು ಕೇಳುಪಂಡಿತರಲ್ಲಿ ಹೋಗಿ ಕವಡೆ ಪ್ರಶ್ನೆ ( ಜ್ಯೋತಿಷ್ಯ) ಕೇಳಿ ಬನ್ನಿ ಎಂದಿದ್ದೆ. ನನ್ನ ಮಾತಿಗೆ ಈ ಮನೆಯಲ್ಲಿ ಬೆಲೆ ಏನುಂಟು? ಕವಡೆ ಕಿಮ್ಮತ್ತೂ ಇಲ್ಲ."


ಕಾದಂಬರಿಯ ಕೊನೆಗೆ ಪಂಜುರ್ಲಿ ದೈವದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಓದುವಾಗ ಜಾನಪದ- ವೈದಿಕ ಮಿಶ್ರಣದ ಅಸಂಗತ ಚಿತ್ರಣ ಮೂಡಿ ನಗುಬರುತ್ತದೆ. ಜತೆಗೆ ನಮ್ಮ ಭಾರತೀಯ ಸಮಾಜದ " ಒಳಗೊಲ್ಳುವಿಕೆ" ಎಂಬ ಸಂವೇದನೆಯೂ ವಿಸ್ಮಯಾವಹ. ಆದರೂ ಸಮಾಜ- ಬದುಕು ಇವೆಲ್ಲಾ ಅಸಂಗತ ವಿಚಾರ ಸಂದರ್ಭಗಳನ್ನು ಒಳಗೊಂಡು ಮುಂದುವರಿಯುತ್ತಿದೆಯಲ್ಲಾ ಎಂಬ ಅಚ್ಚರಿಯೂ ಮೂಡುತ್ತದೆ.


ಕಾದಂಬರಿಯ ಅಂತ್ಯ ಸುಕ್ಕ ಮತ್ತು ಶೇಷಪ್ಪರ ರಾಜಕೀಯ ಮಹತ್ತ್ವಾಕಾಂಕ್ಷೆಯ ಹಿನ್ನೆಲೆಯ ಜಗಳದೊಂದಿಗೆ ಕೊನೆಯಾಗುತ್ತದೆ. ಮುಖ್ಯ ಕಲಶಾಭಿಷೇಕದ ಕುಂಭವನ್ನು ಯಾರು ಪುರೋಹಿತರಿಗೆ/ ತಂತ್ರಿಗಳಿಗೆ ಕೊಡಬೇಕು ಅನ್ನುವ ವಿಚಾರದಲ್ಲಿ ವೈಮನಸ್ಯ ಉಂಟಾಗಿ ಪಂಜುರ್ಲಿ ದೈವಕ್ಕೆ ಕಲಶಾಭಿಷೇಕ ನಡೆಯದೇ ಹೋಗುತ್ತದೆ. ರಾಗು ಹೆಜ್ಜೇನಿನ ಗೂಡಿಗೆ ಬಿಸುಟ ಕಲ್ಲಿನ ಕಾರಣ ಎಲ್ಲರಿಗೂ ಜೇನುಹುಳ ಕಡಿಯುವಲ್ಲಿ ಪರ್ಯವಸಾನವಾಗುತ್ತದೆ.


ಈ ಪ್ರಸಂಗ ಸೃಷ್ಟಿಸದೆಯೇ ಪಂಜುರ್ಲಿ ದೈವದ ಪ್ರತಿಷ್ಠೆ ಆಗಿರುತ್ತಿದ್ರೂ ಕಾದಂಬರಿ ಓದುಗನಿಗೆ ಬಿಟ್ಟುಕೊಡುವ ಧ್ವನಿ ಹಾಗೇ ಇರುತ್ತಿತ್ತು.


ಕೃಷ್ಣಪ್ರಕಾಶ ಉಳಿತ್ತಾಯ

ಈಶಾವಾಸ್ಯ

ಸದಾಶಿವ ದೇವಸ್ಥಾನದ ಬಳಿ

ಪೆರ್ಮಂಕಿ

ಮಂಗಳೂರು

574145

Ph.7760356424

7 views0 comments

Comments


bottom of page