ವಿಶೇಷ ಪ್ರಯೋಗಾತ್ಮಕ ಅಭಿಲಾಷೆ ಹೊತ್ತ ಚಿತ್ರಗಳನ್ನು ನಿರ್ಮಾಣ ಮಾಡಿದವರು ದ್ವಾರಕೀಶ್.ಭಾರತೀಯ ಚಿತ್ರರಂಗ ಕಂಡ ದಿಗ್ಗಜ ಕಲಾವಿದರ ಸಾಲಿಗೆ ಸೇರುವ ಡಾ.ರಾಜ ಕುಮಾರ್,ಅಮಿತಾಬ್ ಬಚ್ಚನ್, ರಜನಿಕಾಂತ್,ಶಿವಾಜಿ ಗಣೇಶನ್, ವಿಷ್ಣುವರ್ಧನ್,ಶಂಕರ್ ನಾಗ್ ಮೊದಲಾದವರನ್ನು ತಮ್ಮ ನಿರ್ಮಾಣದ ಚಿತ್ರದಲ್ಲಿ ಬಳಸಿಕೊಂಡ ಅಗ್ರಕೀರ್ತಿ ದ್ವಾರಕೀಶ್ ಅವರಿಗೆ ಸಲ್ಲುತ್ತದೆ. ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ವಿದೇಶದಲ್ಲಿ ಚಿತ್ರೀಕರಣವನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರರಾದವರು.
ತಮಿಳಿನಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಎಂಬ ಎರಡು ನಟರು ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಗಳಿದ್ದಂತೆ ಇದ್ದವರು. ರಜನಿಕಾಂತ್ ಪಕ್ಕ ಆಕ್ಷನ್ ಹೀರೋ.ಕಮಲ್ ಹಾಸನ್ ರೋಮ್ಯಾಂಟಿಕ್ ಮತ್ತು ಸಾಂಸಾರಿಕ ಚಲನಚಿತ್ರಗಳಿಂದ ಹೆಸರಾದವರು.
ಕನ್ನಡದಲ್ಲಿ ಚಿತ್ರಗಳನ್ನ ನಿರ್ಮಿಸಿ ನಿರ್ದೇಶಿಸಿ ಪ್ರಖ್ಯಾತಿಗಳಿಸಿದ್ದ ದ್ವಾರಕೀಶ್ ರವರಿಗೆ ತಮಿಳು ಚಿತ್ರರಂಗವು ಕೂಡ ಕೈಬೀಸಿ ಕರೆಯಿತು. ಕಮಲ್ ಹಾಸನ್ ರವರ ಡೇಟ್ ತೆಗೆದುಕೊಳ್ಳಬೇಕೆಂದು ಅವರ ಮನೆಗೆ ಹೋದಾಗ "*ಇದೇನ್ ಸರ್ ನಿಮ್ಮೂರ್ ಅವನೇ ನೀವೇ ಬೆಳೆಸಿದ್ ಹುಡುಗ ಮದ್ರಾಸಿಗೆ ಬಂದು ಬಾವುಟ ಹಾರಿಸಿದ್ದಾನೆ.ನೀವು ಅವನತ್ರ ಹೋಗೋದು ಬಿಟ್ಟು ನನ್ನತ್ರ ಬಂದಿದ್ದೀರಲ್ಲ* " ಎಂದು ಕುಹಕ ನಗೆಯ ಮೂಲಕ ಕೊನೆಗಂಡ ಕಮಲ್ ಹಾಸನ್ ರವರ ಮಾತು ದ್ವಾರಕೀಶ್ ಅವರಿಗೆ ತುಂಬಾ ಮನಸ್ಸಿಗೆ ನೋವುಂಟು ಮಾಡಿತು.ಅದನ್ನೇ ಸ್ವಾಭಿಮಾನವಾಗಿ ಸ್ವೀಕರಿಸಿ ನೇರವಾಗಿ ರಜನಿಕಾಂತ್ ಮನೆ ಹತ್ತಿರ ಹೊರಡುತ್ತಾರೆ ನಟ ದ್ವಾರಕೀಶ್. ವಿಷಯ ಪ್ರಸ್ತಾಪಿಸಿದಾಗ ಆರಂಭದಲ್ಲಿ ರಜನಿಕಾಂತ್ ಡೇಟ್ ಕೊಡಲು ಮುಂದಾಗುವುದಿಲ್ಲ.ಬಳಿಕ ಮನ ಒಪ್ಪಿಸಿ ಚಿತ್ರ ನಿರ್ಮಾಣವನ್ನು ಮಾಡುತ್ತಾರೆ.ಅದಾಗಲೇ ರಜನಿಕಾಂತ್ ಅವರಿಗೆ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿದ್ದ ಖ್ಯಾತ ನಿರ್ದೇಶಕ ಮುತ್ತು ರಾಮನ್ ರವರನ್ನೇ ಬಳಸಿಕೊಳ್ಳುತ್ತಾರೆ. ಹೀಗೆ ಕನ್ನಡದಲ್ಲಿ ಯಶಸ್ವಿ ನಿರ್ಮಾಪಕ ಎಂದು ಹಣೆಪಟ್ಟಿ ಹೊತ್ತಿದ್ದ ದ್ವಾರಕೀಶ್ ರವರು ಚೆನ್ನೈನ ನೆಲದಲ್ಲೂ ಮನೆ ಮಾತಾಗಿದ್ದು ಇತಿಹಾಸ.
ಇಂದು ಕೆಜಿಎಫ್ ಕಾಂತಾರ ಚಲನಚಿತ್ರಗಳಿಂದ ಕನ್ನಡ ಚಿತ್ರರಂಗದ ಮಾರುಕಟ್ಟೆ ತುಂಬಾ ಎತ್ತರದ ಸ್ಥಾನಕ್ಕೆ ಬೆಳೆದಿದೆ. ಆದರೂ ಬಾಲಿವುಡ್ ಮತ್ತು ತಮಿಳು ಚಿತ್ರಕ್ಕೆ ಹೋಲಿಸಿದರೆ ಕನ್ನಡದಲ್ಲಿ ಚಿತ್ರ ನಿರ್ಮಾಣಕ್ಕೆ ಹೂಡಿಕೆ ಮಾಡುವಂತಹ ಬಜೆಟ್ ತುಂಬಾ ಕಡಿಮೆ. ಹೀಗಿದ್ದಾಗಲೂ 48ರಿಂದ 50 ಲಕ್ಷ ರೂಪಾಯಿ ಆಪ್ತರಿಂದ ಸಾಲ ತಂದು ತಮಿಳಿನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದಂತಹ ವಿಭಿನ್ನ ಸಾಹಸಿ ದ್ವಾರಕೀಶ್ ಇನ್ನು ನೆನಪು ಮಾತ್ರ..
ದಕ್ಷದಿಗ್ಗಜ ನಿರ್ದೇಶಕ ಸಿದ್ದಲಿಂಗಯ್ಯನವರ ಪುತ್ರರಾದ ಮುರಳಿ ಅವರ ನಟನೆಯ ಪುದುವಸಂತಮ್ ಎಂಬ ತಮಿಳು ಚಿತ್ರವನ್ನು ನೋಡಿ ತುಂಬಾ ಇಷ್ಟ ಪಟ್ಟಿದ್ದ ದ್ವಾರಕೀಶ್ ರವರು ಆ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಲು ಮುಂದಾಗುತ್ತಾರೆ.
ಈ ಚಿತ್ರಕ್ಕೆ ಹೊಸಬರ ಪರಿಚಯ ಆಗ್ಬೇಕು, ಹೊಸ ಪ್ರತಿಭೆಗಳು ಇದ್ರೆ ಮಾತ್ರ ಈ ಚಿತ್ರ ಯಶಸ್ವಿಯಾಗತ್ತೆ ಎಂದು ಹೊಸ ನಟನ ಹುಡುಕಾಟದಲ್ಲಿದ್ದ ದ್ವಾರಕೀಶ್ ರ ಕಣ್ಣಿಗೆ ಬಿದ್ದಿದ್ದು ಹೀಗಿದೆ
ಆಪ್ತರಿಂದ ಒಬ್ಬ ಪಾತ್ರಧಾರಿ ಸಿಕ್ಕಿದ್ದಾರೆ ಎಂಬ ಸುದ್ದಿ ದ್ವಾರ್ಕೀಶ್ ಗೆ ತಲುಪುತ್ತದೆ. ಅಶೋಕ ಹೋಟೆಲ್ ನಲ್ಲಿ ನನ್ನನ್ನು ಭೇಟಿ ಮಾಡಬೇಕು ಅಂತ ಫೋನ್ ಕರೆ ಮೂಲಕ ತಿಳಿಸುತ್ತಾರೆ. ತಮ್ಮ ಹೆರಾಲ್ಡ್ ಕಾರ್ ನಲ್ಲಿ ಅಶೋಕ ಹೋಟೆಲ್ ಮುಂದೆ ದ್ವಾರ್ಕೀಶ್ ಬಂದು ಇಳಿದಾಗ " *ನಮಸ್ಕಾರ ಸರ್*" ಅಂತ ಒಬ್ಬ ಹುಡುಗ ಬಂದು ನಮಸ್ಕಾರ ಮಾಡ್ತಾನೆ. ಆತ ನಮಸ್ಕಾರ ಮಾಡಿದ್ದಷ್ಟೇ. ಮುಂದೆ ನಡೆದಿದ್ದೆಲ್ಲ ಇತಿಹಾಸ. ಅವರು ಬೇರೆ ಯಾರು ಅಲ್ಲ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣವನ್ನು ಒಪ್ಪಿದ ಉಡುಪಿ ಜಿಲ್ಲೆಯ ಬಾರ್ಕೂರಿನ ನಟ ಸುನಿಲ್ ಮೂಲ ಹೆಸರು ರಾಮಕೃಷ್ಣ. ಹೀಗೆ ದ್ವಾರಕೀಶ್ ರವರು ರಂಗ ಕಲಾವಿದರಾಗಿ, ನಿರ್ದೇಶಕರಾಗಿ,ನಿರ್ಮಾಪಕರಾಗಿ, ಹಾಸ್ಯ ನಟರಾಗಿ,ನಾಯಕ ನಟರಾಗಿ ತಮ್ಮದೇ ಆದ ಹೊಸ ಬ್ಯಾನರ್ ನ ಸಂಸ್ಥಾಪಕರಾಗಿ ಗೆದ್ದು ಬಿದ್ದು ಪುನಃ ಗೆದ್ದು ಬಿದ್ದು ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿರುವ ವಿಶಿಷ್ಟ ಪ್ರತಿಭೆ.
*ನೀನು ಹೀರೋ ಆಗುವುದಕ್ಕೆ ಲಾಯಕ್ಕಿಲ್ಲ* *ಏಕೆಂದರೆ ನಿನ್ನ ಮುಖ ಗೋಲ,ನಿನ್ನ ಮೂಗು ಸೊಟ್ಟ, ನೀನು ಕುಳ್ಳ*.. ಎಂದು ಚೇಡಿಸಿದ ತಂದೆಯ ಮಾತನ್ನೇ ಸವಾಲಾಗಿ ಸ್ವೀಕರಿಸಿ ಈ ಮೂರು ನ್ಯೂನತೆಗಳನ್ನು ಇಟ್ಟುಕೊಂಡು ಆ ಮೂರು ನ್ಯೂನತೆಗಳನ್ನು ಚಿತ್ರದ ಪಾತ್ರದಲ್ಲಿ ಕಲ್ಪಿಸಿ ಅದನ್ನು ಅನುಭವಿಸಿ ಅಭಿನಯಿಸಿದವರು ದ್ವಾರಕೀಶ್..
*ನಿತಿನ್ ನಾಯ್ಕ್*
ಅಂಕೋಲಾ.
ಓದು ಅಧ್ಬಯಯನ ರವಣಿಗೆ ಒಡನಾಟ ತಿರುಗಾಟ ಸಾಹಿತಿಗಳ,ಚಲನಚಿತ್ರ ನಟರ ಸಾಹಚರ್ಯದಿಂದ ಉಲ್ಲಸಿತರಾಗಿ ಬರವಣಿಗೆಯಲ್ಲಿ ಆಸಕ್ತರಾಗಿರು ನಿತಿನ್ ನಾಯ್ಕ ಅಂಕೋಲೆಯ ಉತ್ಸಾಹಿ ಯುವಕ. ವೃತ್ತಿಯಲ್ಲಿ ಎಂಜಿನಿಯರ ಆಗಿರುವ. ಅವರು ಪ್ರವೃತ್ತಿಯಲ್ಲಿ ಬರಹಗಾರರು. ನಮ್ಮನ್ನು ಅಗಲಿದ ಬೆಳ್ಳಿತೆರೆಯ ನಟ ನಿರ್ಮಾಪಕ ದ್ವಾರಕೀಶ ಅವರ ಬಗ್ಗೆ ನಿತಿನ್ ಬರೆದ ಲೇಖನ ನಿಮ್ಮ ಓದು ಮತ್ತು ಸಹ ಸ್ಪಂದನಕ್ಕಾಗಿ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
Comments