top of page

ದ್ವಿಪದಿಗಳು

ಯಾರನ್ನಾದರೂ ಏನ ಕೇಳುವುದಿದೆ? ಕೇಳಲು ಉಳಿದಿರುವುದಾದರೂ ಏನು ನೀನೇ ಇಲ್ಲದ ಮೇಲೆ! * ಹತ್ತು ದಿಕ್ಕಿಗೂ ಹುಡುಕಾಡಿದೆ ಹುಚ್ಚನಂತೆ ಹಿಡಿದ ಹುಚ್ಚು ಮತ್ತಷ್ಟು ಗಟ್ಟಿಯಾಯಿತು ನೀ ಕಾಣದೆ * ಎದುರಾದವರೆಲ್ಲಾ ದಿಟ್ಟಿಸಿ ನೋಡಿ ಹೋಗುತ್ತಿದ್ದಾರೆ ನೀನು ನನ್ನ ಕಣ್ಣೊಳಗೇನಾದರೂ ಅವಿತುಕೊಂಡಿರುವೆಯಾ?? * ರೆಪ್ಪೆ ಮುಚ್ಚಿದರೆ ಕಡಲು ಉಕ್ಕಿ ಹರಿವುದು ಹಾಯಿ ದೋಣಿಯ ಬಟ್ಟೆ ಆಕಾಶವ ಹೊದ್ದಿದೆ * ಮರಗಿಡಗಳೂ ಮೌನ ತಾಳಿವೆ ಜೀವವಿರದ ಈ ದೇಹ ದಿಗಿಲುಗೊಂಡಿದೆ * ಬೆಳ್ಳಕ್ಕಿ ಯಾಕೋ ಮುಗಿಲಕಡೆ ನೋಡುತಿದೆ ಈಗತಾನೇ ನೀನು ನಭಕೆ ಹಾರಿಕೊಂಡಂತೆ ಕಾಣುತಿದೆ * ಒಂಟಿತನಕೆ ಯಾಕಿಷ್ಟು ಆತಂಕ? ನೀನು ಕೊಟ್ಟ ಪ್ರೀತಿಯ ಸವಿಮುತ್ತು ಇದ್ದ ಕಾಲಕ್ಕೂ * ಹಗಲನೇಗೋ ಕಳೆದುಬಿಡುವೆ ಬೆಳಕಿನ ಜೊತೆಗೂಡಿ ಇರುಳು ನಿನ್ನ ನೆನಪ ಹೆಣವ ತಂದು ಸುರಿಯುತಿದೆ ಅಂಗಳಕೆ * ನೀನಲ್ಲದೆ ಚಂದಿರ ಉರಿವ ಸೂರ್ಯನಿಗೂ ಮಿಗಿಲಾಗಿರುವ ಅವನ ಬೆಳದಿಂಗಳ ಬೆಂಕಿ ಕನಸುಗಳ ಸುಟ್ಟು ಕೇಕೆ ಹಾಕಿದೆ * ವಿ.ಹರಿನಾಥ ಬಾಬು ಸಿರುಗುಪ್ಪ ಉಪ ನಿರ್ದೇಶಕರು ಜಿಲ್ಲಾ ಖಜಾನೆ ರಾಯಚೂರು

 
 
 

Comments


©Alochane.com 

bottom of page