ತುಂಬ ವಿವಾದಗಳಿವೆ
ವಾಗ್ವಾದಗಳಿವೆ
ಹರಿಯುತ್ತಿದೆ ಚಿಂತನೆಗಳ ಮಹಾಪೂರ
ಚಿತ್ತವ ಭಂಗಗೊಳಿಸುವ ಈ ಒಳಹರಿವುಗಳ ನಡುವೆ
ಇರುವುದು ಹೇಗೆ ನಾನು ನಾನಾಗಿಯೇ.
ಹೇಗೆ ಹರಿತಗೊಳ್ಳುವುದು
ಹೇಗೆ ನನ್ನ ನೆಲೆಯಲ್ಲಿ ನಾನು ನಿಲ್ಲುವುದು
ಮತ್ತು ನವೋನವಕ್ಕೆ ಸಾಗುವುದು
ಅರಳಿ ವಿಕಾಸವಾಗುವುದು.
ಇದೆ ಒಂದೇ ಒಂದು ಹಾದಿ
ನಿನ್ನ ಇಂದ್ರಿಯಗಳ ಮುಚ್ಚಿಕೊಳ್ಳುವುದು
ಏಕತ್ರ ಧ್ಯಾನಸ್ಥನಾಗಿ ನೆಲೆಗೊಳ್ಳುವುದು
ಆಲದಂತೆ ವಿಶಾಲವಾಗುವುದು.
ಒಳಗೆ ಬೆಳೆದರೆ ಸಾಕು
ಬೀಜದ ಹಾಗೆ
ಅದಕ್ಕೇ ಗರ್ಭಗುಡಿಯಲ್ಲಿ ಮಂದ ಬೆಳಕು
ಮತ್ತು ನಿಶ್ಶಬ್ದ.
ಆಗ ನೆಲಕ್ಕೂ ನಭಕ್ಕೂ ಸಲ್ಲುವುದು ಸುಲಭ
ಪಾರಿಜಾತದ ಹಾಗೆ ದಿವವಾಗುವುದು ಮುಖ್ಯ.
-ಡಾ. ವಸಂತಕುಮಾರ ಪೆರ್ಲ.
コメント