top of page

ದೇವದೀಪ- ಗಣಪತಿ ಕೊಂಡದಕುಳಿ

ನಮ್ಮ ನಡುವಿನ ಭರವಸೆಯ ಕವಿ ಕಲಾವಿದ ಅಪಾರವಾದ ಜೀವನ ಪ್ರೀತಿಯ ವ್ಯಕ್ತಿ ಗಣಪತಿ ಕೊಂಡದಕುಳಿ ಅವರ "ದೇವ ದೀಪ" ಕವನ ಸಂಕಲನದ ಬಗ್ಗೆ ಬಹುಶ್ರುತರು ನಮ್ಮ ಆಲೋಚನೆ.ಕಾಂ ಪತ್ರಿಕೆಯ ಹಿತೈಷಿಗಳು ಆದ ಶ್ರೀ ಎಲ್.ಎಸ್.ಶಾಸ್ತ್ರಿ ಅವರು ಬರೆ ಕೃತಿ ಪರಿಚಯ ನಿಮ್ಮ ಓದು ಮತ್ತು‌ ಸಹಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ‌‌‌‌‌‌ ಕೃತಿ ಪರಿಚಯ


ದೇವದೀಪ ಹಚ್ಚಿದ ಗಣಪತಿ ಕೊಂಡದಕುಳಿ

***********************************

ನಿತ್ಯ ಸತ್ಯದ ಹುಡುಕಾಟದಲ್ಲಿರುವ ಗಣಪತಿ ಹೆಗಡೆ ಕೊಂಡದಕುಳಿಯವರು ಹೆಚ್ಚು ಬರೆಯುವವರಲ್ಲ, ಆದರೆ ಬರೆದಷ್ಟನ್ನು ಚೆನ್ನಾಗಿ ಬರೆಯುವವರು. ಹಿಂದೆ ಇವರ " ಮರುಳ ಮನುಜನ ಮರ್ಮರ" ಕೃತಿಯನ್ನು ನಾನು ಓದಿ ಅದರ ಬಗ್ಗೆ ಬರೆದಿದ್ದುಂಟು. ಭಾಷೆಯ ಮೇಲಿನ ಅವರ ಹಿಡಿತ ಮತ್ತು ವೈಚಾರಿಕ ಚಿಂತನೆಯನ್ನೊಳಗೊಂಡ ಅವರ ಕಗ್ಗ ನನಗೆ ಮೆಚ್ಚುಗೆಯಾದ ಅಂಶ.

ಇದು ಅವರ ನಾಲ್ಕನೆಯ ಕೃತಿ. ಇದರಲ್ಲಿ ಕಾವ್ಯದ ಹಲವು ಪ್ರಕಾರಗಳನ್ನು ಹಿಡಿದಿಟ್ಟಿದ್ದಾರೆ. ಕವನಗಳು, ಮುಕ್ತಕಗಳು, ಹನಿಗವನಗಳು, ಚುಟುಕುಗಳು, ಮಕ್ಕಳ ಕವಿತೆಗಳು , ಅಲ್ಲದೆ ಕಥನಕವನಗಳನ್ನು ಸಹ ಒಳಗೊಂಡ ಈ ಕೃತಿ ಅವರ ಕಾವ್ಯಾಸಕ್ತಿ ಮತ್ತು ಬದುಕಿನ ಅನುಭವಗಳನ್ನು ಸಮೀಕರಿಸಿಕೊಂಡು ಹೊರಬಂದ ರಸಘಟ್ಟಿ ಎಂದೆನ್ನಬಹುದು. ವ್ಯಾಪಾರ ವೃತ್ತಿಯನ್ನು ಅವಲಂಬಿಸಿಕೊಂಡು, ಯಕ್ಷಗಾನವನ್ನು ಹವ್ಯಾಸವಾಗಿರಿಸಿಕೊಂಡು, ಆಗಾಗ ಲೇಖನಿಗೆ ಕೈ ಹಾಕುವ ಗಣಪತಿ ಕೊಂಡದಕುಳಿ ಅವರು ಸಾಹಿತ್ಯದ ಇತರ ಪ್ರಕಾರಗಳಲ್ಲಿಯೂ ಕೈಯಾಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಅತ್ತ ಮನಸ್ಸು ಮಾಡಿದರೆ ಅವರು ಉತ್ತಮ ಕೃತಿಗಳನ್ನು ನೀಡಬಲ್ಲರು. ಏಕೆಂದರೆ ಅಧ್ಯಯನವಿಲ್ಲದೆ, ಭಾಷೆಯ ಮೇಲೆ ಯಾವ ಹಿಡಿತವೂ ಇಲ್ಲದೆ , ಬರೆದದ್ದೆಲ್ಲ ಕಾವ್ಯ ಎಂದು ಭ್ರಮಿಸುವವರೇ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಕೊಂಡದಕುಳಿಯವರ ಕಾವ್ಯದ ಗಟ್ಟಿತನ, ಶಬ್ದಗಳ ಕುಸುರಿ ಕೆಲಸ ಮಾಡುವ ರೀತಿ ಅಪರೂಪದ್ದೇ ಸರಿ.

ಕರದೊಳಗೆ ಚರವಾಣಿ ಹೊರಜಗದ ಪರಿವಿಲ್ಲ

ಕರಿನಾಗ ಕಡಿದರೆಚ್ಚರವಿರದ ಸ್ಥಿತಿಯು

ಬರಿಯವರದೇ ಲೋಕ ಸರಿತೂಕ ಸಮನಾಕ

ಸುರೆ ಚರಸ್ಸಿನ ಲೋಕ - ಮರುಳ ಮನುಜ.

ಚರವಾಣಿಯ ಕುರಿತಾಗಿಯೇ ಕೆಲವು ಚುಟುಕು ಬರೆದ ಅವರಿಗೆ ಅದರ ಒಳಿತಿನ ಬಗ್ಗೆ ಸಹ ಅರಿವಿದೆ. ಅದಕ್ಕೇ "ಒಳಿತು ಕೆಡಕುಗಳೆಲ್ಲ ಮಿಳಿತಗೊಂಡಿಹುದಿಲ್ಲಿ" ಎನ್ನುತ್ತಾರೆ. ಮನುಷ್ಯ ಹಲವು ಬಗೆಯ ಒತ್ತಡಗಳಲ್ಲಿ ಬದುಕುತ್ತಿದ್ದಾನೆ. ಅದನ್ನು ಅವರು-

" ಸೊಗ ಸರಸ ಮಾತುಕತೆ ಸಿಗ ಹಿತದ ತನುಸ್ಪರ್ಶ

ಸಿಗದೊತ್ತಡದ ನಡುವೆ ಸಮಯವಿದಕೆಲ್ಲ

ಮೃಗಜಲದ ತೊರೆಗೆ ಹರಿಗೋಲನಿಟ್ಟಂತಹುದು

ಮಿಗೆ ನೀನು ಬಯಸಲದ- ಮರುಳ ಮನುಜ

ಎನ್ನುತ್ತಾರೆ.

ಹೊರಗೆ ಬೆರೆಯದೆ ದೂರ ದೂರ ನಿಂತಿರುವ ಮರ

ಧರೆಯೊಳಗೆ ಬೇರುಗಳ ಬಳಸಿ ತಬ್ಬುವುದು

ಹೊರಹೊರಗೆ ಹುಸಿ ನಗುತ ತಬ್ಬಿ ಮುದ್ದಿಪ ನರನು

ಉರಿವನೊಳಗೊಳಗಿಂದ - ಮರುಳ ಮನುಜ

ಎಂದು ಮಾನವ ಸ್ವಭಾವವನ್ನು ವಿಶ್ಲೇಷಿಸುತ್ತಾರೆ.

ಧರ್ಮದ ಬಗ್ಗೆ ವ್ಯಾಖ್ಯಾನಿಸುತ್ತ-

ಕೆಡುಕಿಲ್ಲ ಒಳಿತೆ ತುಂಬಿಹುದೆಲ್ಲ ಧರ್ಮದಲಿ

ಕೆಡುಕು ಕೊಳಕುಗಳೆಲ್ಲ ಮಾನವನ ಮನದೊಳಗೆ

ಎನ್ನುತ್ತಾರೆ. ಬದುಕಿನ ಹಲವು ಮಗ್ಗುಲುಗಳಲ್ಲಿ ಈ ಮರುಳ ಮನುಜ ಯೋಚಿಸುತ್ತಾನೆ. ಇದು ದೇವದೀಪವಷ್ಟೇ ಅಲ್ಲ, ದಾರಿದೀಪವೂ ಹೌದು. ಬರೀ ಒಂದಿಷ್ಟು ಅಕ್ಷರ ಶಬ್ದಗಳೇ ಕಾವ್ಯವಲ್ಲ. ಶಬ್ದಕ್ಕೆ ವಿಚಾರಕ್ಕೆ ರಸಭಾವ ಸ್ಪರ್ಶವಾಗುವುದು ಮತ್ತು ಶಬ್ದಗಳನ್ನು ಅರ್ಥಪೂರ್ಣವಾಗಿ ಬಳಸುವುದು ಬಹಳ ಮುಖ್ಯ. ಕೊಂಡದಕುಳಿಯವರಲ್ಲಿ ಕಾವ್ಯವೆಂದರೇನೆಂಬ ಕಲ್ಪನೆಯೂ ಇದೆ. ಸಂಗಡ ಶಬ್ದಸಂಪತ್ತಿನ ಸಮರ್ಪಕ ಬಳಕೆಯ ಸಾಮರ್ಥ್ಯವೂ ಇದೆ. ಉತ್ತಮ ಕಾವ್ಯವಾಗುವುದೇ ಹಾಗೆ. ಅವರು ಇನ್ನಷ್ಟು ಬರೆಯಲಿ, ಹಲವು ಪ್ರಕಾರಗಳಿಗೆ ತಮ್ಮನ್ನು ವಿಸ್ತರಿಸಿಕೊಳ್ಳಲಿ. ಓದುಗರಿಗೆ ಅವರು ನೀಡಬೇಕಾದ್ದು ಸಾಕಷ್ಟಿದೆ ಎಂದು ನಾನು ಭಾವಿಸಿಕೊಂಡಿದ್ದೇನೆ. ಅವರ ಪತ್ನಿ ಕಮಲಾ ಕೊಂಡದಕುಳಿಯವರೂ ಕವಯಿತ್ರಿಯೇ. ಕಾವ್ಯಪ್ರಿಯರು ಇದನ್ನು ಮುದ್ದಾಂ ತರಿಸಿಕೊಂಡು ಓದಬೇಕು. ಅವರ ಮೊ. ನಂ.9980888268

ಅವರ ಮುಂದಿನ ದಾರಿಗೆ ಶುಭ ಕೋರುತ್ತ ಈ ದೇವದೀಪವನ್ನು ಸ್ವಾಗತಿಸುತ್ತೇನೆ.


- ಎಲ್. ಎಸ್. ಶಾಸ್ತ್ರಿ

28 views0 comments

Comments


bottom of page