ಎಡ ಬಲ ಪಾದಗಳು
ತಾ ಮುಂದು ತಾ ಮುಂದು
ಎನುತ ಬುದ್ದಿ ಮಾತ ಕೇಳಿ
ಹೊರಟಿವೆ ನೋಡು ದೂರ
ದಾರಿಯಲ್ಲಿ ಸಿಕ್ಕಿಬಿಡು ದೇವ
ನಿನಗೊಂದಿಷ್ಟು ಕಥೆ ಹೇಳುವುದಿದೆ....
***
ಇದೋ ಇಲ್ಲಿ ನಮ್ಮ ದಾರಿ ಆರಂಭ
ನೋಡಿ ನಡೆ ಮಲ ಮೂತ್ರಗಳ
ಮೆಟ್ಟಿದೊಡೆ
ಇಲ್ಲಿ ನಿನಗೆ ಶುಚಿಗೊಳಿಸಲು
ಎಳೆನೀರಿನ ಅಭಿಷೇಕವಿಲ್ಲ
ಇರುವ ಒಂದು ಬಾವಿಯೋ, ಕೆರೆಯೋ
ಅಪೂರ್ಣ ಕಾಮಗಾರಿಯಲ್ಲಿವೆ.....
***
ಇದೋ ಇಲ್ಲಿ ಭತ್ತ
ಅಲ್ಲಿ ಹೊನ್ನು, ಅಲ್ಲಿ ನೌಕರಿ
ಮತ್ತೆ ಅದೋ ಕೇಶರಾಶಿ
ಅಲ್ಲಿ ಮಡಿಕೆ ಅಲ್ಲಿ ಜೀತ
ಮಾಟ ಮಂತ್ರಗಳ ಮೀನು
ಮಾಂಸ ಇತ್ಯಾದಿಗಳಿಹವು
ತಲೆಕೆಡಿಸಿಕೊಳ್ಳದಿರು
ಅವೆಲ್ಲವೂ ನಾವೇ ರಚಿಸಿಕೊಂಡಿದ್ದು
ಅವೆಲ್ಲವಕ್ಕೂ ಉಪ ಕಥೆಯಿದೆ....
****
ಇದೋ ನಿನಗೂ ಇಲ್ಲಿ ಬಂದಾಗ
ವಿರಮಿಸಲು ಇಲ್ಲಿ ಮಂದಿರ
ಅಲ್ಲಿ ಚರ್ಚ್ ಮತ್ತೆ ಮಸೀದಿಗಳೂ ಇವೆ
ಕೇಲವೆಡೆ ನಿನಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಟ್ಟಿಹರು
ನಿನ್ನ ನೀ ಗುರುತಿಸಿಕೊಳ್ಳುವಾಗ
ಗಲಿಬಿಲಿಯಾಗಬೇಡ....
***
ಅವನದು ಕಾಲಿಲ್ಲ
ಇವನಿಗೆ ಕಣ್ಣಿಲ್ಲ
ಅವಳು ಮೂಕಿ
ಮತ್ತವಳು ವಿಧವೆ
ಅನಾಥೆ, ಅಸ್ವಸ್ಥ, ರೋಗಿ,
ಹುಚ್ಚ, ಕುಂಟ, ಭಗ್ನಪ್ರೇಮಿ, ವೇಶ್ಯೆ ಇವರೆಲ್ಲರಿಗೂ ಈ
ಅವಕಾಶ ನಿನದೋ...?
***
ದಯಮಾಡಿ ಕ್ಷಮಿಸಿಬಿಡು
ನನ್ನ ಕಥೆ, ಪ್ರಶ್ನೆ ಅನಂತ
ನಿನ್ನ ಪ್ರಶ್ನಿಸಿದ್ದಕ್ಕೆ ನಾನೊಬ್ಬ
ಶೂನ್ಯಸ್ತ, ನಾಸ್ತಿಕನೆಂದು
ಜರೆವವರಿದ್ದಾರೆ..
ನೀ ಕರೆದರೆ ಮಂದಿರ, ಮಸೀದಿ,
ಚರ್ಚ್ ಗಳ ಗಡಿದಾಟಿ ಬರುವೆ
ಒಮ್ಮೆ ನಿನ್ನಿರವ ತೋರು
ಕೊನೆಗೂ ಹೇಳುವುದು ನಾನಿಷ್ಟೇ
ನಿನ್ನ ಇರುವಿಕೆ ನನಗೆ ಪ್ರಶ್ನೆಯಲ್ಲ..ನಾನೂ ಆಸ್ತಿಕ,..
ಆದರೆ ನನ್ನ ಪ್ರಶ್ನೆಯೇ ಬೇರೆ...
-ಮೋಹನ ಗೌಡ, ಹೆಗ್ರೆ

ಮೋಹನ್ ಗೌಡ, ಹೆಗ್ರೆ, ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹೆಗ್ರೆ ಗ್ರಾಮದವರು. ವೃತ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಇವರು ಓದು-ಬರಹಗಳಲ್ಲಿ ಅಪಾರ ಆಸಕ್ತಿ ಹೊಂದಿದವರು. ಈಗಾಗಲೇ ಅವರ ಕವನ ಮತ್ತು ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಮಾಜ ಮುಖಿಯಾಗಿ ಚಿಂತಿಸುವ ಇವರ ಬರವಣಿಗೆಯ ದಾಟಿ ಹೊಸ ಭರವಸೆಯನ್ನು ಹುಟ್ಟಿಸುತ್ತದೆ. ಅವರ ಈ ಕವನ ತಮ್ಮ ಓದಿಗಾಗಿ -ಸಂಪಾದಕ