ಲೇನೆ ಕೊ ಹರಿನಾಮ ಹೈ, ದೇನೆ ಕೊ ಅನ್ನದಾನ/
ತರನೆ ಕೊ ಹೈ ದೀನತಾ, ಬುಡನ ಕೊ ಅಭಿಮಾನ//
ಜಪಿಸಲಿಕಿದೆ ಹರಿನಾಮ, ಕೊಡಲು ಅನ್ನದಾನ/
ಬದುಕಲು ಬೇಕು ವಿನಯ, ನಾಶಕ್ಕೆ ದುರಭಿಮಾನ//
ಮಾನವ ಜನ್ಮವೆತ್ತಿ ಬಂದು ಮೌಲ್ಯಯುತ ಬದುಕು ನಡೆಸಿದಾಗ ನಮ್ಮ ಹುಟ್ಟಿಗೆ ಸಾರ್ಥಕತೆ ಲಭಿಸೀತು. "ಆನೋ ಭದ್ರಾ ಕೃತವೊ ಯಂತು ವಿಶ್ವತಃ" ಎಂಬ ಋಗ್ವೇದದ ಉಕ್ತಿಯಂತೆ, ಸುವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ಬರಲಿ ಎಂಬ ನಂಬಿಕೆ ನರನಿಗೆ ನಾರಾಯಣನಾಗುವ ದಾರಿ ತೋರಿಸುತ್ತವೆ. ಆಸ್ತಿ, ಒಡವೆ, ಸಂಪತ್ತು ಬಯಸುವ ಬದಲು ಹರಿನಾಮ, ಸುವಿಚಾರಗಳನ್ನು ಸ್ವೀಕರಿಸಿದಾಗ ಅದೇ ನಮ್ನ ಬಾಳಿಗೆ ಭದ್ರ ಬುನಾದಿಯಾದೀತು. 'ಅನ್ನದಾನಕ್ಕಿಂತ ಇನ್ನು ದಾನಗಳಿಲ್ಲ' ಎಂಬ ಜ್ಞಾನಿಗಳ ನುಡಿಯಂತೆ, ಹಸಿದವನಿಗೆ ನೀಡಿದ ಅನ್ನ ಭಗವಂತನ ನೈವೇದ್ಯಕ್ಕೆ ಸಮನಾದೀತು. ಸಂತ ಕಬೀರರ, ವಿನಯದಿಂ ಬದುಕು ಎಂಬ ಸಂದೇಶ ಅತ್ಯಂತ ಪ್ರಮುಖ- -ವಾದದ್ದು. ಲೌಕಿಕ ಪ್ರಪಂಚದ ಸೆಳೆತಕ್ಕೆ ಸಿಲುಕಿದ ಮನುಷ್ಯ, ಹಣ ಸಂಗ್ರಹದಲ್ಲಿ ತನ್ನನ್ನೇ ಮರೆತು ಅಹಂಕಾರ ಮನೆ ಮಾಡಬಾರದು.
ಅಧಿಕಾರ, ಅಂತಸ್ತು ಶಾಶ್ವತವಲ್ಲ ಎಂಬುದು ಸಾರ್ವಕಾಲಿಕ ಸತ್ಯವಾದರೂ ಅದನ್ನು ಅರಿಯದ ರಾಜ, ಮಹಾರಾಜರು ಮಣ್ಣು ಮುಕ್ಕಿದ ದೃಷ್ಟಾಂತ ನಮ್ಮ ಕಣ್ಣ ಮುಂದಿದೆ. ನಾಶಕ್ಕೆ ಬೇರೇನೂ ಬೇಡ, ಅವನ ದುರಭಿಮಾನವೇ ಸಾಕು!
ಅತಿ ದರ್ಪದಲಿ ಹತನಾದ ಲಂಕಾಪತಿ
ಗತಿಗೆಟ್ಟರು ದುರಹಂಕಾರದಿ ಕೌರವರು /
ಮಿತಿಮೀರಿದ ಧಾಷ್ಟ್ಯಕ್ಕೆ ಕಂಸ ಬಲಿಯಾದ
ಅತ್ಯಾಭಿಮಾನ ಸಲ್ಲದು - ಶ್ರೀವೆಂಕಟ //
ಸರ್ವಗುಣ ಸಂಪನ್ನ, ಪ್ರಕಾಂಡ ಪಂಡಿತ, ಬಲಶಾಲಿ ರಾವಣ, ತಾನೊಬ್ಬನೇ ಶ್ರೇಷ್ಠ ಎಂಬ ಅಹಂಕಾರ- -ದಿಂದ ನಾಶವಾದ. ನಮ್ಮಬಗ್ಗೆ ನಮಗೆ ಅಭಿಮಾನ ಇರಬೇಕು, ದುರಭಿಮಾನ ಸಲ್ಲದು. ಇದೇ ರೀತಿ ಕೌರವರು, ಕಂಸ ಮತ್ತು ಅನೇಕ ಚಕ್ರವರ್ತಿಗಳು ಬಲಶಾಲಿಗಳಾಗಿದ್ದರೂ ಅಹಂಕಾರದ ದಳ್ಳುರಿಯಲ್ಲಿ ಸುಟ್ಟು ಭಸ್ಮೀಭೂತರಾದರು. ವಿನಯದ ನಡೆ ಮಾನವನನ್ನು ಎತ್ತರದ ಸ್ಥಾನಕ್ಕೆ ಒಯ್ಯುತ್ತದೆ.
ಕಬೀರರು, ಭಗವಂತನ ನಾಮಸ್ಮರಣೆ, ಸಾತ್ವಿಕ ನಡೆ - ನುಡಿಗಳು, ಸದ್ವಿಚಾರಗಳು ಸ್ವೀಕಾರಾರ್ಹ. ಜೊತೆಗೆ ಅನ್ನದಾನ, ನಮ್ರತೆ ಮನುಷ್ಯನ ವ್ಯಕ್ತಿತ್ವಕ್ಕೆ ಕಳಶ -ವಿಟ್ಟರೆ, ದುರಭಿಮಾನ ಸರ್ವನಾಶಕ್ಕೆ ಕಾರಣ ಎಂದು ಎಚ್ಚರಿಸಿದ್ದಾರೆ. ಸೆಟೆದು ನಿಂತ ಮರ ಬಿರುಗಾಳಿಗೆ ಮುರಿದೀತು, ಫಲಹೊತ್ತ ಮರ ಬಾಗುತ್ತ ಬದುಕೀತು..! ಎಲ್ಲರೊಂದಿಗೆ ಸ್ನೇಹಭಾವ, ಪ್ರೀತಿ, ವಿಶ್ವಾಸಗಳೊಂದಿಗೆ ನಡೆದರೆ, ಬದುಕಿನಲ್ಲಿ ಸುಖ, ಸಮಾಧಾನಗಳು ಮನೆ ಮಾಡುವದರಲ್ಲಿ ಎರಡು ಮಾತಿಲ್ಲ.
ಶ್ರೀರಂಗ ಕಟ್ಟಿ ಯಲ್ಲಾಪುರ.
Comments