top of page

ದೀಪಾವಳಿ ಎಂದರೆ . . . .

Updated: Jun 25, 2020

ದೀಪಾವಳಿ ಎಂದರೆ ಏನೆಂದು ಕೇಳಿದೆ


ಹಚ್ಚಿಟ್ಟ ಆ ಹಣತೆ ದೀಪವನ್ನು.


ನಕ್ಕು ಅದೆಂದಿತು ನಾನೇ ದೀಪಾವಳಿ


ಹಾಗೆಯೆ ಕೆಲ ಕಾಲ ಬಿಟ್ಟು ಹೋಗಿ ನೋಡಿದೆ


ಎಣ್ಣೆ ಆರಿ ಹಣತೆಯ ದೀಪ ಮೌನವಾಗಿತ್ತು.


***


ರಸ್ತೆ ಬೀದಿಗಳಲ್ಲಿ ದೊಡ್ಡ ದೊಡ್ಡ ಶಬ್ದ ಮಾಡುವ


ಪಟಾಕಿ, ಸುರಬತ್ತಿಗಳನ್ನು ಕೇಳಿದೆ.


ಅವು ತಾವೇ ದೀಪಾವಳಿ ಎಂದು


ಚಿಮ್ಮನೆ ನೆಗೆಯುತ್ತ ಕಣ್ಣಿಗೆ ಕಾಣದೆ


ಆಕಾಶದಲ್ಲಿ ಮಾಯವಾದವು.


****


ರಸ್ತೆಯಲ್ಲಿ ಘನ-ಗಾಂಭೀರ್ಯದೊಂದಿಗೆ ಹೊರಟ


ಹೊಸದಾಗಿ ಖರಿದಿಸಿದ ಕಾರನ್ನು ಕೇಳಿದೆ.


ಹಬ್ಬದ ಉಡುಗೊರೆಯ ರೂಪದಲ್ಲಿ


ಅವತರಿಸುವ ನಾನೇ


ದೀಪಾವಳಿಯಲ್ಲದೆ ಮತ್ತೇನು?


ಅಪಘಾತದಲ್ಲಿ ಸಿಕ್ಕ ಆ ಕಾರು


ಒಂದು ದಿನ ರಸ್ತೆಯ ಬದಿಯ ಗ್ಯಾರೆಜಿನಲ್ಲಿ


ನಿಂತುದ ಕಂಡೆ.


****


ರಸ್ತೆಯ ಆಚೀಚೆ ಬೆಳಕಿನ ರಂಗು ರಂಗಿನಲ್ಲಿ ಮೆರೆವ


ಅಂಗಡಿಗಳಲ್ಲಿ ಗಿರಾಕಿಗಳಿಗೆ ಕಾದು ನಿಂತ


ಹೊಸ ಬಟ್ಟೆ-ಬಂಗಾರಗಳನ್ನು ಕೇಳಿದೆ.


ಅಯ್ಯೋ ಮಂಕೆ! ದೀಪಾವಳಿಯೆಂದರೆ ನಾವಲ್ಲದೆ ಮತ್ತಾರು?


ಬಟ್ಟೆ-ಬಂಗಾರಗಳ ತೊಟ್ಟು ಹೊರಟ ಮುಖಗಳಲ್ಲಿ


ಅಹಂಕಾರ, ಅಸೂಯೆಗಳ ಅಬ್ಬರಗಳ ಕಂಡೆ.


*****


ಹಾಗೆಯೆ ಕೈಯಲ್ಲಿದ್ದ ಮೊಬೈಲ್ ತೆರೆದು


ನೋಡಿದಾಗ ಬಣ್ಣ ಬಣ್ಣದ ಮೆಸೇಜುಗಳು


ಎಲ್ಲಿಂದಲೋ ಹಾರಿಬಂದು ಒಳಸೇರಿದವು.


ಮೊಬೈಲು ತೆರೆದವನು ನೋಡಿ ಮುಚ್ಚಿಟ್ಟು


ಹಾಗೆಯೇ ಸುಮ್ಮನೆ ಕುಳಿತೆ.


*****


ಇದ್ದಕಿದ್ದಂತೆ ಪ್ರೀತಿ ಇಲ್ಲದ ಮೇಲೆ


ಎಂಬ ಕವಿ ಜಿ.ಎಸ್.ಎಸ್ ರವರ ಹಾಡು ನೆನಪಾಯಿತು


ಮುಚ್ಚಿದ ಕಪಾಟಿನೊಳಗೆ ಎಂದೋ ಇಟ್ಟ


ಆ ಪುಸ್ತಕದ ಪುಟವನ್ನು ತೆರೆದು


ಆ ಕವನವನ್ನು ಮತ್ತೊಮ್ಮೆ ಓದತೊಡಗಿದೆ.


- ಶ್ರೀಪಾದ ಹೆಗಡೆ, ಸಾಲಕೋಡ


ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಧಿಕಾರಿಯಾಗಿ ನಿವೃತ್ತಿಯಾದ ಶ್ರೀಪಾದ ಹೆಗಡೆ, ಸಾಲಕೊಡ ಇವರುತಮ್ಮ ಬಾಲ್ಯದ ದಿನಗಳಿಂದಲೂ ಸಾಹಿತ್ಯಾಸಕ್ತಿಯನ್ನು ಹೊಂದಿದವರು. ಕತೆ, ಹರಟೆ,ಲಲಿತ ಪ್ರಬಂಧ, ಕಾವ್ಯ, ನಾಟಕ,ವಿಮರ್ಶೆ ಮುಂತಾದಸಾಹಿತ್ಯ ಪ್ರಭೇಧಗಳಲ್ಲಿ ಬರವಣಿಗೆಯ ಮೂಲಕ ಕಳೆದ ನಾಲ್ಕು ದಶಕಗಳಿಂದ ತೊಡಗಿಕೊಂಡ ಇವರ ಕತೆ, ಪ್ರಬಂಧ, ಕವಿತೆಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಕತೆಗಳಿಗೆ ಬಹುಮಾನಗಳು ಸಂದಿವೆ. ‘ಬೆಕ್ಕಿನ ಮೀಸೆ’ ಎಂಬ ಅವರ ಕಥಾ ಸಂಕಲನ ಪ್ರಕಟವಾಗಿದೆ. ಹಾಸ್ಯವನ್ನು ಸ್ಥಾಯಿಭಾವವಾಗಿ ತಮ್ಮ ಬರೆಹಗಳಲ್ಲಿ ನೆಲೆಗೊಳಿಸಿ ಮಾನವೀಯ ವಿಚಾರಗಳನ್ನುಪ್ರಸ್ತುತಿ ಪಡಿಸುವದು ಅವರ ಬರೆಹದ ವೈಶಿಷ್ಟ್ಯ. ನಮ್ಮ ಪತ್ರಿಕೆಯ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ- ಸಂಪಾದಕ


Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

3 Comments


ತಮ್ಮ ನುಡಿಗೆ ನನ್ನ ನಮನ.

Like

sunandakadame
sunandakadame
Jun 30, 2020

ದೀಪಾವಳಿ ಹಬ್ಬದ ನೆಪದಲ್ಲಿ ಹಲವು ಸಂಗತಿಗಳು ಮೈದಾಳುತ್ತ, ಏಕದಲ್ಲಿ ಅನೇಕವನ್ನು ಹಿಡಿದಿಡುತ್ತ ನಿಜಕ್ಕೂ ದೀಪಾವಳಿಯ ಅರ್ಥವನ್ನು ಯಾವ ಒಂದೇ ಸಂತೋಷಕ್ಕೆ ಮಿಳಿತಗೊಳಿಸದೇ ವಿಸ್ತ್ರುತ ಭಾವದಲ್ಲಿ ಹೇಳುವ ಶೈಲಿ ಚೆನ್ನಾಗಿದೆ ಸರ್.

Like

ಆಲೋಚನೆಯತ್ತ ಸಹೃದಯ ಓದುಗರು ಆಲೋಚಿಸುವುದನ್ನು ಕಂಡಾಗ ತುಂಬಾ ಸಂತೋಷವೆನಿಸುತ್ತದೆ. ಡಾ.ಶ್ರೀಪಾದ ಶೆಟ್ಟರ ಈ ಪ್ರಯತ್ನಕ್ಕೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.

Like

©Alochane.com 

bottom of page