top of page

ದಿನದಿನದಹೊಟ್ಟೆ ಹೊರೆಯುವ ಕಾಲಾಳುಗಳು


ವಸಂತೋಕ್ತಿ – 5
ದಿನದಿನದ ಹೊಟ್ಟೆ ಹೊರೆಯುವ ಕಾಲಾಳುಗಳು!

ಅಪ್ಪ ಮಾಡಿಟ್ಟದ್ದನ್ನು ಮಗ ಕಳೆಯುವುದು ಎಂಬ ಗಾದೆ ಮಾತು ಅದೆಷ್ಟು ಸತ್ಯ! ಹಿಂದಿನ ಸರಕಾರಗಳು ಇಡೀ ನಾಡಿನ ಅಭ್ಯುದಯಕ್ಕಾಗಿ ಜತನದಿಂದ ಕ್ರೋಢೀಕರಿಸಿ ಇಟ್ಟಿದ್ದ ಸಂಪನ್ಮೂಲವನ್ನು ಈ ಕಾಂಗ್ರೆಸ್ ಸರಕಾರವು ಎಗ್ಗಿಲ್ಲದೆ ಉಚಿತವಾಗಿ ಹಂಚುವುದರ ಮೂಲಕ ರಾಜ್ಯವು ಪತನದಂಚಿಗೆ ಬಂದು ನಿಲ್ಲುವಂತೆ ಮಾಡಿಕೊಂಡಿದೆ.

ಹುಚ್ಚುಮುಂಡೆ ಮದುವೆಯಲ್ಲಿಉಂಡವನೇ ಜಾಣ ಎಂಬಂತೆ ಜನಗಳು ಮುಗಿಬಿದ್ದು ಈ ಬಿಟ್ಟಿಗಳನ್ನು ಪಡೆದುಕೊಳ್ಳುತ್ತ ಕೆಲಸ ಮಾಡುವುದನ್ನೇ ಮರೆತುಬಿಟ್ಟಿದ್ದಾರೆ. ಸತ್ಪಾತ್ರರಿಗಲ್ಲದೆ ಉಳಿದ ಯಾರಿಗೇ ಆದರೂ ಬಿಟ್ಟಿ ಯಾಕೆ ಕೊಡಬೇಕು? ಅದೊಂದು ಸ್ವಾರ್ಥ ತಾನೇ? ಇಲ್ಲಿನ ಸ್ವಾರ್ಥ ಎಂದರೆ ಅಧಿಕಾರಗ್ರಹಣ!

1947 ರಿಂದ, ಅಂದರೆ ಸ್ವಾತಂತ್ರ್ಯ ಬಂದಂದಿನಿಂದಲೂ ಸರಕಾರವು ಕಲ್ಯಾಣರಾಜ್ಯ ಸ್ಥಾಪನೆಯ ಪ್ರಯತ್ನ ಮಾಡುತ್ತ ಬಂದಿತು. ‘ಕಲ್ಯಾಣ’ದ ಪರಿಕಲ್ಪನೆಯು ಎಲ್ಲಿಯವರೆಗೆ ಬಂತೆಂದರೆ ಎಲ್ಲವನ್ನೂ ಸರಕಾರವೇ ಮಾಡುತ್ತ ಮೂಗಿಗಿಂತ ಮೂಗುತಿ ಭಾರವಾಗಿ ಪರಿಣಮಿಸಿತು. ಸಂಪನ್ಮೂಲದ ಶೇ. 80 ಭಾಗ ಜನಕಲ್ಯಾಣ ಮತ್ತು ಇತರೇ ಆಡಳಿತ ವೆಚ್ಚಗಳಿಗಾಗಿ ಮುಗಿದು ಅಭಿವೃದ್ಧಿಕಾರ್ಯಗಳಿಗೆ ಶೇ. 20 ಭಾಗ ಮಾತ್ರ ಉಳಿಯುವಂತಾಯಿತು. ಾದರಲ್ಲೂ ಭಾಗಾಳುಗಳು ತಿಂದು ಶೇ. 10 ಭಾಗ ಮಾತ್ರ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗವಾಗುತ್ತಿತ್ತು. ಅಂದರೆ ನೂರು ಕೋಟಿಯಲ್ಲಿ ಕೇವಲ ಹತ್ತು ಲಕ್ಷದಷ್ಟು ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಹೋಗುತ್ತಿತ್ತು. ಇಂತಹ ಸನ್ನಿವೇಶದಲ್ಲಿ ಯಾವುದೇ ದೇಶ ಪ್ರಗತಿ ಸಾಧಿಸಲು ಸಾಧ್ಯವೇ?

ಇದನ್ನು ಮನಗಂಡು 1991 ರಲ್ಲಿ ಪಿ. ವಿ. ನರಸಿಂಹರಾವ್ ಪ್ರಧಾನಿಯಾಗಿ ಮತ್ತು ಮನಮೋಹನಸಿಂಗ್ ಅರ್ಥಸಚಿವರಾಗಿದ್ದಾಗ ಭಾರತವನ್ನು ವಿಶ್ವದ ಇತರೇ ರಾಷ್ಟ್ರಗಳೊಂದಿಗೆ ಸರಿದೊರೆಯಾಗಿ ನಿಲ್ಲಿಸಬೇಕೆಂಬ ಇರಾದೆಯಿಂದ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿ ಕೈಗಾರಿಕೀಕರಣ, ವಾಣಿಜ್ಯೀಕರಣ ಮತ್ತು ಖಾಸಗೀಕರಣ ಎಂಬ ನೀತಿಯನ್ನು ತರಲಾಯಿತು. ನಮ್ಮ ಜನರು ಕೆಲಸ ಮಾಡಿ ತಮ್ಮ ಕೌಶಲಗಳನ್ನು ವೃದ್ಧಿಸಿಕೊಂಡು ಉತ್ಪಾದಕ ಪ್ರವೃತ್ತಿ ಹೊಂದಬೇಕು ಮತ್ತು ವಿಶ್ವದ ಎದುರು ಸಮರ್ಥವಾಗಿ ತಲೆಯೆತ್ತಿ ನಿಲ್ಲಬೇಕು ಎಂಬುದು ಆಶಯವಾಗಿತ್ತು. ಇನ್ನು ಮುಂದೆ ಜನರಿಗೆ ಚಮಚದಲ್ಲಿ ತಿನ್ನಿಸುವುದು ಬೇಡ, ಅವರ ಆಹಾರವನ್ನು ಅವರೇ ದುಡಿದು ಸಂಪಾದಿಸಿಕೊಳ್ಳಲಿ, ಮೂಲಸೌಕರ್ಯಗಳನ್ನು ವೃದ್ಧಿಸಿ, ಪೂರಕ ವಾತಾವರಣ ನಿರ್ಮಿಸಿಕೊಟ್ಟರೆ ಸಾಕು ಎಂಬ ನಿರ್ಧಾರಕ್ಕೆ ಅವರು ಬಂದಿದ್ದರು.

ಕಳೆದ ಮೂವತ್ತೆರಡು ವರ್ಷಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿತು. ನಮ್ಮ ದೇಸೀತನ ಎಲ್ಲೆಡೆ ವಿಜೃಂಭಿಸತೊಡಗಿತು. ನಮ್ಮ ಕೊಶಲ ಮತ್ತು ಉತ್ಪಾದನೆಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯತೊಡಗಿತು.

ಇನ್ನೇನು ಆ ಹಾದಿಯಲ್ಲಿ ಮುನ್ನಡೆದು ಇನ್ನೊಂದು ದಶಕದಲ್ಲಿ ದೇಶ ಗುರಿ ಮುಟ್ಟಬೇಕು ಅನ್ನುವಾಗ, ಅದೇ ಕಾಂಗ್ರೆಸಿಗರು ಪಿ. ವಿ. ನರಸಿಂಹರಾವ್ ಮತ್ತು ಮನಮೋಹನಸಿಂಗರ ಆಶಯವನ್ನು ಹೊಳೆಯಲ್ಲಿ ಹುಣಸೆಹಣ್ಣಿನಂತೆ ಕಿವುಚಿ, ಜನಗಳಿಗೆ ಬಿಟ್ಟಿಭಾಗ್ಯಗಳನ್ನು ನೀಡುತ್ತ ದೇಶವನ್ನು ಮೂವತ್ತು ವರ್ಷ ಹಿಂದಕ್ಕೆ ತಳ್ಳಿಬಿಟ್ತರು! ತಮ್ಮವರೇ ಮಾಡಿದ ನೀತಿಗೆ ಎಳ್ಳುನೀರು ಬಿಟ್ಟ ಕಾಂಗ್ರೆಸ್ ಇಂದು ತಮ್ಮ ಬಿಟ್ಟಿ ಕೊಡುಗೆಗಳ ಮೂಲಕ ದೇಶವನ್ನು ಮತ್ತೆ ಕತ್ತಲ ಕೂಪಕ್ಕೆ ತಳ್ಳುತ್ತಿದ್ದಾರೆ!

ಎಲ್ಲರೂ ದುಡಿಯಬೇಕು, ದುಡಿದು ತಮ್ಮ ಅನ್ನ ಸಂಪಾದಿಸಬೇಕು ಎಂಬುದೊಂದು ಮೂಲತತ್ತ್ವ. ಅದಕ್ಕೆ ಬೇಕಾದ ವಾತಾವರಣ, ಪೂರಕ ಪರಿಸರ, ಮೂಲಸೌಕರ್ಯ ಒದಗಿಸಿಕೊಡುವುದು ಸರಕಾರದ ಕೆಲಸವೇ ಹೊರತು ತಾನೇ ಆಹಾರ ತಯಾರಿಸಿ ಜನಗಳು ಕುಳಿತಲ್ಲಿಗೆ ಕೊಂಡೊಯ್ದು ತಿನ್ನಲು ಕೊಡುವುದಲ್ಲ. ಹೀಗೆ ಮಾಡಿದರೆ ಆ ದೇಶ ಅಧಃಪತನದ ಹಾದಿ ಹಿಡಿಯುವುದರಲ್ಲಿ ಅನುಮಾನವಿಲ್ಲ.

ಕಾಂಗ್ರೆಸ್ ನಲ್ಲಿ ಹಿಂದೆ ಒಳ್ಳೆಯ ಚಿಂತಕರು, ಮುತ್ಸದ್ದಿಗಳು, ಯೋಜಕರು ಇದ್ದರು. ಈಗ ಅಲ್ಲಿ ಸರಿಯಾದ ನಾಯಕರಿಲ್ಲದೆ ಕೇವಲ ಕಾಲಾಳುಗಳೇ ತುಂಬಿಕೊಂಡಿರುವುದರಿಂದ ಅವರ ಯೋಜನೆ – ಯೋಚನೆಗಳು ಅಂದಂದಿನ ಹೊಟ್ಟೆ ತುಂಬಿಸುವ ಕಡೆಗೆ ಮಾತ್ರ ಲಕ್ಷ್ಯ ನೆಟ್ಟಿದೆ. ಬರೀ ಕಾಲಾಳುಗಳ ಸಮೂಹ ಅದಕ್ಕೆ ತುಂಬ ದುಬಾರಿಯಾಗಿಬಿಟ್ಟಿದೆ. ಮುಳುಗುವ ದಿನ ಬಹಳ ದೂರವೇನೂ ಇಲ್ಲ!

ಲಕ್ಷಕೋಟಿ ರೂಪಾಯಿಗಳನ್ನು ವ್ಯಯಿಸಿ ಎಷ್ಟೋ ಯೋಜನೆಗಳು ಅರ್ಧದಲ್ಲಿವೆ. ಅವೆಲ್ಲ ಹಣವಿಲ್ಲದೆ ಅಲ್ಲಲ್ಲೇ ನಿಂತುಹೋಗಿ ಹಾಳಾಗಲಿವೆ ಮತ್ತು ಮುಂದಿನ ಐದು ವರ್ಷ ಯಾವ ಮಹತ್ತ್ವದ ಹೊಸ ಯೋಜನೆಗಳೂ ಇಲ್ಲದೆ ರಾಜ್ಯ ಪ್ರಗತಿಯಲ್ಲಿ ಹಿಂದೆ ಬೀಳಲಿದೆ. ಆ ಯೋಜನೆಗಳಲ್ಲಿ ಕೆಲಸ ಮಾಡುವವರಿಗೆ ಕೆಲಸವಿಲ್ಲದೆ ನಿರುದ್ಯೋಗ ಮತ್ತಷ್ಟು ಹೆಚ್ಚಾಗಲಿದೆ.

ಶಿಕ್ಷಣ, ಆರೋಗ್ಯ, ಉದ್ಯೋಗನಿರ್ಮಾಣ, ಕೃಷಿ – ಕೈಗಾರಿಕಾ ರಂಗಗಳ ಪ್ರಗತಿ ಮುಂತಾದ ಮಹತ್ತ್ವದ ವಿಚಾರಗಳನ್ನು ಬಿಟ್ಟು ಬಿಟ್ಟಿಯೋಜನೆಗಳ ದೈನಂದಿನ ವ್ಯವಹಾರದಲ್ಲಿ ಮುಳುಗಿ ಅಕ್ಕಿ ವ್ಯಾಪಾರ, ಬಸ್ ಓಡಾಟ ಮತ್ತು ಹೊಟೇಲ್ ಉದ್ಯಮ ನಡೆಸುವ ಮಟ್ಟಕ್ಕೆ ಸರಕಾರ ಬಂದು ನಿಂತಿದೆ!

‌ಡಾ.ವಸಂತಕುಮಾರ ಪೆರ್ಲ


27 views1 comment

1件のコメント


shreepadns
shreepadns
2023年6月18日

ಡಾ.ವಸಂತಕುಮಾರ ಪೆರ್ಲ ಅವರ ದಿನಂಪ್ರತಿ ಹೊಟ್ಟೆ ಹೊರೆದುಕೊಳ್ಳುವ ಕಾಲಾಳುಗಳ ಬಗ್ಗೆ ಬರೆದಿರುವ ಲೇಖನ ನಮ್ಮ ಮುಂದಿನ ಭವಿಷ್ಯದ ರೂಪಣೆಗೆ ಎಚ್ಚರಿಕೆಯ ಗಂಟೆಯಾಗಿದೆ. ಅಭಿನಂದನೆಗಳು. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.

いいね!
bottom of page