'ಚುಟಕ ಬ್ರಹ್ಮ' ಎಂದೇ ಪ್ರಖ್ಯಾತರಾದ ದಿನಕರ ದೇಸಾಯಿ ಮಹತ್ವದ ಸಾಹಿತಿ ಮಾತ್ರವಲ್ಲದೆ, ಡಾ. ಶಿವರಾಮ ಕಾರಂತರು ಗುರುತಿಸಿರುವಂತೆ ಏಕವ್ಯಕ್ತಿ ಸೈನ್ಯವಾಗಿ ಉತ್ತರ ಕರ್ನಾಟಕದ ಜನರ ಏಳಿಗೆಗಾಗಿ ದುಡಿದ ಮಹಾನ್ ಧೀಮಂತ, ಕಾರ್ಮಿಕ ನಾಯಕ, ಪ್ರಸಿದ್ಧ ಕೆನರಾ ಶಿಕ್ಷಣ ಸಂಸ್ಥೆ ಸಮೂಹದ ಸ್ಥಾಪಕ, ಜನಾನುರಾಗಿ ರಾಜಕಾರಣಿ.
ನನ್ನ ದೇಹದ ಬೂದಿ ಗಾಳಿಯಲಿ ತೇಲಿಬಿಡಿ
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ
ಬೂದಿ ಗೊಬ್ಬರವಾಗಿ ತೆನೆಯೊಂದು ನೆಗೆದುಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ.
ಇದು ದಿನಕರ ದೇಸಾಯಿ ಅವರ ಪ್ರಸಿದ್ಧ ಚುಟುಕ. "ದೀನಗಿಂತ ದೇವ ಬಡವನೆಂದು ಬಗೆದಯ" ಎಂಬುದು ಅವರ ಪ್ರಸಿದ್ಧ ಕವನ. ಇದೆಲ್ಲಾ ಕೇವಲ ಒಬ್ಬ ಕವಿ ಬರೆಯುವ ತಂಪು ಬಣ್ಣದ ಮಾತುಗಳಲ್ಲ. ತನ್ನ ಸುತ್ತಲಿನ ಜನ ಬದುಕಿಗೆ ಕಷ್ಟಪಡುವುದನ್ನು ನೋಡಿ ಮರುಗಿದ ಪ್ರತಿಭಾವಂತ ಯುವಕನೊಬ್ಬ, ಆ ಜೀವಗಳನ್ನು ಉದ್ಧರಿಸಲು ತನ್ನನ್ನೇ ಸಮರ್ಪಿಸಿಕೊಂಡ ಪರಿಯೂ ಹೌದು.
ಚುಟುಕ ಬ್ರಹ್ಮರೆಂದು ಪ್ರಖ್ಯಾತರಾದ ಡಾ. ದಿನಕರ ದೇಸಾಯಿ 1909ರ ಸೆಪ್ಟೆಂಬರ್ 10ರಂದು ಜನಿಸಿದರು. ಒಬ್ಬ ಶಾಲಾ ಶಿಕ್ಷಕನ ಮಗನಾಗಿ ಜನಿಸಿದ ದೇಸಾಯಿ ಮುಂದೆ ಬಡವರ ಪಾಲಿಗೆ ಬಂಧುವಾದರು. ಮನೆ, ಮಠ ಇಲ್ಲದೆ ತುತ್ತು ಕೂಳಿಗೂ ಕಷ್ಟಪಡುತ್ತಿದ್ದ ಜನರಿಗೆ ಆಸರೆಯಾದರು. ಪ್ರಸಿದ್ಧ ಬರಹಗಾರರಾದರು. ಕಾರ್ಮಿಕ ಸಂಘಟನೆಗಳಲ್ಲಿ ಅಪಾರವಾಗಿ ದುಡಿದು ಕಾರ್ಮಿಕರ ಹಿತರಕ್ಷಣೆ ಮಾಡಲು ಮತ್ತು ಬಡಜನರ ಉದ್ಧಾರಕ್ಕಾಗಿ ಅಹರ್ನಿಶಿ ದುಡಿದರು. ಡಾ. ಶಿವರಾಮಕಾರಂತರು ಹೇಳುವಂತೆ "ಹಿಂದೆ ಕ್ರೈಸ್ತ ಮೆಶಿನರಿಗಳು ಮಾಡಿದ ಬಡಜನರಿಗಾಗಿನ ಕಾರ್ಯಕ್ರಮಗಳನ್ನು ಏಕ ವ್ಯಕ್ತಿ ಸೈನ್ಯವಾಗಿ ಉತ್ತರ ಕರ್ನಾಟಕದ ಏಳಿಗೆಗಾಗಿ ದುಡಿದ ಮಹಾನ್ ಧೀಮಂತರಾತ". ಉತ್ತರ ಕನ್ನಡ ಜಿಲ್ಲೆಯಲ್ಲಿನ ಸಾಕ್ಷರತಾ ಸಾಧನೆಯಲ್ಲಿ ಅವರ ಕೊಡುಗೆ ಅವಿಸ್ಮರಣೀಯವಾದುದು. ಲೋಕಸಭಾ ಸದಸ್ಯರಾಗಿ ಕೂಡಾ ಅವರು ನೀಡಿದ ಕೊಡುಗೆ ಪ್ರಶಂಸನೀಯವಾದುದು.
ದಿನಕರ ದೇಸಾಯಿ ಅವರದು ಹಲವು ಶಾಖೆಗಳಲ್ಲಿ ಹರಡಿಕೊಂಡ ಸಾಧನಾಪೂರ್ಣ ವ್ಯಕ್ತಿತ್ವ. 1931 ರಲ್ಲಿ ಎಂ.ಎ ಪದವಿ ಪಡೆದು ಅನಂತರದಲ್ಲಿ ಎಲ್.ಎಲ್.ಬಿ ಪದವಿ ಪಡೆದರು. ಅವರ ವ್ಯಾಸಂದ ದಿನಗಳಲ್ಲಿ ಅವರಿಗೆ ಅಧ್ಯಾಪಕರಾಗಿದ್ದ ವೀ. ಸೀತಾರಾಮಯ್ಯ ಮತ್ತು ವೆಂಕಣ್ಣಯ್ಯ ಅಂಥಹ ಹಿರಿಯರಿಂದ ಪ್ರೋತ್ಸಾಹ ಪಡೆದು ಕನ್ನಡದ ಬಗ್ಗೆ ಅತ್ಯಂತ ಪ್ರೀತಿಯನ್ನು ಬೆಳೆಸಿಕೊಂಡು ನೂರಾರು ಲೇಖನಗಳನ್ನು ಪತ್ರಿಕೆಗಳಲ್ಲಿ ಬರೆಯುತ್ತಿದ್ದರು.
ದಿನಕರರು 1936ರಲ್ಲಿ ಮುಂಬೈನ ಹಡಗು ಕಾರ್ಮಿಕರ ಸಂಘಟನೆಯ ನೇತ್ರತ್ವ ವಹಿಸಿದರು. 1953ರಲ್ಲಿ ಕೆನರಾ ವೆಲ್‍ಫೇರ್ ಟ್ರಸ್ಟ್ ಸ್ಥಾಪಿಸಿದರು. ಅವರು ಅಂಕೋಲದಲ್ಲಿ 'ಜನಸೇವಕ' ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದರು. ಪ್ರಸಿದ್ಧ ಬರಹಗಾರರಾದ ಗೌರೀಶ್ ಕಾಯ್ಕಿಣಿ ಅವರು ಬಹಳವರ್ಷ ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಇಂದು ಕೆನರಾ ವೆಲ್‍ಫೇರ್ ಟ್ರಸ್ಟ್ ಶಿಕ್ಷಣ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ. 1967ರಲ್ಲಿ ದಿನಕರ ದೇಸಾಯಿಯವರು ಲೋಕಸಭಾ ಸದಸ್ಯರಾಗಿದ್ದರು.
ಸಾಹಿತ್ಯ ಪಥದಲ್ಲಿ ಕೂಡ ದೇಸಾಯಿ ಅವರ ಸಾಧನೆ ಅಷ್ಟೇ ವೈವಿಧ್ಯಮಯವಾದುದು. ತರುಣರ ದಸರೆ, ಕಡಲ ಕನ್ನಡ, ದಾಸಾಳ, ಕವನ ಸಂಗ್ರಹ, ಮಕ್ಕಳ ಗೀತೆಗಳು, ಮಕ್ಕಳ ಪದ್ಯಗಳು, ಹೂಗೊಂಚಲು, ಚೌಪದಿ ಸಂಗ್ರಹ ಇವು ದಿನಕರ ದೇಸಾಯಿ ಕವಿತೆಗಳ ಸಾಲಿನಲ್ಲಿ ನಿಲ್ಲುತ್ತವೆ. ನಾ ಕಂಡ ಪಡುವಣ ಅವರ ಪ್ರವಾಸ ಕಥನ. ಆಂಗ್ಲ ಭಾಷೆಯಲ್ಲಿ, Primary Education in India, Maritime Labour in India, Mahmadaleshwaras under the Chalukyas of Kalyani ಇವರ ಪ್ರಮುಖ ಕೃತಿಗಳು. ಅವರು ಬರೆದ "ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್" ಎನ್ನುವದು ಮಕ್ಕಳಿಗೆ ಅತ್ಯಂತ ಪ್ರಿಯವಾದ ಕವನವಾಗಿದೆ.
ಚೌಪದಿಗಳಲ್ಲಿ ಕವಿತೆಗಳನ್ನು ಹೊಸ ರೀತಿಯಲ್ಲಿ ಸೃಷ್ಟಿಸಿದ ದಿನಕರ ದೇಸಾಯಿ ಅವರ ಕವಿತೆಗಳು ಚುಟುಕಗಳೆಂದು ಪ್ರಸಿದ್ಧಿ ಹೊಂದಿ, ಕನ್ನಡ ನಾಡು ಅವರನ್ನು ಚುಟಕ ಬ್ರಹ್ಮ ಎಂದು ಕರೆಯುವಂತಾಯಿತು.
ಅವರ ಕೆಲವೊಂದು ಚುಟಕಗಳು ಇಲ್ಲಿವೆ.
ಕನ್ನಡವನು ಸರ್ಕಾರದ ಭಾಷೆಯನ್ನಾಗಿ ತರುವಲ್ಲಿ ತಾಳಿದ ತಾಮಸ ಮನೋಭಾವವನ್ನು ಕುರಿತು ಅವರು ಹೇಳಿರುವುದು:
ಕನ್ನಡಾಂಬೆಗೆ ಇವರು ಹಾಕುವರು ಹಾರ
ಆಂಗ್ಲನುಡಿಯಲ್ಲಿ ನಡೆಸುವರು ಸರ್ಕಾರ
ಕೇಳಿದರೆ ಹೇಳುವರು ಒಂದು ದಿನ ತಾಳಿ
ಆಮೇಲೆ ಕೂಗಲಿದೆ ಕನ್ನಡದ ಕೋಳಿ
ಕೋರ್ಟಿನ ವ್ಯವಹಾರ:
ಅಪ್ರತಿಮವಾದದ್ದು ಕೋರ್ಟು ವ್ಯವಹಾರ
ಸಿಬ್ಬಂಧಿಗಳಿಗೆ ಪ್ರತಿದಿವಸ ಆಹಾರ
ಎರಡು ಕಡೆಯಿಂದಲೂ ತಿನ್ನಲು ವಕೀಲ
ವಾದಿ ಪ್ರತಿವಾದಿಗಳು ಮಾಡಿದರು ಸಾಲ
ಪಕ್ಷ ಬದಲಾಯಿಸಿದ ರಾಜಕಾರಣಿ:
ಇಲ್ಲಿಂದ ಅಲ್ಲಿ ಹಾರಿದ ಬಳಿಕ ಈತ
ಆಗಿಬಿಟ್ಟನು ರಾಜಕೀಯದಲ್ಲಿ ಪ್ರೇತ
ಕುನ್ನಿಯೂ ಈಗ್ಗೆ ನೋಡುವುದಿಲ್ಲ ಮೂಸಿ
ಆಗಬಾರದು ಯಾರೂ ಇಂಥ ಪರದೇಸಿ.
ಮಾತಿನ ರಾಜಕೀಯ:
ರಾಜಕಾರಣದಲಿ ಅತಿಯಾಗಿ ಮಾತು
ಬಡವರಿಗೆ ಪ್ರತಿದಿವಸ ಕೇಸರಿಬಾತು
ಕನಸು ಮುಗಿಯುವ ಮೊದಲೇ ತಿನ್ನಿ ಬೇಕಷ್ಟು
ಬಡಿಸುವನು ನವಭಾರತದ ಸೋಷಲಿಸ್ಟು
ಅವರ ಚುಟಕಗಳ ಬಗ್ಗೆ:
ನಾ ಬರೆದ ಚುಟುಕಗಳು ವಿಪರೀತ
ಶೇಕಡಾ ತೊಂಬತ್ತು ಹೊಡೆಯುವುದು ಗೋತಾ
ಉಳಿದ ಹತ್ತರ ಪೈಕಿ ಏಳೆಂಟು ಸತ್ತು
ಒಂದೆರಡು ಬದುಕಿದ್ದರೆ ಅವು ಮಾತ್ರ ಮುತ್ತು
ಇವನಾರು ಗೊತ್ತಾಯ್ತೆ, ಆಧುನಿಕ ದ್ರೋಣ,
ಇವನ ಬತ್ತಳಿಕೆಯಲ್ಲಿ ಚುಟುಕಗಳ ಬಾಣ,
ಪೆನ್ಸಿಲ್ಲಿನ ತುದಿಯಿಂದ ಬಾಣಗಳ ಹೂಡಿ,
ಹೊರಗೆ ಹಾಕಿದನು ನವಭಾರತದ ರಾಡಿ.
“ಇಂದ್ರದೇವನು ಮೊನ್ನೆ ಮಾಡಿದ ಟೆಲಿಫೋನು
ಕೇಳಿದನು ದೇಸಾಯಿ ಹೇಗಿದ್ದಿ ನೀನು
ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು
ಪ್ರತಿ ಕಳುಹಿಸಿ ನನ್ನ ಲೆಕ್ಕಕ್ಕೆ ಹಚ್ಚು
.
ಬಡತನದ ಬಗ್ಗೆ:
ಇವನ ಮನೆಯೊಳಗಿಲ್ಲ ಸಾಕಷ್ಟು ಅಕ್ಕಿ
ಆದರೂ ಈತನಿಗೆ ಹೆಸರು 'ಹಾಲಕ್ಕಿ'
ಹಾಲು ಅಕ್ಕಿಗಳೆರಡೂ ಹೆಸರೊಳಗೆ ಮಾತ್ರ
ಹಸಿವೆಯೊಂಬುದು ಇವನ 'ಹಣೆಯ ಕುಲಗೋತ್ರ'
ಕೂಡಿಡುವ ಬಗ್ಗೆ:
ಯಾರಿಗೂ ಕೊಡದೆ ನಾಳೆ ತಿನ್ನುವೆನೆಂದು
ಅಡಗಿಸಿಟ್ಟೆನು ಹಣ್ಣನೊಂದನು ತಂದು
ಮುಂಜಾನೆ ನೋಡಿದರೆ ಬರಿ ಸಿಪ್ಪೆ
ರಾತ್ರಿಯಲಿ ತಿಂದದ್ದು ಮೂಷಿಕನ ತಪ್ಪೆ ?
ನನ್ನ ದೇಹದ ಬೂದಿ ಎಂಬ ಕವನದಲ್ಲಿ ದಿನಕರ ದೇಸಾಯಿ ಸೇವೆಗೆ ತುಡಿಯುವ ಮನಸ್ಸು:
ನನ್ನ ದೇಹದ ಬೂದಿ - ಗಾಳಿಯಲಿ ತೂರಿ ಬಿಡಿ
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ;
ಬೂದಿ - ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ.
ನನ್ನ ದೇಹದ ಬೂದಿ - ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನ ಹಿಡಿಯುವಲ್ಲಿ
ಮುಷ್ಠಿ ಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ.
ನನ್ನ ದೇಹದ ಬೂದಿ - ಕೊಳದಲ್ಲಿ ಬೀರಿ ಬಿಡಿ
ತಾವರೆಯು ದಿನದಿನವು ಅರಳುವಲ್ಲಿ
ಬೂದಿ ಕೆಸರನು ಕೂಡಿ ಪಂಕಜವು ಮೂಡೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ.
ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
ನಿಜ ಸೇವೆಗೈಯಲಿಕೆ ಬರಲಿ ಮುಂದು.
ದಿನಕರ ದೇಸಾಯಿ ಅವರು 1982ರ ನವೆಂಬರ್ 6ರಂದು ಈ ಲೋಕವನ್ನಗಲಿದರು.
ನಮ್ಮ ನಾಡಿನ ಜನರ ಬದುಕನ್ನು ಉತ್ತಮ ಪಡಿಸಲು ಹಗಲಿರುಳೂ ಶ್ರಮಿಸಿದ, ಕನ್ನಡದಲ್ಲಿ ಸವಿ ಸವಿಯಾದ ಕವಿತೆ, ಚುಟುಕಗಳನ್ನು ಬರೆದು ನಲಿಯುವಂತೆ ಮಾಡಿದ ದೇಸಾಯಿ ಅವರಂತಹ ದಿನಕರರು ಮತ್ತೆ ಮತ್ತೆ ಉದಯಿಸಿ ಈ ಲೋಕವನ್ನು ಶ್ರೀಮಂತವಾಗಿ ಬೆಳಗುತ್ತಿರಲಿ ಎಂದು ಹಾರೈಸುತ್ತಾ ಈ ಶ್ರೇಷ್ಠ ಚೇತನದ ನೆನಪಿಗೆ ಶಿರಬಾಗೋಣ.
ಕೆ.ಎಸ್.ಹೆಗಡೆ ಕಾಜನಮನೆ ಸಾಲಕೋಡ
ಶ್ರೀ ಕೆ.ಎಸ್.ಹೆಗಡೆಯವರು ನನ್ನ ವಿದ್ಯಾಗುರುಗಳು. ನನ್ನಲ್ಲಿಅಂತಸ್ಥವಾಗಿದ್ದ ಸಾಹಿತ್ಯದ ಪ್ರೀತಿಯನ್ನು ಉದ್ದೀಪನಗೊಳಿಸಿದವರು. ಅವರು ತರಗತಿಯಲ್ಲಿ ಪಾಠ ಮಾಡುವ ಪರಿ ಚೇತೋಹಾರಿಯಾಗಿತ್ತು. ಚೌಪದಿಯ ಚಕ್ರವರ್ತಿ,ಚುಟುಕು ಬ್ರಹ್ಮ ಎಂದು ಪ್ರತೀತಯಶರಾದ ದಿನಕರ ದೇಸಾಯಿಯವರ ಕುರಿತು ಕೆ.ಎಸ್.ಹೆಗಡೆ ಸರ್ ಅವರು ಬರೆದ ಲೇಖನ ನಿಮ್ಮ ಓದು ಮತ್ತು ಸ್ಪಂದನಕ್ಕಾಗಿ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
ರವಿಕಾಣದ್ದನ್ನು ಕವಿಕಂಡ ಎನ್ನುವುದಕ್ಕೆ ಶ್ರೀ ದಿನಕರದೇಸಾಯಿಯವರೇ ಒಃದು ಉದಾಹರಣೆ. ಕಾವ್ಯ ಅಥವಾ ಕವನವೆಂದರೆ ಹೀಗಿರಬೇಕು. ತಾವು ಗೀಚಿದ್ದೆಲ್ಲ ಕವನವೆಂದು ತಮಗೆ ತಾವೇ ಕವಿಗಳೆಂದು ಘೋಷಿಸಿಕೊಳ್ಳುವವರು. ಕವನವೆಂದರೇನೆಂದು ಮೊದಲು ಅರ್ಥಮಾಡಿಕೊಳ್ಳಿ.