ದಸರಾ ವೈಭವ.
- ಸಾತುಗೌಡ ಬಡಗೇರಿ
- Oct 27, 2020
- 1 min read
ನಾಡ ಜನತೆಯ ನೋವ ಮರೆಸುವ
ಮೈಸೂರ ದಸರಾ ಸಡಗರವು.
ಸಕಲರು ಬೆರೆತು ಭಜಿಸಲು ದುರ್ಗೆಯ
ಮನದಲಿ ಭಕ್ತಿಯ ಸಂಭ್ರಮವು.
ನವರಾತ್ರಿ ದಿನದಲ್ಲಿ ನವವಿಧ ರೂಪದಿ
ದರುಶನ ನೀಡುವ ಹೇ ತಾಯೆ.
ದುಷ್ಟ ಶಕ್ತಿಯ ಮರ್ದನ ಮಾಡುತ
ಶಿಷ್ಟರ ಪೊರೆವ ಮಹಾತಾಯೆ.
ಕನ್ನಡ ಸಂಸ್ಕೃತಿ ಸಾಹಿತ್ಯ ಕಲೆಗಳ
ಸಂಗಮ ದಸರಾ ದಿನದಂದು.
ವಿಶ್ವದ ಜನತೆಯ ಮೊಗದಲಿ ಬೆರಗು
ಅದ್ಭುತ ಕಲೆಯ ಸಿರಿಕಂಡು.
ಹೊನ್ನಿನ ಅಂಬಾರಿ ನಡುವೆ ಪವಡಿಸಿದ
ದುರ್ಗೆಯ ನೋಡಲು ನಾವೆಲ್ಲಾ.
ಇಂದ್ರಲೋಕದ ವೈಭವ ಸಿರಿಯು
ಕಣ್ಣಲಿ ಕುಣಿವುದು ದಿನವೆಲ್ಲಾ.
ದಸರಾ ತಂದಿದೆ ಹಬ್ಬದ ಜಾತ್ರೆಯ
ನಲಿವಿನ ಹೂಬನ ಜನತೆಯಲ್ಲಿ.
ಕೊರೊನಾ ಮಾರಿ ವರುಣನ ಅಬ್ಬರ
ಕಸಿದಿದೆ ನೆಮ್ಮದಿ ನಾಡಿನಲಿ.
ಬನ್ನಿ!ಬಂಧುಗಳೇ,ನಾಡ ಪ್ರಜೆಗಳೇ
ಭಕ್ತಿಲಿ ದುರ್ಗೆಯ ಭಜಿಸೋಣ.
ಬಂದಿಹ ಕಷ್ಟವ ಪರಿಹರಿಸೆನ್ನುತ
ಪಾದಕೆ ಶರಣು ಹೋಗೋಣ.
ಸಾತುಗೌಡ ಬಡಗೇರಿ.
ಅಂಕೋಲಾ ಉತ್ತರ ಕನ್ನಡ.
ತುಂಬಾ ಚೆನ್ನಾಗಿದೆ. ಸಕಾಲಿಕ ಕವನ.
ದಸರಾ ಗೊಂಬೆಗಳ ಮಧ್ಯದಿ ಅಡಗಿ ಕುಳಿತಿರುವ ಪದಗಳನ್ನ ಹೆಕ್ಕಿ ಜೋಡಿಸಿದ ಸುಂದರ ಕವಿತೆ ಸುಪರ್ ಸರ್ 🌹🌹