ನಾಡಿನಾದ್ಯಂತ ಕವಿ ಎಂದೆ ಗೆಳೆಯರ ಗಡಣದಲ್ಲಿ ಪರಿಚಿತರಾಗಿದ್ದ ದಲಿತ ಕವಿ ನಾಡೋಜ ಸಿದ್ದಲಿಂಗಯ್ಯ ಇನ್ನು ನೆನಪು ಮಾತ್ರ. ತನ್ನದೆ ಆದ ಪ್ರೀತಿಸುವ ರೀತಿಗೆ ಸಿದ್ಧಲಿಂಗಯ್ಯ ವಿಶೇಷವಾಗಿದ್ದರು.ಅವರ ಒಡನಾಟವನ್ನು ಅನುಭವಿಸಿದವರಿಗೆ ಅದರ ಸವಿ ಗೊತ್ತು. ೧೯೭೭ ರಲ್ಲಿ ಅವರ ಹೊಲೆ ಮಾದಿಗರ ಹಾಡು ಹಾಗು ಬಂಡಾಯ ಮನೋಭಾವದ ಬರಹಗಾರರ ಕಪ್ಪು ಜನರ ಕೆಂಪು ಕಾವ್ಯ ಆ್ಯಂಥೋಲಜಿ ವಿಜಯ ಪಾಟೀಲ ಮತ್ತು ಮಂಗ್ಳೂರ ವಿಜಯ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡು ಕನ್ನಡ ಕಾವ್ಯ ಪ್ರಪಂಚದಲ್ಲಿ ಸಂಚಲನವನ್ನು ಉಂಟು ಮಾಡಿತ್ತು.ಆ ಸಂಕಲನದಲ್ಲಿಯ ನನ್ನ ಮುಕ್ರೀರು ನಾವ್ ಮುಕ್ರೀರು ಕವನ ಮೆಚ್ಚಿಕೊಂಡಿದ್ದ ಗೆಳೆಯ ಸಿದ್ಧಲಿಂಗಯ್ಯ ೧೯೮೦ ರಲ್ಲಿ ಪ್ರೊ.ನಾಗವಾರ ಅವರ ಜೊತೆಗೆ ಮುಗ್ವಾದ ನಮ್ಮ ಮನೆಗೆ ಬಂದು ಊಟ ಮಾಡಿ ಸಂಜೆ ನಮ್ಮೂರಿನ ಮುಕ್ರಿ ಕೇರಿಯಲ್ಲಿ ಹೊಯ್ಯೊ ಮಳೆರಾಯ ಎಂಬ ಕವನವನ್ನು ಹಾಡಿ ಎಲ್ಲರ ಮನವನ್ನು ಗೆದ್ದವರು. ಮುಗ್ವಾದಿಂದ ಹೊನ್ನಾವರಕ್ಕೆ ಸೂಡಿಯ ಬೆಳಕಿನಲ್ಲಿ ಕಾಲ್ನಡಿಗೆಯಿಂದ ಹೋಗುವಾಗ ಸಾಹಿತಿಗಳ ವಿವಿಧ ಖಯಾಲಿಗಳ ಬಗ್ಗೆ ಹೇಳುತ್ತಾ ನಗೆಯನ್ನು ಚಿಮ್ಮಿಸಿದವರು. ಮದ್ಯಾಹ್ನ ನಮ್ಮ ಮನೆಯಲ್ಲಿ ಊಟ ಮಾಡಿ ಹೊಳೆ ದಾಟಿ ಆಚೆ ಸಾಗುವಾಗ ಅವರ ವಿದ್ಯಾರ್ಥಿನಿ ರಮಾ ಅವರ ಜೊತೆಗೆ ಆರಂಭಿಸಿದ ಮಾತುಕತೆ ವಿವಾಹಕ್ಕೆ ನಾಂದಿಯಾಯಿತು. ಬೆಂಗಳೂರಿಗೆ ಹೋದಾಗ ಕವಿಗಳು ನಾನು ಉಳಿದುಕೊಂಡಿದ್ದ ನನ್ನ ಬಂಧುಗಳ ಮನೆಗೆ ಬಂದು ನನ್ನ ಜೊತೆಗೆ ಒಂದೆರಡು ದಿನ ಉಳಿದುಕೊಂಡಿದ್ದು ಈಗ ನೆನಪು. ಆಗ ಸರ್ಕಸ್ ಕಂಪನಿಗೆ ಬೆಂಕಿ ಬಿದ್ದು ಮಕ್ಕಳು ಸುಟ್ಟು ಹೋದ ಕತೆಯನ್ನು ಅವರು ಹೇಳುವಾಗ ಕರುಳು ಚುರ್ರ ಎನ್ನುತಿತ್ತು.ಆಗ ಬಸ್ಸಿಗೆ ನಾಲ್ಕಾಣೆ ಟಿಕೀಟು.ಬಹುಪಾಲು ಸಮಯ ನಾವು ಬಸ್ಸಿನಲ್ಲಿ ತಿರುಗಾಡುತ್ತಾ ಕಳೆಯುತ್ತಿದ್ದೆವು.
ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಂದರ್ಭದಲ್ಲಿ ಹೊನ್ನಾವರಕ್ಕೆ ನಮ್ಮ ಮನೆಗೆ ತಮ್ಮ ಅಧಿಕಾರಿ ವರ್ಗದೊಂದಿಗೆ ನಮ್ಮ ಮನೆಗೆ ಬಂದು ಎರಡು ದಿನ ಉಳಿದು ನನಗೆ ಹೆಮ್ಮೆ ಮತ್ತು ಅಚ್ಚರಿಯನ್ನು ಮೂಡಿಸಿದ ಅಪರೂಪದ ಗೆಳೆಯರು ಅವರು.ನಾನು ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯನಾಗಿದ್ದಾಗ ನನಗೆ ಮತ್ತು ಗೆಳೆಯ ಪ್ರೊ.ಹಿ.ಚಿ. ಬೋರಲಿಂಗಯ್ಯ ಅವರಿಗೆ ದಿ ಕ್ಲಬ್ನಲ್ಲಿ ಉಳಿಸಿ ಆತಿಥ್ಯ ನೀಡಿದ ಸನ್ಮಿತ್ರರು.ನನಗೆ ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ರೀಡರ ಹುದ್ದೆಗೆ ಸಂದರ್ಶನ ಬಂದಾಗ ನನ್ನ ಬಗ್ಗೆ ಪ್ರೊ.ಕೆ.ಮರುಳ ಸಿದ್ಧಪ್ಪ ಅವರಿಗೆ ಹೇಳಿರುವುದಾಗಿ ತಿಳಿಸಿದ್ದರು. ಗ್ರಾಮ ದೇವತೆಗಳ ಬಗ್ಗೆ ಪಿಎಚ್,ಡಿ.ಮಾಡುವಾಗ ನಮ್ಮೂರಿನ ಗ್ರಾಮ ದೇವತೆ ಮುಗ್ವಾದ ಬಿಳಿಯಮ್ಮನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ೧೯೮೧ ರಲ್ಲಿ ಅಂಕೋಲೆಯ ಜಿ.ಸಿ.ಕಾಲೇಜಿನಲ್ಲಿ ನಡೆದ ಅ.ಕ.ಜಾನಪದ ಸಮ್ಮೇಳನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.ಅಪರೂಪದ ಒಡನಾಡಿ ಮತ್ತು ನಿರಹಂಕಾರಿಯಾದ ಗೆಳೆಯನನ್ನು ಕಳೆದುಕೊಂಡು ಮನವು ನೊಂದಿದೆ.ಸದಾಕಾಲ ಅರ್ಧ ತೋಳಿನ ಅಂಗಿಯನ್ನು ಹೆಚ್ಚಾಗಿ ಧರಿಸುತ್ತಿದ್ದ, ಗಡ್ಡಧಾರಿಯಾಗಿದ್ದ ಕವಿ ಭಾಷಣ ಮಾಡುವಾಗ ,ಕವಿತೆ ಓದುವಾಗ ತಮ್ಮದೆ ಆದ ಶೈಲಿ ಮತ್ತು ಧ್ವನಿಯಲ್ಲಿ ಮಾತನಾಡುವುದನ್ನು ಕೇಳುವುದೆ ಒಂದು ಸುಖವಾಗಿತ್ತು."ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ನೀ ಸುಳಿದಾಡ ಬೇಡ ಗೆಳತಿ ಆ ಬೆಳ್ಳಿ ಕಿರಣ ಸುಟ್ಟಾವೊ ನಿನ್ನ"ಮತ್ತೆ ಏನು ಬರೆಯಲು ತೋಚುತ್ತಿಲ್ಲ!ನನ್ನ ಪ್ರೀತಿಯ ಕವಿಯ ಆತ್ಮಕ್ಕೆ ಚಿರ ಶಾಂತಿ ಸಿಗಲಿ.
ಡಾ.ಶ್ರೀಪಾದ ಶೆಟ್ಟಿ.
Comments