ಥೈರಾಕ್ಸಿನ್ ಎಂಬ ರಾಸಾಯನಿಕ ವಸ್ತುವನ್ನು ಸ್ರವಿಸುವ ಒಂದು ನಿರ್ನಾಳ ಗ್ರಂಥಿ.

ಇದು ಕುತ್ತಿಗೆಯ ಮುಂಭಾಗದಲ್ಲಿ ಧ್ವನಿಪೆಟ್ಟಿಗೆಯ ಎರಡೂ ಬದಿಗೆ (Adams’s Apple), ಚಿಟ್ಟೆಯಾಕಾರದಲ್ಲಿ ಅಂಟಿಕೊಂಡಿರುತ್ತದೆ. ಈ ಗಂ್ರಥಿಯ ಕ್ರಿಯೆಯು ಮೆದುಳಿನಲ್ಲಿ ಇರುವ ಮಹಾ ನಿರ್ನಾಲ ಗ್ರಂಥಿಯಾದ ಪಿಟ್ಯುಟರಿ ಇಂದ ಹೈಪೋಥಲಮಸ್ (ಮೆದುಳಿನ ಇನ್ನೊಂದು ಭಾಗ) ಮೇಲುಸ್ತುವಾರಿಯ ಮೂಲಕ ಕಾರ್ಯ ನಿರ್ವಹಣೆ ಆಗುತ್ತದೆ. ಪಿಟ್ಯುಟರಿ ಗ್ರಂಥಿ ಮತ್ತು ಹೈಪೋಥಲಮಸ್ ಕ್ರಿಯೆಯಲ್ಲಿ ವ್ಯತ್ಯಯ ಉಂಟಾದರೆ, ಅದರ ಪರಿಣಾಮ ಥೈರಾಯ್ಡ್ ಗ್ರಂಥಿಯ ಕಾರ್ಯ ನಿರ್ವಹಣೆಯಲ್ಲಿ ಪ್ರತಿಫಲಿಸುತ್ತದೆ. ಥೈರಾಕ್ಸಿನ್ ಹಾರ್ಮೋನ್ ಸ್ರವಿಸಲು ಥೈರಾಯ್ಡ್ ಗ್ರಂಥಿಗೆ ಅಯೋಡಿನ್ (I2) ಎಂಬ ಮೂಲ ವಸ್ತುವಿನ ಅವಶ್ಯಕತೆ ಇರುತ್ತದೆ. ಅಯೋಡಿನ್ ವಸ್ತುವು ನಾವು ತಿನ್ನುವ ಉಪ್ಪಿನಲ್ಲಿ ಇರುತ್ತದೆ. ಅಲ್ಲದೆ ಭಾರತ ಸರ್ಕಾರವು ಕೂಡ ಮಾರುಕಟ್ಟೆಯಲ್ಲಿ ದೊರಕುವ ಎಲ್ಲ ಉಪ್ಪನ್ನೂ ಅಯೋಡಿನ್‍ಯುಕ್ತಗೊಳಿಸಿದೆ.
ಹೈಪೊಥೈರಾಯ್ಡಿಸಂ ಒಂದು ಸ್ವಯಂ ನಿರೋಧಕ ನೆಲೆಯಿಂದ ಆಗುವ ಖಾಯಿಲೆ (Auto Immune). ಅಂದರೆ ಹಷಿಮಟೋಸ್ ಥೈರಾಯ್ಡ್ ಐಟಿಸ್‍ನಿಂದ ಬರುತ್ತದೆ.
ಥೈರಾಯ್ಡ್ ಗ್ರಂಥಿಯ ಮುಖ್ಯ ಕಾರ್ಯ ಚಟುವಟಿಕೆಗಳೇನು?
ದೇಹದ ಎಲ್ಲಾ ಪ್ರಮುಖ ಕ್ರಿಯೆಗಳ ಜೊತೆಗೆ
• ಉಸಿರಾಟದ ನಿಯಂತ್ರಣ
• ಹೃದಯದ ಬಡಿತದÀ ನಿಯಂತ್ರಣ
• ಮೆದುಳು ಮತ್ತು ಇತರ ನರಮಂಡಲದ ಕಾರ್ಯ ನಿಯಂತ್ರಣ
• ಋತು ಚಕ್ರ ನಿಯಂತ್ರಣ
• ದೇಹದ ಉಷ್ಣಾಂಶ ನಿಯಂತ್ರಣ
• ರಕ್ತದಲ್ಲಿನ ಕೊಬ್ಬಿನಾಂಶ ನಿಯಂತ್ರಣ ಇತ್ಯಾದಿ ಕಾರ್ಯಚಟುವಟಿಕೆಗಳು.
ಥೈರಾಕ್ಸಿನ್ ಹಾರ್ಮೋನ್ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸ್ರವಿಸಿದರೆ ಹೈಪೋಥೈರಾಯ್ಡಿಸಂ ಎಂದೂ ಥೈರಾಕ್ಸಿನ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಿದರೆ ಹೈಫರ್‍ಥೈರಾಯ್ಡಿಸಂ ಎಂದೂ ಕರೆಯುತ್ತಾರೆ.
ಹೈಪೋಥೈರಾಯ್ಡಿಸಂ ಸಂದರ್ಭದಲ್ಲಿ ಮೇಲಿನ ಎಲ್ಲಾ ಕ್ರಿಯೆಯಲ್ಲಿ ನಿಧಾನಗತಿ ಉಂಟಾಗಿ ಮತ್ತು ಹೈಫರ್‍ಥೈರಾಯ್ಡಿಸಂ ಸಂದರ್ಭದಲ್ಲಿ ಎಲ್ಲಾ ಕ್ರಿಯೆಗಳಲ್ಲಿ ಏರು ಉಂಟಾಗುತ್ತದೆ ಎಂದು ತಿಳಿಯತಕ್ಕದ್ದು.
ಥೈರಾಯ್ಡ್ ಗ್ರಂಥಿಗೆ ಕ್ಯಾನ್ಸರ್ ಕಾಯಿಲೆ ಕೂಡ ಆಗಬಹುದು.
ಜನಸಾಮಾನ್ಯರ ತಿಳುವಳಿಕೆ ಏನೆಂದರೆ ಹೈಪೋಥೈರಾಯ್ಡಿಸಂ ಅಂದರೆ ಥೈರಾಯ್ಡ್ ಖಾಯಿಲೆ ಎಂದೇ ಭಾವಿಸಿಕೊಳ್ಳುತ್ತಾರೆ.
ಹೈಪೋಥೈರಾಯ್ಡಿಸಂ ಖಾಯಿಲೆಯೂ ನಿಧಾನಗತಿಯಲ್ಲಿ ಪ್ರಾರಂಭವಾಗುತ್ತದೆ. ಆದ್ದರಿಂದ ಆ ಖಾಯಿಲೆಯನ್ನು ಕಂಡು ಹಿಡಿಯುವುದು ಸ್ವಲ್ಪ ನಿಧಾನವಾಗುತ್ತದೆ. ಅದರ ಗುಣಲಕ್ಷಣಗಳು ನಿಧಾನವಾಗಿ ಪ್ರಾರಂಭವಾಗುತ್ತವೆ. ರೋಗಿಯು ತನಗೆ ರೋಗ ಲಕ್ಷಣಗಳಿವೆಯೆಂದು ತಿಳಿಯುವುದು ಬಹಳ ತಡವಾಗುತ್ತದೆ. ಆದ್ದರಿಂದ ಬಹಳಷ್ಟು ಸಾರಿ ಈ ರೋಗವನ್ನು ರಕ್ತ ಪರೀಕ್ಷೆಯ ಮೂಲಕವೇ ಕಂಡು ಹಿಡಿಯಬೇಕಾಗುತ್ತದೆ. ಈ ಕಾಯಿಲೆಯು ಮಹಿಳೆಯರಲ್ಲಿ 70% ಮತ್ತು ಪುರುಷರಲ್ಲಿ 29% ಇರುತ್ತದೆ.
ಹೈಪೋಥೈರಾಯ್ಡಿಸಂ ಸ್ಥಿತಿಯು ಇತರೆ ಕಾರಣಗಳಿಂದಲೂ ಬರಬಹುದು. ಉದಾ :
ಬೇರೆ ಕಾರಣಗಳಿಗಾಗಿ ಥೈರಾಯ್ಡ್ ಗ್ರಂಥಿಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದ್ದರೆ.
ಥೈರಾಯ್ಡ್ ಗ್ರಂಥಿಗೆ ಕ್ಯಾನ್ಸರ್ ಚಿಕಿತ್ಸೆ ಮಾಡಿದ್ದರೆ.
ಹೈಫರ್‍ಥೈರಾಯ್ಡಿಸಂ (ಥೈರಾಯ್ಡ್ ಗ್ರಂಥಿಯ ಸಾಮಾನ್ಯ ಚುಟುವಟಿಕೆಗಿಂತ ಹಚ್ಚಾಗಿರುವುದು) ಚಿಕಿತ್ಸೆ ಮಾಡಿದಾಗ ಕೆಲವು ಸಲ ಅದು ಹೈಪೋಥೈರಾಯ್ಡಿಸಂಗೆ ತಿರುಗುತ್ತದೆ.
4. ಹುಟ್ಟಿನಿಂದ ಥೈರಾಯ್ಡ್ ಗ್ರಂಥಿಯಲ್ಲಿ ನ್ಯೂನತೆ ಇದ್ದರೆ.
ಈ ಮೇಲಿನ ಕಾರಣಗಳಿಂದಾಗಿ ಹೈಪರ್‍ಥೈರಾಯ್ಡಿಸಂ ಸ್ಥಿತಿಯನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸ್ವಯಂ ನಿರೋಧಕ ಸ್ಥಿತಿಯಿಂದುಂಟಾಗುವ
ಹೈಪೋಥೈರಾಯ್ಡಿಸಂ ಕಾಯಿಲೆಯನ್ನು ಮಾತ್ರ ಇಲ್ಲಿ ಪರಿಶೀಲಿಸಲಾಗುವುದು.
ಈ ರೋಗದ ಲಕ್ಷಣಗಳೇನೆಂದರೆ
• ನಾಡಿಮಿಡಿತ ನಿಧಾನವಾಗುವುದು.
• ಮಾತಿನಲ್ಲಿ ನಿಧಾನ, ಸಾಮಾನ್ಯ ಚಟುವಟಿಕೆಗಳನ್ನು ತಡವಾಗಿ ಮಾಡುವುದು.
• ವಯಸ್ಕರ ಮಹಿಳೆಯರಲ್ಲಿ ಮುಟ್ಟಿನಲ್ಲಿ ಏರು ಪೇರಾಗುವುದು. ಕೆಲವು ತಿಂಗಳು ಮುಟ್ಟು ಬಿಟ್ಟು ಬಿಟ್ಟು ಆಗುವುದು ಅಥವ ಮುಟ್ಟಾದಾಗ ಹೆಚ್ಚಿಗೆ ರಕ್ತಸ್ರಾವ ಆಗುವುದು.
• ಚಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದು.
• ಒಣ ಚರ್ಮ.
• ತೂಕ ಹೆಚ್ಚುವುದು.
• ಮುಖ ಬಾತುಕೊಳ್ಳುವುದು.
• ಧ್ವನಿ ಒಡೆಯುವುದು ಇತ್ಯಾದಿ.
ಈ ರೋಗ ಲಕ್ಷಣಗಳು ತೀವ್ರತರವಲ್ಲವಾಗಿರುವುದರಿಂದ ವೈದ್ಯ ಶಾಸ್ತ್ರದಲ್ಲಿ ಮನುಷ್ಯನಿಗೆ ಏನಾದರೂ ಖಾಯಿಲೇ ಬರಲೇಬೆಂಕೆಂದರೆ, ಹೈಪೋಥೈರಾಯ್ಡಿಸಂ ಖಾಯಿಲೆ ಬೇಕೆಂದು ಬೇಡಿಕೋ ಎಂದಿದೆ! ಇದು ಅಷ್ಟೊಂದು ಒಳ್ಳೆಯ ಖಾಯಿಲೆ! ವೈದ್ಯರು ಹೈಪೋಥೈರಾಯ್ಡಿಸಂ ಖಾಯಿಲೆಯನ್ನು ಗಮನದಲ್ಲಿ ಇರಿಸಿಕೊಳ್ಳದಿದ್ದರೆ ಈ ಖಾಯಿಲೆಯನ್ನು ಕಂಡು ಹಿಡಿಯುವುದು ಕಷ್ಟವಾಗುತ್ತದೆ. ರಕ್ತ ಪರೀಕ್ಷೆಯಲ್ಲಿ T3,T4 ಮತ್ತು TSH ಎಂಬ ಹಾರ್ಮೋನ್‍ಗಳನ್ನು ನೋಡಬೇಕು. ರಕ್ತ ಪರೀಕ್ಷೆಯಿಂದ ಹೈಪೋಥೈರಾಯ್ಡಿಸಂ ಸಾಬೀತಾದರೆ ರೋಗಿಯ ಅದೃಷ್ಠ! ಏಕೆಂದರೆ ಒಂದು ಥೈರಾಕ್ಸಿನ್ ಮಾತೆಯಿಂದ ಕಾಯಿಲೆಯನ್ನು ಸಂಪೂರ್ಣ ತಹಬಂದಿಗೆ ತರಬಹುದು. ಅಲ್ಲದೇ ಎಷ್ಟೋ ನೂರಾರು ಕಾಯಿಲೆಗಳಿಗೆ ಔಷಧವೇ ಇರುವುದಿಲ್ಲ. ಮಾತ್ರೆಯು 25mcg (ಮೈಕ್ರೋಗ್ರಾಂ), 50mcg, 75mcg ಮತ್ತು 100mcg ಗಳಲ್ಲಿ ದೊರೆಯುತ್ತದೆ.
ರಕ್ತ ಪರೀಕ್ಷೆಗೆ ಅನುಗುಣವಾಗಿ ಮಾತ್ರೆಯನ್ನು ಸೇವಿಸಬೇಕು. ಆದರೆ ಅಲೋಪತಿ ಪದ್ದತಿಯ ಪ್ರಕಾರ ಒಂದು ಸಾರಿ ಹೈಪೋಥೈರಾಯ್ಡಿಸಂ ಎಂದು ಗೊತ್ತಾದರೆ ರೋಗಿಯು ಮಾತ್ರೆಯನ್ನು ಸಾಯುವವರೆಗೂ ತೆಗೆದುಕೊಳ್ಳುತ್ತಿರಬೇಕು. ಆಗಾಗ್ಗೆ ತೆಗೆದುಕೊಂಡು ನಿಲ್ಲಿಸುವಂತಿಲ್ಲ. ಒಂದು ಸಮಾಧಾನದ ಸಂಗತಿಯೆಂದರೆ ಹೈಪೋಥೈರಾಯ್ಡಿಸಂ ನಿಂದ ಯಾವುದೇ ತೊಂದರೆ ತೊಡಕುಗಳಿಲ್ಲದೆ ಆರೋಗ್ಯವಾಗಿರಬಹುದು. (ಕ್ರಮಬದ್ದವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ) ಹೈಪೋಥೈರಾಯ್ಡಿಸಂ ಖಾಯಿಲೆಯನ್ನು ಮುಂಜಾಗ್ರತೆವಹಿಸಿ ಕಂಡುಹಿಡಿಯದಿದ್ದರೆ ಅಥವ ತೀವ್ರತರವಾದ ಮತ್ತು ಚಿಕಿತ್ಸೆ ಮಾಡದ ಹೈಪೋಥೈರಾಯ್ಡಿಸಂ ಖಾಯಿಲೆಯು ‘ಮಿಕ್ಸೆಡೆಮ’ (Myxdema) ಎನ್ನುವ ಸ್ಥಿತಿಗೆ ತಲುಪುತ್ತದೆ. ಈ ಸ್ಥಿತಿಯಲ್ಲಿ ರೋಗಿಯು ಮುಖ ಬಾತುಕೊಂಡು, ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳು ಚುರುಕಾಗಿರುವುದಿಲ್ಲ.
ಗರ್ಭಿಣಿಯರಲ್ಲಿ ಅಯೋಡಿನ್ (I2) ನ ತೀರ್ವಕೊರತೆ ಉಂಟಾದರೆ, ಹುಟ್ಟುವ ಮಗುವು ಕುರೂಪಿದಡ್ಡವಾಗಿರುತ್ತದೆ. ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಈ ಸ್ಥಿತಿಗಳಲ್ಲಿ ಕುಂಟಿತವಾಗಿರುತ್ತದೆ. ಈ ಸ್ಥಿತಿಗೆ ಸಂಕುಚಿತ (Cretin) ಎಂದು ಕರೆಯುತ್ತಾರೆ.
ಈ ಎರಡೂ ಸ್ಥಿಗಳಿಗೆ ಥೈರಾಯ್ಡ್ ಹಾರ್ಮೋನ್‍ನಿಂದ ಚಿಕಿತ್ಸೆ ಮಾಡಬೇಕು.
ಮುಖ್ಯವಾಗಿ ಗಮನಿಸಿ ಅನುಸರಿಸಬೇಕಾದ ಸಲಹೆ / ಸೂಚನೆಗಳು.
• ಹೈಪೋಥೈರಾಯ್ಡಿಸಂಗೆ ನಿಖರವಾದ ಕಾರಣ ಗೊತ್ತಿಲ್ಲ. ಅದು ಒಂದು ಆಟೋ ಇಮ್ಯುನ್‍ಡಿಸೀಸ್ (ಸ್ವಯಂ ನಿರೋಧಕ) ಸ್ಥಿತಿಯಿಂದ ಎಂದು ಗೊತ್ತಾಗಿದೆ.
• ಮೇಲೆ ತಿಳಿಸಿದ ಯಾವುದಾದರೂ ಮುಖ್ಯ ರೋಗ ಲಕ್ಷಣಗಳಿದ್ದರೆ – ಚರ್ಮ ಒಣಗುವುದು, ಮುಖ ಊದಿಕೊಳ್ಳುವುದು, ಧ್ವನಿಯು ಗಡಸುತನವಾಗುವುದು ಇತ್ಯಾದಿಗಳಿಗೆ ವೈದ್ಯರ ಸಲಹೆ ಪಡೆಯಬೇಕು.
• ಒಂದು ಸಾರಿ ಚಿಕಿತ್ಸೆ ಪ್ರಾರಂಭಿಸಿದರೆ, ಸಾಯುವವರೆಗೂ ಮಾತ್ರೆ ತೆಗೆದುಕೊಳ್ಳುತ್ತಿರಬೇಕು.
• ಸಮುದ್ರದ ಆಹಾರ ತೆಗೆದುಕೊಂಡರೆ ಅಯೋಡಿನ್ ದೊರಕುತ್ತದೆ. (ಥೈರಾಕ್ಸಿನ್ ಹಾರ್ಮೋನ್ ಉತ್ಪತ್ತಿಗೆ ಬೇಕಾದ ಮೂಲವಸ್ತು)
ಡಾ.ಕೆ.ಪಿ.ದಾಮೋದರ

ಡಾ.ಕೆ.ಪಿ.ದಾಮೋದರ ಎಂ.ಬಿ.ಬಿ.ಎಸ್.,ಎಂ.ಡಿ.,ಡಿ.ಜಿ.ಒ.,ಎಂ.ಎಸ್.ಸಿ(ಯೋಗ)
ಅವರುನಮ್ಮ ನಡುವಿನ ಪ್ರಜ್ಞಾವಂತ ಮತ್ತು ಮಾನವೀಯತೆಯ ಸಾಕಾರವೆ ಆಗಿದ್ದಾರೆ.ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿ,ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು ನಮ್ಮ ಆಲೋಚನಾ ವೇದಿಕೆಯ ಗೌರವ ಸಲಹಗಾರರು. ನಿವೃತ್ತಿಯ ನಂತರ ಆರೋಗ್ಯ ಶಿಕ್ಷಣ ನೀಡುವಲ್ಲಿ,ಸಮಾಜ ಸೇವಾಕಾರ್ಯದಲ್ಲಿ ಆಸಕ್ತರಾಗಿರುವ ಅವರು ಯೋಗ ವಿಜ್ಞಾನದಲ್ಲಿ ಎಂ.ಎಸ್.ಸಿ. ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಪಡೆದು ಕಲಿಕೆಗೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಅನನ್ಯ ಸಾಧಕರು.