top of page

ತ್ರಿಭಾಷಾ ವ್ಯವಹಾರಿಕ ಶಬ್ದಕೋಶ - ಭುಜಂಗರಾವ್





ಒಂದು ಹೊಸಬಗೆಯ ಪ್ರಯತ್ನ

***************************

ಇದೊಂದು ವಿಶಿಷ್ಟವಾದ ಪ್ರಯತ್ನ. ವಿಶಿಷ್ಟ ಕೃತಿಯೂ ಹೌದು. ಇದನ್ನು ಬರೆದು ಪ್ರಕಟಿಸಿದವರು ಭುಜಂಗರಾವ್ ಸಾಳುಂಕೆ ಎಂಬ ೯೦ ರ ಹರೆಯದ ಮಹತ್ವಾಕಾಂಕ್ಷಿ ವ್ಯಕ್ತಿ. ಇಂಗ್ಲಿಷ್, ಕನ್ನಡ ಮತ್ತು ಮರಾಠಿ ತ್ರಿಭಾಷಾ ವ್ಯಾವಹಾರಿಕ ವಾಕ್ಯಕೋಶ ಇದು. ಮೂರೂ ಭಾಷೆಯ ಜನರಿಗೆ ಭಾಷೆಯನ್ನು ಕಲಿಯಲು ಅನುಕೂಲವಾಗುವ ಈ ೭೫೪ ಪುಟಗಳ ಬೃಹತ್ ಗ್ರಂಥವನ್ನು ರಚಿಸಲು ಅವರು ಒಂದೂವರೆ ದಶಕ ಕಾಲ ಹೆಣಗಾಡಿದ್ದಾರೆ. ಸ್ವಂತ ಹಣ ಲಕ್ಷದಷ್ಟು ಖರ್ಚು ಮಾಡಿದ್ದಾರೆ. ಕೆಲವರಿಂದ ಮೋಸ ಹೋಗಿ ಹಣವನ್ನೂ ಕಳೆದುಕೊಂಡಿದ್ದಾರೆ. ಆದರೂ ಹಟ ಬಿಡದ ತ್ರಿವಿಕ್ರಮನ ಹಾಗೆ ಭಗೀರಥ ಪ್ರಯತ್ನದಿಂದ ಹೊರತಂದಿದ್ದಾರೆ.

ಇದು ಹೊಸದಾಗಿ ಭಾಷೆಯನ್ನು ಕಲಿಯ ಬಯಸುವವರಿಗಾಗಿ ರಚಿಸಿದ್ದು. ವಿಶೇಷವಾಗಿ ಇದನ್ನು ಕನ್ನಡ/ ಇಂಗ್ಲಿಷ್ ಕಲಿಯಬಯಸುವ ಮರಾಠಿಗರಿಗಾಗಿ ರಚಿಸಿದ್ದೆನ್ನಬಹುದು. ವರ್ಣಮಾಲೆ, ಕಾಗುಣಿತ ಚಿಹ್ನೆಗಳು, ಕ್ಲಿಷ್ಟ ಸಂಯುಕ್ತಾಕ್ಷರಗಳು, ಶಬ್ದಗಳು, ಕ್ರಮವರಿತು ಬರೆಯುವ ಸಾಂಪ್ರದಾಯಿಕ ವ್ಯಾಕರಣ ದ ಉಪವಿಭಾಗಗಳನ್ನು ವಿಂಗಡಿಸುವಿಕೆ ಮೊದಲಾದವುಗಳನ್ನು ಮೊದಲ ಭಾಗದಲ್ಲಿ ಹೇಳಲಾಗಿದೆ.

ಎರಡನೇ ಭಾಗದಲ್ಲಿ ಗ್ರಂಥಸ್ಥ ಭಾಷೆಯ ವ್ಯಾವಹಾರಿಕ ಬಳಕೆಯ ವಾಕ್ಯಗಳು, ಉಪವಾಕ್ಯ, ಪದಪುಂಜಗಳನ್ನು ಅಳವಡಿಸಲಾಗಿದೆ.

ಮೂರನೆಯ ಭಾಗದಲ್ಲಿ ಸಂಖ್ಯಾವಾಚಕಗಳು, ನುಡಿಗಟ್ಟುಗಳು, ಗಾದೆಗಳು, ವಿರುದ್ಧಾರ್ಥಗಳು, ಜೋಡುನುಡಿಗಲು,ಸ್ತುತಿ ನಿಂದೆಗಳು ಎಲ್ಲ ಇವೆ.

ಭಾಷೆಯ ಮೂಲಭೂತ ಸ್ವರೂಪವನ್ನು ಅರಿಯಲು ಮತ್ತು ಕಲಿಯಲು ಈ ಗ್ರಂಥ ತುಂಬ ಉಪಯುಕ್ತವಾಗಿದೆ.

ಇಲ್ಲಿ ಇಂಗ್ಲಿಷ್, ಅದರ ಕನ್ನಡ ಮತ್ತು ಮರಾಠಿ ರೂಪಗಳನ್ನು ನೀಡಲಾಗಿದೆ. ಉದಾಹರಣೆಗೆ-

What colour do you like?

ನೀನು ಯಾವ ಬಣ್ಣವನ್ನು ಇಷ್ಟಪಡುವೆ?

ತುಮ್ಹಾಲಾ ಕೋಣತಾ ರಂಗ್ ಆವಡತೋ?

*

Who is coming?

ಯಾರು ಬರುತ್ತಿದ್ದಾರೆ?

ಕೋಣ್ ಏತ್ ಆಹೇ?

ಈ ರೀತಿ ಕನ್ನಡಿಗರು ಇಂಗ್ಲಿಷ್ ಮತ್ತು ಮರಾಠಿಯನ್ನು, ಮರಾಠಿಗರು ಕನ್ನಡ ಮತ್ತು ಇಂಗ್ಲಿಷ್ ನ್ನು ಕಲಿಯಲು ಇದು ಬಹಳ ಅನುಕೂಲಕರವಾಗಿದೆ. ಭಾಷಾಶಾಸ್ತ್ರದ ದೃಷ್ಟಿಯಿಂದ ಇದು ಮಹತ್ವದ ಕೊಡುಗೆ. ನಮ್ಮ ಶಿಕ್ಷಣ ಸಂಸ್ಥೆಗಳು ಇದನ್ನು ಮಕ್ಕಳ ಕಲಿಕೆಗಾಗಿ ಬಳಸಬಹುದಾಗಿದೆ. ಇಲ್ಲಿ ನಾವು ಗಮನಿಸಬೇಕಾದ ಒಂದು ವಿಚಾರ - ಪುಣೆಯಲ್ಲಿ ಶ್ರೀ ಕೃ. ಶಿ. ಹೆಗಡೆಯವರು " ಕನ್ನಡ ಮರಾಠಿ ಕಲಿಕಾ ಕೇಂದ್ರ" ವನ್ನು ನಡೆಸುತ್ತಿದ್ದಾರೆ. ಅಂತಹ ಯಾವುದೇ ಸಂಸ್ಥೆ ಎಲ್ಲೇ ಇದ್ದರೂ ಈ ಪುಸ್ತಕ ಅತ್ಯಂತ ಉಪಯುಕ್ತವೆನಿಸುತ್ತದೆ. ಕರ್ನಾಟಕದಲ್ಲಿ ವಾಸಿಸುವ ಮರಾಠಿಗರು ಕನ್ನಡ ಕಲಿಯಲು ಮತ್ತು ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಮರಾಠಿ ಕಲಿಯಲು ಇದನ್ನು ಪಠ್ಯವಾಗಿಸಬಹುದು.

ವಯೋವೃದ್ದ ಭುಜಂಗರಾವ್ ಅವರು ಬಹಳ ಶ್ರಮಪಟ್ಟು ಈ ಗ್ರಂಥ ರಚಿಸಿದ್ದಾರೆ. ಅವರ ಶ್ರಮ ಸಾರ್ಥಕವಾಗುವಂತೆ ನಾವು ಪ್ರಯತ್ನಿಸಬೇಕು. ಅವರಿದನ್ನು ಹಣಕಾಸಿನ ಲಾಭದ ದೃಷ್ಟಿ ಇಟ್ಟು ಪ್ರಕಟಿಸಿಲ್ಲ. ರಾಜ್ಯ ಸರಕಾರವೂ , ಸಂಘಸಂಸ್ಥೆಗಳೂ ಅವರ ಈ ಕಾರ್ಯಕ್ಕೆ ಉತ್ತೇಜನ ನೀಡಬೇಕು. ಈ ಪುಸ್ತಕ ಬೇಕಾದವರು ಭುಜಂಗರಾವ್ ಅವರನ್ನು ಸಂಪರ್ಕಿಸಬಹುದು.

ಅವರ ಮೊ. ನಂ. 9480027151


ಎಲ್.ಎಸ್.ಶಾಸ್ತ್ರಿ





33 views0 comments

Comments


bottom of page