ಹರ ಸಾಹಸ ಮಾಡಿ ಇವರು
ಮೊದಲು ಮೀಸೆ ತೂರಿಸಿದರು
ಕ್ರಮೇಣ ದೇಹ ಕಿರಿದಾಗಿಸಿ
ಒಳಗೆ ತೂರಿಕೊಂಡರು
ಹೊರಗಿನ ಸದ್ದು ಸುದ್ದಿ
ಎಲ್ಲವನು ಮರೆತ ಅಂಗುಲ ಹುಳು
ಅಂಗುಲ ಅಂಗುಲ ತೂರುತ್ತಾ
ಈಗ ಹೆಮ್ಮಗಲವಾಗಿದ್ದಾರೆ
ಮೀನಿಗೆ ಬಾಲ ಹಾವಿಗೆ ತಲೆ
ಕಾಲಕ್ಕೆ ತಕ್ಕಂತೆ ಬದುಕುವ ಕಲೆ
ಅಂಗುಲವೆ ತಿಮಿಂಗಲವಾಗಿ
ಎಲ್ಲವನು ನುಂಗಿದರೂ ಕಾಣದಂತೆ
ಇದ್ದವರು ಕಾಣೆಯಾಗಿದ್ದಾರೆ ಸ್ತುತಿ
ಪಾಠ ಭಜನೆ ಭೋ ಪರಾಕುಗಳಲ್ಲಿ
ಹಸಿರು ಕಾಡಿನಲ್ಲಿ ರಕ್ತದ ಸುದ್ದಿ
ಗನ್ನುಗಳ ಸನ್ನೆಗೆ ಗುಂಡಿನ ಸ್ಪೋಟ
ಮಲಗಿದವರೆಂದರು ಎಲ್ಲಿಯ ಸಿಡಿಮುದ್ದು
ಜೀವವನೆ ತುಂಡರಿಸಿದ ಗುಂಡು ತಾಗಿ
ಮಲಗಿದವರು ಮತ್ತೆ ಏಳಲೆ ಇಲ್ಲ
ಪತ್ರಿಕೆಯ ತುಂಬ ಗುಂಡಿನ ಕಾಳಗ
ಸದ್ದು ಸುದ್ದಿ ಹುರಿಗಡಲೆ ತಿಂದ ಹಾಗೆ
ಸುದ್ದಿಯನ್ನು ತಿಂದವರು ಬೆಳಗಿನ
ಬಿಸಿ ಕಾಫಿ ಗುಟುಕರಿಸಿ ಆಧುನಿಕ
ಶಸ್ತ್ರಾಸ್ತ್ರ ಪೂರೈಸುತ್ತೇವೆ ಎಂದು
ಸಾವಿನ ಚೀಟಿಯನು ಪತ್ರಿಕಾ ಪ್ರಕಟಣೆಗೆ
ಕಳಿಸಿ ಅಮಾಯಕರ ಹೆಣದ ಬೆಂಕಿಯಲ್ಲಿ
ಸಿಗರೇಟು ಹಚ್ಚಿಕೊಳ್ಳುವ ಹುನ್ನಾರ.
ಶ್ರೀಪಾದ ಶೆಟ್ಟಿ.
❤❤