[ಪ್ರಸಿದ್ಧ ಕತೆಗಾರ್ತಿ ಸುನಂದಾ ಕಡಮೆಯವರು ಅತಿವೃಸ್ಟಿಗೆ ಸಿಲುಕಿದ ದೀನ ಕುಟುಂಬದ ದಾರುಣ ಕತೆಯೊಂದನ್ನು ನಮ್ಮ 'ಆಲೋಚನೆ'ಗೆ ಕಳಿಸಿದ್ದು ಅದನ್ನು ತಮ್ಮ ಮುಂದಿಡಲು ಸಂತಸವೆನಿಸುತ್ತದೆ -ಸಂಪಾದಕ ]
ಇನ್ನೇನು ಮಳೆಗಾಲ ಮುಗಿಯುತ್ತ ಬಂತು ಅನ್ನುವ ಕಡೆಯ ದಿನಗಳು. ಕೊಡದಲ್ಲಿ ನೀರು ಎತ್ತಿ ಸುರಿದಂತೆ ಹೊರಗೆ ಧಾರಾಕಾರ ಮಳೆ. ಮುಂಗಾರಿನ ವಂಚನೆಯಿಂದ ಅಲ್ಪ ಸ್ವಲ್ಪ ಬರದ ಬಿಸಿ ಅನುಭವಿಸಿದ, ಬೆಣ್ಣೆ ಹಳ್ಳದ ಮಡಿಲಲ್ಲಿ ಬದುಕು ಕಟ್ಟಿಕೊಂಡ ಬಡ ರೈತ ಪಕೀರಪ್ಪ, ಸೀಗಿ ಹುಣ್ಣಿಮೆಯ ಮುನ್ನಾದಿನ ಹೊರಗೆ ಸುರಿಯುವ ಇಂಥ ಭೀಕರ ಏಕತಾನದ ಮಳೆ ನೋಡಿಯೇ ಬೆದರಿದ. ಮಣ್ಣಿನ ಗೋಡೆ, ಗಚ್ಚಿನ ಮುಚ್ಚಿಗೆಯ ಮನೆಯಲ್ಲಿ ಅಪ್ಪನ ಕಾಲದಿಂದಲೂ ರೈತಾಪಿ ಕಾಯಕವನ್ನೇ ನಂಬಿ ಉಸಿರಾಡಿಸುತ್ತಿರುವ ಪಕೀರಪ್ಪ ರಾತ್ರಿಯೆಲ್ಲ ನಿದ್ದೆಯಿಲ್ಲದೇ ಎದ್ದೆದ್ದು ಬಾಗಿಲು ತೆರೆದು ಮಳೆಯ ಆರ್ಭಟ ಕಂಡು ಇದ್ದಲ್ಲೇ ತತ್ತರಿಸಿದ. ಮೋಡವೇ ಕಿತ್ತು ಕೆಳ ಬಿದ್ದಂತೆ ಝಿಲ್ಲನೆ ಮಿಂಚಿನ ನಂತರ ಎರಗುವ ಗುಡುಗಿನ ಬೃಹ್ಮಾಂಡ ಸದ್ದಿಗೆ ನಾಲ್ಕರ ಪುಟ್ಟ ಮಗಳು ಸಂಗವ್ವ ಬೆಚ್ಚಿ ಬಿದ್ದು ಅವ್ವನನ್ನು ತಬ್ಬಿ ಮಲಗಿದಳು. ಒಳ ಮನೆಯಲ್ಲಿ ಇಬ್ಬರು ಮಕ್ಕಳನ್ನು ತನ್ನ ಹಳೆಯ ಸೀರೆಯ ದುಪ್ಪಟಿಯಿಂದ ಕಾಪಾಡಿಕೊಳ್ಳುವವಳಂತೆ ಬಳಸಿ ಹಿಡಿದು ಮಲಗಿದ್ದ ಹೆಂಡತಿಯೊಮ್ಮೆ ಎಬ್ಬಿಸಬೇಕೋ ಬೇಡವೊ ಎಂಬ ದ್ವಂದ್ವದಲ್ಲೇ ಪಕೀರಪ್ಪ ಬೆಳಗು ಮಾಡಿದ. ಎಷ್ಟೋ ಹೊತ್ತಿನಿಂದ ರಸ್ತೆಯ ನೀರು ರಭಸದಿಂದ ಹರಿದು ಪಕ್ಕದ ಹೊಳೆಯನ್ನು ಸೇರುತ್ತಿತ್ತು.
ಇನ್ನೇನು ಬೆಳಗಾಗಿಯೇ ಬಿಟ್ಟಿತು ಅನ್ನುವ ನಸುಕಿನ ಮೊದಲ ಜಾವದಲ್ಲಿ ಇದ್ದಕ್ಕಿದ್ದಂತೆ ನೀರು ಹೊಳೆಯ ಬದಿ ಹರಿಯುವದು ನಿಂತು, ಅಲ್ಲಲ್ಲೇ ರಸ್ತೆಯ ಕೆಂಪು ರಾಡಿ ನೀರು ಶೇಖರಗೊಳ್ಳತೊಡಗಿದಾಗಲೇ ಪಕೀರಪ್ಪನೊಳಗೊಂಡು ಗ್ರಾಮದ ಎಲ್ಲ ನಿವಾಸಿಗಳೂ ತಂತಮ್ಮ ಕೆಲಸ ಬಿಟ್ಟು ಬೀದಿಗೆ ಬಂದು ಗಾಬರಿಯಿಂದ ವೀಕ್ಷಿಸತೊಡಗಿದ್ದರು. ನೀರು ಕ್ಷಣ ಕ್ಷಣಕ್ಕೂ ಇಂಚಿ೦ಚೇ ಏರುತ್ತೇರುತ್ತ ಮೊದಲ ದಿನ ಸಂಜೆ ಪಕೀರಪ್ಪನ ಹೆಂಡತಿ ಕಾಶವ್ವ ಹಾಕಿದ ಮನೆಯೆದುರಿನ ರಂಗೋಲಿಯನ್ನು ತೊಳೆದುಕೊಂಡ ಜಲರಾಶಿ ಹೊಸ್ತಿಲು ದಾಟಿ ವರಾಂಡ ಪ್ರವೇಶಿಸಿತು. ಏನು ಎತ್ತ ಎಂದು ಯೋಚಿಸುವ ಮುನ್ನವೇ ದುಮ್ಮಿಕ್ಕುತ್ತಿರುವ ನೀರು ಅಡಿಗೆ ಮನೆ, ಮಲಗುವ ಕೋಣೆ, ಶೌಚಾಲಯದ ತುಂಬ ಜುಳು ಜುಳು ಪಸರಿಸುತ್ತ ಸಾಗಿ, ಅಷ್ಟರಲ್ಲಿ ಗಂಡ ಹೆಂಡತಿ ಇಬ್ಬರೂ ಸೇರಿ ಕೆಳಗಿದ್ದ ದಾನ್ಯದ ಚೀಲಗಳನ್ನು ಮೇಲಿನ ಎತ್ತರದ ಜಾಗೆಗೆ ಎತ್ತಿಡುವ ಅವಸರದ ಸಮಯದಲ್ಲೇ ಧಾನ್ಯದ ತಳ ಭಾಗ ಅದಾಗಲೇ ತೊಯ್ದಿತ್ತು. ಎಚ್ಚರವಾಗಿ ಎದ್ದು ಕೂತ ಮಕ್ಕಳಿಗೊ ಇದು ಭಾರೀ ಖುಷಿಯ ಸಂಗತಿ. ಮಳೆಗಾಲದಲ್ಲಿ ನೀರಿನಲ್ಲಿ ಆಡಲು ಹೊರಗೆ ಪ್ರತಿವರ್ಷ ರಸ್ತೆಯಲ್ಲಿ ನಿರ್ಮಾಣವಾಗುತ್ತಿದ್ದ ನೀರಿನ ಹೊಂಡಗಳಿಗೇ ಹೋಗಬೇಕಾಗಿತ್ತು. ಇಲ್ಲಿ ಹೀಗೆ ಹಳ್ಳವೇ ಮನೆಯೊಳಗೆ ನಡೆದು ಬಂದಂತೆ ಇಬ್ಬರೂ ಕಾಲು ಆಡಿಸಿ ಆಡಿಸಿ ನಗುತ್ತ ಕೆಲೆಯುತ್ತ ಆಡಿದರು. ಇದರಿಂದಾಗುವ ಅನಾಹುತದ ಕಲ್ಪನೆ ಮುಗ್ಧ ಮಕ್ಕಳ ಮನಸ್ಸಿಗೆ ನಿಲುಕಲಾಗದ ವಾಸ್ತವಾಗಿತ್ತು.
ವರ್ಷವಿಡೀ ಮನೆಗೆ ಉಣ್ಣಲು ಬೇಕಾಗುವ ಜೋಳ ಮತ್ತು ತೊಗರಿಯ ನಾಲ್ಕೈದು ಚೀಲಗಳನ್ನು ಪೇರಿಸಿಟ್ಟ ಬೆಂಚಿನ ಕಾಲನ್ನೂ ಸಹ ಏರುತ್ತಿದ್ದ ನೀರಿನ ಸೆಳೆತವನ್ನು ಗಮನಿಸಿದ ಪಕೀರಪ್ಪ, ನೀರು ಒಳಬರದಂತೆ ತಡೆಯಲು, ಹೊದ್ದು ಹಾಸುವ ದಪ್ಪ ದಪ್ಪ ದುಪ್ಪಟಿಯನ್ನೆಲ್ಲ ತಂದು ಹೊರ ಬಾಗಿಲಿಗೆ ಒತ್ತಿ ಒತ್ತಿ ನೀರು ನಿಲ್ಲಸಲು ಹೋರಾಡುತ್ತಿರುವಾಗಲೇ ಪುಟ್ಟ ಮಗಳು ಸಂಗವ್ವ 'ಅಪ್ಪಯ್ಯಾ ನಂದದು ದುಪ್ಪಟಿ' ಎಂದು ಕಸಿ ಕಸಿದು ಒಳ ಇರಿಸಿದವಳನ್ನು ಪಕೀರಪ್ಪ ಯಾವುದೋ ಚಿಂತೆಯಲ್ಲಿ ಕೆಟ್ಟದಾಗಿ ಗದರಿಬಿಟ್ಟ. ಅಳುತ್ತ ಅವ್ವನ ಮಡಿಲು ಸೇರಿದ ಸಂಗವ್ವ ಇನ್ನೊಂದೇ ಕ್ಷಣದಲ್ಲಿ ಎಲ್ಲ ಮರೆತವಳಂತೆ ಮನೆ ತುಂಬ ನಿಂತ ನೀರನ್ನು ನೋಡಿಯೇ ಅಣ್ಣನ ಪಾಟಿಚೀಲದ ಕಾಳಜಿಗೆ ಬಿದ್ದು ಅದನ್ನೆತ್ತಿ ಕೈಯಲ್ಲಿ ಹಿಡಿದುಕೊಂಡಳು.
ಹೊರಗಡೆ ಭೂಮಿಯೊಡಲಿಂದಲೇ ಜಲ ಉಕ್ಕಿ ನೆರೆದಂತೆ. ಮೇಲೆ ಜಲಪಾತದ ಮಳೆ. ಒಳ ಬಂದ ನೀರು ಪಾದ ಮುಳುಗಿಸಿ ಮೊಣಕಾಲಿನ ತನಕ ಸರಿದು, ಮಂಡಿಯ ಮಟ್ಟವನ್ನು ದಾಟಿ ಸೊಂಟದ ತನಕ ಏರುತ್ತಿದ್ದಾಗ ಪಕೀರಪ್ಪ ಮಗನನ್ನೂ ಕಾಶವ್ವ ಮಗಳನ್ನೂ ಹೆಗಲ ಮೇಲೆ ಹೊತ್ತು ಮನೆಯ ಹೊರಬಂದರೆ ಊರಿನ ಎಲ್ಲರೂ ಇವರಂತೆಯೇ ದಿಗ್ಭಾಂತರಾಗಿ ತೊಟ್ಟ ಬಟ್ಟೆಯಲ್ಲೇ ಎಲ್ಲವನ್ನೂ ತೊರೆದು ಕನಿಷ್ಠ ಪಕ್ಷ ಜೀವವನ್ನಾದರೂ ರಕ್ಷಿಸಿಕೊಳ್ಳಲು, ಸಾಗರದಂತೆ ನಿಂತೇ ಬಿಟ್ಟ ನೀರ ನಡುವೆಯೇ ಹಾದಿ ಮಾಡಿಕೊಂಡು ದಿಣ್ಣೆಯ ಪ್ರದೇಶಕ್ಕೆ ಹೊರಟಿದ್ದರು. ಮನೆಯಿಂದ ಹೊರಬೀಳುವಾಗ ಸಂಗವ್ವನ ಕೈಯಲ್ಲಿರುವ ಮಗ ಮಾಂತೇಶನ ಪಾಟಿಚೀಲವನ್ನು ಕಾಶವ್ವ ಕಸಿದು ಅಲ್ಲೇ ಒಗೆದಳು. ಪಕ್ಕದ ಮನೆಯ ಹನುಮಂತಪ್ಪ ಪಕೀರಪ್ಪನನ್ನು ಕುರಿತು, 'ಮನೀ ಬಾಗಿಲು ಮುಚ್ಚಿ ಅಗಳಿ ಹಾಕಿ ಬಾ, ಮನಿಯೊಳಗಿನ ಸಾಮಾನು ತೇಲ್ಕೋತ ಹೊರ ಬಂದೀತು' ಅಂದ. ಬೆಣ್ಣೆ ಹಳ್ಳ ಊರನ್ನೆಲ್ಲ ಕಬಳಿಸಿ ನಿಂತದ್ದರಿ೦ದ, ಕೊಂಚವೇ ಎತ್ತರ ಪ್ರದೇಶವಾಗಿರುವ ಬೆಣ್ಣೆ ಗುಡ್ಡದ ದಿನ್ನೆಯನ್ನು ಹತ್ತಿ ನಿಂತಾಗ ಎಲ್ಲರಿಗೂ ಪ್ರಾಣ ಉಳಿಸಿಕೊಂಡ ಎಂಥದೋ ಪ್ರಯಾಸದ ಸುಸ್ತು. ಜನರ ಗದ್ದಲ, ವೃದ್ಧರ ಮರುಗಾಟ, ಮಕ್ಕಳ ಅಳು, ಹೆಂಗಸರ ರೋದನ ಗಂಡಸರ ಜೋರು ಬಾಯಿಗಳಿಂದ ದಿನ್ನೆಯಲ್ಲಿ ಅವ್ಯಕ್ತ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಕಾಶವ್ವಳಂತೂ ಮನೆಯಲ್ಲಿ ಒಂದು ಬೆಂಕಿ ಪಟ್ಟಣವೂ ಇಲ್ಲದೇ ತೊಯ್ದು ಹೋದರೆ ನಾಳೆ ಒಲೆಗೆ ಬೆಂಕಿ ಹೊತ್ತಿಸುವುದು ಹೇಗೆ, ಒಣ ಕಟ್ಟಿಗೆಯನ್ನು ಎಲ್ಲಿಂದ ತರುವುದು ಎಂಬೆಲ್ಲ ಮಾತಾಡುತ್ತಿದ್ದಾಗ ಪಕೀರಪ್ಪ ಅವಳ ಬಾಯಿ ಮುಚ್ಚಿಸುತ್ತ, 'ಅಡಗೀಗ ಹಿಟ್ಟು ಉಳಿದಿದ್ದರಲ್ಲೇನ ನಿನ್ ಒಲೀ ಮಾತು' ಅಂತ ಗದರಿದ. ಕಾಶವ್ವನಿಗೆ ಈಗ ತಡೆಯಲಾರದೆ ಅಳು ಉಕ್ಕಿ ಬಂತು. ಪಕೀರಪ್ಪ ಇವೆಲ್ಲದರ ಯೋಚನೆಗೆ ನಿಂತಲ್ಲೇ ಒಮ್ಮೆ ಕಂಪಿಸಿದೆ.
ಸುಮ್ಮನೆ ನಿಂತು ಸುತ್ತ ನೋಡಿದರೆ ಒಂದು ದ್ವೀಪದಲ್ಲಿ ಸಿಕ್ಕಿಬಿದ್ದಂತಹ ಅನುಭವ. ಮಳೆಯ ರಭಸಕ್ಕೆ ತೊಯ್ದು ತೊಪ್ಪೆಯಾಗಿದ್ದ ಮುದುಕರ ಮಕ್ಕಳ ಬಟ್ಟೆಗಳನ್ನು ತೆಗೆದು ಹಿಂಡಿ ಹಿಂಡಿ ಮತ್ತೆ ತೊಡಿಸಿದರೂ ಇನ್ನೆರಡೇ ನಿಮಿಷಕ್ಕೆ ಪುನಃ ತೊಯ್ದುಹೋಗುತ್ತಿತ್ತು. ಗಡ ಗಡ ಚಳಿಯಲ್ಲಿ ನಡುಗುತ್ತಲೇ ನಿರ್ಗತಿಕರಾಗಿ ಬೆಟ್ಟದಲ್ಲಿ ಕೆಲ ತಾಸುಗಳನ್ನು ಒಂದು ರೀತಿಯ ಗಾಬರಿಯಲ್ಲೇ ಕಳೆದರು. ಇನ್ನೇನು ಕತ್ತಲಾವರಿಸುತ್ತಿದೆ ಎನ್ನಬೇಕಾದರೆ ಮಳೆಯ ರಭಸ ನಿಂತಿತ್ತು. ಬೆಳಿಗ್ಗೆಯಿಂದ ಹೊಟ್ಟೆಗೆ ಕೂಳಿಲ್ಲದೇ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಷ್ಟರಲ್ಲೇ ಆಕಾಶದಲ್ಲಿ ಹೆಲಿಕಾಪ್ಟರಿನ ಸದ್ದು ಕೇಳಿ ತಮ್ಮನ್ನು ರಕ್ಷಿಸಲು ಬಂತೆಂಬ ಭರವಸೆಯ ನಿರೀಕ್ಷೆಯಿಂದ ತುಸು ಜೀವ ಹಿಡಿದುಕೊಂಡು ಕಾದರು.
ಎರಡು ಮೂರು ಸುತ್ತು ಹಾಕಿ ಹೋದ ಹೆಲಿಕಾಪ್ಟರು ನಂತರ ಮತ್ತೆ ಮರಳಿ ಬಂದು ಬಹು ಹತ್ತಿರದ ತನಕ ಕೆಳಗಿಳಿದು ಕೆಲವು ಪೊಟ್ಟಣಗಳನ್ನು ತೂರಹತ್ತಿತು. ಆ ಪೊಟ್ಟಣವನ್ನು ಹೆಕ್ಕಿಕೊಳ್ಳಲು ಓಡಾಡಿ ಕೆಲವರು ಬಿದ್ದು ಕಾಲು ಕೈಯಿಗೆ ಗಾಯ ಮಾಡಿಕೊಂಡರು. ಸುಮ್ಮನೆ ನಿಂತವರಿಗೆ ತಾನಾಗಿ ದೊರಕದೇ ಎಲ್ಲ ಬಲಿಷ್ಠರ ಪಾಲೆಂಬ೦ತೆ ಆ ಅಂಥ ಅನಾಥ ಭಾವದಲ್ಲೂ ಅಲ್ಲಿ ಸಣ್ಣ ಪುಟ್ಟ ರಾಜಕೀಯಗಳು ನಡೆದವು. ಹೊಟ್ಟೆ ಚುರುಗುಡುತ್ತಿದ್ದರೂ ತಮಗೆ ಸಿಕ್ಕ ಪಾಲನ್ನು ಮಕ್ಕಳಿಗೇ ತಿನ್ನಿಸಿ ಪಕ್ಕೀರಪ್ಪ ಹಾಗೂ ಕಾಶವ್ವ ಇಬ್ಬರೂ ಆಕಾಶ ನೋಡುತ್ತ ನೆಲದಲ್ಲೇ ಅಡ್ಡಾದರು. ಮೇಲೆ ಆಕಾಶವೇ ಹೊದಿಕೆ. ತೊಯ್ದ ಸೀರೆಯ ಸೆರಗು ಕೊಂಚ ಗಾಳಿಗೆ ಬಾಡಿದ್ದರಿಂದ ಮಗಳು ಸಂಗವ್ವನಿಗೆ ಅದರಲ್ಲೇ ಹೊದಿಸಿ ತೊಡೆಯಲ್ಲೇ ಮಲಗಿಸಿದಳು ಕಾಶವ್ವ. ಆಹಾರ ಪೊಟ್ಟಣಗಳ ಜೊತೆಗಿದ್ದ ನೀರಿನ ಬಾಟಲಿಗಳೆಲ್ಲ ಖಾಲಿಯಾಗಿದ್ದವು. ಮಗ ಮಾಂತೇಶ ಅದೇ ವೇಳೆಗೆ ಎದ್ದು ನೀರು ಬೇಕೆಂದು ಹಟ ಹಿಡಿದಿದ್ದರಿಂದ ಪಕೀರಪ್ಪ, ಅಲ್ಲಿಯೇ ಸುತ್ತು ಮುತ್ತಲೂ ಇದೇ ಸ್ಥಿತಿಯಲ್ಲಿ ಕೂತಿದ್ದ ನಾಲ್ಕೈದು ಗುಂಪನ್ನು ಅಲೆದು ಯಾರೋ ದೊಡ್ಡ ಮನಸ್ಸು ಮಾಡಿ ಕೊಟ್ಟ, ತಳದಲ್ಲಿ ಉಳಿದಿದ್ದ ಎರಡೇ ಗುಟುಕು ನೀರನ್ನು ತಂದು ಮಗನಿಗೆ ಕುಡಿಸಿದ.
ಮಳೆ ಪೂರ್ತಿ ನಿಂತೇಬಿಟ್ಟದ್ದರಿಂದ ಕ್ರಮೇಣ ನೀರಿನ ಹರವು ಕಡಿಮೆಯಾಗಿ ಅಲ್ಲಲ್ಲಿ ಮನೆಗಳ ಬಗ್ನಾವಶೇಷಗಳು ಕಾಣತೊಡಗಿದವು. ನಸುಕಿನಲ್ಲಿ ಎಲ್ಲರೂ ದಿನ್ನೆಯಿಳಿದು ಊರ ಕಡೆ ಮುಖ ಮಾಡಿದಂತೆ ಪಕೀರಪ್ಪನ ಸಂಸಾರವೂ ಕೆಳಗಿಳಿಯತೊಡಗಿತು. ನೆಲದಲ್ಲಿ ಹೆಜ್ಜೆಯಿಡಲು ಬಾರದ ಹಾಗೆ ರಾಡಿ ಮಡುಗಟ್ಟಿತ್ತು. ಎಂಥದೋ ವಿಚಿತ್ರ ಕೊಳೆತ ವಾಸನೆ ಹೊಡೆಯುತ್ತಿತ್ತು. ದ್ವೀಪದಲ್ಲಿ ಜೀವ ಉಳಿಸಿಕೊಂಡು ಕೆಳಗಿಳಿಯುತ್ತಿದ್ದ ಈ ಸಾಹಸಿಗರ ಅನುಭವ ಕೇಳಲು ಪತ್ರಿಕೆಯವರು ಟೀವಿಯವರು ಕ್ಯಾಮರಾದೊಂದಿಗೆ ಓಡಿ ಬಂದು ಮುತ್ತಿಗೆ ಹಾಕಿದರು. ತಮ್ಮ ತಮ್ಮ ಮನೆಗಳ ಕಳೇಬರದ ಹಣೇಬರವನ್ನು ಕಾಣಲು ತಂತಮ್ಮ ಮನೆಯ ಬದಿ ಓಡುತ್ತಿದ್ದ ಈ ಅಮಾಯಕರಿಗೆ ಅವರಿಂದ ತಪ್ಪಿಸಿಕೊಳ್ಳುವುದು ಇನ್ನೊಂದೇ ಸಾಹಸವಾಯಿತು. ಊರಿನ ಬಹುತೇಕ ಮನೆಗಳಂತೆ ಪಕೀರಪ್ಪನ ಮನೆಯೂ ನೆಲಸಮವಾಗಿತ್ತು. ದಿನವಿಡೀ ನಿಂತ ನೀರು ಮಣ್ಣಿನ ಮನೆಯ ಗೋಡೆಗಳನ್ನು ಆಪೋಷನ ತೆಗೆದುಕೊಂಡುಬಿಟ್ಟಿತ್ತು. ತನ್ನ ಮನೆಯೆಲ್ಲಿದೆಯೆಂಬುದನ್ನೇ ಗುರುತಿಸಲು ಅಸಾಧ್ಯವಾದಂತೆ ಆತ ದಂಗಾಗಿ ನಂತೇ ಇದ್ದ. ಕರೆಂಟು ಕಂಬಗಳು ವೈರುಗಳು ಎಲ್ಲ ಕಪ್ಪು ಕಾವಳದ ರಾತ್ರಿ ನೀರಿನಲ್ಲಿ ಉರುಳುರುಳಿ ಬಿದ್ದು ಕಾಲು ಕಾಲಿಗೆ ತೊಡರುತ್ತಿದ್ದವು.
ಅಧಿಕಾರಿಗಳು ರಾಜಕಾರಣಿಗಳು ಊರಿನ ನಡುವಿರುವ ಅಶ್ವತ್ಥ ಕಟ್ಟೆಯ ಮೇಲೆ ಬಂದು ನಿಂತು, ಮುಂದೆ ನುಗ್ಗಿ ಬಂದವರನ್ನೆಲ್ಲ ಮಾತಾಡಿಸಿ ಶೀಘ್ರದಲ್ಲೇ ಎಲ್ಲ ಸರಿ ಮಾಡುವ ಭರವಸೆಯನ್ನಿತ್ತು ಅತ್ತ ಹೊರಟದ್ದೇ ಇತ್ತ ಗ್ರಾಮ ಪಂಚಾಯಿತಿ ಆವಾರದಲ್ಲಿ ಆಗಲೇ ನಿರಾಶ್ರಿತರಿಗಾಗಿಯೇ ಗಂಜಿ ಕೇಂದ್ರವೊಂದು ಶುರುವಾಗಿ ಎಲ್ಲ ಅತ್ತ ದೌಡಾಯಿಸಿದ್ದನ್ನು ಕಂಡ ಪಕೀರಪ್ಪ ಹೆಂಡತಿ ಮಕ್ಕಳನ್ನು ಕರೆದುಕೊಂಡು ಅತ್ತ ಸಾಗಿದ. ಎಲ್ಲರ ಕಣ್ಣಲ್ಲೂ ಒಂದೇ ತರಹದ ವೇದನೆ. ಜನರ ಸಂಖ್ಯೆ ಜಾಸ್ತಿಯಾಗಿ ಊಟದ ಬಟ್ಟಲಿನ ಸಂಖ್ಯೆ ಕಮ್ಮಿಯಿದ್ದುದಕ್ಕಾಗಿ ಒಂದೇ ಬಟ್ಟಲಲ್ಲಿ ನಾಲ್ವರೂ ಉಣ್ಣಬೇಕಾಯಿತು. ಖಾಲಿಯಾದೊಡನೆ ಕೂತಲ್ಲಿಯೇ ಬಂದು ಸ್ವಯಂ ಸೇವಕರು ಬಡಿಸುತ್ತಿದ್ದು ಆ ದಿನವೂ ಪಕೀರಪ್ಪಗೆ ಹೊಟ್ಟೆ ತುಂಬ ಉಣ್ಣಲಾಗಲಿಲ್ಲ. ಇನ್ನಾವುದೋ ಒಂದು ಕುಟುಂಬಕ್ಕೆ ಒಂದು ತಟ್ಟೆಯೂ ಸಿಗದೇ ಅವರ ಮನೆ ಯಜಮಾನ ಬಂದು ಬೇಗ ಬೇಗ ಉಣ್ಣಿರೆಂದು ಅವಸರಿಸಿದಾಗ, ನಿಧಾನ ಮೆಲ್ಲುತ್ತಿದ್ದ ಮಗಳು ಸಂಗವ್ವನಿಗಾಗಿ ಕಾಶವ್ವ ತನ್ನ ಸೆರಗಿನಲ್ಲಿಯೇ ಅನ್ನವನ್ನು ಕಟ್ಟಿಕೊಂಡಳು.
ಹೆಂಗಸರೆಲ್ಲ 'ಬಾಯಕ್ಕ ಇತ್ತ ಕುಂದ್ರಕ್ಕ' ಎನ್ನುತ್ತಲೇ ಆಜುಬಾಜು ಮನೆಯವರನ್ನು ಜೊತೆ ಕೂಡಿಸಿಕೊಳ್ಳುತ್ತಲೇ, ಮನೆ ನೆಲಸಮವಾದ, ಕಾಳುಕಡಿ ತೊಯ್ದು ತೊಪ್ಪೆಯಾದ, ಹೊಲದಲ್ಲಿ ಬೆಳೆದ ಬೆಳೆ ತೇಲಿಕೊಂಡು ಹೋದ ಬಗ್ಗೆ ಪರಸ್ಪರ ಹೇಳಿಕೊಂಡು ಕಣ್ಣೀರಾಗುತ್ತಿದ್ದಾಗ ಕಾಶವ್ವನೂ ಅವರ ನೋವಿನಲ್ಲಿ ತನ್ನದನ್ನೂ ಬೆರೆಸುತ್ತ ದುಃಖಿಸಿದಳು. 'ವರ್ಷದ ಕೂಳು ಕಸ್ಕೊಂಡ ಹಾಳಾದ ಮಳೀ' 'ಮೆಕ್ಕೆಜೋಳ, ಸೋಯಾಬಿನ್, ತೆನೀಲೆ ಮೊಳಕೀ ಒಡದೈತಿ ಫಸ್ಲು' 'ಉಣ್ಣಾಕ ಕೂಳಿಲ್ಲ, ನಿದ್ದೀ ಅನ್ನೂದು ಬಂಗಾರ ಅಗೇತಿ' 'ಈರುಳ್ಳಿ ಬೆಳೀ ಕೋಳ್ತು ಹೋಗ್ಯಾವು' 'ದಿನಕ್ಕ ಆರು ಲೀರ‍್ರು ಹಾಲು ಹಿಂಡತಿತ್ತು ನನ್ ಎಮ್ಮೀ ಮುಳ್ಗಿ ಎತ್ತಾಗೋ ತೇಲ್ಕೊಂಡ್ ಹೋತು' 'ರೊಕ್ಕಾ ಬ್ಯಾಡ್ರಿ ನಮ್ಗ, ಮೈ ಮ್ಯಾಗಿದ್ ಅರವೀ ಬಿಟ್ರ ಎಲ್ಲಾ ಮನೀ ಮಣ್ಣಿನ್ಯಾಗ ಮುಚ್ಚಿ ಹೋಗ್ಯಾವ್ರಿ, ತೊಟ್ಗೊಳ್ಳಾಕ ಅರವೀ ಕೊಡ್ರಿ' 'ದನದ ದೊಡ್ಡೀನೂ ಬಿದ್ದಾವ್ರೀ, ಉಳದ ದನಗಳ್ನ ಒಯ್ದು ಸಾಲೀ ವರಾಂಡದಾಗ ಕಟ್ಟೇವ್ರಿ' 'ಬಡವ್ರು ಸಾವ್ಕರ‍್ರು ಅನ್ನದ ಅಷ್ಟ್ರೂ ಬೀದೀಗ್ ಬಿದ್ದೇವ್ರೀ' 'ಮನೀ ಆಗೂತನಕ ಗುಡೀಯೊಳಗ ವಾಸ್ತವ್ಯ ಮಾಡೇವ್ರಿ' 'ಮುಂದೇನ್ ಅನ್ನೂದು ತಿಳೀವಲ್ದಾಗೇತಿ' ಬಗ್ನಗೊಂಡದ್ದು ಬರಿ ಮನೆ ಮತ್ತು ಹೊಲಗದ್ದೆಗಳಲ್ಲ. ಹಸಿ ಹಸಿ ಜೀವ ಕೂಡ.
ತನ್ನ ಮುರಿದು ಬಿದ್ದ ಮನೆಯ ನಡುವೆ ಹೆಂಡತಿ ಮಕ್ಕಳೊಡನೆ ನಿಂತು ಛಾಯಾಚಿತ್ರ ತೆಗೆಸಿಕೊಳ್ಳುವ ಸಂದರ್ಭವೇ ಪಕೀರಪ್ಪನನ್ನು ಇನ್ನಷ್ಟು ಹಿಂಸೆಗೆ ನೂಕಿತು. ಫೋಟೋಕ್ಕೆಂದು ಬಿದ್ದ ಮನೆಯ ನಡುವೆ ನಿಂತ ಅವನ ಮಗ ಎರಡನೆಯತ್ತೆಯ ಮಹಾಂತೇಶ ಅಪ್ಪನ ಕೈಯಿಂದ ಬಿಡಿಸಿಕೊಂಡು ಓಡಿ ತನ್ನ ಪಾಟಿ ಪುಸ್ತಕಕ್ಕಾಗಿ ಮಣ್ಣು ಬಗೆದು ಬಗೆದು ಹುಡುಕುತ್ತಿದ್ದ ದೃಶ್ಯ ಮಾತ್ರ ಪೋಟೋ ಹೊಡೆವ ಪತ್ರಿಕೆಯವರ ಕಣ್ಣಲ್ಲೂ ನೀರಾಡಿಸಿತು. ಮಾರನೇ ದಿನದ ಪತ್ರಿಕೆಯ ಮುಖಪುಟದಲ್ಲಿ' ಪ್ರಕೃತಿ ವಿಕೋಪದ ಅಸಂಬದ್ಧತೆಗೆ ಹಾಗೂ ಜೀವನ್ಮುಖೀ ಪಯಣಕ್ಕೆ ಹಿಡಿದ ಕನ್ನಡಿ' ಎಂಬ ಶೀರ್ಷಿಕೆಯಡಿ ಮಹಾಂತೇಶನ ಬಾವಚಿತ್ರ. ಕಾಶವ್ವನ ತೊಯ್ದ ಸೀರೆಯ ಸೆರಗಲ್ಲಿ ಮುಖ ಮುಚ್ಚಿ ಕೂತ ದಾರುಣತೆ ಬೆಣ್ಣೆ ಹಳ್ಳದ ಗುಂಟ ಹರಿಯತೊಡಗಿತ್ತು. ಕೆಸರಿನ ಹೊಂಡವಾದ ರಸ್ತೆಗಳು ಊರಿನ ಎಲ್ಲ ದಾರಿಗಳನ್ನೂ ಮುಚ್ಚಿಕೂತವು.
'ಯಾರ‍್ಯಾರು ಮನೀ ಕಳ್ಕೊಂಡೀರಿ ರ‍್ರಿ, ಯರ‍್ಯಾರ ಹೊಲದಾಗಿನ್ ಬೆಳೀ ನಾಶಾ ಆಗ್ಯಾವ ರ‍್ರಿ, ಮೊದ್ಲು ನಿಮ್ನಿಮ್ಮನೆ ಸಮಾ ಆದ ಮನೀ ಮುಂದ, ಹೊಲದಾಗ ನಿಂತು ಫೋಟೋ ತೆಗಿಸಬೇಕಾಕ್ಕೇತಿ, ನಿಮ್ ಅರ್ಜಿ ಜೋಡಿ ಅದನ್ನ ಲಗತ್ತಿಸದಿದ್ರ ಪರಿಹಾರ ಕೊಡಾಕ ಬರಂಗಿಲ್ಲ' ಎನ್ನುತ್ತ ಎಲ್ಲರನ್ನೂ ತನ್ನೆಡೆ ಸೆಳೆಯುತ್ತಿದ್ದ ಒಂದು ಗುಂಪಿನತ್ತ ಉಳಿದವರಂತೆಯೇ ಪಕೀರಪ್ಪನೂ ನಡೆದು ಹೋದ.
=000=
ಅಕ್ಕಿ ಆರಿಸಿ ಅನಗನ ಮಾಡಿದಂತೆ,ಹಿಟ್ಟನ್ನು ನಾದಿ ಹದ ಮಾಡಿ ರೊಟ್ಟಿ ಬಡಿದಂತೆ,ಬಡವರ ಬದುಕು ಮುಳುಗಡೆಯಾಗುವ ಪರಿಯನ್ನು ಮಂದ್ರದಲ್ಲಿ ಹಾಡುವಂತೆ,ಒಂದಿನಿತು ಅಮಾಯಕರ ಬವಣೆಯ ವಿವರ ನುಣುಚಿ ಹೋಗದಂತೆ ಎಲ್್ಲವನ್ನು ಕಟ್ಟಿ ಕತೆ ಮಾಡಿ ಬಡಿಸಿದರೂ ಉಣ್ಣಲಾರದ ಬೇಗೆ!! ಇಂತಹ ಕತೆ ಕೊಟ್ಟ ಸುನಂದಾ ಅಭಿನಂದನೆ ಎಂದರೆ ನೋವು ಕಾಡುತ್ತದೆ.ನಿಮ್ಮ ಪ್ರಜ್ಞೆಯಲ್ಲಿ ನೊಂದ ಹೂವೊಂದು ನೆನೆದು ತೇಲಿ ಬಂದ ಪರಿಯನ್ನು ದಕ್ಕಿಸಿಕೊಳ್ಳುವುದು ಹೇಗೆ!! ಡಾ.ಶ್ರೀಪಾದ ಶೆಟ್ಟಿ.
ಚನ್ನಾಗಿ ಕತೆ ಕಣ್ಣಿಗೆ ಕಟ್ಟುವಂತೆ ಹೆಣೆದ ಸುನಂದಾ ಕಡಮೆ ನಮನಗಳು