ನನ್ನ "ತುಡಿತ -ಮಿಡಿತ" ಕವನ ಸಂಕಲನದ ಒಂದು ಕವನ....
ಈ ಸಂದರ್ಭದಲ್ಲಿ ....
ಪುನೀತ್ ರವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ.... 🙏
ಮೃತ್ಯುವಿಗೆ.....
*****
ಸಾವೇ ನೀನೆಷ್ಟು ನಿರ್ದಯಿ
ಬೇಕೆಂದು ಬಯಸಿದವರ
ಸನಿಹಕ್ಕೂ ಸುಳಿಯುವುದಿಲ್ಲ!
ಬೇಡವೆಂದು ಪರಿಪರಿಯಾಗಿ
ಬೇಡಿದರೂ ಬಿಡುವುದಿಲ್ಲ!!
ಕಿಂಚಿತ್ತೂ ಕರುಣೆಯಿಲ್ಲದ
ಪಾಷಾಣ ಹೃದಯಿ!!
ಸಂಬಂಧಗಳ ಬೇರ್ಪಡಿಸಿ
ಅಸಹಾಯಕತೆ - ಅಳಲಿನ
ಸೌಧವನ್ನೇ ಸೃಷ್ಟಿಸುತ್ತ...
ಅನಿಶ್ಚಿತತೆ - ಅನಿರೀಕ್ಷಿತ -
ಅವಘಡಗಳ ಅವಲೋಕನಗೈಯುತ್ತಾ
ಸಂಭ್ರಮಿಸುತಿಹೆ ಏಕೇ????
ಪರರ ಸಂತಸದಲ್ಲೇ ಸುಖವನರಸುವ,
ಆ ಪರಿಗೆ, ನೀ......
ಹೊರತಾಗಿರುವಿಯೇಕೆ????
ಇರಲಿ ಬಿಡು,
ನನ್ನ ತರ್ಕಕ್ಕೆ ಉತ್ತರಿಸಲೇ ಬೇಕೆಂಬ,
ಹಂಬಲವೇನಿಲ್ಲ ;
ಎಲ್ಲ ಪ್ರಶ್ನೆಗಳಿಗೂ
ಉತ್ತರ ಸಿಗುವುದೂ ಇಲ್ಲ ;
ಮೃತ್ಯುವ ಇಲ್ಲವಾಗಿಸಿ
ಅಮರತ್ವವನೇ ನೀಡೆ0ಬ
ಮನವಿಯೂ ನನ್ನದಲ್ಲ...!!
ಕಂಬನಿಯ ಒರೆಸುವ ಕರವಾದರೂ ಆಗು ;
ಅಂಧಕಾರವ ತೊಡೆದು
ಗುರಿಯತ್ತ ಮುನ್ನಡೆಸುವ
ಪಥಿಕನಾದರೂ ಆಗು ;
ಸದ್ಭಾವ- ಸದಿಚ್ಛೆ - ಸಕರ್ಮಗಳೆಡೆ
ಸಾಗಿಸುವ ಸಾಧನವಾದರೂ ಆಗು :
ಪಾಶ ಬೀಸುವ ಮುನ್ನ,
ವ್ಯಕ್ತಿ - ಸ್ಥಿತಿ - ಕಾಲವ ಪರಿಗಣಿಸು ;
ಅಂತರಂಗದ ಕೋರಿಕೆಯ
ನೇಪಥ್ಯಕ್ಕೆ ಸರಿಸದೇ.....!!
ಸಾವಿತ್ರಿ ಶಾಸ್ತ್ರಿ, ಶಿರಸಿ.
ತುಂಬಾ ಚೆನ್ನಾಗಿ ಕವನ ಬರೆದಿದ್ದೀರಿ.
ಅರ್ಥಪೂರ್ಣವಾಗಿದೆ.