top of page

ತೊಡವು ಜಾನಪದ



‌‌ ‌‌‌‌‌‌‌‌ ಡಾ. ಪೆರ್ಲರ ಅಂಕಣ:


ವಸಂತೋಕ್ತಿ – 17.


ಉಡುಗೆ – ತೊಡುಗೆ ಎಂಬ ಜೋಡಿಪದವನ್ನು ಕೇಳಿದ್ದೇವೆ. ಉಡುವಂಥವುಗಳನ್ನು, ಅಂದರೆ ಮೈಮುಚ್ಚಿಕೊಳ್ಳುವ ಬಟ್ಟೆ ಬರೆಗಳನ್ನು ಉಡುಗೆ ಎಂದೂ ಅಲಂಕಾರಕ್ಕಾಗಿ ಧರಿಸುವಂಥವುಗಳನ್ನು- ಅಂದರೆ ತೊಟ್ಟುಕೊಳ್ಳುವಂಥವನ್ನು- ತೊಡುಗೆ ಎಂದೂ ಹೇಳಲಾಗಿದೆ.

ಆದರೆ ಭಾಷಿಕವಾಗಿ ತೊಡುಗೆ ಎಂಬುದಕ್ಕಿಂತ ತೊಡವು ಎಂಬುದು ಸೂಕ್ತವಾದ ಶಬ್ದ. ಆಭರಣಕ್ಕೆ ದೇಸೀಯವಾಗಿ ತೊಡವು ಎಂದು ಹೇಳಲಾಗಿದೆ.

ತೊಡವುಗಳು ಹೇಗೆ ಕಾಲಕಾಲಕ್ಕೆ ಬದಲಾಗುತ್ತ ಬಂದವು ಎಂಬುದು ಒಂದು ವ್ಯಾಪ್ತವಾದ ಅಧ್ಯಯನದ ವಿಷಯ. ಇವತ್ತಿನ ನಗರ ಜನಪದರಲ್ಲಿ ಯಾವ ರೀತಿಯ ತೊಡವುಗಳು ಬಳಕೆಯಲ್ಲಿವೆ, ಹಿಂದಿನವು ಯಾವ್ಯಾವುವು ಕಣ್ಮರೆಯಾಗಿವೆ ಅಥವಾ ರೂಪಾಂತರಗೊಂಡಿವೆ ಎಂಬುದು ಕೂಡ ಆಸಕ್ತಿದಾಯಕ ವಿಷಯ.

ತೊಡವುಗಳು ಅಥವಾ ಆಹಾರ್ಯ ನಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅನುಕೂಲವಾದವು; ಅನಾನುಕೂಲವಾಗುವಂತಿದ್ದರೆ ಅವುಗಳ ಬಳಕೆ ಮರೆಯಾಗುತ್ತದೆ. ಸೌಂದರ್ಯವನ್ನು ಮತ್ತು ಸೌಕರ್ಯವನ್ನು ಹೆಚ್ಚಿಸುವಂಥವು ಉಳಿದುಕೊಳ್ಳುತ್ತವೆ.

ಕೆಲವಕ್ಕೆ ಧಾರ್ಮಿಕ ಮಹತ್ತ್ವವುಂಟು. ಉದಾಹರಣೆಗೆ, ಮಹಿಳೆಯರು ಧರಿಸುವ ತಾಳಿ ಮತ್ತು ಕಾಲುಂಗುರ. ಇವೆರಡನ್ನು ಧರಿಸಿದರೆ ಆಕೆಗೆ ಮದುವೆಯಾಗಿದೆ ಎಂದು ಅರ್ಥ. ಅನ್ಯ ಮಹಿಳೆಯರನ್ನು ಕಣ್ಣೆತ್ತಿ ನೋಡಬಾರದು ಎಂಬುದು ಶಾಸ್ತ್ರವಿಧಿ. ತಲೆತಗ್ಗಿಸಿ ನೋಡುವಾಗ ಕಾಣುವುದು ಕಾಲು. ಕಾಲಬೆರಳುಗಳಲ್ಲಿ ಕಾಲುಂಗುರವಿದ್ದರೆ ಆಕೆಗೆ ಮದುವೆಯಾಗಿದೆಯೆಂದು ಅರ್ಥ. ಅದೇ ರೀತಿ ತುಸು ತಲೆಯೆತ್ತಿ ನೋಡಿದಾಗ ಎದೆಯಲ್ಲಿ ಕರಿಮಣಿಸರ ಮತ್ತು ಅದರಲ್ಲಿ ತಾಳಿ ನೇತಾಡುತ್ತಿದ್ದರೆ ಆಕೆಗೆ ಮದುವೆಯಾಗಿದೆಯೆಂಬುದು ಶತಃಸಿದ್ಧ. ಆಕೆಯನ್ನು ಗೌರವದ ಸೀಮಾರೇಖೆಯೊಳಗೆ ನೋಡಿ ಮರ್ಯಾದೆ ಮತ್ತು ರಕ್ಷಣೆ ನೀಡಬೇಕು.

ಸೊಂಟದ ಚೈನಿಗೆ ಕೂಡ ಧಾರ್ಮಿಕ ಮಹತ್ತ್ವವಿದೆ. ಉಡಿದಾರದ ಸ್ಥಾನವನ್ನು ಸೊಂಟದ ಬೆಳ್ಳಿಚೈನು ನಿರ್ವಹಿಸುತ್ತದೆ. ನೇವಳ ಎಂಬುದು ಅದರ ಇನ್ನೊಂದು ವಿನ್ಯಾಸ ಮತ್ತು ಹೆಸರು. ಸೊಂಟಚೈನಿನ ವಿನ್ಯಾಸದಲ್ಲಿ ವಿಶೇಷ ವೈವಿಧ್ಯಗಳಿಲ್ಲ. ಕಾಲದ ಪರೀಕ್ಷೆಯಲ್ಲಿ ಇದು ಹಿಂದಿನಿಂದಲೂ ಬಳಕೆಯಲ್ಲಿ ಬಂದಿದೆ.

ನಾಗರಿಕತೆ ಬೆಳೆಯುತ್ತಿರುವಂತೆ ಮತ್ತು ಜನರ ಅಭಿರುಚಿ ಹಾಗೂ ಸೌಂದರ್ಯಪ್ರಜ್ಞೆ ಬದಲಾದಂತೆ ತೊಡವುಗಳು ಬದಲಾಗುತ್ತ ಬಂದಿವೆ. ಉದಾಹರಣೆಗೆ, ಕಾಲಿನಕಡಗ, ಪುರುಷರ ತೋಳಬಂದಿ, ಪುರುಷರ ಟಿಕ್ಕಿ ಇತ್ಯಾದಿಗಳು ಈಗ ಮರೆಯಾಗಿವೆ (ಆದರೆ ಒಂದು ಕಿವಿಗೆ ಒಂಟಿ ಹಾಕುವ ಫ್ಯಾಷನ್ ಈಗ ಆರಂಭವಾಗಿದೆ!). ಸೊಂಟನೋವು ಅಥವಾ ಕಾಲಿನ ನೋವು ಇರುವವರು ಹಿಂದೆ ಹರಕೆಯ ರೂಪದಲ್ಲಿ ಕಾಲಿಗೆ ಬೆಳ್ಳಿಕಡಗವನ್ನು ಧರಿಸುತ್ತಿದ್ದರು. ಮೂಗಿನ ನತ್ತಿನಿಂದ ಕಿವಿಯನ್ನು ಜೋಡಿಸುವ ಚೈನು ಕೂಡ ಈಗ ಮರೆಯಾಗಿದೆ.

ಉಂಗುರಗಳು ವೈವಿಧ್ಯಮಯವಾಗಿವೆ. ಮದುವೆ ನಿಶ್ಚಿತಾರ್ಥದ ಮಾದರಿಯೊಂದು ವೈಶಿಷ್ಟ್ಯಪೂರ್ಣವಾದುದು. ತುಳು ಜನರು ನಿಶ್ಚಿತಾರ್ಥದ ಉಂಗುರವನ್ನು ಒಡ್ಡಿಉಂಗಿಲ ಎಂದು ಕರೆಯುವರು. ಅದರ ಗಾತ್ರ ಮತ್ತು ಆಕಾರ ಬಲು ಸುಂದರವಾಗಿದೆ. ನಿಶ್ಚಿತಾರ್ಥದ ಉಂಗುರವು ಇತ್ತೀಚೆಗೆ ಧಾರ್ಮಿಕ ಮಹತ್ತ್ವ ಪಡೆದುಕೊಂಡಿದೆ.

ಜನಪದರಲ್ಲಿ ಸೊಂಟದ ಕೆಳಭಾಗದಲ್ಲಿ ಚಿನ್ನದ ತೊಡವುಗಳನ್ನು ಧರಿಸುವ ಸಂಪ್ರದಾಯವಿರಲಿಲ್ಲ. ಸೊಂಟದಿಂದ ಕೆಳಭಾಗಕ್ಕೆ ಬೆಳ್ಳಿಯ ಅಥವಾ ತಾಮ್ರದ ಆಭರಣಗಳನ್ನಷ್ಟೇ ಧರಿಸುತ್ತಿದ್ದರು. ಆಧುನಿಕ ಜನರಲ್ಲಿ ಕೆಲವರು ಕಾಲಿಗೆ ಚಿನ್ನದ ಕಾಲುಚೈನು ಹಾಕಿಕೊಳ್ಳುವ ಪದ್ಧತಿ ಆರಂಭವಾಗಿದೆ. ಇದು ಅತಿಯಾದ ಶ್ರೀಮಂತಿಕೆಯ ಪ್ರದರ್ಶನ ಎಂಬ ಅಭಿಪ್ರಾಯವಿದೆ.

ಶಿರದ ಮೇಲೆ ಧರಿಸುವ ಆಭರಣಗಳಲ್ಲಿ ಮುಂದಲೆ ಬಹಳ ಪ್ರಸಿದ್ಧವಾದದ್ದು. ಶಿರದ ಎರಡು ಪಾರ್ಶ್ವಗಳಲ್ಲಿ ನೇತಾಡುವ ಚೈನು ಮತ್ತು ಪೆಂಡೆಂಟು ಮನೋಹರವಾಗಿದೆ. ಹಿಂಭಾಗದಲ್ಲಿ ಮುಡಿಗೆ ಸಿಕ್ಕಿಸುವ ಹೂ ಪ್ರಸಿದ್ಧವಾದ ಇನ್ನೊಂದು ತೊಡವು.

ಆಭರಣಗಳ ಸಾಲಿನಲ್ಲಿ ಕುತ್ತಿಗೆಗೆ ಹಾಕುವ ಸರಗಳು ಮತ್ತು ಕೈಗೆ ತೊಟ್ಟುಕೊಳ್ಳುವ ವಿಧವಿಧವಾದ ಬಳೆಗಳದೇ ಒಂದು ಶ್ರೇಣಿ. ಕಾಸಿನಸರ, ಮೊಗ್ಗಿನಸರ, ಮುತ್ತಿನಸರ, ಹವಳದಸರ, ನವರತ್ನಖಚಿತವಾದ ಹಾರಗಳು, ನೆಕ್ಲೆಸ್ ಗಳು ಬಹು ಪ್ರಸಿದ್ಧ. ಸರಗಳಲ್ಲಿ ನೇತಾಡುವ ಪದಕಗಳಲ್ಲಿ ಲಕ್ಷ್ಮಿ, ಗಣಪತಿ ಮುಂತಾದ ದೇವತೆಗಳ ಚಿತ್ರಗಳಿರುವುದು ಸೌಂದರ್ಯಪ್ರಜ್ಞೆಯೊಂದಿಗೆ ದೇವತಾರಾಧನೆಯ ಭಾಗವಾಗಿದೆ. ಸರಗಳನ್ನು ವಿಶೇಷ ಪೂಜೆಗಳ ಸಂದರ್ಭದಲ್ಲಿ ಅರ್ಚನೆಗೆ ಇಡುತ್ತಾರೆಂಬುದು ತೊಡವುಗಳ ಮಹತ್ತ್ವವನ್ನು ತೋರಿಸುತ್ತದೆ.

ಕಿವಿಯ ಆಭರಣಗಳದು ಇನ್ನೊಂದು ಶ್ರೇಣಿ. ಓಲೆ, ಬೆಂಡೋಲೆ, ಟಿಕ್ಕಿ, ಜುಮ್ಕಿ, ಕೊಪ್ಪು, ಬುಗುಡಿ, ಮಾಟಿ, ತಾಂಗುಸರಪಳಿ, ರಿಂಗು, ಬಾಸ್ಕೆಟ್ ರಿಂಗು ಇತ್ಯಾದಿಗಳು ಜನಪ್ರಿಯವಾದವು. ಅವುಗಳಲ್ಲಿರುವ ವಿಧವಿಧ ವಿನ್ಯಾಸಗಳು ಮನೋಹರವಾದವು. ಹಿಂದಿನ ಕಾಲದಲ್ಲಿ, ಅಷ್ಟೇಕೆ, ಇವತ್ತಿಗೂ ಕೂಡ ಮುಹೂರ್ತ ನೋಡಿಯೇ ಮಕ್ಕಳಿಗೆ ಕಿವಿ ಚುಚ್ಚಿಸಿಕೊಳ್ಳುವ ಭಾರತೀಯ ಸಂಪ್ರದಾಯವು ತೊಡವುಗಳೊಂದಿಗೆ ಧಾರ್ಮಿಕತೆಯು ಅವಿನಾಭಾವವಾಗಿ ಮಿಳಿತಗೊಂಡಿರುವುದರ ದ್ಯೋತಕವಾಗಿದೆ.

ಮೂಗಿನ ನತ್ತು ಹಾಗೂ ಮೂಗುಬೊಟ್ಟಿನಲ್ಲಿ ವಿಧವಿಧ ವಿನ್ಯಾಸಗಳಿವೆ. ತಲೆಗೂದಲಿಗೆ ಧರಿಸುವ ರಾಕಟೆ, ಜಡೆಯೊಂದಿಗೆ ಇಳಿಸುವ ಜಲ್ಲಿ, ಜಡೆಬಿಲ್ಲೆ ಮಹಿಳೆಯರ ಹಿಂಭಾಗವನ್ನು ಮನೋಹರವಾಗಿ ಕಾಣಿಸಬಲ್ಲುದಾಗಿದೆ.

ಮಹಿಳೆಯರು ಅಪರೂಪಕ್ಕೊಮ್ಮೆ ಶುಭ ಸಮಾರಂಭಗಳಲ್ಲಿ ಧರಿಸುವ ತೋಳಬಂದಿ ಮತ್ತು ಸೊಂಟದ ಒಡ್ಯಾಣ ಬಹುಸುಂದರವಾದವು. ತೊಡವುಗಳು ಸೌಂದರ್ಯವರ್ಧಕ ನಿಜ. ಆದರೆ ಅವು ಸಂಸ್ಕೃತಿಯ ವಾಹಕವೂ ಆಗಿ ಪ್ರವರ್ತಿಸುತ್ತಿರುವುದು ಚೋದ್ಯವಾಗಿದೆ.

ಸೊಂಟದ ಚೈನು ಅಥವಾ ನೇವಳದಲ್ಲಿ ವಿಶೇಷ ವಿನ್ಯಾಸಗಳಿಲ್ಲ. ಕಾಲುಚೈನಿನಲ್ಲಿ ಗೆಜ್ಜೆ ಇರುವುದು ವಿಶೇಷವಾಗಿದೆ. ನಡೆದಾಡುವಾಗ ಹಿತವಾದ ನಾದವೂ ಇರಲಿ ಎಂಬ ಭಾರತೀಯರ ಮಾಧುರ್ಯ ಮತ್ತು ಮಾರ್ದವದ ಪರಿಕಲ್ಪನೆ ಅರ್ಥಪೂರ್ಣವಾಗಿದೆ.

ಪ್ರಾದೇಶಿಕವಾಗಿ ಮತ್ತು ಭಿನ್ನಭಿನ್ನ ಸಮುದಾಯಗಳಲ್ಲಿ ಬಳಕೆಯಲ್ಲಿರುವ ನೂರಾರು ತೊಡವುಗಳಿವೆ. ನವರತ್ನಗಳು, ಹರಳುಗಳು, ಮಣಿಗಳು ತೊಡವುಗಳನ್ನು ಇನ್ನಷ್ಟು ಸುಂದರಗೊಳಿಸುವ ವಸ್ತುಗಳಾಗಿವೆ. ಕರ್ಮಣಿ ಸರದೊಳ್ ಚೆಂಬವಳಮಮ್ ಕೋದಂತಿರೆ ಎಂಬ ಮುದ್ದಣನ ಮಾತನ್ನು ನೆನಪಿಸಿಕೊಳ್ಳಬಹುದು! ಚಿನ್ನ, ಬೆಳ್ಳಿ, ತಾಮ್ರಗಳಿಂದ ತೊಡವುಗಳನ್ನು ಮಾಡುತ್ತಾರೆಂಬುದು ನಿಜವಾದರೂ ಚಿನ್ನದ ಸ್ಥಾನವನ್ನು ಬೇರಾವ ಲೋಹವೂ ಆಕ್ರಮಿಸಿಕೊಂಡಿಲ್ಲ!

ನಮ್ಮ ಬದುಕು ಹೀಗೆಯೇ ಎಂದು ಹೇಳಬರುವಂತಿಲ್ಲ. ಜನಪದರಲ್ಲಿ ಇದ್ದ ಒಂದು ನಂಬಿಕೆ ಏನೆಂದರೆ, ಎಲ್ಲಾದರೂ ಹಾದಿಬೀದಿಯಲ್ಲಿ ಬಿದ್ದು ಸತ್ತು ಹೋದರೆ ಶವಸಂಸ್ಕಾರಕ್ಕೆ ಮೈಮೇಲಿನ ತೊಡವುಗಳು ಉಪಯೋಗವಾಗಲಿ ಎಂಬುದಾಗಿತ್ತು. ಹುಟ್ಟಿನೊಂದಿಗೆ ಸಂಬಂಧ ಬೆಳೆಸಿಕೊಂಡಿರುವ ತೊಡವುಗಳು ಸಾವಿನ ವರೆಗೂ ಮನುಷ್ಯನೊಂದಿಗೆ ಹಾಸುಹೊಕ್ಕಾಗಿ ಆತನ ಅಂತ್ಯಕಾಲದಲ್ಲೂ ನೆರವಿಗೆ ಬರುತ್ತದೆ ಎಂಬುದು ಚೋದ್ಯದ ಸಂಗತಿ.

ಜನಪದರ ತೊಡವುಗಳು ಮತ್ತು ನಗರ ಜನಪದರಲ್ಲಿ ಈಗ ಬಳಕೆಯಲ್ಲಿರುವ ತೊಡವುಗಳು ಒಳ್ಳೆಯ ಜಾನಪದ ಅಧ್ಯಯನ ವಿಷಯ ಎಂಬುದರಲ್ಲಿ ಎರಡು ಮಾತಿಲ್ಲ.


ಡಾ.ವಸಂತಕುಮಾರ ಪೆರ್ಲ


ನಮ್ಮ ಆಲೋಚನೆ.ಕಾಂ ಪತ್ರಿಕೆಯ ಹಿತೈಷಿಗಳು ಈ ನಾಡುಕಂಡ ಪ್ರತಿಭಾವಂತ ಬರಹಗಾರರು ಆದ ಡಾ.ವಸಂತಕುಮಾರರು ತೊಡುಗೆಗಳ ಬಗ್ಗೆ ಬರೆದ ಅಭ್ಯಾಸಪೂರ್ಣವಾದ ಬರಹ ತೊಡವು ಜಾನಪದ ನಿಮ್ಮ ಓದು ಮತ್ತು ಪ್ರತಿಸ್ಪಂದನಕ್ಕಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ







51 views0 comments

Kommentarer


bottom of page