🌨️ ತಾಗಿದ ಮಳೆ 🌨️
- ಆಲೋಚನೆ
- Aug 4, 2021
- 1 min read
ನಿಮ್ಮಜ್ಜ ಬಂದಾಗ ನೋಡಲಿಕೆ ನನ್ನ,
ಹಿಂಗೇಯಾ ಧೋಧೋಧೋ
ಮಳೆ ಹೊಯ್ಯುತ್ತಿತ್ತು,
ಅನ್ನುತ್ತಿದ್ದಳು ಅಜ್ಜಿ--
--ಧೋಧೋಧೋ ಧೋ ಮಳೆ
ಹೊಯ್ವಾಗ ಅಂದು!!
ಎಂತಹ ಅಳಂತೀ!?
ಆಳೆತ್ತರ ಭೀಮಾ
ಕುತ್ತಿಗೆಯಲಿ ಕರಿದಾರ
ನೇತಾಡೋ ಶಾಮಾ
ನಮ್ಮೂರ ಹೆರಿ ಮನಸಾ
ಸಂಚೀ ಕೆಂಚಾಗೆ
ಕರಕೊಂಡೇ ಬಂದಿದ್ದ
ಕೈ ಹಿಡದಾ ಹುಂಜಾ!--
--ಬಂದಾಗ ಹಿಂಗೇಯಾ
ಮಳೆ ಹೊಯ್ಯುತಿತ್ತು.
ಬಿಡಲಿಲ್ಲ ಕೈ ಹಿಡದಾ
ಅಪ್ಪನಿಗೆ ಹೇಳಿ,
ನಾ ಬೇಡ ಅನಲಿಲ್ಲ
ಕಟ್ಟಿದ್ದ ತಾಳಿ;
ಹಬ್ಬುವ ಬಳ್ಳಿಗೆ
ಚಪ್ಪರವೆ ಅವನು,
ಹೆಣಗೇಯ ಬಿಡದಿಷ್ಟೂ
ಹಬ್ಬಿದ್ದೆ ನಾನೂ!
ಅಜ್ಜಿ ಅಂದಳು ಮೆಲ್ಲ
ಆಗಿ ಚಳಚssಳಿ!!
ಅಂದಳು:-"ಅಂದೂವಾ
ಹಿಂಗೇ ಮಳೆ ಇತ್ತು!"
ಅವನೆಂತಾ ಮನಸಂತೀ?
ಚೂರೂ ಹುಳುಕಿಲ್ಲ,
ಇಬ್ಬರೇ ಇದ್ದೆವೋ
ಕಾಡೂವ ತುಂಟ!
ಎಂತ ಮನಸಾ ಅಂತೀ!?
ಏನೂ ಸಮ ಅಲ್ಲ,
ಬಿಟ್ಟೋದ ಬರಲಿಲ್ಲ
ಇಲ್ಲಿಟ್ಟೇ ಗಂಟಾ!
ಹೋಬಾಗೆ ಹಿಂಗೇಯಾ
ಮಳೆ ಹೊಯ್ಯುತಿತ್ತು.
ಅಂಬೂವ ಅಜ್ಜಿsಯ ಕಣ್ಣಲ್ಲೂ ಮಳೆಯು
ಹೊರಗೂ ಮಳೆ ಒಳಗೂ ಮಳೆ
ಎಲ್ಲೆಲ್ಲೂ ಮಳೆಯು!
ಮನಸೀಗೂ ತಾಗಿತ್ತು;ನೋಡುತ್ತಾ ನಿಂತ!!
ಗಣಪತಿ ಗೌಡ,ಹೊನ್ನಳ್ಳಿ
ಅಂಕೋಲ
Comments