top of page

ತರಕಾರಿ ಜಾನಪದ



ಡಾ. ಪೆರ್ಲರ ಅಂಕಣ

ವಸಂತೋಕ್ತಿ – 20


ತರಕಾರಿ ಜಾನಪದ ಎಂಬುದು ವೈಶಿಷ್ಟ್ಯಪೂರ್ಣವಾದ ಒಂದು ಜಾನಪದ ಅಧ್ಯಯನ ವಿಷಯ. ತುಂಬ ಅಪರೂಪದ ವಿಷಯವೂ ಹೌದು.

ಮೂಲತಃ ಮನುಷ್ಯ ಸಸ್ಯಾಹಾರಿ. ಮಾಂಸಾಹಾರ ಅನಂತರ ರೂಢಿಸಿಕೊಂಡದ್ದು. ಮನುಷ್ಯನ ದೇಹರಚನೆ, ಹಲ್ಲುಗಳ ವಿನ್ಯಾಸ ಮತ್ತು ಪಚನಾಂಗಗಳ ವ್ಯವಸ್ಥೆ ಸಸ್ಯಾಹಾರಿ ಪ್ರಾಣಿಗಳದ್ದು. ಹಸಿಮಾಂಸವನ್ನು ಬಾಯಿಂದ ಕಚ್ಚಿ ಹರಿದು ಮನುಷ್ಯ ತಿನ್ನಲಾರ. ಉಪ್ಪು ಹುಳಿ ಖಾರ ಹಾಕಿ ಬೇಯಿಸಿ ತಿನ್ನುವುದೇ ಮಾಂಸಾಹಾರವನ್ನು ಆತ ಕ್ರಮೇಣ ರೂಢಿಸಿಕೊಂಡುದು ಎಂಬುದನ್ನು ಶ್ರುತಪಡಿಸುವ ಅಂಶ.

ಪ್ರಕೃತಿಯು ಮನುಷ್ಯನಿಗೆ ಋತುಮಾನಕ್ಕೆ ಅನುಸಾರವಾಗಿ ತಿನ್ನಲು ಚಿಗುರು ಎಲೆ ಸೊಪ್ಪು ತೊಗಟೆ ಬೇರು ತರಕಾರಿ ಹಣ್ಣುಹಂಪಲು ಗೆಡ್ಡೆಗೆಣಸು ಕಂದಮೂಲಗಳನ್ನು ಒದಗಿಸಿಕೊಟ್ಟಿದೆ. ಇವತ್ತಿಗೂ ಸಸ್ಯಾಹಾರಿ ಪ್ರಾಣಿಗಳು ಇವುಗಳನ್ನು ತಿಂದೇ ಬದುಕುತ್ತಿವೆ. ಮನುಷ್ಯ ಕೂಡ ಹಾಗೆಯೇ ಬಾಳಬೇಕಾಗಿದೆ. ಅದರಿಂದ ಆರೋಗ್ಯ ಮತ್ತು ಆಯುಸ್ಸು ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.

ಪರಿಸರಕ್ಕೆ ಹೊಂದಿಕೊಂಡು ಸಾವಿರಾರು ವರ್ಷಗಳಿಂದ ಸ್ಥಳೀಯವಾಗಿ ಸಮೃದ್ಧವಾಗಿ ಬೆಳೆಯುವ ತರಕಾರಿಗಳನ್ನು ದೇಸೀ ತಳಿಗಳೆಂದು ಹೇಳಲಾಗಿದೆ. ದೇಸೀ ತಳಿಗಳನ್ನು ನಮ್ಮ ಅಧ್ಯಯನಕ್ಕೆ ಅಗತ್ಯವಾದ ಸ್ಥಳೀಯ ತರಕಾರಿಗಳೆಂದು ಗುರುತಿಸಬೇಕಾಗಿದೆ.

ಹಲವು ತರಕಾರಿಗಳು ಬೇರೆ ಬೇರೆ ಪ್ರದೇಶಗಳಿಂದ ಬಂದು ಈಗ ವಿಪುಲವಾಗಿ ವೈವಿಧ್ಯಮಯವಾಗಿ ಬೆಳೆಯಲಾಗುತ್ತಿದ್ದರೂ (ಉದಾ: ಟೊಮೆಟೋ, ಬೀನ್ಸ್ ಇತ್ಯಾದಿ) ಪ್ರತಿಯೊಂದು ಪ್ರದೇಶದಲ್ಲಿಯೂ ಕಾಲದ ಪರೀಕ್ಷೆಯಲ್ಲಿ ಗೆದ್ದು ಬಂದ ಹಲವು ಮೂಲ ತರಕಾರಿಗಳಿವೆ. ಅವು ಆಯಾ ಪ್ರದೇಶದಲ್ಲಿ ಮಾತ್ರ ತಕ್ಕ ರುಚಿಯನ್ನು ಮೈಗೂಡಿಸಿಕೊಂಡು ಬೆಳೆಯುವಂಥವು ಮತ್ತು ಅವುಗಳ ಸುತ್ತ ಕೆಲವು ನಂಬಿಕೆಗಳು ಬೆಳೆದಿರುತ್ತವೆ.

ಒಂದೆರಡು ತರಕಾರಿಗಳನ್ನು ಹೆಸರಿಸುವ ಮೂಲಕ ವಿಷಯವನ್ನು ಸ್ಫುಟವಾಗಿ ಮತ್ತು ಸ್ಪಷ್ಟವಾಗಿ ವಿಷದೀಕರಿಸಿಕೊಳ್ಳಬಹುದು. ಉದಾಹರಣೆಗೆ, ಮಂಗಳೂರು ಸೌತೆ. ಇದು ಕರಾವಳಿ ಭಾಗದಲ್ಲಿ ಬೆಳೆಯುವ ಒಂದು ವಿಶಿಷ್ಟ ತರಕಾರಿ. ಭೂತಕೋಲ - ತಂಬಿಲಗಳ ಸಂದರ್ಭದಲ್ಲಿ ಭೂತಕ್ಕೆ ಬಡಿಸಲು ಸೌತೆಕಾಯಿಯನ್ನು ದೊಡ್ಡ ಹೋಳುಗಳಾಗಿ ಹೆಚ್ಚಿ ಮಾಡುವ ಸಾಂಬಾರು ತೀರ ಅವಶ್ಯ. ಅದೇ ರೀತಿ ವೈಕುಂಠ ಸಮಾರಾಧನೆ, ತಿಥಿ ಮುಂತಾದ ಅಪರಕ್ರಿಯೆಗಳಿಗೆ ಈ ತರಕಾರಿಯ ಬಳಕೆ ಹೆಚ್ಚು.

ಮಟ್ಟುಗುಳ್ಳ ಎಂಬ ವಿಶಿಷ್ಟ ರುಚಿ ಹಾಗೂ ಪರಿಮಳದ ಬದನೆ ಉಡುಪಿಯ ಶ್ರೀಕೃಷ್ಣನಿಗೆ ನೈವೇದ್ಯಕ್ಕೆ ಬೇಕಾದ ವಿಶೇಷವಾದ ತರಕಾರಿ. ಇದರ ಸಾಂಬಾರು ಮತ್ತು ಬಜ್ಜಿ ಶ್ರೀಕೃಷ್ಣನಿಗೆ ಅರ್ಪಿಸಲು ಬೇಕೇ ಬೇಕು. ಕುಂಬಳಕಾಯಿ (ಸಂಸ್ಕೃತದಲ್ಲಿ ಕೂಷ್ಮಾಂಡ) ಭಾರತದಾದ್ಯಂತ ಬೆಳೆಯಲಾಗುವ ಒಂದು ತರಕಾರಿ. ಅದರ ಸುತ್ತ ಹಲವಾರು ಜನಪದ ಮತ್ತು ಧಾರ್ಮಿಕ ನಂಬಿಕೆಗಳು ನೆಲೆ ಮಾಡಿವೆ. ಅದು ಶರೀರಕ್ಕೆ ತಂಪು ನೀಡುವ ಮತ್ತು ಹಲವು ಔಷಧೀಯ ಗುಣವುಳ್ಳ ಒಂದು ತರಕಾರಿ ಹೌದು. ಆದರೆ ಅದರ ಬಳಕೆ ಕೆಲವು ವಿಧಿ ನಿಷೇಧಗಳ ನಡುವೆ ಇದೆ. ಕುಂಬಳಕಾಯಿಯನ್ನು ಅಪರಕ್ರಿಯೆಗಳ ಸಂದರ್ಭದಲ್ಲಿ ವಿಶೇಷವಾಗಿ ಬಳಕೆ ಮಾಡಲಾಗುತ್ತದೆ. ಕುಂಬಳಕಾಯಿಗೆ ಸಣ್ಣ ತೂತು ಮಾಡಿ ಅದರೊಳಗೆ ಕುಂಕುಮ ತುಂಬಿ ‘ಬಲಿ’ ಕೊಡುವ ಕ್ರಿಯೆ ತುಂಬ ಪ್ರಸಿದ್ಧವಾದದ್ದು. ಕ್ಷುದ್ರದೇವತೆಗಳಿಗೆ ಬಲಿ ಅರ್ಪಿಸಲು ಕುಂಬಳಕಾಯಿ ಬೇಕೇ ಬೇಕು. ಅಶುಭವನ್ನು ಮತ್ತು ನಕಾರಾತ್ಮಕ ಶಕ್ತಿಯನ್ನು ನಿವಾರಿಸುವ ಶಕ್ತಿ ಕುಂಬಳಕಾಯಿಗೆ ಇದೆ ಎಂದು ನಂಬಲಾಗಿದೆ. ಹಾಗಾಗಿ ಕಟ್ಟಡದ ಪ್ರವೇಶದ್ವಾರದ ಎದುರು ಕುಂಕುಮ ಪೂಸಿದ ಕುಂಬಳವನ್ನು ಕಟ್ಟಿ ನೇತುಹಾಕುವ ಪದ್ಧತಿ ಇದೆ.

ಒಂದು ಬಳ್ಳಿಯಲ್ಲಿ ಒಂದೇ ಕುಂಬಳಕಾಯಿ ಬೆಳೆದರೆ ಅದನ್ನು ಮನೆಯಲ್ಲಿ ಉಪಯೋಗಿಸದೆ ದೇವಸ್ಥಾನಕ್ಕೆ ಅಥವಾ ಬ್ರಾಹ್ಮಣರಿಗೆ ಅರ್ಪಿಸಬೇಕೆಂಬ ನಂಬಿಕೆಯಿದೆ. ತಂದೆ ತಾಯಿ ಜೀವಂತ ಇರುವವರು ಕುಂಬಳಕಾಯಿ ಹೆಚ್ಚಬಾರದು, ಅಮಾವಾಸ್ಯೆ ದಿನ ಹಾಗೂ ಮಂಗಳವಾರ ಮತ್ತು ಶುಕ್ರವಾರಗಳಂದು ಹೆಚ್ಚಬಾರದು ಎಂಬ ನಿಯಮ ಇದೆ. ಅದೇ ರೀತಿ ಪೂರ್ವಕ್ಕೆ ಮುಖ ಮಾಡಿ ಕುಳಿತು ಹೆಚ್ಚಬೇಕೆಂಬುದು ಕ್ರಮ. ಪೂಜೆ ಮತ್ತಿನ್ನಿತರ ಯಾವುದೇ ಶುಭ ಕಾರ್ಯಗಳಿಗೆ ಕುಂಬಳಕಾಯಿಯನ್ನು ಉಪಯೋಗಿಸಬಾರದು ಎಂಬ ನಿಷೇಧವಿದೆ.

ಬಾಳೆಕಾಯಿಯನ್ನು ತರಕಾರಿಯಂತೆ ಬಳಸುವುದುಂಟು. ಅದನ್ನು ದೊಡ್ಡದಾಗಿ ಹೆಚ್ಚಿ ಮಾಡುವ ಸಾಂಬಾರು ಭೂತಕ್ಕೆ ಬಡಿಸಲು ತೀರ ಅವಶ್ಯ. ಕದಳಿ ಬಾಳೆಹಣ್ಣಿನ ಧಾರ್ಮಿಕ ಮಹತ್ವವನ್ನು ಎಲ್ಲರೂ ಬಲ್ಲರು. ದೇವರ ನೈವೇದ್ಯಕ್ಕೆ ಕದಳಿ ಬಾಳೆಹಣ್ಣು ಪ್ರಶಸ್ತ.

ನಿಂಬೆಹಣ್ಣಿನ ಧಾರ್ಮಿಕ ಮಹತ್ವವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮಾಟಮಂತ್ರಗಳನ್ನು ನಿವಾರಿಸುವ ಶಕ್ತಿ ನಿಂಬೆಹಣ್ಣಿಗಿದೆ ಎಂದು ನಂಬಲಾಗಿದೆ. ಹಲವು ವೈದಿಕ ಕಾರ್ಯಕ್ರಮಗಳಲ್ಲಿ ನಿಂಬೆಹಣ್ಣು ಬೇಕೇ ಬೇಕು.

ದೊಡ್ಲು ಹುಳಿ ಎಂಬೊಂದು ಹಣ್ಣು (ನಿಂಬೆಹಣ್ಣಿನ ಪ್ರಭೇದ) ಸತ್ಯನಾರಾಯಣ ಪೂಜೆಯ ನೈವೇದ್ಯಕ್ಕೆ ತೀರ ಅವಶ್ಯ. ಹಾಗಲಕಾಯಿ ಜಾತಿಗೆ ಸೇರಿದ, ವಿಶೇಷವಾಗಿ ಕರಾವಳಿ ಭಾಗದಲ್ಲಿ ದೊರೆಯುವ ಕಾಡುಪೀರೆ ಒಂದು ಸ್ವಾದಿಷ್ಟ ತರಕಾರಿ. ಇದರ ಬಜ್ಜಿ ಮತ್ತು ಮಜ್ಜಿಗೆಹುಳಿ ಬಲು ಪ್ರಸಿದ್ಧ. ಆದರೆ ಇದನ್ನು ಕೃಷಿ ಮಾಡಿ ಬೆಳೆಸಬಾರದೆಂಬ ಒಂದು ನಿಷೇಧ ಜನಜನಿತವಾಗಿದೆ. (ಒಂದು ವೇಳೆ ಕೃಷಿ ಮಾಡಿದಾಗ) ಅದರ ಕಾಯಿ ದೊಡ್ಡದಾಗಿ ತುಂಬ ಸಂಖ್ಯೆಯಲ್ಲಿ ಬೆಳೆದರೆ ಮನೆ ಯಜಮಾನನಿಗೆ ಅಪಾಯ ಅನ್ನುತ್ತಾರೆ. ಒಂದುವೇಳೆ ಕಾಡುಪೀರೆಯನ್ನು ಕೃಷಿ ಉದ್ದೇಶದಿಂದ ನೆಟ್ಟು ಬೆಳೆಸುವುದಾದರೆ- ನೆಡುವಾಗ ತಲೆಯ ಮೇಲೆ ಚಪ್ಪಟೆಯಾದ ಕಲ್ಲೊಂದನ್ನು ಕಟ್ಟಿಕೊಳ್ಳಬೇಕೆಂಬ ನಂಬಿಕೆ ಇದೆ.

ಅಂಬಟೆ, ಬಸಳೆ ಇತ್ಯಾದಿಗಳನ್ನು ಶುಭಕಾರ್ಯಗಳಲ್ಲಿ ಬಳಸಬಾರದು ಎಂಬ ನಿಯಮ ಇದೆ. ಅದೇ ರೀತಿ ನುಗ್ಗೆ ಮತ್ತು ದೀವಿಹಲಸನ್ನು ಮನೆಯ ಸಮೀಪ ನೆಟ್ಟು ಬೆಳೆಸಬಾರದೆಂದು ಹೇಳುತ್ತಾರೆ. ಬಹುಶಃ ಅವು ಎತ್ತರವಾಗಿ ಬೆಳೆಯುವುದರಿಂದ ಗಾಳಿ ಮಳೆಗೆ ಮುರಿದು ಬಿದ್ದು ಮನೆಗೆ ಹಾನಿ ಸಂಭವಿಸಬಹುದು ಎಂಬ ಕಾರಣವಿದ್ದೀತು!

ಯಾವುದೇ ತರಕಾರಿ ಕ್ರಿಮಿಕೀಟಗಳ ದಾಳಿಗೆ ತುತ್ತಾಗದೆ ಚೆನ್ನಾಗಿ ಬೆಳೆಯಬೇಕಾದರೆ ಅದರ ಜೊತೆಗೆ ಚೆಂಡುಹೂವನ್ನು ಬೆಳೆಸಬೇಕೆಂಬುದು ಜನಪದರ ಅನುಭವದ ನುಡಿ. ಆಗ ಕೀಟಗಳೆಲ್ಲ ಚೆಂಡುಹೂವಿಗೆ ಆಕರ್ಷಿತಗೊಂಡು ತರಕಾರಿ ಸುರಕ್ಷಿತವಾಗಿ ಬೆಳೆಯುತ್ತದೆ.

ಜನಪದರು ತಾವು ಬೆಳೆಸಿದ ತರಕಾರಿಗಳನ್ನು ವಿಷು ಸಂಕ್ರಮಣದಂದು ದೇವರೆದುರು ಒಪ್ಪಓರಣವಾಗಿ ಜೋಡಿಸಿ ದೇವರಿಗೆ ಸಮರ್ಪಿಸಿ ಪೂಜಿಸುವ ಪದ್ಧತಿಯಿದೆ. ಬೆಳಗ್ಗೆದ್ದು ಈ ಐಸಿರಿಯನ್ನು ಕಣ್ತುಂಬಿಕೊಳ್ಳಬೇಕೆಂಬುದು (ಕಣಿ ನೋಡುವುದು) ಜನಪದ ನಂಬಿಕೆ. ಹಳ್ಳಿಗಳಲ್ಲಿ ಇಂದಿಗೂ ಇದನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ಹಳ್ಳಿಗಳಲ್ಲಿ ದೇವರಿಗೆ ಹೊರೆಕಾಣಿಕೆ ಅರ್ಪಿಸುವ ಪದ್ಧತಿಯೊಂದು ರೂಢಿಯಲ್ಲಿದೆ. ತಾವು ಬೆಳೆದ ತರಕಾರಿಗಳನ್ನು, ಫಲವಸ್ತುಗಳನ್ನು ಜಾತ್ರೆ ಉತ್ಸವಾದಿಗಳ ಸಂದರ್ಭದಲ್ಲಿ ಊರ ದೇವರಿಗೆ ಒಟ್ಟಾಗಿ ಮೆರವಣಿಗೆಯಲ್ಲಿ ಹೋಗಿ ಸಮರ್ಪಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆ ಮೂಲಕ ಉತ್ತಮ ಬದುಕು ಕಟ್ಟಿ ಕೊಟ್ಟ ದೇವರಿಗೆ ಕೃತಜ್ಞತಾ ಸಮರ್ಪಣೆ ಮಾಡಲಾಗುತ್ತದೆ.

ತರಕಾರಿ ಜಾನಪದವೆಂಬುದು ಮೇಲ್ನೋಟಕ್ಕೆ ಸಣ್ಣ ವಿಷಯವಾಗಿ ಕಾಣಬಹುದು. ಆದರೆ ಅದು ಅಗೆದಷ್ಟು ಚಿನ್ನದ ಗಣಿಯಂತೆ ಆಳವಾಗಿದೆ. ಆಧುನಿಕ ತರಕಾರಿಗಳ ಬಗೆಗೆ ಕಂಡುಬರದ ದೈವೀಕ ಪರಿವೇಷವೊಂದು ದೇಸೀ ತಳಿಯ ತರಕಾರಿಗಳ ಬಗ್ಗೆ ಇರುವುದು ವಿಶೇಷವಾದರೂ ಸತ್ಯ


ಡಾ.ವಸಂತಕುಮಾರ ಪೆರ್ಲ


ನಮ್ಮ ಆಲೋಚನೆ.ಕಾಂ ನ ಹಿರಿಯ ಅಂಕಣಕಾರ ಡಾ.ವಸಂತಕುಮಾರ ಪೆರ್ಲ ಅವರು ಬರೆದ "ತರಕಾರಿ ಜಾನಪದ " ಅಂಕಣ ನಿಮ್ಮ ಓದು ಮತ್ತು ಪ್ರತಿಸ್ಪಂದನಕ್ಕಾಗಿ

ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ



96 views1 comment

1 Comment


shreepadns
shreepadns
Nov 17, 2023

ತರಕಾರಿಗಳ ಬಗ್ಗೆ ಜನಪದ ನಂಬಿಕೆಗಳನ್ನು ಮೂಲವಾಗಿಟ್ಟುಕೊಂಡು ಬರೆದ ಈ‌ ಅಂಕಣ ಬರಹ ಜಾನಪದದ ಆಯಾಮಗಳನ್ನು ವಿಸ್ತರಿಸಿದ್ದಂತು‌ ನಿಜ. ಡಾ.ವಸಂತಕುಮಾರ ಪೆರ್ಲ ಅವರಿಗೆ ಅಭಿನಂದನೆಗಳು. ಡಾ.ಶ್ರೀಪಾದ

Like
bottom of page