ಕವಿ ಎಂ.ಗೋಪಾಲಕೃಷ್ಣ ಅಡಿಗ ಅವರ 'ಏನಾದರು ಮಾಡುತಿರು ತಮ್ಮ' ಎಂಬ ಕವಿತೆಯ ಆಶಯದಂತೆ ಏನಾದರು ಜೀವಪರವಾದ ಸಾಹಿತ್ಯ ಪರವಾದ ಕೆಲಸವನ್ನು ಅಹರ್ನಿಶಿ ಮಾಡುತ್ತ ಬಂದವರು ಕವಿ,ಸಾಹಿತಿ,ಚಿಂತಕ, ಸಂಶೋಧಕ ಡಾ.ವಸಂತಕುಮಾರ ಪೆರ್ಲ ಅವರು.
ಪ್ರತಿಭಾವಂತ ಕವಿಯಾಗಿ, ಸಾಹಿತಿಯಾಗಿ ಚಿಂತಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಡಾ. ವಸಂತಕುಮಾರ ಪೆರ್ಲ ಅವರು ಸಾಹಿತ್ಯದ ಜೊತೆಗೆ ಪತ್ರಿಕೆ, ರೇಡಿಯೋ, ಟಿ. ವಿ. ಮುಂತಾದ ಸಮೂಹ ಮಾಧ್ಯಮಗಳಲ್ಲಿ ಹಾಗೂ ರಂಗಭೂಮಿ, ಸಿನಿಮಾ ಕ್ಷೇತ್ರಗಳಲ್ಲಿ ಪರಿಣಿತರು. ಒಳ್ಳೆಯ ವಾಗ್ಮಿ ಮತ್ತು ವಿದ್ವಾಂಸರೆಂದು ಗುರುತಿಸಲ್ಪಟ್ಟವರು. ಕನ್ನಡ, ತುಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುತ್ತಿರುವ ಡಾ. ಪೆರ್ಲರ ಕವನಗಳು ತುಳು, ಕೊಂಕಣಿ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಪಂಜಾಬಿ, ನೇಪಾಲಿ ಹಾಗೂ ಇಂಗ್ಲಿಷ್ ಭಾಷೆಗೆ ಅನುವಾದವಾಗಿವೆ.ಆ ಮೂಲಕ ಈ ಮೇಲೆ ಉಲ್ಲೇಖಿಸಿದ ಭಾಷಿಕರ ಎದೆಯ ಕದವನ್ನು ಅವರ ಕವನಗಳು ತಟ್ಟಿ ಮನವ ಮುಟ್ಟಿವೆ.
ಮೈಸೂರು ವಿ. ವಿ. ಯಿಂದ ಕನ್ನಡ ಎಂ. ಎ. ಪದವಿ ಪಡೆದ ಬಳಿಕ ’ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಜಾನಪದ ಒಳನೋಟಗಳು’ ಎಂಬ ವಿಷಯದ ಬಗ್ಗೆ ಪ್ರೌಢ ಪ್ರಬಂಧ ರಚಿಸಿ ಮೈಸೂರು ವಿ.ವಿ.ಯಿಂದ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಸುಮಾರು ಮೂವತ್ತು ವರ್ಷಗಳ ಕಾಲ ಮಂಗಳೂರು ಸಹಿತ ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ನಿರ್ದೇಶಕ ಹುದ್ದೆಯಿಂದ ಇತ್ತೀಚೆಗೆ ನಿವೃತ್ತರಾಗಿದ್ದಾರೆ.
ಕಾವ್ಯ, ಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ವ್ಯಕ್ತಿಚಿತ್ರ, ಚಾರಣ, ಅಂಕಣಸಾಹಿತ್ಯ, ಅನುವಾದ ಮೊದಲಾದ ಪ್ರಕಾರಗಳಲ್ಲಿ ಸುಮಾರು ಐವತ್ತರಷ್ಟು ಮೌಲಿಕ ಕೃತಿರಚನೆ ಮಾಡಿದ್ದಾರೆ. ಉತ್ತಮ ಕವಿ, ವಿಮರ್ಶಕರಾಗಿ ಪ್ರತೀತಯಶರಾದವರು ವಸಂತಕುಮಾರರು. ಮಾತಿನಾಚೆಯ ಮೌನ, ಹುತ್ತದೊಳಗಿನ ಹಾವು, ಕೋಟಿಲಿಂಗ, ರಂಗಸ್ಥಳ, ಒಡ್ಡೋಲಗ ಮೊದಲಾದವು ಅವರ ಪ್ರಸಿದ್ಧ ಕವನ ಸಂಕಲನಗಳು. ಅಭ್ಯಾಸ, ಕಾಡಾನೆಗಳ ದವಡೆಯಲ್ಲಿ, ವರ್ತಮಾನ, ಏರುತ್ತೇರುತ್ತ ಶಿಖರ, ದೇವಪುರ ಕುಡುಮ ಮೊದಲಾದವು ಅವರ ಪ್ರಸಿದ್ಧ ಗದ್ಯಕೃತಿಗಳು. ಅಭ್ಯಾಸ ಎಂಬುದು ಅವರ ಸಂಶೋಧನಾ ಲೇಖನಗಳ ಸಂಗ್ರಹ.
ರಾಷ್ಟ್ರಾದ್ಯಂತ ಹಲವು ಸಭೆ ಸಮಾರಂಭಗಳಲ್ಲಿ ಮತ್ತು ಕಮ್ಮಟಗಳಲ್ಲಿ ಕನ್ನಡ ಭಾಷೆಯನ್ನು ಪ್ರತಿನಿಧಿಸಿದ್ದಾರೆ. ಹತ್ತಾರು ಪ್ರಶಸ್ತಿ ಬಹುಮಾನಗಳನ್ನು ಪಡೆದುಕೊಂಡಿರುವ ಅವರು ಸರಕಾರದ ಹಲವು ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ವರ್ಷ ಮೈಸೂರು ದಸರಾ ಕವಿಗೋಷ್ಠಿಯ ಸದಸ್ಯ ಸಂಚಾಲಕರಾಗಿದ್ದರು. ದ. ಕ. ಜಿಲ್ಲೆಯ ಚುನಾವಣಾ ವಿಚಕ್ಷಣ ಸಮಿತಿಯಲ್ಲಿದ್ದರು. ಹಲವಾರು ಅ. ಭಾ. ಸಾಹಿತ್ಯ ಸಮ್ಮೇಳನ, ವಿವಿಧ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗಿ. ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಸಾವಿರಾರು ಮಂದಿ ಕವಿ ಬರಹಗಾರರನ್ನು ಗುರುತಿಸಿ, ಬೆನ್ನು ತಟ್ಟಿ ಬೆಳೆಸಿ ಪ್ರೋತ್ಸಾಹಿಸಿದ್ದಾರೆ.ನಮ್ಮ ಆಲೋಚನೆ.ಕಾಂ ಈ ಪತ್ರಿಕೆಯಲ್ಲಿ ಕವನ,ಚಿಂತನ ಮತ್ತು ಆಲೋಚನೀಯ ಎಂಬ ಸಂಪಾದಕೀಯಗಳನ್ನು ನಿರಂತರವಾಗಿ ಬರೆದು ನಮ್ಮ ಪತ್ರಿಕೆಯ ಶ್ರೋಯೋಭಿವೃದ್ಧಿಗಾಗಿ ಶ್ರಮಿಸಿದ ಹಿರಿಯ ಜೀವ ಡಾ.ವಸಂತಕುಮಾರ ಪೆರ್ಲ ಅವರಿಗೆ ಬಂದ ಪ್ರಶಸ್ತಿ ನಮಗೆ ಅತ್ಯಂತ ಸಂತಸ ಮತ್ತು ಸಂತೃಪ್ತಿಯನ್ನು ತಂದಿದೆ.ಅವರಿಗೆ ನಮ್ಮ ಪತ್ರಿಕಾ ಬಳಗದ ಒಡಲಾಳದ ಅಭಿನಂದನೆಗಳು.
ಡಾ.ಶ್ರೀಪಾದ ಶೆಟ್ಟಿ
ಸಂಪಾದಕ ಆಲೋಚನೆ.ಕಾಂ
ಪ್ರಿಯ ಡಾ. ಶ್ರೀಪಾದ ಶೆಟ್ಟಿಯವರೇ,
ನಿಮ್ಮ ಮಾತುಗಳು ನಿಮ್ಮ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ.
ನನಗೆ ತುಂಬ ಸಂತೋಷ ಆಗಿದೆ. ನಮ್ಮ ಸ್ನೇಹ ಬಲು ದೊಡ್ಡದು.
ನಿಮಗೆ ಕೃತಜ್ಞತೆಗಳು.
- ಡಾ. ವಸಂತಕುಮಾರ ಪೆರ್ಲ.