ಲಯ
ಅದೇ ತಳಿಯ ಒಳಗೆ
ತೂರಿ ಬರುವ ಅನಾಥ
ಬೆಳಕು
ಕತ್ತಲೆಯ ಒತ್ತಲೆತ್ನಿಸುವ ದಾರಿ
ದೀಪಗಳು
ಮನೆಮನೆಗಳ ಕಿಡಕಿಗಳಾಚೆ
ಮೂಡಿ ಮುಳುಗುವ
ನೆರಳು
ಪಾತ್ರೆ ತಿಕ್ಕುವ ಸದ್ದು
ನೀರು ಬೀಳುವ ಸದ್ದು......
ಹೊರಗೆ
ಗಿಡಮರಗಳು ನಿಂತು
ಮಲಗಿದಂತಿವೆ
ನಾಳೆ ಅರಳಲಿರುವ ಕನಸ
ಹೊದೆದು
ಹೀಗೇ
ಏನೊ ಕರೆಯುವಂತಿದೆ ಒಳಗೆ
ಹೊರಗೆ.
ನಿಗೂಢದಲ್ಲಿ ನಿಲ್ಲಿಸದಿರು
ನಿಗೂಢದಲ್ಲಿ ನಿಲ್ಲಿಸದಿರು
ನಿನ್ನ ಒಳಗನ್ನು
ಒಡೆದು ಬರಲಿ
ಹಾಡು
ಈ ದಾರಿಯಲ್ಲಿ ಕೆಂಪು
ಸಿಗ್ನಲ್ ಇಲ್ಲ
ಹೋಗುತ್ತಲೇ
ಇರಬಹುದು
ಗುರುತಿಸಿದೆಡೆಗೆ
ಅಲ್ಲಿ ವೃಂದಾವನದಲ್ಲಿ
ಕೊಳಲಗಾನವಿಲ್ಲದಿದ್ದರೂ
ಹಕ್ಕಿಯ ಹಾಡಿದೆ
ತುಂಬಿ
ವಿರಮಿಸು ತುಸು
ತಂಪಾಗಲಿ ಗಾಳಿ
ಬೆಳಕು
ಚೈತ್ರ ಚಿಗುರ ಬಹುದು
ನಿನ್ನ ಸ್ಪರ್ಶದ ದನಿಯಿಂದ
- ಡಾ.ರಾಜು ಹೆಗಡೆ
ಮೂಲತಃ ಹೊನ್ನಾವರ ತಾಲೂಕಿನ ಮಾಗೋಡಿನವರಾದ ಡಾ..ರಾಜು ಹೆಗಡೆಯವರು ಸಿರ್ಸಿಯ ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕವನ, ಕತೆ, ಲಘುಬರೆಹ, ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯಾರಾಧನೆಯನ್ನು ಕೈಗೊಂಡಿರುವ ಇವರೊಬ್ಬ ಪ್ರತಿಭಾವಂತ ಬರೆಹಗಾರರು. ‘ಪಾಯಸದ ಗಿಡ’, ‘ಅಂಗಳದಲ್ಲಿ ಆಕಾಶ’, ‘ಟೊಂಗೆಯಲ್ಲಿ ಸಿಕ್ಕ ನಕ್ಷತ್ರ’ ಇವು ಅವರ ಪ್ರಕಟಿತ ಕವನ ಸಂಕಲನಗಳಾದರೆ, ‘ಅಪ್ಪಚ್ಚಿ’ (ಕಥಾಸಂಕಲನ), ‘ಹಳವಂಡ’ (ಲಘುಬರೆಹ) ‘ದಶಾವತಾರ’, ‘ಅವಧಾನಿಯವರ ಕವಿತೆಗಳು’ (ಸಂಪಾದಿತ), ‘ಗಿರೀಶಕಾರ್ನಾಡ ನಾಟಕಗಳ ಸಮೀಕ್ಷೆ’ (ವಿಮರ್ಶೆ) ಇವು ಅವರ ಇನ್ನಿತರ ಪ್ರಕಟಿತ ಕೃತಿಗಳು. ಇವರ ಕವಿತಾ ಸಂಕಲನ ‘ ಟೊಂಗೆಯಲ್ಲಿ ಸಿಕ್ಕ ನಕ್ಷತ್ರ’ ಈ ಕೃತಿಗೆ “ಡಿ.ಎಸ್.ಕರ್ಕಿ’ ಪ್ರಶಸ್ತಿ ದೊರಕಿದೆ. ಪ್ರಜಾವಾಣಿ ಪತ್ರಿಕೆಯ 2016 ರ ಸಾಲಿನ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಇವರ ಕಥೆಗೆ ಪ್ರಥಮ ಬಹುಮಾನ ಸಿಕ್ಕಿದೆ. ಅವರ ಈ ಎರಡು ಕವನಗಳು ತಮ್ಮ ಓದಿಗಾಗಿ
ಕವಿತೆಯೊಂದು ಮನೆ ಹೊರಗಿರುವ ಬೆಳಕಿನ ಲಯ ಅರಸುತ್ತಿದೆಯೋ, ಮನೆಯೊಳಗಿರುವ ನೆರಳಿನ ಲಯ ಹುಡುಕುತ್ತಿದೆಯೋ ಎಂದು ಚಿಂತಿಸುತ್ತಿರುವಾಗಲೇ, ನಾಳೆ ಅರಳಲಿರುವ ಕನಸಿನ ಲಯವೇ ಕವಿತೆಯನ್ನು ಇಡಿಯಾಗಿ ಹಿಡಿದಿಟ್ಟಿರುವುದು ಅಚ್ಚರಿ ಮೂಡಿಸುವಂಥದ್ದು.. ಕವಿತೆ ಎರಡರಲ್ಲಿ ವೃಂದಾವನದ ಕೊಳಲಗಾನದಂತೆ ಪ್ರಕೃತಿ ಎಲ್ಲರನ್ನೂ ತನ್ನ ಬಳಿ ಆವಾಹಿಸಿಕೊಂಡು ಸಲಹುವ ಪರಿ ಚಿಂತನಶೀಲವಾಗಿದೆ.. ಎರಡೂ ಕವಿತೆಗಳಿಗೆ ದಕ್ಕಿದ ಧ್ವನಿಪೂರ್ಣತೆ ವರ್ಣಿಸಲಸದಳ.