ನನ್ನ ನೆಚ್ಚಿನ ಸಾಹಿತಿಗಳಲ್ಲಿ ಓರ್ವರಾದ ಡಾ. ನಾ. ಮೊಗಸಾಲೆಯವರ "ಶಬರಿ" ಕವನವು ವಿಶೇಷವಾಗಿ ನನ್ನ ಗಮನವನ್ನು ಸೆಳೆದು, ಮತ್ತೆ ಮತ್ತೆ ಅದನ್ನು ಓದಿ ಆನಂದಿಸುವಂತೆ ಮಾಡಿದೆ. ಈ ಹಿಂದೆ ವಿ.ಸೀತಾರಾಮಯ್ಯ , ಸು ರಂ ಎಕ್ಕುಂಡಿ, ಸೇಡಿಯಾಪು ಕೃಷ್ಣ ಭಟ್ ಮೊದಲಾದವರು ಶಬರಿಯ ಬಗ್ಗೆ ಅದ್ಭುತ ಕವನಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಅರ್ಪಿಸಿರುವುದು ನಮಗೆಲ್ಲ ಗೊತ್ತೇ ಇದೆ. ಆದಾಗ್ಯೂ ಮೊಗಸಾಲೆಯವರ "ಶಬರಿ" ನನಗೆ ವಿಭಿನ್ನವಾಗಿ ಕಂಡು ವಿಶೇಷ ಅನುಭೂತಿಯನ್ನು ನೀಡಿದೆ.
ಮೊದಲು ನಿಮ್ಮ ಮುಂದೆ ''ಶಬರಿ" ಕವನವನ್ನಿರಿಸಿ , ತದನಂತರ ಅದನ್ನು ನಾನು ಅರ್ಥೈಸಿಕೊಂಡ ಪರಿ ಹಾಗೂ ನನಗೆ ಅತಿಯಾಗಿ ಮೆಚ್ಚುಗೆಯಾದ ಸಾಲುಗಳ ಮೇಲೆ ಬೆಳಕನ್ನು ಚೆಲ್ಲಿ ಸಹೃದಯ ಓದುಗರೊಂದಿಗೆ ಇದನ್ನು ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ.
ಶಬರಿ
ವಿಂದ್ಯಾಟವಿಯಲಿ ಇದ್ದಳು ಶಬರಿ
ರಾಮನ ಕನಸೇ ಮರವಾಗಿ
ಮರದಲ್ಲರಳಿದ್ದವು ಹೂಗಳು
ರಾಮನಾಮವೇ ಜೇನಾಗಿ
ಸುತ್ತಮುತ್ತಲನು ನೋಡುತ್ತಿದ್ದಳು
ಬಂದನೆ ? ಬರುವನೇ ಶ್ರೀರಾಮ?
ಕಾಣದೆ ರಾಮಗೆ ನಿಟ್ಟುಸಿರಿಡುವಳು
ಅಯ್ಯೋ! ಬರಡಾಯಿತು ಜನುಮ
ಮರಗಿಡಗಳ ಎಲೆ ಅಲುಗಾಡಲು, ಅವು
ರಾಮನ ನೋಡಿರಬಹುದೆಂದು
ಕಾಮನಬಿಲ್ಲನು ನೋಡಿ ಕುಣಿಯುವ
ಮಗುಮನಸಿನ ಒಳ ತೂರುವಳು
ಮೃಗಪಕ್ಷಿಗಳು ಸುಳಿದಾಡಿದರಾಕಡೆ
ರಾಮನೆ ಬಂದಿರಬಹುದೆಂದು
"ನನ್ನೊಡೆಯನೆ ಬಂದೆಯ" ಎನುವಳು
ಸೊಂಟದ ನೋವಿದ್ದರು ಎದ್ದು
ಆ ಬೆಳಗಿನ ಕನಸಲಿ ಅವಳಿಗೆ
ಶ್ರೀರಾಮನು ಲಕ್ಷ್ಮಣಸಹಿತ
ಬರುವುದು ಕಂಡಂತಾಯಿತು ತಕ್ಷಣ
ಎದ್ದಳು ರಾಮನ ಜಪಿಸುತ್ತ
ನಿತ್ಯ ವಿಧಿಗಳ ತೀರಿಸಿ ಕೊಯ್ದಳು
ಅನೇಕ ಮರಗಿಡಗಳ ಹಣ್ಣು
ಆರಿಸಿಕೊಡಬೇಕೆನ್ನುತ ಮುದತಳೆದಳು
ಕಣ್ಣನ್ನೂ ಹಣ್ಣಾಗಿಸಿ ನಿಂತು
ರಾಮ ಬಂದನು ಶಬರಿಯ ಮನೆಗೆ
ಮೊಗ್ಗು ಅರಳಿ ಹೂಬಿರಿದಂತೆ
ಅಪ್ಪಿ ಹಿಡಿದನು ಶಬರಿಯ, ತಾನು
ಕೌಸಲ್ಯೆಯ ಬಳಿಯಲಿ ಇರುವಂತೆ
ಶಬರಿ ಪೂಸಿದಳು ರಾಮನ ಮೈಮನ
ಸುಗಳನು ಪ್ರೀತಿಯ ಕೈಯಿಂದ
ಕಣ್ಣುಗಳಾದವು ಬೆಳಗಿನ ಮಂಜು
ಗರಿಕೆಯ ಮೇಲಿಂದಿಳಿವಂಥ
ಎತ್ತಿ ತಂದಳು ಹಣ್ಣಿನ ಬುಟ್ಟಿಯ
ಆರಿಸಿ ಕೊಡಲಿಕೆ ಹಣ್ಣುಗಳ
ಕಚ್ಚಿ ನೋಡಿ , ಸವಿಯಿರುವುದನೆತ್ತಿ
ಕೊಟ್ಟಳು 'ತಿನು ನೀ' ನೆನ್ನುತ್ತ
ರಾಮನು ಕೌಸಲ್ಯೆಯ ಕೈತುತ್ತು
ನೆನಪಿಸಿ ತಿಂದನು ಮೈಮರೆತು
ಹೇಳಿದ ಶಬರಿಗೆ 'ತುಂಬಿತು ಹೊಟ್ಟೆ
ತಿನ್ನಲೆ ಇಲ್ಲ ಇಂಥದ್ದು'
ಶಬರಿಯ ಕಣ್ಣಿನ ಹೊರಪರೆ ಹರಿದು
ಶ್ರೀರಾಮನು ಕಂಡನು ಹರಿಯಾಗಿ
ಒಳಗಣ್ಣಲಿ ಸಾರ್ಥಕ್ಯದ ಸವಿ ಹುಟ್ಟಿ
ಹೊರಗಣ್ಣಲಿ ಹರಿಯಿತು ನದಿಯಾಗಿ
- ಡಾ.ನಾ.ಮೊಗಸಾಲೆ
ಇಲ್ಲಿ 'ರಾಮನ ಕನಸೇ ಮರವಾಗಿ' ಎನ್ನುವ ಹೋಲಿಕೆಯೇ ಶಬರಿಯಲ್ಲಿ ರಾಮನ ಕನಸು ಮರದಂತೆ ಬೆಳೆದು ನಿಂತಿದೆ ; ಆ ಮರದಲ್ಲಿ ಹೂವುಗಳು ಅರಳಿ, ಅದರಲ್ಲಿ ರಾಮನಾಮ ಜೇನಿನಂತೆ ಅಡಗಿ ಕುಳಿತಿದೆ ಎಂಬಲ್ಲಿ ರಾಮನ ಬಗೆಗಿನ ಶಬರಿಯ ಭಕ್ತಿಯು ಹೇಗೆ ದೃಢವಾಗಿದೆ ಹಾಗೂ ಜೇನಿನಂತೆ ಸವಿಯಾಗಿದೆ ಎಂದು ಮರ,ಹೂ ,ಜೇನು ಹೀಗೆ ಒಂದರೊಳಗೊಂದು ಬೆಸೆದಿರುವ ಹೋಲಿಕೆಯನ್ನು ಚಂದವಾಗಿ ಕವಿಗಳು ಬಳಸಿದ್ದಾರೆ.
ರಾಮನ ಬರುವಿಕೆಗಾಗಿ ಶಬರಿಯೊಂದಿಗೆ ಪ್ರಕೃತಿಯೇ ಕಾಯುತ್ತಿರುವಂತೆ ಕವಿಗಳು ಸೃಷ್ಟಿಸಿದ ಕಲ್ಪನಾ ಲೋಕ ಅದ್ಭುತವಾಗಿದೆ. ಉದಾಹರಣೆಗೆ ಮರ ಗಿಡಗಳ ಎಲೆಗಳು ಅಲುಗಾಡಿದಾಗ , ಮೃಗಪಕ್ಷಿಗಳು ಸುಳಿದಾಡಿದಾಗ ರಾಮನೇ ಬಂದಿರಬಹುದೆಂಬ ಸಂದೇಹ ಮುಗ್ಧ ಮನಸ್ಸಿನ ಶಬರಿಗೆ ಆಗುತ್ತದೆ. ಆಕೆಯ ಮುಗ್ಧತೆಯನ್ನು "ಕಾಮನಬಿಲ್ಲನು ನೋಡಿ ಕುಣಿಯುವ ಮಗು ಮನಸಿಗೆ" ಹೋಲಿಸಲಾಗಿದೆ. ಇವೆಲ್ಲವೂ ನಮ್ಮ ಕಣ್ಮನದ ಮುಂದೆ ಶಬರಿಯ ಸುಂದರ ಕಲ್ಪನಾ ಜಗತ್ತನ್ನು ಸೃಷ್ಟಿಸುವಲ್ಲಿ ಸಫಲವಾಗಿದೆ.
"ಸೊಂಟದ ನೋವಿದ್ದರೂ ಎದ್ದು" ಎಂಬ ಈ ಸಾಲು ಪರೋಕ್ಷವಾಗಿ ಶಬರಿಯ ವಯೋಸಹಜ ನಿಃಶಕ್ತಿಯನ್ನು ನಮ್ಮ ಕಣ್ಮುಂದೆ ತರುತ್ತದೆ. ಇಲ್ಲಿ ಕವಿಯು ಶಬರಿಯನ್ನು ಮಾನವಸಹಜ ಗುಣಗಳಿಂದ ಚಿತ್ರಿಸುವುದಲ್ಲದೆ, ವ್ಯಕ್ತಿ ಚಿತ್ರಣದ ಸಂದರ್ಭದಲ್ಲಿನ ತನ್ನ ಸೂಕ್ಷ್ಮ ಸಂವೇದನೆಯನ್ನು ವ್ಯಕ್ತಪಡಿಸಿದ್ದಾರೆ. "ನಿತ್ಯ ವಿಧಿಗಳ ತೀರಿಸಿ ಕೊಯ್ದಳು" ಎಂಬ ಸಾಲಿನಲ್ಲಿಯೂ ಇದೇ ತರಹದ ಸೂಕ್ಷ್ಮ ಸಂವೇದನೆಯನ್ನು ನಾವು ಕಾಣಬಹುದು.
ಮುಂದೆ , "ಕಣ್ಣನ್ನೂ ಹಣ್ಣಾಗಿಸಿ ನಿಂತು" ಎಂಬ ಹೋಲಿಕೆಯಲ್ಲಿ ಒಳಾರ್ಥವನ್ನು ಸೂಚಿಸುವಂತೆ 'ಹಣ್ಣಾಗುವುದು' ಎಂದರೆ 'ಪಕ್ವವಾಗುವುದು' ,'ಪ್ರಬುದ್ಧ ವಾಗುವುದು' ಎಂಬ ಅರ್ಥದಲ್ಲಿ ಶಬರಿಯ ಕಣ್ಣಲ್ಲಿ ಪ್ರಬುದ್ಧವಾದ ಭಕ್ತಿ ತುಂಬಿ ಆ ಕಂಗಳಿಂದ ಆಕೆ ರಾಮನ ದಾರಿಯನ್ನು ಕಾಯುತ್ತಾಳೆ. ಈ ಹೋಲಿಕೆಯಲ್ಲಿ ಶಬರಿಯ ಭಕ್ತಿಯ ಪೂರ್ಣತೆಯನ್ನು ಕಂಡಂತೆ ನನಗೆ ಭಾಸವಾಯಿತು.
ಶಬರಿಗೆ ರಾಮನ ಸಾಮಿಪ್ಯ ಅದೆಷ್ಟೋ ವರ್ಷಗಳ ಕಾಯುವಿಕೆಯ ನಂತರ ಲಭಿಸಿದ್ದು , ಮನಸ್ಸಿನ ಸಾಮಿಪ್ಯದ ಆಪ್ತತೆಯಿಂದ ಆಕೆ ರಾಮನ ಮೈಮನಸ್ಸುಗಳನ್ನು ಪೂಸುತ್ತಾಳೆ.ಈ ಸ್ಪರ್ಶವು ರಾಮನಿಗೆ ತಾಯಿ ಕೌಸಲ್ಯೆಯ ಸ್ಪರ್ಶವನ್ನು ನೆನಪಿಸುತ್ತದೆ. ಶಬರಿಯ ಕಣ್ಣುಗಳನ್ನು ಮೊಗಸಾಲೆಯವರು 'ಬೆಳಗಿನ ಮಂಜು ಗರಿಕೆಯ ಮೇಲಿಂದ ಇಳಿದಂತೆ' ಎಂದು ಹೋಲಿಸಿ ನವಿರಾದ ಅನುಭೂತಿಯನ್ನು ನೀಡಿದ್ದಾರೆ.
ಮುಂದೆ ರಾಮನು ಸಾಮಾನ್ಯನಂತೆ ಶಬರಿಯ ಕೈತುತ್ತನ್ನು ತಿನ್ನುತ್ತಾನೆ. "ತುಂಬಿತು ಹೊಟ್ಟೆ ,ತಿನ್ನಲೇ ಇಲ್ಲ ಇಂಥದ್ದು" ಎಂಬ ಮಾತನ್ನು ರಾಮ ಶಬರಿಗೆ ಹೇಳುವ ಮೂಲಕ ಶಬರಿಯ ಪ್ರೀತಿಗೆ, ಭಕ್ತಿಗೆ ವಿಶಿಷ್ಟ ಸ್ಥಾನವನ್ನು ಕಲ್ಪಿಸುತ್ತಾನೆ ಎಂಬುದನ್ನು ಪರೋಕ್ಷವಾಗಿ ಕವಿಗಳು ಸೂಚಿಸಿದ್ದಾರೆ.
ಕೊನೆಯ ಚರಣದಲ್ಲಿ 'ಹರಿ' ಎಂಬ ಒಂದೇ ಪದಕ್ಕೆ ವಿಭಿನ್ನ ಅರ್ಥಗಳನ್ನು ಕಲ್ಪಿಸುತ್ತಾ ಶಬರಿಯ ಭಕ್ತಿಯ ಸಾಕ್ಷಾತ್ಕಾರವನ್ನು ಕವಿಗಳು ಮಾಡಿಸುತ್ತಾರೆ. "ಶಬರಿಯ ಕಣ್ಣಿನ ಹೊರಪರೆ ಹರಿದು" ಎಂಬ ಸಾಲಿನಲ್ಲಿ ಆಕೆಯ ಕಣ್ಣಿನ ಮಬ್ಬು ಹರಿದು ಹೋಗಿ ಶ್ರೀರಾಮನು ಹರಿಯಾಗಿ ಕಾಣಿಸುತ್ತಾನೆ ಎಂಬಲ್ಲಿ ಆಕೆಯ ಒಳಮನಸ್ಸಿಗೆ ಹರಿಯ ವಿಶ್ವರೂಪದರ್ಶನ ಪ್ರಾಪ್ತವಾಗುತ್ತದೆ. ಒಳಗಣ್ಣಲಿ ಸಾರ್ಥಕ್ಯದ ಸವಿ ಹುಟ್ಟಿ ಅದು ಹೊರಗಣ್ಣಿನಲ್ಲಿ ನದಿಯಾಗಿ , ಧಾರೆಯಾಗಿ ಹರಿಯುತ್ತದೆ. ಶಬರಿಗೆ ಹರಿಯ ಸಾಕ್ಷಾತ್ಕಾರವಾದ ಬಗೆಯನ್ನು ಕವಿಗಳು ವಿಶಿಷ್ಟವಾಗಿ ಬಿಂಬಿಸಿದ್ದಾರೆ.ಇಡೀ ಕವನದಲ್ಲಿ ಈ ಕೊನೆಯ ಚರಣವು ನನ್ನನ್ನು ಅತಿಯಾಗಿ ಸೂರೆಗೊಂಡಿದೆ ಎಂದೆನಿಸುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಈ ಕವನದಲ್ಲಿ ಶಬರಿಯ ಕಾಯುವಿಕೆ ,ಆಕೆಯ ಭಕ್ತಿ ,ಮುಗ್ಧತೆ ,ತನ್ನ ಭಕ್ತಿಯಿಂದಲೇ ದೈವತ್ವದ ಸಾಕ್ಷಾತ್ಕಾರ ಪಡೆದುಕೊಂಡ ಬಗೆಯನ್ನು ಕವಿಗಳು ಮಾರ್ಮಿಕವಾಗಿ ಮನಮುಟ್ಟುವಂತೆ ಅಕ್ಷರಗಳ ಮುತ್ತುಗಳಿಂದ ಮಾಲೆಯನ್ನು ಪೋಣಿಸಿ ಅಕ್ಕರೆಯಿಂದ ನಮ್ಮ ಕೈಗಿತ್ತಿದ್ದಾರೆ.
ಪ್ರತಿಭಾ ಕೊಕ್ಕರ್ಣೆ
Comentários