top of page

ಮಂಜೀ ಮಹದೇವನ ಗಂಜೀಪುರಾಣ- ಡಾ. ಜಿ. ಎಸ್. ಭಟ್ಟ, ಸಾಗರ

Updated: Aug 1, 2020


( ಯಕ್ಷಗಾನ ಆವರಣದ ಸಾಮಾಜಿಕ ಕಾದಂಬರಿ)- ಎಲ್. ಎಸ್. ಶಾಸ್ತ್ರಿ, ಬೆಳಗಾವಿ


ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ರಚನೆಗೆ ೧೦೦ ವರ್ಷಗಳ ಇತಿಹಾಸ ಇದೆ. ಈ ಅವಧಿಯಲ್ಲಿ ಹೊರಬಂದ ಕಾದಂಬರಿಗಳ ಒಟ್ಟು ಸಂಖ್ಯೆಯ ದೃಷ್ಟಿಯಿಂದ ನೋಡಿದಾಗ "ಪರ್ಟಿಕ್ಯುಲರ್" ಆಗಿ ಸಾಹಿತ್ಯ ಮತ್ತು ವಿವಿಧ ಕಲೆಗಳ ಕ್ಷೇತ್ರಗಳಿಗೇ ಸಂಬಂಧಿಸಿ ಹೊರಬಂದ ಕಾದಂಬರಿಗಳ ಸಂಖ್ಯೆ ಅಷ್ಟು ದೊಡ್ಡದೇನಲ್ಲ. ಅಲ್ಲಲ್ಲಿ ಬಹಳ ತೆಳುವಾಗಿ ಪ್ರಸ್ತಾಪಿಸಲ್ಪಟ್ಟ ಕೃತಿಗಳು ಇರಬಹುದು. ಅನಕೃ ಅವರು ಸಂಗೀತ, ನಾಟಕ, ಪತ್ರಿಕೆ, ಚಿತ್ರಕಲೆ, ಸಾಹಿತ್ಯ ಮೊದಲಾದ ವಿಷಯಗಳನ್ನೆತ್ತಿಕೊಂಡು ಪ್ರತ್ಯೇಕ ಕಾದಂಬರಿಗಳನ್ನು ಬರೆದಿದ್ದಾರಾದರೂ ಅವುಗಳಿಂದ ಬಹಳಷ್ಟನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅವರ ಸಂಧ್ಯಾರಾಗ, ಕಟ್ಟಿದ ಬಣ್ಣ , ಮಿಯಾಮಲ್ಹಾರ ಸಂಗೀತ ಕಲೆಗೆ ಸಂಬಂಧಿಸಿದ ಕಾದಂಬರಿಗಳೆನ್ನಲಾಗುತ್ತಿದ್ದರೂ‌ ಅಲ್ಲಿ "ಡೆಪ್ತ" ಕಡಿಮೆಯೇ. ತರಾಸು ಅವರ ಹಂಸಗೀತೆ, ಮ. ನ. ಮೂರ್ತಿಯವರ ಗಾಯನ ಚಕ್ರವರ್ತಿ " ಮತ್ತು ಡಾ. ಎಸ್. ಎಲ್. ಭೈರಪ್ಪನವರ " ಮಂದ್ರ" ನಮ್ಮ ಗಮನ ಸೆಳೆಯುವ ಇತರ ಕೃತಿಗಳು. ವೃತ್ತಿ ರಂಗ ಭೂಮಿ ಯ ಒಳಹೊರಗನ್ನು ಪರಿಚಯಿಸುವ ದೃಷ್ಟಿಯಿಂದ ಅನಕೃ ಅವರ ನಟಸಾರ್ವಭೌಮ ಉತ್ತಮ ಕೃತಿ.

ಇನ್ನು ಯಕ್ಷಗಾನ ಕಲೆಗೆ ಸಂಬಂಧಿಸಿದ ಕಾದಂಬರಿ ಕುಮಾರ ವೆಂಕಣ್ಣನವರ " ಬಣ್ಣದ ಮಾಲಿಂಗ" ಮಾತ್ರ ನನ್ನ ಓದಿಗೆ ಸಿಕ್ಕಿದೆ. ವೇಣುಗೋಪಾಲರ ಬಯಲಾಟ , ಶೀಗೇಹಳ್ಳಿಯವರ "ತಲೆಗಳಿ " ನಾನು ಓದಿಲ್ಲ. ಬೇರೆ ಯಾವುದೂ ತಯಾರಾದಹಾಗಿಲ್ಲ.


‌ ಇದೀಗ ನನ್ನ ಕೈಗೆ ಬಂದಿರುವ " ಮಂಜಿ ಮಹದೇವನ ಗಂಜೀ ಪುರಾಣ " ವನ್ನು ಕಾದಂಬರಿಕಾರರು " ಯಕ್ಷಗಾನ ಆವರಣದ ಸಾಮಾಜಿಕ ಕಾದಂಬರಿ" ಎಂದಿರುವದರಿಂದ ಸಹಜವಾಗಿಯೇ ಯಕ್ಷಗಾನ ಪ್ರಿಯನಾದ ನನ್ನಲ್ಲಿ ಕುತೂಹಲ ಹುಟ್ಟಿಕೊಂಡು ಬಹಳ ಆಸಕ್ತಿಯಿಂದ ಇದನ್ನು ಓದಿದ್ದೇನೆ. ಇದು ಈಗ ಸಾಗರದವರಾಗಿರುವ ಮತ್ತು ಮೂಲತಃ ಹೊನ್ನಾವರ ತಾಲೂಕಿನ ಗಜನೀಮಠ- ಖರ್ವಾ ಕೊಳಗದ್ದೆಯಲ್ಲಿ ಯಕ್ಷಗಾನದ ಆವರಣದಲ್ಲಿಯೇ ಬೆಳೆದ ಜಿ. ಎಸ್. ಭಟ್ಟ ಅವರ ಮೂರನೆಯ ಕಾದಂಬರಿ. ( ಮೊದಲನೆಯ ಕಾದಂಬರಿ ಅನಾಮಿಕೆ ಬಂದ ೨೫ ವರ್ಷಗಳ ನಂತರ ಅವರು ಕಳೆದ ವರ್ಷ " ಅಕ್ಕಮ್ಮಜ್ಜಿಯ ಗಂಡನೂ, ವಾಣಾಸಜ್ಜನ ಹೇಣ್ತಿಯೂ.." ಎಂಬ ಎರಡನೇ ಕಾದಂಬರಿ ಹೊರತಂದಿದ್ದರು. ಅದರ ಬಗ್ಗೆ ನಾನು ಸ್ವಲ್ಪ ಬರೆದಿದ್ದೂ ಉಂಟು. )


‌ ಕಾದಂಬರಿಯ ಹೆಸರಿನಲ್ಲಿಯೇ ಕುತೂಹಲ ಹುಟ್ಟಿಸುವ ಅವರು ಈ ಮೂರನೆಯ ಕಾದಂಬರಿಗೂ ಅಂತಹದೇ ಶೀರ್ಷಿಕೆ ನೀಡಿ ಓದುಗರನ್ನು ಆಕರ್ಷಿಸುವ ಪ್ರಯತ್ನ ಮಾಡಿದ್ದಾರೆ. ಅವರೇ ಹೇಳಿಕೊಂಡ ಹಾಗೆ ಇದು‌ ಯಕ್ಷಗಾನದ ಆವರಣ ಹೊಂದಿದ ಕಾದಂಬರಿ. ೪೩೨ ಪುಟಗಳ ವ್ಯಾಪ್ತಿಯಲ್ಲಿ ಹರಡಿಕೊಂಡ ಕತೆ. ಮಹದೇವ ಮೂರು ನಾಲ್ಕು ದಶಕಗಳ ಒಂದು ಕಾಲಘಟ್ಟದ ಪ್ರಸಿದ್ಧ ಯಕ್ಷಗಾನ ಕಲಾವಿದ. ಅವನ ಅಧಿಕೃತ ತಂದೆ ಯಾರು ಎನ್ನುವದು ದೃಢಪಡದೇ ಇದ್ದುದರಿಂದ ತಾಯಿ ಮಂಜಿಯ ಹೆಸರು ಸೇರಿಕೊಂಡಿದೆ. ಅದೇ ಊರಿನ ಒಬ್ಬ ಯಕ್ಷಗಾನ ಕಲಾವಿದ ಬಿಷ್ಟಪ್ಪಯ್ಯ ಎಂಬವನ ಮಗ ತಾನಿರಬಹುದೆಂದು ಬಹಳ ಕಾಲದ ನಂತರ ಮಹದೇವನೇ ಅಂದಾಜಿಸಿಕೊಂಡಿದ್ದು.

ಪುಷ್ಪಾವತಿ ಎಂಬ ಪ್ರಾಧ್ಯಾಪಕ ವೃತ್ತಿಯ ಯುವತಿಗೆ ಯಕ್ಷಗಾನ ಕಲಾಕೇಂದ್ರ ಈ ಮಹದೇವನೆಂಬ ಯಕ್ಷಗಾನ ಕಲಾವಿದನ ಜೀವನ ಚರಿತ್ರೆಯನ್ನು ಬರೆಯುವ ಕೆಲಸ ಒಪ್ಪಿಸುತ್ತದೆ. ಅವಳೂ ಉತ್ಸಾಹದಿಂದ ಆ ಕೆಲಸ ಒಪ್ಪಿಕೊಳ್ಳುತ್ತಾಳೆ. ಆದರೆ ಮಂಜಿ ಮಹದೇವನ ಬಗೆಗೆ ಅಷ್ಟೊಂದು‌ ಒಳ್ಳೇ ಅಭಿಪ್ರಾಯವಿರದ ತಂದೆ ತಾಯಿ ಅದಕ್ಕೆ ವಿರೋಧ ವ್ಯಕ್ತಪಡಿಸಿದರೂ ಅವಳು ತನ್ನ ಅಣ್ಣನ ವಶೀಲಿ ಮೇಲೆ ಒಪ್ಪಿಸಿ ಉಡುಪಿಗೆ ಹೊರಡುತ್ತಾಳೆ. ಅವಳಿಗೆ ಇರುವ ಅವಧಿ ಮೂರು ತಿಂಗಳು. ಮೊದಲು ಅದೇ ಕೇಂದ್ರದಲ್ಲಿ ಅವಳು ಮಂಜಿ ಮಹದೇವನ ಜೀವನದ ಬಗ್ಗೆ ಸಂದರ್ಶನ ರೂಪದಲ್ಲಿ ಪ್ರಶ್ನೋತ್ತರಗಳ ಮೂಲಕ ಹೊರಬರುವ ವಿಷಯಗಳನ್ನು ಟೇಪ್ ರೆಕಾರ್ಡ್ ಮಾಡಿಕೊಂಡು ನಂತರ ಅದನ್ನು ಬರೆದುಕೊಡುವದು ಅವಳ ಜವಾಬ್ದಾರಿ. ಮೊದಲ ನೂರೆಂಟು ಪುಟಗಳಲ್ಲಿ ಈ ತಯಾರಿಯೊಂದಿಗೆ ಮಹದೇವನ ಬಾಲ್ಯದ ಬದುಕಿನ ಕೆಲವು ಸಂಗತಿಗಳೂ ಹೊರಬರುತ್ತವೆ.


ಮುಂದಿನ ಹಂತದಲ್ಲಿ ಈ ಸಂದರ್ಶನ ರೂಪ ಹೋಗಿ ಅದು ಮಹದೇವನ ಆತ್ಮಕಥನದ ರೂಪ ತಾಳಿಕೊಳ್ಳುತ್ತದೆ. ಇಲ್ಲಿ ಅದು ಅವನ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಎಂಬ ಎರಡೂ‌ ಮಗ್ಗುಲುಗಳಲ್ಲಿ ಮುಂದೆ ಸಾಗುತ್ತದೆ. ಮಹದೇವ ನಿರ್ಲಿಪ್ತ ಸ್ಥಿತಿಯಲ್ಲಿ ತನ್ನ ಕಥೆವ್ಯಥೆಗಳನ್ನು ಹೇಳುತ್ತ ಹೋಗುತ್ತಾನೆ. ಯಾವ ಅಂಶವನ್ನೂ ಮುಚ್ಚಿಡಲು ಬಯಸದ ಆತನ ಈ ಕಥನಕ್ಕೆ ಅಡ್ಡಿ ಬರಬಾರದೆಂದು ಸಂದರ್ಶಕಿ ಟೇಪ್ ಹಚ್ಚಿಟ್ಟು ತಾನು ಅದರಿಂದ ದೂರವಿರುತ್ತಾಳೆ. ಅವಳು ಮತ್ತೆ ಕಾಣಿಸುವದು ಕೊನೆಯ ಅಧ್ಯಾಯದಲ್ಲಿಯೇ.


ಮಂಜೀ ಮಹದೇವ ಕಡುಬಡತನ ಮತ್ತು ಇತರ ಹಲವು ಬಗೆಯ ತೊಂದರೆಗಳ ನಡುವೆಯೇ ಬಾಲ್ಯ ಕಳೆದು ಯೌವನಕ್ಕೆ ಕಾಲಿಡುವ ವೇಳೆಗೆ ಮನೆ ಬಿಟ್ಟು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ಯಾವ ನಿರ್ದಿಷ್ಟ ಗೊತ್ತುಗುರಿಯಿಲ್ಲದೇ ಅಲೆದಾಡಿ ಅವನಿಗೇ ಅರಿವಿಲ್ಲದಂತೆ ಯಕ್ಷಗಾನದ ಆವರಣದೊಳಗೆ ಸಿಲುಕಿಕೊಳ್ಳುತ್ತಾನೆ. ಅದೃಷ್ಟವಶಾತ್ ಅವನಿಗೆ ಕಲಾಕೇಂದ್ರ ದ ಆಶ್ರಯವೇ ದೊರಕಿ ಅಲ್ಲಿ ಆತ ಯಕ್ಷಗಾನ ಕಲೆಯ ಎಲ್ಲ ಅಂಗೋಪಾಂಗಗಳ ಬಗ್ಗೆ ಸುಮಾರು ನಾಲ್ಕು ವರ್ಷ ತರಬೇತಿ ಪಡೆದು, ಮುಂದೆ ಒಂದು ವೃತ್ತಿ ಮೇಳ ಸೇರಿ ಭಾಗವತಿಕೆ, ಮದ್ದಳೆ, ವೇಷಗಾರಿಕೆಗಳನ್ನೆಲ್ಲ ನಿಭಾಯಿಸುತ್ತ ದೊಡ್ಡ ಕಲಾವಿದನಾಗಿ ರೂಪುಗೊಳ್ಳುತ್ತಾನೆ. ಹೆಸರು ಪ್ರಸಿದ್ಧ ಎಲ್ಲ ಸಿಗುತ್ತದೆ. ಕೊನೆಗೆ ಸ್ವಂತ ಮೇಳವನ್ನೂ ಕಟ್ಟಿ ಕೆಲಕಾಲ ನಡೆಸಿ , ನಂತರ ಅತಿಥಿ ಕಲಾವಿದನಾಗಿ ಅಭಿನಯಿಸಿ ವೃತ್ತಿಯಿಂದ ನಿವೃತ್ತನಾಗುವತನಕದ್ದು ಕಥೆಯ ಒಂದು ಮಗ್ಗುಲು. ಮತ್ತೊಂದು ಮಗ್ಗುಲಲ್ಲಿ ಕಲಾಜೀವನದ ನಡುವೆಯೇ ವೈಯಕ್ತಿಕ ಬದುಕಿನ ಕೆಲವೊಂದು‌ ಸಮಸ್ಯೆಗಳು, ಏರಿಳಿತಗಳು, ಗೊಂದಲಗಳು ಆವರಿಸಿಕೊಳ್ಳುತ್ತವೆ.


ಕಾದಂಬರಿಯ ಮುಖ್ಯ ಎಳೆ ಈ ಎರಡರ ನಡುವೆ ಹಾದುಹೋಗುತ್ತದೆ. ಮಹದೇವನ ಕಲಾಜೀವನದ ಅನುಭವಗಳು ಮತ್ತು ವೈಯಕ್ತಿಕ ಜೀವನದ ಅನುಭವಗಳು ಒಂದಕ್ಕೊಂದು ತಳಕು ಹಾಕುತ್ತ ಸಾಗುತ್ತವೆ. ಆ ಅನುಭವಗಳ ಸ್ವಾರಸ್ಯವೇ ಈ ಕಾದಂಬರಿಯ ಮೂಲ ತಿರುಳಾಗಿರುವದರಿಂದ ನಾನು ಅದನ್ನೆಲ್ಲ ಇಲ್ಲಿ ವಿವರಿಸದೇ ನಿಮ್ಮ ಓದಿಗೆ ಬಿಟ್ಟುಬಿಡುತ್ತೇನೆ. ನೀವು ಖಂಡಿತ ಅದನ್ನು ಓದಲೇಬೇಕು ಎನ್ನುವ ಕಾರಣವೂ ಇದೆ.


ಕಾದಂಬರಿ ಎನ್ನುವುದು ವಾಸ್ತವದ ತಳಹದಿಯ ಮೇಲೆ ನಿರ್ಮಿಸುವ ಕಲ್ಪನೆಯ ಸೌಧ. ವಾಸ್ತವ ಏಕೆ ಬೇಕು ಎಂದರೆ ನಮ್ಮ ವಸ್ತು ವಿಷಯಗಳು ಹುಟ್ಟಿಕೊಳ್ಳುವದು ಬದುಕಿನ ನಡುವಿನಿಂದಲೇ. ಆದರೆ ವಾಸ್ತವತೆಯ ನೇರ ನಿರೂಪಣೆಯೇ ಕಾದಂಬರಿಯಾಗಲಾರದು. ಕಾದಂಬರಿಯೂ ಒಂದು ರಸಸೃಷ್ಟಿ. ವಾಸ್ತವ ಅತಿಯಾದಾಗ ರಸಸೃಷ್ಟಿಗೆ ಅಡ್ಡಿಯುಂಟಾಗುತ್ತದೆ. ಅದು ಶುಷ್ಕ ಹರಟೆಯಾಗಬಹುದು, ವರದಿಯೆನಿಸಬಹುದು, ಅಥವಾ ಚರಿತ್ರೆಯೆನಿಸಬಹುದು. ಅದರಿಂದ ಕಾದಂಬರಿಕಾರರೆನಿಸದೇ ನಾವು ವರದಿಗಾರರೋ ಇತಿಹಾಸಕಾರರೋ ಆಗಬಹುದು. ಅದಕ್ಕಾಗಿ ವಾಸ್ತವದ ಪ್ರಮಾಣ ಎಷ್ಟಿರಬೇಕು, ಕಲ್ಪನೆಯ ಪ್ರಮಾಣ ಎಷ್ಟಿರಬೇಕು ಎಂದು ಬರೆಯುವವರು ನಿರ್ಧರಿಸಿಕೊಳ್ಳುವದು ಬಹಳ ಮುಖ್ಯ.


ಮಂಜೀ ಮಹದೇವನ ಗಂಜೀಪುರಾಣದಲ್ಲಿ ಯಕ್ಷಗಾನ ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳು ಅಥವಾ ಹೆಚ್ಚಿನ ಸಂಗತಿಗಳು ನಮಗೆ ಸಿಗುವದರಿಂದ ಇದನ್ನು ಒಂದು ಯಕ್ಷಗಾನ ಕಲೆಗೆ ಸಂಬಂಧಿಸಿದ ಕಾದಂಬರಿ ಎಂದು ಹೇಳುವದಕ್ಕೂ ಅವಕಾಶವಿದೆ. ಕಾದಂಬರಿಕಾರರು ಹೇಳಿದಂತೆ ಯಕ್ಷಗಾನ ಇಲ್ಲಿ ಹೊರ ಆವರಣವಾಗಿಯಷ್ಟೇ ಉಳಿದುಕೊಳ್ಳದೇ ಒಳ ಆವರಣದಲ್ಲೂ ವ್ಯಾಪಿಸಿಕೊಂಡಿರುವದರಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಹಾಗಂತ ಅದನ್ನೊಂದು ದೋಷ ಎಂದು ನಾನು ಆರೋಪಿಸುತ್ತಿಲ್ಲ. ಅದು ಈ ಕಾದಂಬರಿಯ ಅನಿವಾರ್ಯತೆ. ಕಥಾ ವಸ್ತು ಒಬ್ಬ ಪ್ರಸಿದ್ಧ ಯಕ್ಷಗಾನ ಕಲಾವಿದನದು , ಅಂದರೆ ಅವನ ಜೀವನದ್ದು. ಕಲಾವಿದನ ವೈಯಕ್ತಿಕ ಜೀವನದ ಕತೆಯಂತೆ ಇಲ್ಲಿ ಅವನ ವೃತ್ತಿ ಜೀವನದ ಕತೆಯೂ ಇದ್ದು ಅದಕ್ಕೆ ಬೇಕಾದ ಅಂಶಗಳು ಕಾಣಿಸಿಕೊಳ್ಳುವದೂ ಸಹಜ. ಯಕ್ಷಗಾನಪ್ರಿಯ ಓದುಗರೂ ಅದನ್ನು ನಿರೀಕ್ಷಿಸುತ್ತಾರೆ‌. ಕಾದಂಬರಿಯಲ್ಲಿ ಯಕ್ಷಗಾನ ಕಲಾವಿದರ ಬಗ್ಗೆ , ಆಟಗಳ ಬಗ್ಗೆ , ಮೇಳಗಳ ಬಗ್ಗೆ , ಪ್ರಸಂಗಗಳ ಬಗ್ಗೆ ಸಾಕಷ್ಟು ವಿವರಗಳು ಸಿಗುತ್ತವೆ. ವಿಶೇಷವಾಗಿ ಕರಾವಳಿಯ ಓದುಗರು ಇದನ್ನು ಓದುತ್ತ ಓದುತ್ತ ತಾವು ಕಂಡ, ಕೇಳಿದ, ಅನುಭವಿಸಿದ ಸಂಗತಿಗಳನ್ನು ನೆನಪಿಸಿಕೊಳ್ಳಬಹುದಾಗಿದೆ. ಅಲ್ಲದೇ ಯಕ್ಷಗಾನ ಕಲೆ, ಕಲಾವಿದರು, ಮೇಳಗಳು ಇಂದು ಎದುರಿಸುತ್ತಿರುವ ಸಮಸ್ಯೆಗಳ ವಾಸ್ತವ ಚಿತ್ರಣವೂ ಇದರಲ್ಲಿದೆ. ಕಲೆಯ ಸ್ವರೂಪ ಹದಗೆಡುತ್ತಿರುವ ಸಂಗತಿ , ಕಲಾವಿದರಲ್ಲಿ ಹುಟ್ಟಿಕೊಂಡಿರುವ ಆತಂಕ ಇತ್ಯಾದಿ ಅಂಶಗಳೂ ಒಳಗೊಂಡಿವೆ. ಅನೇಕ ಹಿಂದಿನ ಮತ್ತು ಇಂದಿನ ಕಲಾವಿದರ, ಭಾಗವತರ ಹೆಸರುಗಳ ಪ್ರಸ್ತಾಪವಿದೆ. ಈ ಎಲ್ಲವನ್ನೂ ಈ ಕಾದಂಬರಿಯ ಕಥೆ ಅಪೇಕ್ಷಿಸುತ್ತದಾದ್ದರಿಂದ ಮತ್ತು ಕಾದಂಬರಿಕಾರರು ತಮಗೆ ಹೇಳಬೇಕಾದ ವಿಚಾರಗಳನ್ನು ಮಹದೇವನ ಮೂಲಕ ಹೇಳಬಯಸಿರುವದರಿಂದ ಯಕ್ಷಗಾನ ಕಲಾಸಕ್ತರಿಗೆ ಇದೊಂದು ಯಕ್ಷಗಾನದ ಕಾದಂಬರಿಯೇ ಅನಿಸಿದರೆ ತಪ್ಪೇನಿಲ್ಲ. ಅದು ತಪ್ಪೆಂದು‌ ಕಾದಂಬರಿಕಾರರಿಗೂ ಅನಿಸಬೇಕಿಲ್ಲ.


‌ ಇನ್ನು ಜಿ. ಎಸ್. ಭಟ್ಟ ಅವರು ತಮ್ಮ ಹಿಂದಿನ ಕಾದಂಬರಿಯ ( ಅಕ್ಕಮ್ಮಜ್ಜಿಯ .ಗಂಡನೂ.....) ಹಾಗೆ ಇದನ್ನೂ ಲಘುವಾದ ಶೈಲಿಯಲ್ಲಿಯೇ ಹೇಳಿಕೊಂಡು ಹೋಗಿರುವದರಿಂದ ಒಂದೆರಡು ಸನ್ನಿವೇಶಗಳನ್ನು ಬಿಟ್ಟರೆ ಉಳಿದಂತೆ ಯಾವುದೇ ಗಂಭೀರವಾದ ಸ್ವರೂಪ ಪಡೆದುಕೊಂಡಿಲ್ಲ. ಮಂಜೀ ಮಹದೇವನಿಗೆ ಮುಂಬಯಿಯಲ್ಲಿ ಆಕಸ್ಮಿಕವಾಗಿ ಭೆಟ್ಟಿಯಾಗಿ ಅವಸರದ ಮದುವೆಯನ್ನೂ ಆಗಿ ಅಷ್ಟೇ ಅವಸರದಲ್ಲಿ ಬಿಟ್ಟುಹೋದ ಅಮೃತಾಳ ಪ್ರಕರಣ ಮತ್ತು ತನ್ನ ಪುರುಷತ್ವದ ಕುರಿತು ಯಾವ ನಿರ್ಧಾರಕ್ಕೂ ಬರಲಾಗದೇ ತೊಳಲಾಡುವ ಮಹದೇವನ ಸ್ಥಿತಿ ಕಾದಂಬರಿಗೆ ಅಗತ್ಯವಾದ ವಾತಾವರಣ ಸೃಷ್ಟಿಸಿದೆ.


ಕಾದಂಬರಿಯ ನಾಯಕ ಮಂಜೀ ಮಹದೇವನ ಕಲಾಬದುಕಿಗಿಂತ ವೈಯಕ್ತಿಕ ಬದುಕೇ ಇಲ್ಲಿ ರಂಜನೀಯವೆನಿಸುವದೂ ಸುಳ್ಳಲ್ಲ. ಒಟ್ಟಿನಲ್ಲಿ ಕಾದಂಬರಿ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಸಂಗಡ ಯಕ್ಷಗಾನ ರಂಗದ ಒಳಸುಳಿಗಳು, ಅಲ್ಲಿ ನಡೆಯುವ ರಾಜಕೀಯ, ಮೊದಲಾದ ಸಂಗತಿಗಳನ್ನೂ ಪರಿಚಯಿಸುತ್ತದೆ. ಆದ್ದರಿಂದ ಇದನ್ನು ಕೇವಲ ಒಂದು ಕಾದಂಬರಿ ಎಂದೂ‌ ಓದಬಹುದು. ಯಕ್ಷಗಾನಕ್ಕೆ ಸಂಬಂಧಿಸಿದ್ದೆಂಬ ಪ್ರೀತಿಯಿಂದಲೂ ಓದಬಹುದು. ಒಳ್ಳೆಯ ಮತ್ತೊಂದು ‌ಕಾದಂಬರಿಯನ್ನು ಕೊಟ್ಟ ಡಾ. ಜಿ. ಎಸ್. ಭಟ್ಟರನ್ನು‌ ಅಭಿನಂದಿಸಬೇಕಾಗಿದೆ.

‌‌

‌‌‌- ಎಲ್. ಎಸ್. ಶಾಸ್ತ್ರಿ, ಬೆಳಗಾವಿ


ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ ( ಎಲ್. ಎಸ್. ಶಾಸ್ತ್ರಿ) ಬರವಣಿಗೆಯ ಕಾಯಕದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೆತ್ತುಕೊಂಡಿರುವ ಶ್ರೀಯುತರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.ಪತ್ರಿಕೋದ್ಯಮದಲ್ಲಿ ೫೬ ವರ್ಷಗಳ ಅಖಂಡ ಸೇವೆ.

ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ , ಲೋಕದರ್ಶನ, ಶೃಂಗಾರ, ನವಕಲ್ಯಾಣ, ದೀನವಾಣಿ, ಜನತಾ, ನವನಾಡು, ಕರ್ನಾಟಕ ಮಲ್ಲ ಮೊದಲಾದ ದಿನಪತ್ರಿಕೆ, ಸಾಪ್ತಾಹಿಕಗಳಲ್ಲಿ ಸಂಪಾದಕ, ಉಪಸಂಪಾದಕ, ವರದಿಗಾರನಾಗಿ ಕಾರ್ಯ ನಿರ್ವಹಣೆ.

* ಸಾಹಿತ್ಯ ಕ್ಷೇತ್ರದಲ್ಲಿ- ೬೦ ವರ್ಷಗಳಿಂದ ಬರವಣಿಗೆ.

* ಹೊರಬಂದ ಕೃತಿಗಳು: ೧೧೦

* ಬಿಡಿಬರೆಹಗಳು: ೪೦ ಸಾವಿರಕ್ಕೂ ಹೆಚ್ಚು.

* ಇತರ ಕ್ಷೇತ್ರಗಳು: ಯಕ್ಷಗಾನ, ಸಂಗೀತ, ಗಮಕ, ನಾಟಕ, ಸಾಂಸ್ಕೃತಿಕ ಸಂಘಟನೆ ಇತ್ಯಾದಿ.

* ಹತ್ತು ಸಾವಿರ ಸಂಪಾದಕೀಯಗಳು, ಎರಡು ಸಾವಿರ ಮುನ್ನುಡಿಗಳು.

* ೫ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳ ಸಂಘಟನೆ

* ೩ ಸಾವಿರಕ್ಕೂ ಹೆಚ್ಚು ಉಪನ್ಯಾಸ, ಪ್ರಬಂಧ ಮಂಡನೆ, ಕಾವ್ಯವಾಚನ ಇತ್ಯಾದಿ.

* ಪ್ರಶಸ್ತಿಗಳು: ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಬೆಂಗಳೂರು, ಕರ್ಕಿ ವೆಂಕಟರಮಣ ಶಾಸ್ತ್ರಿ, ಸೂರಿ ಪ್ರಶಸ್ತಿ, ಮುಂಬಯಿ, ಜಿ. ಆರ್. ಪಾಂಡೇಶ್ವರ ಪ್ರಶಸ್ತಿ, ಧಾರವಾಡ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ,, ಬೆಳಗಾವಿ, ಕುಮಾರವ್ಯಾಸ ಪ್ರಶಸ್ತಿ, ಗದಗ, ಸಾಹಿತ್ಯ ರತ್ನ ಪ್ರಶಸ್ತಿ ಬೆಳಗಾವಿ, ನಾಗನೂರು ಮಠದ ಸೇವಾರತ್ನ ಪ್ರಶಸ್ತಿ, ಬೆಳಗಾವಿ, ಹೂಗಾರ ಪತ್ರಿಕಾ ಪ್ರಶಸ್ತಿ,ಬೆಂಗಳೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬೆಳಗಾವಿ, ರಾಜಕುಮಾರ ಸದ್ಭಾವನಾ ಪ್ರಶಸ್ತಿ ಬೆಂಗಳೂರು ಇತ್ಯಾದಿ ೧೫ ಕ್ಕೂ ಹೆಚ್ಚು ಪ್ರಶಸ್ತಿಗಳು ಮತ್ತು ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಸನ್ಮಾನಗೌರವಗಳು

* ಹದಿನೈದಕ್ಕೂ ಹೆಚ್ಚು ಸಂಘಸಂಸ್ಥೆಗಳ ಸ್ಥಾಪನೆ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಇಂಪು ಸಂಗೀತ ವೇದಿಕೆ, ಜಿಲ್ಲಾ ಸಾಹಿತ್ಯ ಮಂಟಪ, ಮತ್ತಿತರ.

* ಸಾವಿರಕ್ಕೂ ಹೆಚ್ಚು ನಾಟಕ, ಸಂಗೀತ, ಗಮಕ, ಯಕ್ಷಗಾನ ಕಲಾ ಪ್ರದರ್ಶನ ಪ್ರಸ್ತುತ ಪಡಿಸುವಿಕೆ.

* ಉದಯೋನ್ಮುಖ ಬರೆಹಗಾರರಿಗೆ ಮತ್ತು ಪತ್ರಕರ್ತರಿಗೆ ಮಾರ್ಗದರ್ಶನ, ಶಿಬಿರಗಳ ಸಂಘಟನೆ.

* ಆದಿತ್ಯ ಪಬ್ಲಿಕೇಶನ್ ಮೂಲಕ ರಾಜ್ಯದ ವಿವಿಧೆಡೆಯ ೩೦೦ ಕ್ಕೂ ಹೆಚ್ಚು ಸಾಹಿತಿಗಳ ಕೃತಿ ಪ್ರಕಟನೆಗೆ ಅವಕಾಶ.

* ಮೌಂಟ್ ಅಬೂ ,ರಾಜಸ್ಥಾನ, ದಿಲ್ಲಿ , ಮುಂಬಯಿ, ಬೆಂಗಳೂರು, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಉಡುಪಿ, ಮಂಗಳೂರು , ಕಾಸರಗೋಡು ಸಹಿತ ಹಲವೆಡೆ ಪತ್ರಿಕೆ, ಸಾಹಿತ್ಯ, ಯಕ್ಷಗಾನ ಮೊದಲಾದವುಗಳ ಕುರಿತು ಉಪನ್ಯಾಸ.

ಹೀಗೆ ಪಾದರಸದಂತೆ ಚಲನಶೀಲರಾಗಿರುವ ಎಲ್ಎಸ್ಎಸ್ ಅವರಿಗೆ ೭೬ ಅಂದರೆ ನಂಬುವುದು ಕಷ್ಟ.ಅವರು ನಿತ್ಯ ಯುವಕರು. ಸಂಪಾದಕ.

84 views0 comments

Comments


bottom of page