top of page

ಡಾ.ಎ.ಪಿ.ಜೆ ಅಬ್ದುಲ್ ಕಲಾಮ್ ಅವರ ಕೃತಜ್ಞತೆ ಕವಿತೆ - ಅನು: ಬಿ.ಎ.ಸನದಿ.

ಬೆಳೆದೊಂದು ಅಡವಿಯಲಿ

ತಾಯಿಯನು ತಬ್ಬಿಕೊಂಡಿರುವ ಮಕ್ಕಳಂತೆ

ಗಿಡಮರಗಳ ತುಂಬೆಲ್ಲ ಹಣ್ಣುಗಳು

ಧೂಳಿಯೊಳಗಾಡುವ ಎಳೆಯ ಬಾಲಕರಂತೆ

ಅಲ್ಲಲ್ಲಿ ಪೊದೆಗಳ ಮೇಲೆಲ್ಲ ಕಾಡು ಕುಸುಮಗಳು

ವೀಣೆಯ ತಂತಿಯ ಮೇಲಾಡುವ ಕಾಣದ ಕೈಗಳಂತೆ

ಝೇಂಕರಿಸುವ ತುಂಬಿ ಪಾತರಗಿತ್ತಿಗಳು

ದಿನದ ಹೋರೆಗೆ ಹೊರಟ ಕಾರ್ಮಿಕರಂತೆ

ಹೆಜ್ಜೆ ಹಾಕುವ ಹುಲಿ,ಚಿರತೆ,ಕಾಡುಹಂದಿಗಳು!

ವಿಮಾನ ಸಂಚಾರದಲ್ಲಿರುವ ತರಳರಂತೆ

ರೆಕ್ಕೆ ಬಡಿಯುತ ಮೇಲೆ ಹಾರಾಡುವ ಹಕ್ಕಿಗಳು!


* * ‌‌ * ‌‌ *

ಓ ಇದೆಲ್ಲ ಚೈತ್ರದ ಚಮತ್ಕಾರ

ಕಾಡಾರಣ್ಯದಲಿ ಸ್ವರ್ಗದ ಸಾಕ್ಷಾತ್ಕಾರ!

ಕನಸುಗಳ ಕಡಲಲ್ಲಿಂತು ತೇಲುತಿರೆ ಪ್ರತಿ ಹಗಲು

ಗಗನದೊಳೆಮ್ಮೆಲೆ ಸಿಡಿದಂತೆ ಗುಡುಗು ಸಿಡಿಲು

ಚಿರತೆಗಳಿಗೊಮ್ಮೆಲೆ ಭಾದಿಸಿತೊಂದು ಘೋರ ಪಿಡುಗು

ಸಣ್ಣ ದೊಡ್ಡವರೆನದೆ

ಏಸೊ ಜೀವಗಳನಪಹರಿಸಿ ಬಿಟ್ಟಿತ್ತು ಸಾವು!

ಸಾವಿನ ದವಡೆಯಿಂದ ಪಾರಾದ ಹತ್ತು ಜೀವ

ಒಂದಾಗಿ ದೇವರನು ಪ್ರಾರ್ಥಿಸಿದವು.

ಏನು ಬೇಕಿದೆ ನಿಮಗೆ? ಎಂದು ಕೇಳಿದ ದೇವ.

" ನಮ್ಮ ಬೇನೆ ಬೇಸರಿಕೆಗಳ ಕಳೆದು

ನೀಡೆಮಗೆ ನೆಮ್ಮದಿಯ ಬದುಕು"

ದೈವಕೃಪೆಯಿಂದವರು ನೆಟ್ಟಗಾದರು ಎಲ್ಲ

ಸೊಗದಮಲಿನಲಿ ಒಂಬತ್ತು ಚಿರತೆಗಳು ಕಾಲ್ಕಿತ್ತು

ಓಡಿದವು ದೂಕಿ!

ಉಳಿದ ಒಂದೆ ಚಿರತೆ ದೇವನ ಮುಂದೆ ಹರಿಸಿತ್ತು

ಕೃತಜ್ಞತೆಯ ಪ್ರತಿ.





ಮೂಲ: -ಡಾ.ಎ.ಪಿ.ಜೆ ಅಬ್ದುಲ್ ಕಲಾಮ್

(ಭಾರತದ ಮಾಜಿ ರಾಷ್ಟ್ರಪತಿ)







ಕನ್ನಡಕ್ಕೆ- ಬಿ.ಎ.ಸನದಿ ಕುಮಟಾ.






ಡಾ.ಎ.ಪಿ.ಜೆ.ಅಬ್ದುಲ್ ಕಲಾಮ್ ಈ ಜಗತ್ತು ಕಂಡ ಅಚ್ಚರಿಯ ವ್ಯಕ್ತಿತ್ವ.ಅವರ ಕೃತಜ್ಞತೆ ಎಂಬ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿ ೨೮-೪-೨೦೦೭ ರಂದು ಪೋಸ್ಟ್ ಕಾರ್ಡಿನಲ್ಲಿ ನನಗೆ ಕಳಿಸಿದವರು ನಮ್ಮ ನಡುವಿನ ಬೆರಗಿನ ಕವಿ ಡಾ.ಬಿ.ಎ.ಸನದಿಯವರು.ಗೌರೀಶ ಕಾಯ್ಕಿಣಿ ಅವರು ಸನದಿಯವರನ್ನು ಮಾನವ್ಯದ ಕವಿ ಎಂದು ಕರೆದರು.ಸನದಿ ಎಂಬ ಹೆಸರಿನೊಳಗೆ ಪ್ರೀತಿಯ ನದಿಯೊಂದು ಅಂತರ ಗಂಗೆಯಂತೆ ಹರಿಯುತ್ತಿದೆ.ಸನದಿಯವರು ಮಂಬಯಿ ಬಿಟ್ಟು ಕುಮಟಾದಲ್ಲಿ ಬಂದು ನೆಲೆ ನಿಂತಿದ್ದು ಅವರ ಒಡನಾಡಿಗಳಾದ ನಮ್ಮೆಲ್ಲರ ಪಾಲಿನ ಸುಕ್ರತ.

ಸನದಿಯಂತಹ ಕವಿ ಮನದ ಸಾಹಿತಿಯ ಒಡನಾಟದ ಸವಿಯಾದ ಕ್ಷಣಗಳು ಬಾಯಲ್ಲಿಟ್ಟು ಎಷ್ಟು ಕಾಲ ಹೊಳಬಿದರು ಅದು ಮುಗಿಯದ ಪೆಪ್ಪರಮಿಂಟಿನ ಹಾಗೆ.ಆ ಮಹನೀಯರಿಬ್ಬರ ಅಚ್ಚಳಿಯದ ನೆನಪಿಗೆ ಈ ಕವನ


- ಡಾ‌.ಶ್ರೀಪಾದ ಶೆಟ್ಟಿ.

61 views0 comments

Comments


bottom of page