top of page

ಟಿ.ಎನ್.ನರಸಿಂಹರಾಜು






ಕನ್ನಡ ಚಿತ್ರರಂಗದ ಚಾರ್ಲಿ ಚಾಪ್ಲಿನ್

ಟಿ. ಎನ್. ನರಸಿಂಹರಾಜು

***********< *************

ಆರಂಭದ ಹದಿಮೂರು ವರ್ಷಗಳಲ್ಲೇ ೧೦೦ ಚಿತ್ರಗಳಲ್ಲಿ ಅಭಿನಯಿಸಿದ ನರಸಿಂಹರಾಜು ಅವರು

ಸುಮಾರು ಎರಡೂವರೆ ದಶಕಗಳ ಕಾಲ ಕನ್ನಡ ಚಲನಚಿತ್ರ ರಂಗಕ್ಕೆ ಅಕ್ಷರಶಃ ಅನಿವಾರ್ಯರೆನಿಸಿಬಿಟ್ಟಿದ್ದರು. ನಗೆನಟ ನರಸಿಂಹರಾಜು ಅವರ ಕಾಲ್ ಶೀಟ್ ಗಾಗಿ ಡಾ. ರಾಜಕುಮಾರ ಅವರಂಥವರೂ ಕಾದುಕುಳಿತುಕೊಳ್ಳಬೇಕಾಗುತ್ತಿತ್ತು. ನರಸಿಂಹರಾಜು ಇದ್ದರೆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಯಶಸ್ವಿ‌ ಎನ್ನುವಂತಹ ಪರಿಸ್ಥಿತಿ ಇತ್ತು.

ನರಸಿಂಹರಾಜು ಡಾ. ರಾಜಕುಮಾರ ಅವರೊಂದಿಗೇ ಬೇಡರ ಕಣ್ಣಪ್ಪದ ಮೂಲಕ ಚಿತ್ರರಂಗಕ್ಕೆ ಬಂದವರು. (೧೯೫೪) ಅಲ್ಲಿಂದ ೧೯೭೯ ರಲ್ಲಿ ( ೫೬ ನೇ ವಯಸ್ಸಿನಲ್ಲಿ ) ಹೃದಯಾಘಾತಕ್ಕೊಳಗಾಗಿ ನಿಧನರಾಗುವತನಕವೂ ಚಿತ್ರರಂಗದಲ್ಲಿ ಅವರದೇ ದರ್ಬಾರು !

೧೯೨೩ ಜುಲೈ ೨೪ ರಂದು ತಿಪಟೂರು ರಾಮರಾಜು ಅವರ ಮಗ ನರಸಿಂಹರಾಜು ಬಡತನದಲ್ಲೇ ಬಾಲ್ಯ ಕಳೆದವರು. ಅದರಿಂದಾಗಿ ನಾಲ್ಕನೇ ವಯಸ್ಸಿನಲ್ಲೇ ನಾಟಕ ಕಂಪನಿಯಲ್ಲಿ ಬಾಲಪಾತ್ರ ವಹಿಸಿ ಹೊಟ್ಟೆಪಾಡು ನೋಡಿಕೊಳ್ಳಬೇಕಾಯಿತು. ೨೭ ನೇ ವಯಸ್ಸಿನತನಕವೂ ಅನೇಕ ನಾಟಕ ಕಂಪನಿಗಳಲ್ಲಿದ್ದು ಕೆಲಕಾಲ ಸ್ವಂತ ತಂಡ ಕಟ್ಟಿ ನಟನೆಯಲ್ಲಿ ಪಳಗಿದರು. ಹಿರಣ್ಣಯ್ಯ ಮಿತ್ರ ಮಂಡಳಿ, ಗುಬ್ಬಿ ಕಂಪನಿಗಳಲ್ಲೂ ಇದ್ದರು. ಗುಬ್ಬಿ ಕಂಪನಿಯಲ್ಲಿದ್ದಾಗಲೇ ಅವರಿಗೆ ರಾಜಕುಮಾರ ಜೊತೆಗೂಡಿದರು.

ಸುಮಾರು ಐವತ್ತರ ದಶಕದಿಂದ ಎಪ್ಪತ್ತರ ದಶಕದತನಕವೂ ಕನ್ನಡ ಸಿನೆಮಾರಂಗದಲ್ಲಿ ರಾಜ, ಬಾಲಕೃಷ್ಣ, ನರಸಿಂಹರಾಜು, ಜಿ. ವಿ.ಅಯ್ಯರ್, ರಮಾದೇವಿ, ಲಕ್ಷ್ಮಿದೇವಿ ಮೊದಲಾದವರಿಲ್ಲದ ಸಿನಿಮಾ ಹುಡುಕುವದು ಕಷ್ಟ ಎಂಬಂತಿತ್ತು.

ಬೇಡರಕಣ್ಣಪ್ಪದಿಂದಾರಂಭಿಸಿ ಸೋದರಿ, ರಣಧೀರ ಕಂಠೀರವ, ಬಸವೇಶ್ವರ, ಜಕಣಾಚಾರಿ, ಗಂಧದ ಗುಡಿ, ಶರಪಂಜರ, ಜೇನುಗೂಡು, ಮಕ್ಕಳ ರಾಜ್ಯ, ಕಿತ್ತೂರು ಚೆನ್ನಮ್ಮ, ವೀರಕೇಸರಿ, ಕಸ್ತೂರಿ ನಿವಾಸ ಜೇಡರ ಬಲೆ, ಸಿಐಡಿ ಮೊದಲಾದ ೨೫೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಅವರು ಪ್ರಿ. ಹುಚ್ಚೂರಾಯ ಮತ್ತು ಜಾತಕರತ್ನ ಗುಂಡಾಜೋಯಿಸ ಚಿತ್ರಗಳಲ್ಲಿ ನಾಯಕ ಪಾತ್ರಗಳಲ್ಲೂ, ಎರಡು ಮೂರು ಸಿನಿಮಾಗಳಲ್ಲಿ ರಾಜಕುಮಾರರೊಡನೆ ಸಪೋರ್ಟಿಂಗ ನಟರಾಗಿಯೂ ನಟಿಸಿದ್ದರು. ಚೋರಿ ಚೋರಿ ಹಿಂದಿ ಚಿತ್ರದ ಅತಿಥಿ ನಟರಾಗಿಯೂ ಕಾಣಿಸಿಕೊಂಡಿದ್ದರು.

ಅಚ್ಚರಿಯ ಮತ್ತು ಬೇಸರದ ಸಂಗತಿಯೆಂದರೆ ನರಸಿಂಹರಾಜು ಅಷ್ಟೊಂದು ಅಪಾರ‌ ಜನಮೆಚ್ಚುಗೆ ಗಳಿಸಿದರೂ ಅವರಿಗೆಂದೂ ರಾಜ್ಯ ಅಥವಾ ರಾಷ್ಟ್ರಮಟ್ಟದ ಯಾವ ಪ್ರಶಸ್ತಿ ಗೌರವಗಳೂ ದೊರಕಲಿಲ್ಲ. ಸಾವಿಗಿಂತ ಸ್ವಲ್ಪ ಮೊದಲು ಅವರ ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ದು;ಖ ಅವರನ್ನು ಆವರಿಸಿಕೊಂಡಿತು. ಮಗಳು ಸುಧಾ ನರಸಿಂಹರಾಜು ಸಿನಿಮಾ ಟಿವಿ ಕಲಾವಿದೆಯಾಗಿ ಕಾಣಿಸಿಕೊಂಡರು. ಆದರೆ ಅಂದಿನ ಬಹು ಬೇಡಿಕೆಯ ನಟರಾಗಿದ್ದ ಅವರು ಮದ್ರಾಸಿನಲ್ಲಿ ಸ್ವಂತ ಮನೆ ಮಾಡಿಕೊಂಡರಲ್ಲದೇ ಇತರ ಆಸ್ತಿಪಾಸ್ತಿಗಳನ್ನೂ ಹೊಂದಿದ್ದರು.

ಚಲನಚಿತ್ರ ರಸಿಕರಿಂದ ಅವರಿಗೆ ಹಾಸ್ಯರತ್ನ ಮತ್ತು ಹಾಸ್ಯಚಕ್ರವರ್ತಿ ಎಂಬ ಬಿರುದುಗಳು ದೊರಕಿದ್ದವು. ಕನ್ನಡ ಜನ ಅವರನ್ನೆಂದೂ ಮರೆಯಲು ಸಾಧ್ಯವಿಲ್ಲ.

‌ ‌ ೬೦ ರ ದಶಕದಲ್ಲಿ ನರಸಿಂಹರಾಜು ಅವರು ಹರಿಣಿ, ವಾದಿರಾಜ ಮೊದಲಾದವರೊಡನೆ ಹೊನ್ನಾವರಕ್ಕೆ ನಾಟಕದ ವಿಶೇಷ ಅತಿಥಿ ನಟರಾಗಿ ಆಗಮಿಸಿದಾಗ ಅವರೆಲ್ಲರನ್ನು ನನ್ನ ಹಿರಿಯ ಸಹೋದರರು ನಮ್ಮ ಮೂಲ ಊರಾದ ನಾಜಗಾರ ಎಂಬ ಹಳ್ಳಿಗೆ ಕರೆದುಕೊಂಡುಹೋಗಿದ್ದರು. ಇಡೀದಿನ ಅಲ್ಲಿದ್ದು ಅವರು ಬಹಳ ಸಂತೋಷ ಪಟ್ಟಿದ್ದರಲ್ಲದೇ ನಂತರ ನಾನು ಬೆಂಗಳೂರಿನಲ್ಲಿ ಅವರನ್ನು ಭೆಟ್ಟಿಯಾದಾಗಲೂ ಅದನ್ನು ನೆನಪಿಸಿಕೊಂಡಿದ್ದರು ಎನ್ನುವುದೀಗ ನಮ್ಮ ಮರೆಯಲಾಗದ ನೆನಪುಗಳಲ್ಲೊಂದು. ೧೯೭೯ ಜುಲೈ ತಿಂಗಳ ಹನ್ನೊಂದರಂದು ಅವರು ನಿಧನರಾದರು.

- ಎಲ್. ಎಸ್. ಶಾಸ್ತ್ರಿ




14 views0 comments

Comments


bottom of page